ಕೊರೊನಾ ಬಂದ ಮೇಲೆ ಈ ಜಗತ್ತಿನಲ್ಲಿ ಅನೇಕ ಬದಲಾವಣೆಗೆ ನಾವು ಸಾಕ್ಷಿಯಾಗಿದ್ದೇವೆ. ಅದರಲ್ಲೂ ಲಾಕ್ಡೌನ್ ಅವಧಿಯಂತೂ ಊಹಿಸಲಾರದಷ್ಟು ಬದಲಾವಣೆಗಳಿಗೆ ಕಾರಣವಾಯ್ತು. ಆ ಪೈಕಿ ಔದ್ಯೋಗಿಕ ಕ್ಷೇತ್ರದಲ್ಲಾದ ಪ್ರಮುಖ ಬದಲಾವಣೆ ಎಂದರೆ ವರ್ಕ್ ಫ್ರಮ್ ಹೋಂ. ಲಾಕ್ಡೌನ್ಗೂ ಮುನ್ನ ಕೆಲ ಸಂಸ್ಥೆಗಳು ಮಾತ್ರ ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ಸೌಲಭ್ಯ ನೀಡುತ್ತಿದ್ದವು. ಇನ್ನುಳಿದ ಸಂಸ್ಥೆಗಳ ಉದ್ಯೋಗಿಗಳಿಗೆ ಅದು ಗಗನ ಕುಸುಮವೇ ಆಗಿತ್ತು. ಆದರೆ, ಕೊರೊನಾ ಸೋಂಕಿನ ಭಯದಿಂದಾಗಿ ಹಾಗೂ ಸರ್ಕಾರದ ಕಟ್ಟುನಿಟ್ಟಿನ ನಿಯಮಾವಳಿಗಳಿಂದಾಗಿ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವುದನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಗಿ ಅನಿವಾರ್ಯವಾಗಿ ಎಲ್ಲಾ ಸಂಸ್ಥೆಗಳೂ ಮನೆಯಿಂದಲೇ ಕಾರ್ಯ ನಿರ್ವಹಿಸುವ ಪದ್ಧತಿಗೆ ಒಗ್ಗಿಕೊಂಡವು. ಹೀಗಾಗಿ ಕಳೆದೊಂದು ವರ್ಷದಿಂದ ಅನೇಕರು ಮನೆಯಿಂದಲೇ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಇಷ್ಟಾದರೂ ವರ್ಕ್ ಫ್ರಮ್ ಹೋಂ ಸೌಲಭ್ಯ ಕೆಲ ತಿಂಗಳ ಮಟ್ಟಿಗೆ ಹಿತವೆನಿಸಿದರೂ ನಿರಂತರವಾಗಿ ಅದನ್ನು ನಿಭಾಯಿಸುವುದು ಸುಲಭವಲ್ಲ. ಕಚೇರಿಯಲ್ಲಾದರೆ ಕೆಲಸದ ವಾತಾವರಣ ಹಾಗೂ ಉದ್ಯೋಗಿಗಳಿಗೆ ಕೆಲಸ ಮಾಡಲು ಅನುಕೂಲವಾಗುವಂತಹ ಎಲ್ಲಾ ಸೌಲಭ್ಯಗಳೂ ಇರುತ್ತವೆ. ಆದರೆ, ಮನೆಯಲ್ಲಿ ಅಷ್ಟೆಲ್ಲಾ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಅನೇಕರು ಗಮನ ಹರಿಸುವುದಿಲ್ಲ. ಇದು ನಮಗರಿವಿಲ್ಲದೆಯೇ ನಮ್ಮನ್ನು ಅನೇಕ ಆರೋಗ್ಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸಿಬಿಡುತ್ತದೆ.
