Health Tips: ಸಕ್ಕರೆ ತಿನ್ನುವುದನ್ನು ನಿಲ್ಲಿಸಿದಾಗ ನಿಮ್ಮ ದೇಹಕ್ಕೆ ಏನಾಗುತ್ತದೆ? ತಜ್ಞರು ಹೇಳಿದ್ದೇನು?
ಬೆಳಗ್ಗಿನ ಚಹಾದಿಂದ ಹಿಡಿದು ರಾತ್ರಿ ಮಲಗುವವರೆಗೆ ನಾವೆಲ್ಲರೂ ಪ್ರತಿನಿತ್ಯ ಸಕ್ಕರೆಯ ಅಂಶವಿರುವ ಆಹಾರವನ್ನು ಸೇವಿಸುತ್ತಿರುತ್ತೇವೆ. ಆದರೆ ಸಕ್ಕರೆಯ ಸೇವನೆಯನ್ನು ನಿಲ್ಲಿಸಿದಾಗ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆಯಾ? ಈ ಬಗ್ಗೆ ಪೌಷ್ಟಿಕತಜ್ಞರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅನೇಕ ವಿಧದಲ್ಲಿ ನಾವು ಪ್ರತಿನಿತ್ಯ ಸೇವಿಸುವ ಆಹಾರವು ಸಕ್ಕರೆಯಿಂದ ತುಂಬಿರುತ್ತದೆ. ಕೆಲವು ಸಕ್ಕರೆಯ ಅಂಶವು ನಮ್ಮ ದೇಹಕ್ಕೆ ಅವಶ್ಯಕವಾಗಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಸಕ್ಕರೆಯ ಸೇವನೆಯು ಹಲವಾರು ಆರೋಗ್ಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಸಕ್ಕರೆಯು ಕ್ಯಾಲೋರಿಗಳನ್ನು ಹೆಚ್ಚಿಸುವುದರ ಜೊತೆಗೆ ಮಧುಮೇಹ, ಸ್ಥೂಲಕಾಯತೆ ಮತ್ತು ಹಲ್ಲಿನ ಕೊಳೆತ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅತಿಯಾದರೆ ಅಮೃತವೂ ವಿಷವೆನ್ನುವಂತೆ, ಸಕ್ಕರೆಯ ಅತಿಯಾದ ಸೇವನೆಯು ಅಧಿಕರಕ್ತದೊತ್ತಡ, ಹೃದ್ರೋಗ ಮತ್ತು ಯಕೃತ್ತಿನ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ನಮ್ಮಲ್ಲಿ ಅನೇಕರು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಲು ಅಥವಾ ಅವರು ಸೇವಿಸುವ ಆಹಾರದಲ್ಲಿ ಸಕ್ಕರೆಯ ಅಂಶವನ್ನು ಸಂಪೂರ್ಣವಾಗಿ ಹೊರಗಿಡಲು ಈ ಆರೋಗ್ಯ ಸಮಸ್ಯೆಗಳೂ ಕಾರಣವಾಗಿದೆ. ಆದರೆ ನಾವು ಸಕ್ಕರೆ ಸೇವನೆಯನ್ನು ತ್ಯಜಿಸಿದಾಗ ನಿಜವಾಗಿಯೂ ಏನಾಗುತ್ತದೆ ಮತ್ತು ಅದು ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ?
