ಇದು 150 ವರ್ಷ ಇತಿಹಾಸದ ಸ್ಮಶಾನ! ಕೊರೊನಾ ಸೋಂಕಿತರ ಸಾವಿಗೂ ಇದೇ ಮುಕ್ತಿಧಾಮ!

  • sadhu srinath
  • Published On - 16:59 PM, 16 May 2020

ಕೊರೊನಾ ಸೋಂಕು ಅಮೆರಿಕದ ಜಂಘಾಬಲವನ್ನೇ ಹುದುಗಿಸಿಬಿಟ್ಟಿದೆ. ಅದರಲ್ಲೂ ನ್ಯೂಯಾರ್ಕಿನಲ್ಲಿ ಸಾವಿನ ಸಂಖ್ಯೆ ರಾಕೆಟ್ ವೇಗದಲ್ಲಿ ಏರುತ್ತಿದೆ. ಹಾಗಾಗಿ ಸ್ಮಶಾನದ ಕೊರತೆ ಕೂಡ ಉಂಟಾಗಿದ್ದು ಸದ್ಯ ಕೊರೊನಾದಿಂದ ಮೃತಪಟ್ಟವರನ್ನೆಲ್ಲಾ ಸಾಮೂಹಿಕವಾಗಿ ಹಾರ್ಟ್​ ಲ್ಯಾಂಡ್​ನಲ್ಲಿ ಸಂಸ್ಕಾರ ಮಾಡಲಾಗುತ್ತಿದೆ.

ಇಲ್ಲಿ 10 ಲಕ್ಷಕ್ಕಿಂತ ಹೆಚ್ಚು ಶವಸಂಸ್ಕಾರಗಳಾಗಿವೆ 
ಸ್ಮಶಾನವಾಗಿ ಈ ದ್ವೀಪಕ್ಕೆ 150 ವರ್ಷಗಳ ಇತಿಹಾಸವಿದೆ. ಇಲ್ಲಿ ಸುಮಾರು 10 ಲಕ್ಷಕ್ಕಿಂತಲೂ ಹೆಚ್ಚು ಶವಸಂಸ್ಕಾರಗಳಾಗಿವೆ. ಇದರ ವಿಸ್ತೀರ್ಣ ನೂರ ಒಂದು ಎಕರೆ . 1869ರಲ್ಲಿ ಇದನ್ನೊಂದು ಸ್ಮಶಾನವನ್ನಾಗಿ ಮಾಡಲು ನಿರ್ಧರಿಸಲಾಯ್ತು. ಇದಾದ ಬಳಿಕ ಗುರುತು ಪರಿಚಯವಿಲ್ಲದ ಅನಾಥ ಶವಗಳನ್ನು ಮತ್ತು ಗರ್ಭದಲ್ಲೇ ಮೃತಪಟ್ಟ ಮಕ್ಕಳ ಶವಗಳನ್ನು ಇಲ್ಲಿ ತಂದು ಹೂಳಲಾಯ್ತು.

ಇದನ್ನು ‘ಅಮೆರಿಕದ 2ನೇ ಅತೀ ದೊಡ್ಡ ಬರಿಯಲ್ ಗ್ರೌಂಡ್’ ಎಂದು ಬಣ್ಣಿಸಲಾಗುತ್ತದೆ. ಸರಿಸುಮಾರು 200 ವರ್ಷಗಳ ಕಾಲ ಈ ಐಲ್ಯಾಂಡ್ ಖಾಸಗಿ ಒಡೆತನದಲ್ಲಿತ್ತು. ಬಳಿಕ, 1868 ರಲ್ಲಿ ಹಾರ್ಟ್ ದ್ವೀಪವನ್ನು ನ್ಯೂಯಾರ್ಕ್ ನಗರ ಪ್ರಾಧಿಕಾರಕ್ಕೆ ಮಾರಾಟ ಮಾಡಲಾಯಿತು. ಇದಾದ ಒಂದು ವರ್ಷದ ನಂತರ ಇದರಲ್ಲಿ 45 ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಡಲಾಯಿತು.