ಪ್ರಮುಖವಾಗಿ ಕಾಣಿಸಿಕೊಳ್ಳುವ ಐದು ಶಾರೀರಿಕ ಸಮಸ್ಯೆಗಳು ಹಾಗೂ ಅದನ್ನು ನಿರ್ವಹಿಸಬೇಕಾದ ರೀತಿ:
ಬೆನ್ನು ನೋವು: ಇದನ್ನು ಜಾಗತಿಕ ಸಮಸ್ಯೆಯೆಂದರೂ ಅತಿಶಯೋಕ್ತಿ ಅಲ್ಲ. ದಿನಕ್ಕೆ ಎಂಟರಿಂದ ಹತ್ತು ಗಂಟೆ ಕುರ್ಚಿಯಲ್ಲಿ ಕುಳಿತು ಲ್ಯಾಪ್ಟಾಪ್ ಅಥವಾ ಮಾನಿಟರ್ ನೋಡುತ್ತಾ ಕೆಲಸ ಮಾಡುವವರೆಲ್ಲಾ ಅತಿ ಸುಲಭವಾಗಿ ಈ ಸಮಸ್ಯೆಗೆ ತುತ್ತಾಗಿರುತ್ತಾರೆ. ಮೇಲ್ನೋಟಕ್ಕೆ ಕುಳಿತಲ್ಲೇ ಕುಳಿತು ಕೆಲಸ ಮಾಡುವುದಕ್ಕೆ ಯಾವ ಸೀಮೆಯ ದೈಹಿಕ ಶ್ರಮ ಬೇಕು ಎನ್ನಿಸಿದರೂ ಅದನ್ನು ಅನುಭವಿಸುವವರ ಪಾಡು ಮಾತ್ರ ಹೇಳತೀರದು. ಸಾಧಾರಣವಾಗಿ ಬೆನ್ನು ನೋವು ನಿರಂತರವಾಗಿ ಕುಳಿತೇ ಇರುವುದರಿಂದ, ಬೇಕಾಬಿಟ್ಟಿ ಮಲಗಿಕೊಳ್ಳುವುದರಿಂದ, ಒತ್ತಡದಲ್ಲಿರುವುದರಿಂದ, ಸೂಕ್ತವಲ್ಲದ ಕುರ್ಚಿಯಲ್ಲಿ ಕುಳಿತು ಕೆಲಸ ನಿರ್ವಹಿಸುವುದರಿಂದ ಹಾಗೂ ಇನ್ನೂ ವಿವಿಧ ಕಾರಣಗಳಿಂದ ನಮ್ಮನ್ನು ಆವರಿಸಿಕೊಳ್ಳುತ್ತದೆ. ಬೆನ್ನು ನೋವು ಶುರುವಾದರೆ ನರಗಳಲ್ಲಿ ಸೆಳೆತ ಉಂಟಾಗುವುದು, ಅತಿಯಾದ ನೋವು ಬಾಧಿಸುವುದು, ಬಗ್ಗಲು, ಭಾರ ಎತ್ತಲು, ನೇರವಾಗಿ ನಿಲ್ಲಲು, ಓಡಾಡಲು ಆಗದಂತೆ ಕಾಡುತ್ತದೆ. ಪ್ರಾರಂಭಿಕ ಹಂತದಲ್ಲೇ ಎಚ್ಚೆತ್ತುಕೊಂಡರೆ ಇದನ್ನು ಮನೆಯಲ್ಲೇ ಮಾಡುವ ಕೆಲ ಉಪಚಾರಗಳ ಮೂಲಕ ಗುಣಪಡಿಸಲು ಸಾಧ್ಯವಿದೆ. ಕೆಲ ಸಮಯ ಬಿಸಿನೀರಿನ ಶಾಖ ತೆಗೆದುಕೊಳ್ಳುವುದು, ಸರಿಯಾಗಿ ವ್ಯಾಯಾಮ ಮಾಡುವುದು, ನೇರವಾಗಿ ಕುಳಿತುಕೊಳ್ಳಲು ಅಭ್ಯಾಸಿಸುವುದು, ಕೆಲಸದ ನಡುವೆ ಕೊಂಚ ವಿರಾಮ ತೆಗೆದುಕೊಂಡು ಸುತ್ತಾಡುವುದು ಅಥವಾ ವಿಶ್ರಮಿಸುವುದು, ಸರಿಯಾದ ಕುರ್ಚಿ ವ್ಯವಸ್ಥೆ ಮಾಡಿಕೊಳ್ಳುವುದು.. ಇತ್ಯಾದಿ ಕ್ರಮಗಳ ಮೂಲಕ ನೋವಿನಿಂದ ಮುಕ್ತಿ ಹೊಂದಬಹುದು. ಒಂದು ವೇಳೆ ನೋವು ಉಲ್ಬಣಿಸುವ ತನಕ ಎಚ್ಚೆತ್ತುಕೊಳ್ಳದಿದ್ದರೆ ಅನಿವಾರ್ಯವಾಗಿ ವೈದ್ಯರ ಮೊರೆ ಹೋಗಬೇಕಾಗಬಹುದು.
