ಗಣ್ಯರಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆಗಿಲ್ಲವಂತೆ! ಕೋರ್ಟ್​ಗೆ ಸಲ್ಲಿಸಿದ ವರದಿಯಲ್ಲೇನಿದೆ?

ಬೆಂಗಳೂರು:ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರದಿಂದ ಹೇರಲಾಗಿದ್ದ ಮಾರ್ಗಸೂಚಿ ನಿಯಮಗಳು ಸಮಾಜದ ಗಣ್ಯರಿಂದ ಉಲ್ಲಂಘನೆ ಆಗಿದೆ ಎಂಬುದರ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ಕೇಳಿದ್ದ ಹೈಕೋರ್ಟ್​ಗೆ ರಾಜ್ಯ ಸರ್ಕಾರ ಇಂದು ವಿವರಣೆ ನೀಡಿದೆ.

ಮೊದಲನೆಯದಾಗಿ ಚಾಮುಂಡಿ ಬೆಟ್ಟಕ್ಕೆ ನಟ ದರ್ಶನ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸೇರಿ ಹಲವಾರು ರಾಜಕಾರಣಿಗಳ ಭೇಟಿಗೆ ಅವಕಾಶ ನೀಡಿದ ತಾರತಮ್ಯದ ಬಗ್ಗೆ ಹೈಕೋರ್ಟಿಗೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರ, ಚಾಮುಂಡಿ ಬೆಟ್ಟದಲ್ಲಿ ಭಕ್ತಾದಿಗಳಿಗೆ ಭೇಟಿಗೆ ನಿಷೇಧವಿರಲಿಲ್ಲ. ಬದಲಿಗೆ ದೇವಸ್ಥಾನದಲ್ಲಿ ಜನದಟ್ಟಣೆ ಉಂಟಾಗಬಾರದೆಂದು ನಿರ್ಬಂಧ ವಿಧಿಸಲಾಗಿತ್ತು ಎಂದು ಹೇಳಿದೆ. ಜೊತೆಗೆ ಶಿಷ್ಟಾಚಾರದಂತೆ ಗ್ರಾಮಸ್ಥರು ಹಾಗೂ ಗಣ್ಯರಿಗೂ ಸಹ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

ಎರಡನೆಯದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಗಳ ನಿಶ್ಚಿತಾರ್ಥದ ವೇಳೆ ಅಧಿಕ ಜನ ಸೇರಿದ್ದರು ಎಂಬುದರ ಬಗ್ಗೆ ಮಾಹಿತಿ ನೀಡಿರುವ ಸರಕಾರ, ನಿಶ್ಚಿತಾರ್ಥದಲ್ಲಿ ಕೇವಲ 20ರಿಂದ 25 ಜನ ಮಾತ್ರ ಭಾಗಿಯಾಗಿದ್ದರು. ಹಾಗಾಗಿ ಮಾರ್ಗಸೂಚಿ ಉಲ್ಲಂಘನೆ ಆಗಿಲ್ಲವೆಂದು ವಿವರಣೆ ನೀಡಿದೆ.

ಇನ್ನು ಸಚಿವ ಡಾ. ಕೆ. ಸುಧಾಕರ್ ಈಜುಕೊಳದಲ್ಲಿ ಇದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿ, ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ವಿಚಾರವಾಗಿ ವಿವರಣೆ ನೀಡಿರುವ ರಾಜ್ಯ ಸರ್ಕಾರ, ಸಚಿವ ಸುಧಾಕರ್ ಅವರ ಮನೆಯಲ್ಲಿದ್ದ ಖಾಸಗಿ ಈಜುಕೊಳವನ್ನು ಬಳಸಿದ್ದಾರೆ. ಹೀಗಾಗಿ ಮನೆಯ ಈಜುಕೊಳ ಬಳಸಲು ಮಾರ್ಗಸೂಚಿಯಲ್ಲಿ ನಿರ್ಬಂಧ ಇಲ್ಲ ಎಂದು ಸರ್ಕಾರ ತಿಳಿಸಿದೆ.

Related Tags:

Related Posts :

Category: