ಇಂದು ನಡೆಯುತ್ತಿರೋದು ತಾಲೀಮು ಪ್ರಕ್ರಿಯೆ.. ಕೊರೊನಾ ಲಸಿಕೆ ವಿತರಣೆ ಅಲ್ಲ.. ಅಲ್ಲ.. ಅಲ್ಲ

ಒಬ್ರು ಲಸಿಕೆ ಕೊಡಲಾಗಿದೆ ಅಂತಾರೆ, ಇನ್ನೊಬ್ರು ತಾಲೀಮು ಅಂತಾರೆ, ಮತ್ತೊಬ್ರು ಲಸಿಕೆ ನೀಡೋದಿಲ್ಲ ಅಂತ ಹೇಳ್ತಾರೆ.. ಯಾವುದು ಸತ್ಯ? ಅಸಲಿ ವಿಷಯ ಏನು? ಡ್ರೈ ರನ್​ ಅಥವಾ ತಾಲೀಮು ಪ್ರಕ್ರಿಯೆಯಲ್ಲಿ ಕೊರೊನಾ ಲಸಿಕೆಯನ್ನೇ ಕೊಡ್ತಾರಾ? ನಿಜಕ್ಕೂ ಆಗ್ತಾ ಇರೋದು ಏನು? ವಿವರ ಇಲ್ಲಿದೆ..

  • Publish Date - 1:43 pm, Sat, 2 January 21
ಇಂದು ನಡೆಯುತ್ತಿರೋದು ತಾಲೀಮು ಪ್ರಕ್ರಿಯೆ.. ಕೊರೊನಾ ಲಸಿಕೆ ವಿತರಣೆ ಅಲ್ಲ.. ಅಲ್ಲ.. ಅಲ್ಲ
ಪ್ರಾತಿನಿಧಿಕ ಚಿತ್ರ

ಇಂದು ದೇಶದ ಕೆಲವೆಡೆ ಕೊರೊನಾ ಲಸಿಕೆಯ ತಾಲೀಮು ನಡೆಸಲಾಗಿದೆ. ಕರ್ನಾಟಕದಲ್ಲಿ ಶಿವಮೊಗ್ಗ, ಮೈಸೂರು, ಕಲಬುರ್ಗಿ, ಬೆಳಗಾವಿ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕೊರೊನಾ ಲಸಿಕೆಯ ಡ್ರೈ ರನ್​ ನಡೆದಿದೆ. ಆದರೆ, ಬಹುತೇಕರು ಕೊರೊನಾ ವಿತರಣೆಯೇ ಆರಂಭವಾಗಿದೆ ಎಂದು ಭಾವಿಸಿದ್ದಾರೆ.

ಕೊರೊನಾ ಲಸಿಕೆ ವಿತರಣೆಗೆ ಸಜ್ಜಾಗಿ ನಿಂತ ಕೇಂದ್ರಗಳು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಲಸಿಕೆ ಸ್ವೀಕರಿಸೋಕೆ ಆಗಮಿಸಿದ ಜನ, ಚುಚ್ಚುಮದ್ದು, ಲಸಿಕೆ ನೀಡಿದ ನಂತರ ನಿಗಾ ವಹಿಸಲು ಪ್ರತ್ಯೇಕ ಕೊಠಡಿ, ಸಮಸ್ಯೆಯಾದರೆ ಚಿಕಿತ್ಸೆ ನೀಡಲು ವ್ಯವಸ್ಥೆ.. ಇವೆಲ್ಲವನ್ನೂ ನೀವು ದೃಶ್ಯಾವಳಿಗಳಲ್ಲಿ ಗಮನಿಸಿರಬಹುದು. ಮತ್ತು ಇವಿಷ್ಟೂ ಇದ್ದಿದ್ದು ನಿಜ ಕೂಡ. ಆದರೆ, ಅಲ್ಲಿ ಎಲ್ಲಾ ಇದ್ದರೂ ಕೊರೊನಾ ಲಸಿಕೆ ಮಾತ್ರ ಇರಲಿಲ್ಲ!

