ಆಯುರ್ವೇದದಿಂದ ಆಟೋಇಮ್ಯೂನ್ ಕಾಯಿಲೆ ನಿಯಂತ್ರಣ ಸಾಧ್ಯವೇ? ಇಲ್ಲಿದೆ ಡಾ. ಶ್ರೀನಿಧಿ ನೀಡಿರುವ ಮಾಹಿತಿ
ರುಮಟಾಯ್ಡ್ ಸಂಧಿವಾತ, ಸೋರಿಯಾಸಿಸ್, ಲೂಪಸ್, ಮಲ್ಟಿಪಲ್ ಸ್ಕ್ಲೆರೋಸಿಸ್‌ನಂತಹ ಆಟೋಇಮ್ಯೂನ್ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ಕೆಲವು ವಿಧಾನಗಳ ಕುರಿತು ಸಂಶೋಧನೆ ನಡೆಯುತ್ತಿದೆ. ಆಧುನಿಕ ಔಷಧಗಳು ಅನೇಕ ರೋಗಿಗಳಲ್ಲಿ ಕೆಲವು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತಿದ್ದು ಜನರು ಪರ್ಯಾಯ ಚಿಕಿತ್ಸಾ ಪದ್ಧತಿಗಳ ಕಡೆ ಮುಖ ಮಾಡುತ್ತಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ರುಮಟಾಯ್ಡ್ ಸಂಧಿವಾತ, ಸೋರಿಯಾಸಿಸ್, ಉರಿಯೂತದ ಕರುಳಿನ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್, ಹಶಿಮೊಟೊ ಥೈರಾಯ್ಡೈಟಿಸ್, ಲೂಪಸ್ ಮುಂತಾದ ಕಾಯಿಲೆಗಳು ಈಗ ಜಾಗತಿಕವಾಗಿ ಬಹಳ ಜನರನ್ನು ಬಾಧಿಸುತ್ತಿವೆ. ಇದರಿಂದ ಮುಕ್ತಿ ಪಡೆಯಲು ಸೇವಿಸುತ್ತಿರುವ ಆಧುನಿಕ ಔಷಧಗಳು ಸಹ ಅನೇಕ ರೋಗಿಗಳಲ್ಲಿ ಕೆಲವು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತಿವೆ. ಹಾಗಾಗಿ ಜನರು ಪರ್ಯಾಯ ಚಿಕಿತ್ಸಾ ಪದ್ಧತಿಗಳ ಕಡೆ ಮುಖ ಮಾಡುತ್ತಿದ್ದಾರೆ. ಆದರೆ ಆಯುರ್ವೇದವು ಇದಕ್ಕೆ ಸಮರ್ಥವಾಗಿರುವ ಚಿಕಿತ್ಸಾ ಪದ್ಧತಿ ಎಂದರೆ ನೀವು ನಂಬಲೇ ಬೇಕು. ಹೌದು ಬಗ್ಗೆ ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಗದತಂತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಶ್ರೀನಿಧಿ ಆರ್. ಬಲ್ಲಾಳ್ ಅವರು ಮತ್ತಷ್ಟು ಮಾಹಿತಿಯನ್ನು ನೀಡಿದ್ದಾರೆ.
ಸಂಶೋಧನೆ ಹೇಳುವುದೇನು?
ಭಾರತ ಸೇರಿದಂತೆ ಇತರ ಪಾಶ್ಚಿಮಾತ್ಯ ದೇಶಗಳಲ್ಲಿ ಆಟೋಇಮ್ಯೂನ್ ಕಾಯಿಲೆಗಳ ಬಗ್ಗೆ ವ್ಯಾಪಕ ಸಂಶೋಧನೆ ನಡೆಯುತ್ತಿದೆ. ರುಮಟಾಯ್ಡ್ ಸಂಧಿವಾತ, ಸೋರಿಯಾಸಿಸ್ ಮತ್ತು ಉರಿಯೂತದ ಕರುಳಿನ ಕಾಯಿಲೆ ಇರುವ ರೋಗಿಗಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ತನ್ನದೇ ದೇಹದ ಅಂಗಾಂಶಗಳ ಮೇಲೆ ದಾಳಿ ಮಾಡುವ ಸ್ಥಿತಿಗಳು ಕಂಡುಬರುತ್ತವೆ. ಇಂತಹ ಕಾಯಿಲೆಗಳ ನಿರ್ವಹಣೆಗೆ ಸಮಕಾಲೀನ ಚಿಕಿತ್ಸೆಯೊಂದಿಗೆ ಆಯುರ್ವೇದವನ್ನು ಸಂಯೋಜಿಸುವ ಬಗ್ಗೆ ಹಾಗೂ ಕೆಲವು ಜನರಲ್ಲಿ ಸಮಕಾಲೀನ ಚಿಕಿತ್ಸೆಯಿಂದ ಅಡ್ಡಪರಿಣಾಮಗಳು ಉಂಟಾದಾಗ ಅವರಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡುವ ಬಗ್ಗೆ ಮತ್ತು ಸಮಗ್ರ (ಇಂಟಿಗ್ರೇಟೆಡ್) ವಿಧಾನದ ಕುರಿತು ಬಹಳಷ್ಟು ಸಂಶೋಧನೆ ನಡೆಯುತ್ತಿದೆ.
