ನಕಲಿ ರೈಲ್ವೆ ಇ-ಟಿಕೆಟ್‌ ಮಾರಾಟ ಜಾಲ, ಉಗ್ರರಿಗೆ ಸರ್ಕಾರಿ ಮಾಹಿತಿ ಸೋರಿಕೆ ಶಂಕೆ

ಬೆಂಗಳೂರು: ನಕಲಿ ಐಡಿ ಮೂಲಕ ರೈಲ್ವೆ ಇ-ಟಿಕೆಟ್‌ ಮಾರಾಟ ಮಾಡುತ್ತಿದ್ದ ಗುಲಾಂ ಮುಸ್ತಫಾನನ್ನು ರೈಲ್ವೆ ಪೊಲೀಸರು ಜನವರಿ 8ರಂದು ಬಂಧಿಸಿದ್ದರು. ಈಗ ಆತನಿಂದ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಆರೋಪಿ ಗುಲಾಂ ಮುಸ್ತಫಾ ANMS ಸಾಫ್ಟ್‌ವೇರ್ ಡೆವಲಪ್ ಮಾಡಿಕೊಂಡಿದ್ದ. ಇದರ ಮೂಲಕ ಕೇಂದ್ರದ IRCTCಯಲ್ಲಿ ರೈಲ್ವೆ ಇ-ಟಿಕೆಟ್ ಬುಕ್ ಮಾಡಿಕೊಡುವ ನಕಲಿ ಐಡಿ ಸೃಷ್ಟಿಸಿದ್ದ. ನಕಲಿ ದಾಖಲೆ ಸೃಷ್ಟಿಸಿ ರೈಲ್ವೆ ಇಲಾಖೆಯ ಮಾಹಿತಿ ಸಂಗ್ರಹ ಮಾಡಿದ್ದ.

ಆರೋಪಿಗೆ ಉಗ್ರರ ನಂಟು:
ಆರೋಪಿ 2017ರಿಂದ ಈವರೆಗೆ ಅನೇಕ ಟಿಕೆಟ್ ಮಾರಾಟ ಮಾಡಿದ್ದಾನೆ. ಈ ಬಗ್ಗೆ ತನಿಖೆ ಕೈಗೊಂಡು ರೈಲ್ವೆ ಪೊಲೀಸರು ಆತನನ್ನು ಇದೇ ತಿಂಗಳ 8ರಂದು ಬಂಧಿಸಿದ್ದರು. ಬಂಧನದ ಬಳಿಕ ಮುಸ್ತಫಾ ಬಳಿ ಇದ್ದ ಲ್ಯಾಪ್‌ಟಾಪ್‌, ಮೊಬೈಲ್‌, ದಾಖಲೆ, ಸಂಪರ್ಕಗಳಿಂದ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಆರೋಪಿ ಮುಸ್ತಫಾ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಮುಸ್ತಫಾ ಲ್ಯಾಪ್‌ಟಾಪ್‌ನಲ್ಲಿ ಡಾರ್ಕ್‌ನೆಟ್‌ ವೆಬ್‌ಸೈಟ್ ಪತ್ತೆಯಾಗಿದೆ. ಈ ವೆಬ್‌ಸೈಟ್‌ ಮೂಲಕ ಪಾಕಿಸ್ತಾನ, ಬಾಂಗ್ಲಾ ಜತೆ ಸಂಪರ್ಕ ಹೊಂದಿದ್ದ ಎಂದು ಸ್ಥಳೀಯ ಪೊಲೀಸರಿಗೆ ರೈಲ್ವೆ ಪೊಲೀಸರಿಂದ ಮಾಹಿತಿ ರವಾನೆಯಾಗಿದೆ. ನಿನ್ನೆ ರೈಲ್ವೆ ಪೊಲೀಸರು ಆರೋಪಿಯನ್ನು ರಾಜಗೋಪಾಲನಗರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಗುಲಾಂ ಮುಸ್ತಫಾ ಸೈಬರ್ ಉಗ್ರ?
ನಕಲಿ ದಾಖಲೆ ಸೃಷ್ಟಿಸಿ ನಿಷೇಧಿತ ಸಂಘಟನೆ ಸಂಪರ್ಕ, ಕೇಂದ್ರ ಸರ್ಕಾರದ ಕೆಲ ವೆಬ್‌ಸೈಟ್‌ ಹ್ಯಾಕ್‌ ಮಾಡಿರುವುದು, ಕೆಲವು ಸರ್ಕಾರಿ ಮಾಹಿತಿ ಉಗ್ರರಿಗೆ ಸೋರಿಕೆ ಮಾಡಿರುವುದು ಸೇರಿದಂತೆ ಆರೋಪಿ ಮೇಲೆ ಹಲವು ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ಡಿಜಿಟಲ್ ಫುಟ್‌ಪ್ರಿಂಟ್‌ಗಳನ್ನ ಪರಿಶೀಲಿಸುತ್ತಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿ ಇಸ್ರೋಗೆ ಸಂಬಂಧಿಸಿದ ಕೆಲ ಮಾಹಿತಿ ಪತ್ತೆಯಾಗಿದೆ. ಅತ್ಯಾಧುನಿಕ ಭೂಪರಿ ವೀಕ್ಷಣಾ ಉಪಗ್ರಹದ ಮಾಹಿತಿಗಳು ಪತ್ತೆಯಾಗಿವೆ. ಡಾರ್ಕ್‌ನೆಟ್‌ ವೆಬ್‌ಸೈಟ್ ಇರುವ ಲ್ಯಾಪ್‌ಟಾಪ್‌ನಲ್ಲಿ ಗುಲಾಂ ಮುಸ್ತಫಾ ಕಾರ್ಟೋ ಸ್ಯಾಟ್​ನ ಬಗ್ಗೆ ಸರ್ಚ್ ಮಾಡಿದ್ದಾನೆ. ಕೆಲವು ಮಾಹಿತಿಗಳನ್ನೂ ಡೌನ್‌ಲೋಡ್‌ ಮಾಡಿದ್ದಾನೆ. ಹಲವು ಮದರಸಾಗಳಿಗೆ ಭೇಟಿ ನೀಡಿದ್ದಾನೆ. ಲ್ಯಾಪ್‌ಟಾಪ್‌ನಲ್ಲಿ ಕೆಲವರ ಬ್ಯಾಂಕ್ ಖಾತೆ ಮಾಹಿತಿಯೂ ಲಭ್ಯವಾಗಿದೆ. ಹೀಗಾಗಿ ಪೊಲೀಸರು ಗುಲಾಂ ಮುಸ್ತಫಾ ಇ-ಮೇಲ್ ಪರಿಶೀಲಿಸಿದ್ದಾರೆ. ಗುಲಾಂ ಮುಸ್ತಫಾ ಸೈಬರ್ ಉಗ್ರ ಎಂಬ ಅನುಮಾನ ವ್ಯಕ್ತವಾಗಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!