ಅರೆರೆ.. ಬೆಳಗ್ಗೆಯಿಂದ ಜನ ಲಸಿಕೆ ಸ್ವೀಕರಿಸಿದ್ರು, ಆರೋಗ್ಯದಲ್ಲಿ ಸಮಸ್ಯೆ ಆಗದ ಕಾರಣಕ್ಕೆ ಮನೆಗೆ ವಾಪಾಸ್ಸಾದರು ಅನ್ನೋ ಸುದ್ದಿಗಳನ್ನ ನೋಡಿದ್ದೀವಿ. ಈಗ ನೋಡಿದ್ರೆ ಅಲ್ಲಿ ಕೊರೊನಾ ಲಸಿಕೆಯೇ ಇರಲಿಲ್ಲ ಅಂತೀರಲ್ಲಾ ಎಂದು ಗೊಂದಲಕ್ಕೊಳಗಾಗಬೇಡಿ. ಯಾಕಂದ್ರೆ, ಇಂದು ನಡೆದಿರೋದು ಕೇವಲ ತಾಲೀಮು ಪ್ರಕ್ರಿಯೆ.

ಇಂದು ತಾಲೀಮು ನಡೆಸಲಾಗಿದೆಯೇ ಹೊರತು ಕೊರೊನಾ ಲಸಿಕೆ ನೀಡಿಲ್ಲ. ಅಸಲಿಗೆ ಇನ್ನೂ ಕೊರೊನಾ ಲಸಿಕೆಗೆ ಭಾರತದಲ್ಲಿ ಈಗಷ್ಟೇ ಅನುಮೋದನೆ ಸಿಗ್ತಾ ಇದೆ. ಒಮ್ಮೆ ಅನುಮತಿ ಸಿಕ್ಕ ಮೇಲೆ ವಿತರಣೆ ಪ್ರಕ್ರಿಯೆ ಆರಂಭವಾಗಬೇಕು. ನಂತರ ಜನರಿಗೆ ಲಸಿಕೆ ನೀಡೋಕೆ ಶುರು ಮಾಡಬೇಕು. ಆದರೆ, ಇದೆಲ್ಲವನ್ನೂ ಏಕಾಏಕಿ ಮಾಡೋಕೆ ಹೋದರೆ ಯಡವಟ್ಟು ಆಗಬಹುದು. ಹಾಗಾಗದಿರಲಿ ಅನ್ನೋ ಕಾರಣಕ್ಕೆ ಈಗ ಸಿದ್ಧತೆಗಳನ್ನು ಮಾಡಿಕೊಳ್ಳಲಾಗ್ತಾ ಇದೆ. ತಾಲೀಮು ಪ್ರಕ್ರಿಯೆ ನಡೆಸಲಾಗಿದೆ.

ಈ ತಾಲೀಮು ಪ್ರಕ್ರಿಯೆಯ ಉದ್ದೇಶ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡುವುದು. ಹೇಗೆ ಪರಿಸ್ಥಿತಿಯನ್ನು ನಿಭಾಯಿಸಬೇಕು. ಜನರನ್ನು ಲಸಿಕಾ ಕೇಂದ್ರಗಳಿಗೆ ಯಾವ ರೀತಿಯಲ್ಲಿ ಕರೆ ತರಬೇಕು. ಕೊರೊನಾ ಲಸಿಕೆ ನೀಡಿದ ನಂತರ ನಿಗಾ ವಹಿಸೋದು ಹೇಗೆ? ಆರೋಗ್ಯದಲ್ಲಿ ಏರುಪೇರಾದರೆ ಏನು ಮಾಡಬೇಕು? ಇತ್ಯಾದಿ ವಿಚಾರಗಳ ಕುರಿತು ಇಂದು ಮಾಹಿತಿ ನೀಡಲಾಗಿದೆ.