ಭುಜದ ನೋವು: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ.. ಎನ್ನುವ ಸಿನಿಮಾ ಡೈಲಾಗ್ ಕೇಳೋಕೆ ಹೇಳೋಕೆ ಎಷ್ಟು ಚೆಂದ ಅಲ್ವಾ? ಆದರೆ, ಇದೇ ಭುಜಕ್ಕೆ ನೋವು ಆರಂಭವಾದರೆ ಅದಕ್ಕಿಂತ ದೊಡ್ಡ ಸಂಕಷ್ಟ ಬೇರೇನೂ ಇಲ್ಲ ಎನ್ನಿಸಿಬಿಡುತ್ತದೆ. ನಮ್ಮ ದೇಹದಲ್ಲಿ ಕೆಲವು ಅಂಗಗಳಿಗೆ ನಾವು ಹೆಚ್ಚಿನ ಕೆಲಸ ನೀಡುತ್ತಿರುತ್ತೇವೆ. ಹಾಗೆಯೇ ಭುಜಕ್ಕೆ ಕೂಡ ತುಸು ಹೆಚ್ಚಿನ ಒತ್ತಡ ಬೀಳುತ್ತದೆ. ನಡೆಯುವಾಗ ಕೈ ಬೀಸಿಕೊಂಡು ಹೋದರೂ, ಕುಳಿತಲ್ಲೇ ಕೀಬೋರ್ಡ್ ಕುಟ್ಟಿದರೂ ಭುಜಕ್ಕೆ ಕೆಲಸ ಇದ್ದೇ ಇರುತ್ತದೆ. ಹೀಗಾಗಿ ಭುಜದ ನೋವು ಅತ್ಯಂತ ಸುಲಭವಾಗಿ, ಸದ್ದಿಲ್ಲದೇ ನಮ್ಮನ್ನು ಆವರಿಸಿಕೊಳ್ಳಬಹುದು. ಇದನ್ನು ನಾವು ಯಾವುದೇ ಕಾರಣಕ್ಕೂ ತನ್ನಿಂತಾನೇ ಸರಿಹೋಗಲಿ ಎಂದು ಕಡೆಗಣಿಸದೇ ಸೂಕ್ತ ರೀತಿಯ ಉಪಚಾರ ನೀಡಿ ಗುಣಪಡಿಸಿಕೊಳ್ಳುವುದು ಉತ್ತಮ. ಐಸ್ ಇದ್ದರೆ ಅದನ್ನು ಭುಜದ ಭಾಗಕ್ಕೆ ಹಿಡಿದು ನಯವಾಗಿ ನೇವರಿಸಿಕೊಳ್ಳುವುದರಿಂದ ನೋವು ಶಮನವಾಗುವ ಸಾಧ್ಯತೆ ಇರುತ್ತದೆ. ಕೆಲವು ಸಣ್ಣಪುಟ್ಟ ವ್ಯಾಯಾಮಗಳೂ ನೋವು ನಿವಾರಿಸಲು ಸಹಕಾರಿಯಾಗುತ್ತವೆ. ಒಂದು ವೇಳೆ ಯಾವುದರಿಂದಲೂ ನೋವು ಗುಣಮುಖವಾಗಲಿಲ್ಲ ಎಂದಾದರೆ ವೈದ್ಯರನ್ನು ಕಾಣುವುದು ಉತ್ತಮ.
ಎಚ್ಚರ: ಯಾವುದೇ ಗಾಯವಿಲ್ಲದೇ, ಕಾರಣವಿಲ್ಲದೇ ಏಕಾಏಕಿ ಭುಜನೋವು ಕಾಣಿಸಿಕೊಂಡರೆ ತಕ್ಷಣ ನಿಮ್ಮ ಸಮೀಪದ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಅದು ಹೃದಯಾಘಾತದ ಮುನ್ಸೂಚನೆಯೂ ಆಗಿರಬಹುದು.
