ನಟಿ, ಮಾಡೆಲ್ ಜಯಶ್ರೀ ರಾಮಯ್ಯ ಸಾವು ಎಲ್ಲರ ಮನಸ್ಸನ್ನೂ ಕಲಕಿದೆ. ಮಾನಸಿಕ ಖಿನ್ನತೆಯಿಂದ ತೊಳಲಾಡುವ ಸಾವಿರಾರು ಯುವಕ ಯುವತಿಯರು ನಮ್ಮ ನಡುವೆ ಇದ್ದಾರೆ. ಅದರಲ್ಲಿಯೂ ಮಾಡೆಲಿಂಗ್ ಮತ್ತು ಸಿನಿಮಾದಲ್ಲಿ ಸ್ಟಾರ್ ಆಗಬೇಕೆಂಬ ಆಸೆಯಿಂದ ಉದ್ಯಮಕ್ಕೆ ಬಂದು ಕನಸನ್ನು ನನಸಾಗಿಸಿಕೊಳ್ಳಲು ವಿಫಲವಾಗಿ ಖಿನ್ನತೆಯಿಂದ ಬಳಲುವವರು ತುಂಬಾ ಜನ. ಯುವಕ ಯುವತಿಯರ ಈ ಸ್ಥಿತಿಗತಿ ಕುರಿತು ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ ತಜ್ಞರ ಜತೆಗೆ ಸಂವಾದ ನಡೆಸಿತು.
ಕಲಾವಿದೆ ಭೂಮಿಕಾ, ಹಿರಿಯ ಆಪ್ತಸಮಾಲೋಚಕಿ ಡಾ. ಸೌಜನ್ಯಾ ಮತ್ತು ನಿಮ್ಹಾನ್ಸ್ನ ಮನೋವೈದ್ಯ ಡಾ. ಶ್ರೀಹರಿ ಅವರ ಜತೆ ನಿರೂಪಕಿ ಸೌಮ್ಯಾ ಹೆಗಡೆ ಚರ್ಚೆ ನಡೆಸಿದರು. ಈ ಚರ್ಚೆ ಕಲಾವಿದರ ಮನೋತಲ್ಲಣಗಳ ಕುರಿತು ಒಂದಿಷ್ಟು ವಿಚಾರಗಳ ಬುತ್ತಿ ಕಟ್ಟಿಕೊಟ್ಟಿತಲ್ಲದೇ, ಕಲಾ ಜಗತ್ತೂ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಅಪಾರ ಸಾಧನೆಯ ಕನಸು ಕಟ್ಟಿಕೊಂಡವರು ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆಯೂ ಬೆಳಕು ಚೆಲ್ಲಿತು.
ರಾತ್ರೋರಾತ್ರಿ ಹೆಸರು ಗಳಿಸಬೇಕೆಂಬ ಇಚ್ಛೆ ಬೇಡ
ನಾನು ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಕಷ್ಟಪಡುತ್ತಲೇ ಬಂದಿದ್ದೇನೆ. ಸಿನಿಮಾ ಸಿಕ್ಕಿಲ್ಲ ಎಂದು ಕುಗ್ಗಿಲ್ಲ. ಅವಕಾಶ ಸಿಕ್ಕಿದಾಗ ಸಿಕ್ಕಿತು ಎಂದು ಹಿಗ್ಗಿಲ್ಲ. ರಾತ್ರೋರಾತ್ರಿ ಹೆಸರು ಗಳಿಸಬೇಕೆಂಬ ಇಚ್ಛೆಯಿಟ್ಟುಕೊಂಡಿದ್ದರೆ ಒಮ್ಮೆಗೆ ಭ್ರಮನಿರಸನವಾಗುವ ಸಾಧ್ಯತೆಗಳಿರುತ್ತವೆ. ಜಯಶ್ರೀ ಅವರಿಗೆ ತುಂಬಾ ಪ್ರತಿಭೆ ಇತ್ತು. ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಅವರ ಜತೆ ಒಡನಾಡಿದ್ದೆ. ಅವರಿಗೆ ಹೀಗೆ ಆಗಬಾರದಿತ್ತು. ನನಗೆ ಈ ಕುರಿತು ಬೇಸರವಿದೆ ಎಂದು ಕಲಾವಿದೆ ಭೂಮಿಕಾ ತಮ್ಮ ಮನದಾಳದ ಕಳವಳಗಳನ್ನು ಹಂಚಿಕೊಂಡರು.
ಸಿನಿಮಾ ಉದ್ಯಮ ಒಂದೇ ಅಲ್ಲ ಅದನ್ನು ಬಿಟ್ಟು ಸಹ ಬೇರೊಂದು ಜಗತ್ತಿದೆ. ಕೇವಲ ಒಂದನ್ನಷ್ಟೇ ನಮ್ಮ ಜೀವನ ಎಂದು ತಿಳಿಯಬಾರದು. ಅಂತಹ ಭ್ರಮೆಯಲ್ಲಿ ಬದುಕುವುದಕ್ಕಿಂತ ನಮ್ಮದೇ ವೈಯಕ್ತಿಕ ಕುಟುಂಬ, ಗೆಳೆಯರು ಮುಂತಾದವರ ಕುರಿತೂ ಲಕ್ಷ್ಯ ಇಡಬೇಕು. ಏಕೆಂದರೆ ನಮಗೆಂದೇ ಜೀವಿಸುವ ಇತರರೂ ಇರುತ್ತಾರೆ ಎಂದ ಅವರು ತಾವು ಅರ್ಥೈಸಿಕೊಂಡ ಜೀವನ ಮತ್ತು ಚಲನಚಿತ್ರರಂಗವನ್ನು ವಿವರಿಸಿದರು.
