ತಾಳ್ಮೆ ಜತೆಗೆ ಬಾಣಂತಿಯರು ಇವುಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು, ಟಿವಿ9 ಮೂಲಕ ಬಾಣಂತಿಯರಿಗೆ ಸಲಹೆ ನೀಡಿದ ಡಾ. ಶಿಲ್ಪಾ
ಡೆಲಿವರಿ ಆದ ಮೇಲೆ ಮಗುವಿನ ಆರೈಕೆಯ ಜೊತೆಗೆ ತಾಯಿಗೂ ಅಷ್ಟೇ ಪ್ರೀತಿ, ಆರೈಕೆಯನ್ನು ನೀಡಬೇಕಾಗುತ್ತದೆ. ಆದರೆ ಈ ಸಮಯದಲ್ಲಿ ಹೇಗಿರಬೇಕು? ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬ ಅನುಮನ ಕಾಡುವುದು ಸಾಮಾನ್ಯ. ಹಾಗಾಗಿ ಬಾಣಂತಿಯರು ಮತ್ತು ಅವರ ಕುಟುಂಬದವರು ಕಡ್ಡಾಯವಾಗಿ ಅನುಸರಿಸಬೇಕಾದಂತಹ ಕೆಲವು ಸರಳ ಮಾಹಿತಿಗಳನ್ನು ಟಿವಿ9 ಮೂಲಕ, ಸ್ತ್ರೀ ರೋಗ ತಜ್ಞೆಯಾಗಿರುವ ಡಾ. ಶಿಲ್ಪಾ ಅವರು ನೀಡಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರತಿಯೊಬ್ಬ ಮಹಿಳೆಗೂ ತಾನು ಕೂಡ ತಾಯ್ತನದ ಸುಖ ಅನುಭವಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಹಾಗಾಗಿ ಗರ್ಭಾವಸ್ಥೆ (Pregnancy) ಯಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಕೂಡ ಆಕೆ ಅದನ್ನು ತಾಳ್ಮೆಯಿಂದ ಸಹಿಸಿಕೊಳ್ಳುತ್ತಾಳೆ. ಅದಕ್ಕಾಗಿಯೇ ಮಗುವನ್ನು ಹೆರುವುದು ಆಕೆಗೆ ಒಂದು ರೀತಿಯ ಪುನರ್ಜನ್ಮ ಎನ್ನಲಾಗುತ್ತದೆ. ಹೀಗಾಗಿ ಡೆಲಿವರಿ (Delivery) ಆದ ಸಮಯದಲ್ಲಿ ಮಗುವಿನ ಆರೈಕೆಯ ಜೊತೆಗೆ ಬಾಣಂತಿಯರ (Postpartum) ಆರೈಕೆ ಕೂಡ ಬಹಳ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಅವರನ್ನು ಹೇಗೆ ನೋಡಿಕೊಳ್ಳಬೇಕು? ಅವರ ಆಹಾರಕ್ರಮ (Diet) ಹೇಗಿರಬೇಕು? ಈ ರೀತಿಯ ಹಲವಾರು ಅನುಮಾನ ಪ್ರತಿಯೊಬ್ಬರನ್ನು ಕಾಡುವುದು ಸಹಜ. ಆದ ಕಾರಣ ಅವರ ಆರೈಕೆ ಯಾವ ರೀತಿ ಮಾಡಬೇಕು ಎಂಬುದರ ಕುರಿತು ಕೆಲವು ಮಾಹಿತಿಯನ್ನು ಶಾಂತಿ ಗೈನೆಕ್ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆಯಾಗಿರುವ ಡಾ. ಶಿಲ್ಪಾ ಜಿಬಿ ಅವರು ಟಿವಿ9 ಕನ್ನಡ ಜೊತೆ ಹಂಚಿಕೊಂಡಿರುವ , ಆಹಾರ ಸೇವನೆ, ನಿತ್ಯ ಅನುಸರಿಸಬೇಕಾದ ಸಲಹೆಗಳು, ಯಾವುದನ್ನು ಮಾಡಬೇಕು, ಮಾಡಬಾರದು ಹೀಗೆ ಬಾಣಂತಿಯರಿಗೆ ಅಗತ್ಯವಾಗಿ ಬೇಕಾಗಿರುವ ಮಾಹಿತಿ ಇಲ್ಲಿದೆ.
- ಪ್ರತಿನಿತ್ಯ ಕಡ್ಡಾಯವಾಗಿ 2 ಲೀ. ನೀರು ಕುಡಿಯಬೇಕು.
- ಈ ಸಮಯದಲ್ಲಿ ಕೆಲವು ಆಹಾರಗಳ ಸೇವನೆ ಮಾಡಬಾರದು ಎಂಬ ಮೂಢನಂಬಿಕೆಗಳಿವೆ ಅವುಗಳನ್ನು ನಂಬಬಾರದು.
- ಬಾಣಂತಿಯರು ಜಂಕ್ ಫುಡ್ ಸೇವನೆ ಮಾಡುವುದು ಒಳ್ಳೆಯದಲ್ಲ.
- ಹೊಟ್ಟೆಗೆ ಬಟ್ಟೆ ಕಟ್ಟುವುದು ಅಥವಾ ಬೆಲ್ಟ್ ಹಾಕಿಕೊಳ್ಳಬೇಕು.
- ಬಾಣಂತಿಯರು ಕಿವಿಯಲ್ಲಿ ಹತ್ತಿ ಇಟ್ಟುಕೊಳ್ಳುವುದು ಒಳ್ಳೆಯದು.
- ಡೆಲಿವರಿ ಆದ ಮೇಲೆ ನಿದ್ರೆ ಸರಿಯಾಗಿ ಆಗದಿದ್ದರೆ ಹಾಲಿನ ಉತ್ಪತ್ತಿ ಕಡಿಮೆಯಾಗುತ್ತದೆ.
ಕೆಲವು ಮೂಢನಂಬಿಕೆಗಳನ್ನು ನಂಬಬಾರದು
ಡಾ. ಶಿಲ್ಪಾ ಜಿಬಿ ಅವರು ನೀಡಿರುವ ಸಲಹೆಯ ಪ್ರಕಾರ, “ಡೆಲಿವರಿ ಆದ ಮೇಲೆ ಬಾಣಂತಿಯರು ಅವರ ಆಹಾರದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ತಾಯಿಯ ಎದೆ ಹಾಲಿನಲ್ಲಿ ಮಗುವಿಗೆ ಅಗತ್ಯವಾಗಿ ಬೇಕಾಗಿರುವ ಪೋಷಣೆ ಸಿಗುವುದರಿಂದ ಅವರು ಸೇವನೆ ಮಾಡುವ ಆಹಾರ ಬಹಳ ಮುಖ್ಯವಾಗಿರುತ್ತದೆ. ಕೆಲವೊಂದಿಷ್ಟು ಪ್ರದೇಶಗಳಲ್ಲಿ ಬಾಣಂತಿಯರು ಕೆಲವು ಆಹಾರಗಳ ಸೇವನೆ ಮಾಡಬಾರದು. ಅದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ, ಹೊಟ್ಟೆ ನೋವು ಬರುತ್ತೆ ಎಂಬಿತ್ಯಾದಿ ಮೂಢನಂಬಿಕೆಗಳಿರುತ್ತವೆ ಅವುಗಳನ್ನು ನಂಬಬಾರದು” ಎಂದು ಅವರು ಹೇಳುತ್ತಾರೆ.
ಎದೆ ಹಾಲು ಜಾಸ್ತಿಯಾಗಲು ಏನು ಮಾಡಬೇಕು?
ಡಾ. ಶಿಲ್ಪಾ ಅವರು ಹೇಳುವಂತೆ “ಆದಷ್ಟು ಪ್ರತಿನಿತ್ಯ ಎರಡು ಲೀ. ನೀರು ಕುಡಿಯಬೇಕು. ಎರಡರಿಂದ ಮೂರು ಲೋಟ ಹಾಲು ಕುಡಿಯಬೇಕು. ಎರಡು ರೀತಿಯ ತರಕಾರಿ ಮತ್ತು ಒಂದು ರೀತಿಯ ಹಣ್ಣನ್ನು ಪ್ರತಿನಿತ್ಯ ಸೇವನೆ ಮಾಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ಹಾಲಿನ ಉತ್ಪತ್ತಿ ಕ್ರಮೇಣ ಜಾಸ್ತಿಯಾಗುತ್ತದೆ. ಇದರ ಹೊರತಾಗಿ ಕೆಲವು ಆಹಾರ ಪದಾರ್ಥಗಳು ಎದೆ ಹಾಲನ್ನು ಹೆಚ್ಚು ಮಾಡುವ ಶಕ್ತಿಯನ್ನು ಹೊಂದಿರುತ್ತದೆ ಅವು ಯಾವುದೆಂದರೆ, ಬೆಳ್ಳುಳ್ಳಿ, ಮೆಂತೆಕಾಳು, ಸಬ್ಬಸಿಗೆ ಸೊಪ್ಪು, ನೀರು ಮತ್ತು ಹಾಲು. ಇವುಗಳ ಬಳಕೆ ಮಾಡುವುದರಿಂದ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ. ಅದಲ್ಲದೆ ಈ ರೀತಿಯ ಆಹಾರಗಳ ಸೇವನೆ ಮಾಡುವಾಗ ಅವರಿಗೂ ದೇಹದಲ್ಲಿ ಶಕ್ತಿ ಇರುತ್ತದೆ. ಇದರಿಂದ ನಿಶಕ್ತಿ ಆಗುವಂತಹದ್ದು ಕಡಿಮೆಯಾಗುತ್ತದೆ. ಅದರಲ್ಲಿಯೂ ಈ ಸಮಯದಲ್ಲಿ ಅಂದರೆ ಬಾಣಂತಿಯರಿಗೆ ಜೀರ್ಣಶಕ್ತಿ ಕಡಿಮೆ ಇರುವುದರಿಂದ ಜಂಕ್ ಫುಡ್ ಸೇವನೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಬಾಣಂತಿಯರಲ್ಲಿ ಮಲಬದ್ಧತೆ, ಅಜೀರ್ಣತೆ, ಡಿಸೆಂಟ್ರಿ ಆಗಬಹುದು. ಈ ರೀತಿ ಆದಾಗ ನಿದ್ದೆ ಸರಿಯಾಗಿ ಬರುವುದಿಲ್ಲ, ನಿದ್ರೆ ಸರಿಯಾಗದಿದ್ದರೆ ಮತ್ತೆ ಹಾಲಿನ ಉತ್ಪತ್ತಿ ಕಡಿಮೆಯಾಗುತ್ತದೆ. ಎಂದು ಅವರು ಹೇಳಿದ್ದಾರೆ.