ಸೊಂಟ ನೋವು: ಕುಳಿತಲ್ಲೇ ಕುಳಿತು ಕೆಲಸ ಮಾಡುವವರಿಗೆ ಕಾಡುವ ಮತ್ತೊಂದು ಸಮಸ್ಯೆ ಸೊಂಟ ನೋವು. ಸಾಧಾರಣವಾಗಿ ಸಣ್ಣಪುಟ್ಟ ಸಮಸ್ಯೆಗಳನ್ನೆಲ್ಲಾ ಸೊಂಟ ತಡೆದುಕೊಳ್ಳುತ್ತದೆಯಾದರೂ ಅತಿಯಾದ ಒತ್ತಡ ಬಿದ್ದರೆ ನೋವು ಕಾಣಿಸಿಕೊಳ್ಳುತ್ತದೆ. ಇದರಲ್ಲೂ ಸೂಕ್ತ ವಿಶ್ರಾಂತಿ ಪಡೆಯುವುದರಿಂದ, ಐಸ್ ಇಟ್ಟು ನೇವರಿಸುವುದರಿಂದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ, ನೋವು ಉಲ್ಬಣಿಸುತ್ತಲೇ ಹೋದರೆ ಮಾತ್ರ ಮನೆ ಮದ್ದನ್ನು ನಂಬಿಕೊಂಡು ಕೂರದೇ ಸೀದಾ ವೈದ್ಯರನ್ನು ಕಾಣುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಮಂಡಿ ನೋವು: ದೇಹದ ಯಾವುದೇ ಭಾಗಕ್ಕಾದರೂ ನಿಯಮಿತ ವ್ಯಾಯಾಮ ಬೇಕೇಬೇಕು. ವ್ಯಾಯಾಮ ಎಂದಾಕ್ಷಣ ಕ್ರಮಬದ್ಧವಾಗಿ ಮಾಡುವುದೇ ಆಗಿರಬೇಕು ಎಂದೇನಿಲ್ಲ. ಬದಲಾಗಿ, ನಾವು ಓಡಾಡುವಾಗ, ಬಗ್ಗುವಾಗ, ಕೂರುವಾಗ ನಮಗೆ ಗೊತ್ತಿಲ್ಲದೆಯೇ ಕೆಲ ಭಾಗಗಳಿಗೆ ವ್ಯಾಯಾಮ ಆಗುತ್ತಿರುತ್ತದೆ. ಆದರೆ, ಹೆಚ್ಚುಕಾಲ ಕುಳಿತಲ್ಲೇ ಕುಳಿತು ಕೆಲಸ ಮಾಡುವವರು ಓಡಾಡುವುದೇ ಕಡಿಮೆ ಆಗುವುದರಿಂದ ಅವರ ಕಾಲಿಗೆ ಬೇಕಾದ ವ್ಯಾಯಾಮ ಸಿಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಸಹಜವಾಗಿ ಮಂಡಿ ನೋವು ಕಾಡಲಾರಂಭಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಂಡಿ ನೋವು ಶುರುವಾದರೆ ವೃದ್ಧಾಪ್ಯದಲ್ಲಿ ತೀರಾ ಕಷ್ಟ ಅನುಭವಿಸಬೇಕು ಎಂಬುದಂತೂ ಖಚಿತ. ಹೀಗಾಗಿ ಮಂಡಿ ನೋವು ಕಾಣಿಸಿಕೊಂಡಾಗ ತಡಮಾಡದೇ ಅದರತ್ತ ಗಮನ ಹರಿಸಿ ಗುಣಪಡಿಸಿಕೊಳ್ಳಬೇಕು.
ಒಂದು ವೇಳೆ ನೀವು ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದವರಾಗಿದ್ದು ಇಂತಹ ಯಾವುದೇ ಸಮಸ್ಯೆ ನಿಮ್ಮ ಅನುಭವಕ್ಕೆ ಬಾರದೇ ಇದ್ದಲ್ಲಿ ನೀವು ಈಗಿಂದೀಗಲೇ ಎಚ್ಚೆತ್ತುಕೊಂಡು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು. ನೋವಿಗೆ ತುತ್ತಾದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಸಾವಿರ ಪಾಲು ಉತ್ತಮ. ಅಂತೆಯೇ, ಈಗ ವರ್ಕ್ ಫ್ರಮ್ ಹೋಂ ನಿರ್ವಹಿಸುತ್ತಿರುವವರು ಅತಿ ಮುಖ್ಯವಾಗಿ ನೀವು ಕೂರುವ ಕುರ್ಚಿಯಿಂದ ಹಿಡಿದು ನಿಮ್ಮ ನಿದ್ರೆ, ಓಡಾಟ, ವ್ಯಾಯಾಮ ಎಲ್ಲದರ ಬಗ್ಗೆಯೂ ಗಮನ ಹರಿಸಿ. ಹೇಗೂ ಮನೆಯಲ್ಲೇ ಇದ್ದು ಕೆಲಸ ಮಾಡುವುದು ಎಂಬ ಕಾರಣಕ್ಕೆ ಹೇಗೆ ಬೇಕೆಂದ ಹಾಗೆ ನಿಮ್ಮ ದೇಹವನ್ನು ದಂಡಿಸಬೇಡಿ.
ಇದನ್ನೂ ಓದಿ:
ವರ್ಕ್ ಫ್ರಂ ಹೋಮ್ ಪರಿಣಾಮ: ಕಚೇರಿ ಕೆಲಸ ಮತ್ತು ವೈಯಕ್ತಿಕ ಜೀವನ ನಿಭಾಯಿಸುವಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಒತ್ತಡ
ನಗರ ಜೀವನ-ಕೆಲಸದ ಜಂಜಾಟದ ನಡುವೆ ಉತ್ತಮ ಜೀವನಶೈಲಿಗೆ ಈ ನಿಯಮಗಳನ್ನು ಪಾಲಿಸಿ
(Common Health problems that occur during work from home and the precautions you need to take)