ನಾವು ಅಂದುಕೊಂಡದ್ದು ಎಂದಾದರೊಂದು ದಿನ ಈಡೇರುತ್ತದೆ
ಭೂಮಿಕಾ ಅವರ ಮಾತುಗಳಿಗೆ ಸಂವಾದಿಯಾಗಿ ಮಾತನಾಡಿದವರು ಆಪ್ತ ಸಮಾಲೋಚಕಿ ಡಾ.ಸೌಜನ್ಯ. ಜೀವನದಲ್ಲಿ ಎಲ್ಲವೂ ಹೀಗೇ ಆಗಬೇಕು, ಹೀಗೆ ಆದರೆ ಮಾತ್ರ ಯಶಸ್ಸ .ಅಥವಾ ಹೀಗೆ ಆದರೆ ಮಾತ್ರ ನಾನು ಯಶ ಕಂಡಂತೆ ಎಂದುಕೊಳ್ಳಬಾರದು. ಎಂದಿಗೂ ನಿರೀಕ್ಷೆಗಳನ್ನು ಕಳೆದುಕೊಳ್ಳಬಾರದು. ನಾವು ಅಂದುಕೊಂಡ ಸಾಧನೆ ಎಂದಾದರೊಂದು ದಿನ ಈಡೇರುತ್ತದೆ ಎನ್ನುವ ಬಲವಾದ ಆತ್ಮವಿಶ್ವಾಸ ನಮ್ಮಲ್ಲಿರಬೇಕು ಎಂದರು.
ಚಿಕ್ಕ ಮಕ್ಕಳು ಸಂತೋಷವಾಗಿರುತ್ತಾರೆ. ಆದರೆ ವಯಸ್ಸಾಗುತ್ತ ಹೋದಂತೆ ನಮ್ಮ ಸಂತೋಷದ ಪ್ರಮಾಣ ಇಳಿಮುಖವಾಗುತ್ತಾ ಸಾಗುತ್ತದೆ. ಚಿಕ್ಕಂದಿನಲ್ಲಿ ಮನಸ್ಸು ಅಥವಾ ದೇಹದ ಮೇಲೆ ಮರೆಯಲಾಗದ ನೋವು ಘಟಿಸಿದರೆ ಮನೋವಿಕಾಸವಾಗುವುದು ಸಹ ನಿಧಾನವಾಗುತ್ತದೆ, ಕಷ್ಟವಾಗುತ್ತದೆ. ಜಯಶ್ರೀ ಅವರು 2019 ರಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ನನ್ನನ್ನು ಸಂಪರ್ಕಿಸಿದ್ದರು. ಅವರಿಗೆ ಹೀಗಾಗಬಾರದಿತ್ತು ಎಂದು ವಿಷಾದಿಸಿದರು.
ಇದನ್ನೂ ಓದಿ: ಸಾವಿನ ಹಾದಿಯನ್ನೇ ತುಳಿದ ಬಿಗ್ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ; ವೃದ್ಧಾಶ್ರಮದಲ್ಲಿ ಆತ್ಮಹತ್ಯೆ
ಜಯಶ್ರೀ ರಾಮಯ್ಯ
ಆಗಲೇ ಸಾಂತ್ವನ ಹೇಳಿದ್ದರೆ..