ರುಮಟಾಯ್ಡ್ ಸಂಧಿವಾತದ ಕುರಿತು ಅಧ್ಯಯನ
ಪಬ್‌ಮೆಡ್‌ನಲ್ಲಿ ನಡೆದ ಅಧ್ಯಯನಗಳ ಪ್ರಕಾರ, ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ಆಯುರ್ವೇದ ಔಷಧಗಳ ಕುರಿತು ಹತ್ತಾರು ವೈದ್ಯಕೀಯ ಪ್ರಯೋಗಗಳು ನಡೆದಿರುವುದು ದಾಖಲಾಗಿದೆ. 2011ರಲ್ಲಿ ಜರ್ನಲ್ ಆಫ್ ಕ್ಲಿನಿಕಲ್ ರುಮಟಾಲಜಿಯಲ್ಲಿ ಡಾ. ಡೇನಿಯಲ್ ಫರ್ಸ್ಟ್ ನೇತೃತ್ವದ ತಂಡವು ಪ್ರಕಟಿಸಿದ ಸಂಶೋಧನೆಯಲ್ಲಿ, ರುಮಟಾಯ್ಡ್ ಸಂಧಿವಾತವನ್ನು ತಡೆಗಟ್ಟಲು ಬಳಸುವ ಪ್ರಮಾಣಿತ ಔಷಧದೊಂದಿಗೆ ಆಯುರ್ವೇದ ಗಿಡಮೂಲಿಕೆ ಔಷಧವನ್ನು ಹೋಲಿಕೆ ಮಾಡಲಾಗಿತ್ತು. ಅದರ ಫಲಿತಾಂಶದ ಪ್ರಕಾರ, ರುಮಟಾಯ್ಡ್ ಸಂಧಿವಾತಕ್ಕೆ ಆಧುನಿಕ ಚಿಕಿತ್ಸೆ ಮತ್ತು ಆಯುರ್ವೇದ ಚಿಕಿತ್ಸೆ ಎರಡೂ ಸಮಾನವಾಗಿ ಪರಿಣಾಮಕಾರಿಯಾಗಿವೆ ಎಂದು ಕಂಡುಬಂದಿದೆ.
ಇದನ್ನೂ ಓದಿ: ಮೈಗ್ರೇನ್ ಸಮಸ್ಯೆ ತಡೆಯಲು ಡಾ. ಮುರಳೀಧರ ಬಲ್ಲಾಳ್ ನೀಡಿದ ಸರಳ ಸಲಹೆಗಳು
ಮಲ್ಟಿಪಲ್ ಸ್ಕ್ಲೆರೋಸಿಸ್‌ನಲ್ಲೂ ಸಂಯೋಜಿತ ವಿಧಾನದ ಅಧ್ಯಯನ
ವೆಲ್‌ಕಮ್ ಓಪನ್ ರಿಸರ್ಚ್‌ನಲ್ಲಿ ಪ್ರಕಟವಾಗಿರುವ ರ‍್ಯಾಂಡಮೈಸ್ಡ್ ಕಂಟ್ರೋಲ್ಡ್ ಪ್ರಯೋಗವೊಂದರಲ್ಲಿ, ಮಲ್ಟಿಪಲ್ ಸ್ಕ್ಲೆರೋಸಿಸ್‌ಗೆ ಹೆಚ್ಚುವರಿ ಚಿಕಿತ್ಸೆಯಾಗಿ ಯೋಗ ಮತ್ತು ಆಯುರ್ವೇದದ ಸಮಗ್ರ ನಿರ್ವಹಣೆಯನ್ನು ಸಂಯೋಜಿಸಿ ನೀಡುವ ಚಿಕಿತ್ಸೆಯನ್ನು ಪರೀಕ್ಷಿಸಲಾಗುತ್ತಿದೆ. ಇದರಲ್ಲಿ ಚಲನಶೀಲತೆ ಮತ್ತು ದೌರ್ಬಲ್ಯ ಮಾತ್ರವಲ್ಲದೆ, ನರ-ಜೈವಿಕ ಗುರುತುಗಳನ್ನೂ ಗಮನಿಸಲಾಗುತ್ತಿದ್ದು, ಜೊತೆಗೆ ಪ್ರತಿ ರೋಗಿಗೆ ತಕ್ಕಂತೆ ವೈಯಕ್ತಿಕ ಆಯುರ್ವೇದ ಆಹಾರ ಕ್ರಮದ ಸಲಹೆಯನ್ನೂ ಈ ಪ್ರೋಟೋಕಾಲ್‌ನಲ್ಲಿ ಸೇರಿಸಲಾಗಿದೆ. ಈ ಹಿಂದೆ ಮಲ್ಟಿಪಲ್ ಸ್ಕ್ಲೆರೋಸಿಸ್ ಕುರಿತು ನಡೆದ ಪ್ರಾಥಮಿಕ ಅಧ್ಯಯನಗಳು ಚಲನಶೀಲತೆಯಲ್ಲಿ ಸುಧಾರಣೆ ಮತ್ತು ದೌರ್ಬಲ್ಯ ಕಡಿಮೆಯಾಗಿರುವುದನ್ನು ಸೂಚಿಸಿವೆ.