ಮೊದಲ ಸಮಾಧಿ ಕ್ಷಯ ರೋಗದಿಂದ ಸಾವನ್ನಪ್ಪಿದ ಯುವತಿಯದು
ಈ ದ್ವೀಪದಲ್ಲಿ ಮೊದಲ ಸಮಾಧಿ 1869ರಲ್ಲಿ ಕ್ಷಯ ರೋಗದಿಂದ ಸಾವನ್ನಪ್ಪಿದ 24 ವರ್ಷದ ತಬ್ಬಲಿ ಯುವತಿ ಲೂಯಿಸಾ ವ್ಯಾನ್ ಸ್ಲೈಕ್ ಅವರದ್ದಾಗಿದೆ. ಈ ದ್ವೀಪಕ್ಕೂ ಮಹಾಮಾರಿ ಸೋಂಕುಗಳಿಗೂ ಬಿಟ್ಟೂ ಬಿಡದ ಸಂಬಂಧವಿದೆ. ಪ್ಲೇಗ್, ಕಾಲರಾ, ಕುಷ್ಟರೋಗ, ಏಡ್ಸ್​​​ ಹೀಗೆ ಮಾರಕ ಸೋಂಕುಗಳು ಅಮೆರಿಕದ ನ್ಯೂಯಾರ್ಕನ್ನು ಕಾಡಿದಾಗ ಈ ತಾಣವನ್ನು ಕ್ವಾರಂಟೈನ್ ಆಸ್ಪತ್ರೆಯಾಗಿ ಮತ್ತು ಅನಾಥ, ನಿರ್ಗತಿಕರ ಸಮಾಧಿ ಸ್ಥಳವಾಗಿ ಬಳಸಲಾಯಿತು. ಈಗಲೂ ಇಲ್ಲಿ ಹಳೆ ಆಸ್ಪತ್ರೆಯ ಕುರುಹುಗಳಿವೆ.

ಏಡ್ಸ್​​ ಪೀಡಿತರಿಗೂ ಇದೇ ಮುಕ್ತಿಧಾಮ
1985 ರ ಬಳಿಕ ಏಡ್ಸ್​​ನಿಂದ ಸಾವನ್ನಪ್ಪಿದವರನ್ನು ಕೂಡ ಇಲ್ಲೇ ಮಣ್ಣು ಮಾಡಲಾಗಿತ್ತು. ಇಂಟ್ರೆಸ್ಟಿಂಗ್ ಅಂದ್ರೆ ಇಲ್ಲಿರುವ “SC-B 1, 1985” ಹೆಸರಿನ ಸಮಾಧಿ ನ್ಯೂಯಾರ್ಕ್ ನಗರದಲ್ಲಿ ಏಡ್ಸ್‌ನಿಂದ ಸತ್ತ ಮೊದಲ ಮಗುವನ್ನು ನೆನಪಿಸುತ್ತದೆ .

ಹಿಂದೆ ವಾರಕ್ಕೊಮ್ಮೆ ಪಕ್ಕದ ರೈಕರ್ಸ್ ದ್ವೀಪದ ಜೈಲಿನಿಂದ ಕೈದಿಗಳನ್ನು ಕರೆ ತಂದು ಅನಾಥ ಶವಗಳ ಸಂಸ್ಕಾರ ಮಾಡಲಾಗ್ತಿತ್ತು. ಈಗ ಕೊರೊನಾದಿಂದ ಮೃತಪಟ್ಟವರು ಹೆಚ್ಚಾಗಿರುವುದರಿಂದ ಗುತ್ತಿಗೆ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಇಲ್ಲಿ ದಫನ್ ಮಾಡಿದ ಎಲ್ಲ ಮೃತದೇಹಗಳ ದಾಖಲೆಗಳಿವೆ. ಇದಕ್ಕೂ ಮೊದಲು ಇದನ್ನು ಎರಡನೆಯ ಮಹಾಯುದ್ಧದ ತಯಾರಿಗಾಗಿ ಬಳಸಲಾಗ್ತಾ ಇತ್ತು. ಹಿಂದೆ ಅಲ್ಲೊಂದು ಜೈಲೂ ಇತ್ತು.

ಇನ್ನು ತಮ್ಮ ಪ್ರೀತಿ ಪಾತ್ರರ ಸಮಾಧಿ ನೋಡಬೇಕೆಂದರೆ ತಿಂಗಳಿಗೆ ಎರಡು ಬಾರಿ ಅವಕಾಶ ನೀಡಲಾಗುತ್ತದೆ. ಅದೂ ಕೂಡ ಒಪ್ಪಿಗೆಯ ಮೇರೆಗೆ. ಪ್ರಸ್ತುತ ಕೊವಿಡ್ 19 ಸೋಂಕಿತರ ಸಮಾಧಿಯನ್ನೂ ಇಲ್ಲೆ ಮಾಡಲಾಗುತ್ತಿದೆ. ಹಾಗಾಗಿ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

ವಿಶೇಷ ಬರಹ -ರಾಜೇಶ್ ಶೆಟ್ಟಿ