ಜಯಶ್ರೀ ಅವರ ಸಾವಿನ ಹಿಂದೆ ಸಮಾಜದ ಪಾತ್ರದ ಕುರಿತು ವಿವರಿಸಿದರು ಕಲಾವಿದೆ ಭೂಮಿಕಾ. ಸಾಮಾಜಿಕ ಜಾಲತಾಣಗಳಲ್ಲಿ ಜಯಶ್ರೀ ಅವರು ಸಾಯುತ್ತೇನೆ ಹೇಳಿಕೊಂಡಾಗ ಎಲ್ಲರೂ ಪ್ರಚಾರಕ್ಕಾಗಿ ಅವರು ಹಾಗೆ ಮಾಡುತ್ತಿದ್ದಾರೆ ಅಂದರು, ಕೆಲವರು ನಿಂದಿಸಿದರು. ಜಯಶ್ರೀಗೆ ಅದು ಮತ್ತಷ್ಟು ನೋವು ಕೊಟ್ಟಿತು. ಆಗಲೇ, ಜಯಶ್ರೀಗೆ ಒಂದಿಷ್ಟು ಸಾಂತ್ವನ ಹೇಳಿದ್ದರೆ, ಆ ಮೃದು ಮನಸ್ಸು ಈಗ ಖುಷಿಯಿಂದ ಬದುಕಬಹುದಾಗಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರ ನಡೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಸಮಾಜ ಕಟ್ಟಿಕೊಟ್ಟಿರುವ ಯಶಸ್ಸಿನ ಪರಿಭಾಷೆಯ ಬಗ್ಗೆ ವ್ಯಾಖ್ಯಾನ ನೀಡಿದ ಡಾ.ಸೌಜನ್ಯಾ ಅವರು, ನಾವು ಯಶಸ್ಸಿನ ಪರಿಭಾಷೆಯನ್ನು ಬದಲಿಸಬೇಕು. ಎಲ್ಲವೂ ಹೀಗೇ ಆಗಬೇಕು, ಎಲ್ಲವೂ ನಾವು ಅಂದುಕೊಂಡಂತೆಯೇ ಆಗಬೇಕು ಎಂದುಕೊಳ್ಳುವುದು ಖಿನ್ನತೆಗೆ ಕಾರಣವಾಗುತ್ತದೆ. ಖಿನ್ನತೆ, ಆತ್ಮಹತ್ಯೆಯಂತಹ ಕೃತ್ಯಗಳು ನಡೆಯುವುದು ಇದೇ ಕಾರಣಕ್ಕೆ ಎಂದು ವಿಷಾದ ವ್ಯಕ್ತಪಡಿಸಿದರು. ಜತೆಗೆ, ಬದುಕಲ್ಲಿ ಯಾವುದೂ ಶಾಶ್ಚತವಲ್ಲ ಎಂದು ಅರಿತುಕೊಳ್ಳಬೇಕು ಎಂದು ಜೀವನದ ಮಾರ್ಗವನ್ನು ಸರಳವಾಗಿ ವಿವರಿಸಿದರು.
ಇದನ್ನೂ ಓದಿ: ರೇಖಾರಾಣಿ ಮಾತಿನಲ್ಲಿಜಯಶ್ರೀ ರಾಮಯ್ಯ ಅಂತರಾಳದ ನೋವು
ಜಯಶ್ರೀ ರಾಮಯ್ಯ
ಸಂವಾದದಲ್ಲಿ ಮಾತನಾಡಿದ ನಿಮ್ಹಾನ್ಸ್ನ ಮನೋವೈದ್ಯ ಡಾ. ಶ್ರೀಹರಿ, ‘ನಮ್ಮಲ್ಲಿರುವ ವಿಷದ ಅಂಶಗಳಾದ ಸಿಟ್ಟು, ದುಃಖ ಮುಂತಾದವು ಕಡಿಮೆಯಾಗಬೇಕು. ದಿನಂಪ್ರತಿ ಒಬ್ಬರ ಮೇಲೆ ಸಿಟ್ಟು ಮಾಡುತ್ತಿದ್ದರೆ ನಮ್ಮ ಮನಸ್ಸು ಸಹ ಕಲುಷಿತವಾಗುತ್ತದೆ. ನಮ್ಮ ಆರೋಗ್ಯದ ಕ್ಷೇಮಕ್ಕಾಗಿ ಪ್ರಫುಲ್ಲ ಮನಸಿನೊಂದಿಗೆ ಬಾಳಬೇಕು’ ಎಂದು ವಿವರಿಸಿದರು.
ಇತರರ ಮೇಲೆ ಸಿಟ್ಟು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಇತರರ ಜತೆ ಸಿಟ್ಟು, ದ್ವೇಷ, ಕಲಹಗಳು ನಮ್ಮ ಮನಸ್ಸನ್ನು ಸಹ ವಿಕೋಪದೆಡೆ ಕರೆದೊಯ್ಯುತ್ತವೆ. ಯಾರೇನ್ನೇ ಅನ್ನಲಿ ಬೆಣ್ಣೆಯಂತಹ ಸೂಕ್ಷ್ಮ ಮನಸ್ಸಲ್ಲಿ ಚಿಕ್ಕ ಕಲ್ಲು ಸಹ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಬಣ್ಣದ ಲೋಕದ ಕನಸು ಕಂಡಿದ್ದ ಜಯಶ್ರೀಗೆ ಮನಸಿನ ಬಣ್ಣವೇ ಮಾಸಿಹೋಗಿತ್ತು; ಜೀವವನ್ನೇ ಕಸಿಯಿತು ಖಿನ್ನತೆಯೆಂಬ ಕೂಪ
ಕ್ಲಿನಿಕಲ್ ಡಿಪ್ರೆಶನ್ಗೆ ಒಳಗಾಗಿದ್ದ ಜಯಶ್ರೀ ಸಂಬಂಧಗಳ ಬಗ್ಗೆ ತುಂಬ ಭಯ ಬೆಳೆಸಿಕೊಂಡಿದ್ದರು: ಭಾವನಾ ಬೆಳಗೆರೆ
ಸಾವಿನ ಹಾದಿಯನ್ನೇ ತುಳಿದ ಬಿಗ್ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ; ವೃದ್ಧಾಶ್ರಮದಲ್ಲಿ ಆತ್ಮಹತ್ಯೆ