ಸಕ್ಕರೆ ಸೇವನೆ ತ್ಯಜಿಸಿದಾಗ ದೇಹಕ್ಕೆ ಏನಾಗುತ್ತದೆ ಎಂಬುದರ ಮಾಹಿತಿಯನ್ನು ಪೌಷ್ಟಿಕತಜ್ಞೆ ನ್ಮಾಮಿ ಅಗರ್ವಾಲ್ ಹಂಚಿಕೊಂಡಿದ್ದಾರೆ:
ಪೌಷ್ಟಿಕ ತಜ್ಞೆ ನ್ಮಾಮಿ ಅಗರ್ವಾಲ್ ನಾವು ಸಕ್ಕರೆಯನ್ನು ಏಕೆ ತ್ಯಜಿಸಬೇಕು ಎಂಬುದನ್ನು ವಿವರಿಸುತ್ತಾ ಹೇಳಿದ್ದಾರೆ, ನಿರಂತರವಾಗಿ 14 ದಿನಗಳವರೆಗೆ ಸಕ್ಕರೆಯನ್ನು ತಿನ್ನುವುದನ್ನು ನಿಲ್ಲಿಸುವುದು ಕಠಿಣವಾಗಿರಬಹುದು, ಆದರೆ ಇದು ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. ಸಕ್ಕರೆಯ ನಿರಂತರ ಒಳಹರಿವಿನ ಅನುಪಸ್ಥಿತಿಯಲ್ಲಿ, ನಮ್ಮ ದೇಹವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪ್ರಾರಂಭಿಸುತ್ತದೆ ಅವರ ಪ್ರಕಾರ ಇದು ಉತ್ತಮ ಶಕ್ತಿಯ ಮಟ್ಟಕ್ಕೆ ಕಾರಣವಾಗುತ್ತದೆ ಹಾಗೂ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲದೆ ಸಕ್ಕರೆಯ ಸೇವನೆಯನ್ನು ನಿಲ್ಲಿಸಿದಾಗ ದೊರಕುವ ಇತರ ಪ್ರಯೋಜನಗಳೆಂದರೆ, ಸ್ಪಷ್ಟವಾದ ಚರ್ಮ ಮತ್ತು ಸುಧಾರಿತ ಜೀರ್ಣಕ್ರಿಯೆ. ದೇಹವು ಕಡಿಮೆ ಸಕ್ಕರೆ ಸೇವನೆಗೆ ಹೊಂದಿಕೊಳ್ಳಲು ಪ್ರಾರಂಭಿಸಿದಂತೆ ದೇಹದಲ್ಲಿ ತೂಕನಷ್ಟವಾಗುತ್ತದೆ ಆದ್ದರಿಂದ ಸಕ್ಕರೆಗೆ ವಿದಾಯ ಹೇಳಿ, ಆರೋಗ್ಯಕರ ಜೀವನಶೈಲಿಗೆ ಸ್ವಾಗತಕೋರಿ ಎಂದು ನ್ಮಾಮಿ ಹೇಳುತ್ತಾರೆ.
ಇದನ್ನೂ ಓದಿ:Health Tips: ಸಸ್ಯಾಹಾರಿ ತಾಯಂದಿರ ಎದೆ ಹಾಲು ಆರೋಗ್ಯಕರವೇ? ಅಧ್ಯಯನ ಹೇಳಿದ್ದೇನು? ಇಲ್ಲಿದೆ ಮಾಹಿತಿ
ನ್ಮಾಮಿ ಅವರ ಪ್ರಕಾರ, ಆಗಾಗ್ಗೆ ಮೂತ್ರವಿಸರ್ಜನೆ, ಅತಿಯಾದ ಬಾಯಾರಿಕೆ ಅಥವಾ ವಾಸಿಯಾಗದ ಗಾಯಗಳಂತಹ ಚಿಹ್ನೆಗಳು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಿದೆ ಎಂಬುದರ ಸಂಕೇತವಾಗಿದೆ. ನಾವು ತಿನ್ನುವ ಸಕ್ಕರೆಯಿಂದ ಮಾತ್ರವಲ್ಲದೆ ತರಕಾರಿಗಳು, ರೊಟ್ಟಿ ಸೇರಿದಂತೆ ನಾವು ಸೇವಿಸುವ ಪ್ರತಿಯೊಂದು ಆಹಾರದಿಂದಲ್ಲೂ ನಮ್ಮ ದೇಹ ಸಕ್ಕರೆಯನ್ನು ಪಡೆಯುತ್ತದೆ. ಆದ್ದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ತಿನ್ನುವ ಆಹಾರದಲ್ಲಿ ಸಕ್ಕರೆಯ ಅಂಶ ಎಷ್ಟಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಆದಷ್ಟು ಕಡಿಮೆ ಸಕ್ಕರೆಯ ಅಂಶವಿರುವ ಆಹಾರವನ್ನು ಸೇವನೆಮಾಡಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