ಸೌಂದರ್ಯ ಕಾಪಾಡಿಕೊಳ್ಳುವುದು ಎಲ್ಲರ ಮನದಾಸೆಯಾಗಿರುತ್ತದೆ. ಅದಕ್ಕಾಗಿ ದಿನನಿತ್ಯವೂ ನಾನಾ ರೀತಿಯ ಸಲಹೆಗಳನ್ನು ಪಾಲನೆ ಮಾಡುತ್ತೇವೆ. ಅದರಲ್ಲಿಯೂ ಮುಖ ಹೊಳೆಯುವಂತೆ ಮಾಡಿ ಕಲೆ ಮುಕ್ತವಾಗಿಸಲು ಅನೇಕ ರೀತಿಯ ಪರಿಹಾರಗಳನ್ನು ಅನುಸರಿಸಲಾಗುತ್ತದೆ. ಆದರೆ ಚರ್ಮಕ್ಕೆ ಎಲ್ಲವನ್ನೂ ಹಚ್ಚುವ ಮೊದಲು ಅದರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವುದು ಅವಶ್ಯಕ. ಅದರಲ್ಲಿ ನಿಂಬೆ ಕೂಡ ಒಂದು. ಇದರಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ ಆದರೆ ಅದನ್ನು ಮುಖಕ್ಕೆ ಅನ್ವಯಿಸುವಾಗ ಅತ್ಯಂತ ಜಾಗರೂಕರಾಗಿರುವುದು ಅವಶ್ಯಕ. ಹೌದು ಇದು ನಿಜ. ತಜ್ಞರು ನೀಡುವ ಮಾಹಿತಿ ಪ್ರಕಾರ ನಿಂಬೆಯನ್ನು ಎಂದಿಗೂ ಚರ್ಮದ ಮೇಲೆ ನೇರವಾಗಿ ಅನ್ವಯಿಸಬಾರದು. ನೀವು ಈ ರೀತಿ ಮಾಡಿದರೆ, ಅದು ಚರ್ಮಕ್ಕೆ ಹಾನಿ ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ಈ ಬಗ್ಗೆ ಎಚ್ಚರ ವಹಿಸಬೇಕು. ಹಾಗಾದರೆ ಇದರಿಂದ ಚರ್ಮಕ್ಕೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ನಿಂಬೆ ವಿಟಮಿನ್ ಗಳಿಂದ ಸಮೃದ್ಧವಾಗಿದೆ, ಇದಲ್ಲದೆ ಇದು ನೈಸರ್ಗಿಕ ಬ್ಲೀಚಿಂಗ್ ಆಗಿ ಕಾರ್ಯನಿರ್ವಹಿಸುವುದರಿಂದ ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ, ಆದರೂ ಅದರ ಆಮ್ಲೀಯ ಗುಣಲಕ್ಷಣಗಳಿಂದಾಗಿ, ಅದನ್ನು ನೇರವಾಗಿ ಚರ್ಮಕ್ಕೆ ಹಚ್ಚಿಕೊಳ್ಳುವುದು ಕೆಲವು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು.
ನಿಂಬೆಯನ್ನು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲೆ ಗುಳ್ಳೆಗಳು ಉಂಟಾಗಬಹುದು. ಅದರಲ್ಲಿಯೂ ಸೂಕ್ಷ್ಮ ಚರ್ಮದ ಜನರು ನೇರವಾಗಿ ನಿಂಬೆಯನ್ನು ಹಚ್ಚುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಚರ್ಮದ ಮೇಲೆ ಊತ, ತುರಿಕೆ, ಉರಿಯೂತ, ಕೆಂಪಾಗುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ರೋಗಲಕ್ಷಣಗಳನ್ನು ಲಘುವಾಗಿ ತೆಗೆದುಕೊಂಡರೆ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಆದ್ದರಿಂದ ಕಡಲೆ ಹಿಟ್ಟು, ಮುಲ್ತಾನಿ ಮಿಟ್ಟಿ, ಗ್ಲಿಸರಿನ್, ತೆಂಗಿನ ಎಣ್ಣೆ, ಅಲೋವೆರಾ ಜೆಲ್ ಮುಂತಾದ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಹಚ್ಚಬೇಕು.
ನೀವು ನಿಂಬೆಯನ್ನು ನೇರವಾಗಿ ಚರ್ಮದ ಮೇಲೆ ಹಚ್ಚಿದಾಗ, ಚರ್ಮ ತುಂಬಾ ಸೂಕ್ಷ್ಮವಾಗುತ್ತದೆ. ನೀವು ನಿಮ್ಮನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ಚರ್ಮ ಸೂಕ್ಷ್ಮವಾಗಿರುವುದರಿಂದ ಬಿಸಿಲಿನಿಂದ ಬಳಲಬಹುದು. ಜೊತೆಗೆ ಹೈಪರ್ಪಿಗ್ಮೆಂಟೇಶನ್ ಗೂ ಕಾರಣವಾಗಬಹುದು. ಆದ್ದರಿಂದ ನೀವು ನಿಂಬೆಯನ್ನು ನೇರವಾಗಿ ಚರ್ಮದ ಮೇಲೆ ಉಜ್ಜಬಾರದು ಅಥವಾ ಹಚ್ಚಬಾರದು.
ಇದನ್ನೂ ಓದಿ: ಪಪ್ಪಾಯಿ, ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ?
ನಿಂಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲೀಯತೆ ಇದ್ದು ಈ ಕಾರಣದಿಂದಾಗಿ, ನೀವು ಅದನ್ನು ನೇರವಾಗಿ ಚರ್ಮದ ಮೇಲೆ ಹಚ್ಚಿದಾಗ, ಪಿಎಚ್ ಸಮತೋಲನವು ತೊಂದರೆಗೊಳಗಾಗುತ್ತದೆ. ಈ ಕಾರಣದಿಂದಾಗಿ, ನಿಮ್ಮ ಚರ್ಮದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಲು ಪ್ರಾರಂಭವಾಗುತ್ತದೆ. ಜೊತೆಗೆ ಇದು ಚಿಕ್ಕ ವಯಸ್ಸಿನಲ್ಲಿಯೇ ಸುಕ್ಕುಗಳಿಗೂ ಕಾರಣವಾಗಬಹುದು. ಇದೆಲ್ಲದರ ಜೊತೆಗೆ ಮೊಡವೆ ಸಮಸ್ಯೆಯ ಹೆಚ್ಚಳವಾಗಿ ಚರ್ಮದ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಕಾರಣವಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:24 pm, Sat, 11 January 25