ಮಂಗಳೂರಿನಲ್ಲಿ ಬಾಂಬ್ ಪತ್ತೆ ಅಣಕು ಪ್ರದರ್ಶನದಂತಿತ್ತು -ಹೆಚ್​ಡಿಕೆ

, ಮಂಗಳೂರಿನಲ್ಲಿ ಬಾಂಬ್ ಪತ್ತೆ ಅಣಕು ಪ್ರದರ್ಶನದಂತಿತ್ತು -ಹೆಚ್​ಡಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿನ್ನೆ ಬಾಂಬ್ ಪತ್ತೆಯಾಗಿ ಭಾರೀ ಸಂಚಲನ ಸೃಷ್ಟಿಸಿತ್ತು. ನಿನ್ನೆ ಬೆಳಗ್ಗೆ ಪತ್ತೆಯಾಗಿದ್ದ ಬಾಂಬ್​ ಅನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ನಿರ್ಜನ ಪ್ರದೇಶಕ್ಕೆ ಸುರಕ್ಷಿತವಾಗಿ ಕೊಂಡೊಯ್ದು ಸ್ಫೋಟಗೊಳಿಸಿದ್ದಾರೆ. ಈ ಸಂಬಂಧ ಇಂದು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪಟಾಕಿಗೆ ತುಂಬುವ ಪೌಡರ್ ತುಂಬಿದ್ರು:
ಕಬ್ಬಿಣದ ಬಾಕ್ಸ್​ನಲ್ಲಿ ಪಟಾಕಿಗೆ ತುಂಬುವ ಪೌಡರ್ ತುಂಬಿದ್ರು. ಅದರಲ್ಲಿ ಕಟ್ ಆಗಿರುವ ವೈರ್ ಇತ್ತು. ದೊಡ್ಡ ಕಂಟೈನರ್ ತಂದು ಮೂಟೆ ಮಧ್ಯೆ ಅದನ್ನು ಇಟ್ಟು ನಾಟಕ ಮಾಡಿದ್ದಾರೆ. ವೈರ್ ಎಳೆಯುವ ನಾಟಕ ಎಲ್ಲಾ ನಿನ್ನೆ ನಡೆದಿದೆ. ಈ ಘಟನೆಯನ್ನು ಗಮನಿಸಿದಾಗ ಅಣಕು ಪ್ರದರ್ಶನ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದು ಆರ್​ಎಸ್​ಎಸ್​ ಕಂಪನಿಯ ಸರ್ಕಾರ ಅಲ್ಲ, ವಿಹೆಚ್​ಪಿ ನಡೆಸುತ್ತಿರುವ ಸರ್ಕಾರವೂ ಅಲ್ಲ. ಹಾಗಾಗಿ ಈ ಸರ್ಕಾರದ ಬೆನ್ನಿಗೆ ನಿಂತು ಕೆಲಸ ಮಾಡುತ್ತಿವೆ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಸಮ್ಮಿಶ್ರ ಸರ್ಕಾರ ಇದ್ದ ವೇಳೆ ಮಂಗಳೂರು ಶಾಂತವಾಗಿತ್ತು. ಇದೀಗ ಮಂಗಳೂರಲ್ಲಿ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿದೆ. ಸಿಎಎ, ಎನ್​ಆರ್​ಸಿ ಜಾರಿಯಿಂದ ಶಾಂತಿಗೆ ಭಂಗ ಉಂಟಾಗಿದೆ. ಡಿ.19ರ ನಂತರದ ಘಟನೆಗಳಿಂದ ಜನರಲ್ಲಿ ಪರಸ್ಪರ ವಿಶ್ವಾಸ ಮರೆಯಾಗಿದೆ. ಮತ್ತೆ ಆತಂಕ ಉಂಟು ಮಾಡುವ ದಿನಗಳು ಮರುಕಳಿಸುತ್ತಿವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹೆಚ್​ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ:
CAA ವಿರುದ್ಧದ ಹೋರಾಟ ಮಂಗಳೂರಲ್ಲಿ ತೀವ್ರಗೊಂಡಿದೆ. ಹೀಗಾಗಿ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭಯೋತ್ಪಾದನ ಕೃತ್ಯಗಳನ್ನು ಬೆಂಬಲಿಸಲಾಗುತ್ತಿದೆ. ಮೈತ್ರಿ ಸರ್ಕಾರ ಇದ್ದಾಗ ಸುವ್ಯವಸ್ಥೆ ಇತ್ತು. ಬಿಜೆಪಿ ಅಧಿಕಾರಕ್ಕೇರಿದ ನಂತರ ಹಿಂಸೆಗಳು ಆಗುತ್ತಿವೆ. CAA ಕಾನೂನು ಜಾರಿ‌ ಮಾಡಲು ಹೊರಟಾಗ ಅಶಾಂತಿ ವಾತಾವರಣ ಸೃಷ್ಟಿಸಲಾಗಿದೆ. ಬಾಂಬ್ ಪತ್ತೆಯಾಗಿರುವ ಬಗ್ಗೆ ಆದಷ್ಟು ಬೇಗನೆ ತನಿಖೆ ಮುಗಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!