ಜರ್ನಲ್ ಆಫ್ ಕ್ರೋನ್ಸ್ ಅಂಡ್ ಕೊಲೈಟಿಸ್‌ನಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ, ಮಧ್ಯಮ ತೀವ್ರತೆಯ ಡಿಸ್ಟಲ್ ಅಲ್ಸರೇಟಿವ್ ಕೊಲೈಟಿಸ್‌ನಲ್ಲಿ ರೋಗ ಉಪಶಮನಕ್ಕಾಗಿ ಸಂಸ್ಕರಿಸಿದ ಗಿಡಮೂಲಿಕೆಗಳನ್ನು ಹೊಂದಿರುವ ಪ್ರಮಾಣೀಕೃತ ಎನಿಮಾ NCB-02 ಅನ್ನು ಪರೀಕ್ಷಿಸಲಾಗಿತ್ತು. ಎಂಡೋಸ್ಕೋಪಿ ಪರೀಕ್ಷೆ ಮತ್ತು ರೋಗಲಕ್ಷಣಗಳೆರಡರಲ್ಲೂ ಸುಧಾರಣೆ ಕಂಡುಬಂದಿದೆ.
ಆಯುರ್ವೇದದ ನಿಜವಾದ ಶಕ್ತಿ ಅದರ ಸಮಗ್ರತೆಯಲ್ಲಿದೆ. ದೀರ್ಘಕಾಲದ ಕಾಯಿಲೆಗಳನ್ನು ಅದು ದೋಷಗಳ ಏರುಪೇರು, ದಿನಚರಿಯ ಅಸಮತೋಲನ, ಜೀರ್ಣಶಕ್ತಿಯ ತೊಂದರೆ ಮತ್ತು ದೇಹದ ರೋಗನಿರೋಧಕ ಶಕ್ತಿಯ ವ್ಯತ್ಯಾಸ ಎಂದು ನೋಡುತ್ತದೆ. ಅದಕ್ಕೆ ತಕ್ಕಂತೆ ವೈಯಕ್ತಿಕ ಆಹಾರ ಕ್ರಮ, ನಿಯಮಿತ ನಿದ್ರೆ, ಯೋಗ, ಧ್ಯಾನ ಮತ್ತು ಪಂಚಕರ್ಮ ಚಿಕಿತ್ಸೆಗಳನ್ನು ಸೂಚಿಸಲಾಗುತ್ತದೆ.
ಅರಿಶಿನ, ಅಶ್ವಗಂಧ ಸೇರಿದಂತೆ ಗಿಡಮೂಲಿಕೆಗಳಲ್ಲಿದೆ ವಿಶೇಷ ಶಕ್ತಿ!
ಕಳೆದ ಇಪ್ಪತ್ತು ವರ್ಷಗಳ ಸಂಶೋಧನೆಯು ಅರಿಶಿನ, ಅಮೃತಬಳ್ಳಿ, ಅಶ್ವಗಂಧದಂತಹ ಆಯುರ್ವೇದದ ಪ್ರಮುಖ ಗಿಡಮೂಲಿಕೆಗಳು ಆಟೋಇಮ್ಯೂನ್ ಕಾಯಿಲೆಗಳನ್ನು ನಿಯಂತ್ರಿಸುವಲ್ಲಿ ಹೊಂದಿರುವ ಮಹತ್ವದ ಪಾತ್ರವನ್ನು ಸ್ಪಷ್ಟಪಡಿಸಿದೆ. ಇದರ ಭರವಸೆ ಮೂಡಿಸುವ ಫಲಿತಾಂಶಗಳು ಈ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿವೆ.
ಸೂಚನೆ: ಆದರೆ ಯಾವುದೇ ಕಾರಣಕ್ಕೂ ಇಮ್ಯುನೊಸಪ್ರೆಸಿವ್ ಔಷಧಿಗಳನ್ನು ಸ್ವತಃ ನಿಲ್ಲಿಸುವುದು ಅಥವಾ ಆಯುರ್ವೇದ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ಆರಂಭಿಸುವುದು ಅಪಾಯಕಾರಿಯಾಗಬಹುದು. ಹಾಗಾಗಿ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




