ದತ್ತಪೀಠ ಹಿಂದೂಗಳಿಗೆ ಹಸ್ತಾಂತರಿಸಲು ಶ್ರೀ ರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹುಕ್ಕೇರಿ ಪಟ್ಟಣದ ದತ್ತ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬೆಳಗಾವಿ: ಚಿಕ್ಕಮಗಳೂರು ತಾಲ್ಲೂಕು ಬಾಬಾಬುಡನ್ಗಿರಿಯಲ್ಲಿರುವ ದತ್ತಪೀಠವನ್ನು ಶೀಘ್ರ ಹಿಂದೂಗಳಿಗೆ ಹಸ್ತಾಂತರಿಸಬೇಕೆಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ದತ್ತಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸುವ ಬುದ್ದಿ ಬಿಜೆಪಿ ಪಕ್ಷಕ್ಕೆ ಬೇಗನೇ ಬರಲಿ ಎಂದು ಪ್ರಾರ್ಥಿಸಿದರು.
ದತ್ತಾತ್ರೇಯ ಅನುಗ್ರಹದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯವಹಿಸಿದರೆ ಅದಕ್ಕೆ ದತ್ತನ ಶಾಪ ತಟ್ಟಲಿ ಎಂದು ಕಿಡಿಕಾರಿದರು.
ದತ್ತಪೀಠದ ಹೋರಾಟದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂತು. ಸಿ.ಟಿ. ರವಿ, ಸುನಿಲ್ ಕುಮಾರ್ ದತ್ತಪೀಠದ ಹೋರಾಟದಿಂದಲೇ ಶಾಸಕರು, ಸಚಿವರಾದವರು. ಆದರೆ ದತ್ತಪೀಠಕ್ಕೆ ಮುಕ್ತಿ ಕೊಡುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿಲ್ಲ ಎಂದು ವಿಷಾದಿಸಿದರು.
ದತ್ತಪೀಠವನ್ನ ಹಿಂದೂಗಳಿಗೆ ಕೊಡಬೇಕು, ಅಲ್ಲಿರುವ ಸಮಾಧಿಗಳನ್ನು ಸ್ಥಳಾಂತರಿಸಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.