ಕೊರೊನಾ ಲಸಿಕೆ ವಿತರಣೆ ಮೊಬೈಲ್​ ಎಸ್​ಎಂಎಸ್​ಗಳ ಮೂಲಕ ನಡೆಯಲಿದೆ. ಲಸಿಕೆ ಪಡೆಯುವವರ ಮೊಬೈಲ್​ಗೆ ಯಾವ ಕೇಂದ್ರಕ್ಕೆ, ಎಷ್ಟು ಹೊತ್ತಿಗೆ ಬರಬೇಕು ಎಂಬೆಲ್ಲಾ ವಿವರಗಳು ಬರುತ್ತವೆ. ಆ ಸಂದೇಶವನ್ನು ಕೇಂದ್ರದ ಸಿಬ್ಬಂದಿ ಪರಿಶೀಲಿಸಿದ ನಂತರ ಲಸಿಕೆ ವಿತರಣೆ ಆಗುತ್ತದೆ. ಈ ಪ್ರಕ್ರಿಯೆಗಳ ಕುರಿತು ಗೊಂದಲಗಳಿದ್ದರೆ ನಿವಾರಣೆ ಆಗಲಿ ಎಂಬ ಸಲುವಾಗಿ ಇಂದು ತಾಲೀಮು ನಡೆಸಲಾಗಿದೆ. ದೇಶದಲ್ಲಿ ಒಮ್ಮೆ ಕೊರೊನಾ ಲಸಿಕೆ ವಿತರಣೆ ಆರಂಭವಾಯಿತೆಂದರೆ ಇಂದು ತೋರಿಸಿಕೊಟ್ಟ ಕ್ರಮಗಳನ್ನು ಅನುಸರಿಸಲಾಗುತ್ತದೆ.

ಕೊರೊನಾ ಲಸಿಕೆ ತಾಲೀಮು ಪ್ರಕ್ರಿಯೆ ಕುರಿತು ತಿಳಿದಿರಬೇಕಾದ ಸಂಗತಿಗಳು:
ದೇಶಾದ್ಯಂತ ಇಂದು 116 ಜಿಲ್ಲೆಗಳ 259 ಕೇಂದ್ರಗಳಲ್ಲಿ ಕೊರೊನಾ ಲಸಿಕೆ ತಾಲೀಮು ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆಯಲ್ಲಿ ಚುಚ್ಚುಮದ್ದು ನೀಡಲು ತರಬೇತಿ ಪಡೆದ ಸುಮಾರು 96 ಸಾವಿರ ಸಿಬ್ಬಂದಿ ಭಾಗವಹಿಸಲಿದ್ದಾರೆ.

ಇಂದು ನಡೆಯಲಿರುವ ತಾಲೀಮು ಪ್ರಕ್ರಿಯೆಯಲ್ಲಿ ಪ್ರತಿ ಕೇಂದ್ರದಲ್ಲಿಯೂ ಅಂದಾಜು 25 ಮಂದಿ ಆರೋಗ್ಯ ಕಾರ್ಯಕರ್ತರು ಅಣಕು ಲಸಿಕೆ ಸ್ವೀಕರಿಸಲಿದ್ದಾರೆ. ಇದು ಕೇವಲ ಪ್ರಕ್ರಿಯೆ ಹೇಗೆ ನಡೆಯಲಿದೆ ಮತ್ತು ಅಡ್ಡ ಪರಿಣಾಮಗಳಾದಾಗ ಯಾವ ತೆರನಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ತರಬೇತಿ ನೀಡುವ ಉದ್ದೇಶ ಹೊಂದಿದೆ.

ಈ ತಾಲೀಮು ಪ್ರಕ್ರಿಯೆ ಗಂಭೀರವಾಗಿಯೇ ನಡೆಯಲಿದ್ದು, ಮುಂದೆ ಲಸಿಕೆ ವಿತರಣೆ ಕಾರ್ಯಕ್ರಮ ಆರಂಭವಾದಾಗ ಹೇಗೆ ಪರಸ್ಪರ ಹೊಂದಾಣಿಕೆಯೊಂದಿಗೆ ಕೆಲಸ ಮಾಡಬೇಕು. ಯಾವುದೇ ಗೊಂದಲಗಳಿಲ್ಲದೇ ಕಾರ್ಯ ನಿರ್ವಹಿಸುವುದು ಹೇಗೆ ಎಂಬ ಬಗ್ಗೆ ಸ್ಪಷ್ಟತೆ ಮೂಡಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.

ಭಾರತದಲ್ಲಿ ಔಷಧ ನಿಯಂತ್ರಣಾ ಪ್ರಾಧಿಕಾರದಿಂದ ಅನುಮೋದನೆ ಸಿಕ್ಕ ಕೂಡಲೇ ಯಾವ ಕ್ಷಣದಲ್ಲಾದರೂ ಲಸಿಕೆ ವಿತರಣೆ ಆರಂಭವಾಗುವ ಸಾಧ್ಯತೆ ಇದೆ. ಆದ್ದರಿಂದ ತಾಲೀಮು ನಡೆಸುವುದು ಅತ್ಯವಶ್ಯಕವಾಗಿದೆ.