ಡೆಲಿವರಿ ಆದ ಮೇಲೆ ಸ್ನಾನ ಮಾಡಬಹುದೇ?
ಡಾ. ಶಿಲ್ಪಾ ಅವರು ನೀಡಿರುವ ಮಾಹಿತಿ ಪ್ರಕಾರ, ಸಾಮಾನ್ಯವಾಗಿ ಬಾಣಂತಿಯರಿಗೆ ಹೇಗೆ ಸ್ನಾನ ಮಾಡಬೇಕು ಎಂಬ ಗೊಂದಲವಿರುತ್ತದೆ. ಅಂತವರು ನಾರ್ಮಲ್ ಡೆಲಿವರಿ ಆಗಿದ್ದರೆ ತಕ್ಷಣ ಸ್ನಾನ ಮಾಡಿಕೊಳ್ಳಬಹುದು. ಇನ್ನು ಸಿಸೇರಿಯನ್ ಆಗಿದ್ದರೂ ಕೂಡ ಒಂದು ದಿನ ಕಳೆದ ಬಳಿಕ ಸ್ನಾನ ಮಾಡಬಹುದಾಗಿದೆ. ಏಕೆಂದರೆ ಬಾಣಂತಿಯರಿಗೆ ಸ್ನಾನ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲಿಯೂ ಹದವಾದ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಬಹಳ ಒಳ್ಳೆಯದು. ಇದರಿಂದ ಮೈಕೈ ನೋವು ಕೂಡ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಬಾಣಂತಿಯರು ಹಾಕಿಕೊಳ್ಳುವ ಬಟ್ಟೆಗಳು ಕೂಡ ತುಂಬಾ ಮುಖ್ಯವಾಗುತ್ತದೆ. ಕಾಟನ್ ಬಳಕೆ ಮಾಡಿದಷ್ಟು ಒಳ್ಳೆಯದು. ಸಿಸೇರಿಯನ್ ಆದವರಿಗೆ ಗಾಯ ಪೂರ್ತಿಯಾಗಿ ಒಣಗುವುದಕ್ಕೆ ಮೂರರಿಂದ ನಾಲ್ಕು ದಿನ ಬೇಕಾಗುತ್ತದೆ. ಬಳಿಕ ಅವರು ಆಯಿಂಟ್ಮೆಂಟ್ ಅಥವಾ ಮುಲಾಮನ್ನು ಹಚ್ಚಿಕೊಳ್ಳಬಹುದು. ಇದಕ್ಕೆ ನೀರು ಬಿದ್ದರೂ ಏನು ಆಗುವುದಿಲ್ಲ. ಚರ್ಮ ಹೀಲ್ ಆಗುವುದಕ್ಕೆ ಒಂದು ತಿಂಗಳು ಬೇಕಾಗುತ್ತದೆ ಇನ್ನು ಒಳಗೆ ಯುಟ್ರೆಸ್ ಗುಣವಾಗಲು ಮೂರು ತಿಂಗಳ ಸಮಯ ಬೇಕಾಗುತ್ತದೆ. ನಾರ್ಮಲ್ ಡೆಲಿವರಿ ಆದವರಿಗೆ ಕೆಳಗಿನ ಭಾಗದಲ್ಲಿ ಹೊಲಿಗೆ ಹಾಕಿರುವುದರಿಂದ ಅಂತಹ ಸಮಯದಲ್ಲಿ ಚಕ್ಕಲಮಕ್ಕಲ ಹಾಕಿ ಕುಳಿತುಕೊಳ್ಳಬಾರದು. ವೈದ್ಯರು ನೀಡಿದಂತಹ ಆಯಿಂಟ್ಮೆಂಟ್ ಅನ್ನು ಹಚ್ಚಿಕೊಳ್ಳಬೇಕು. ಪಾಯಿಖಾನೆಗೆ ಹೋದಾಗ ಆ ಜಾಗವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ: ಗೋವುಗಳು ಪ್ಲಾಸ್ಟಿಕ್ ತಿಂದರೆ ಏನಾಗುತ್ತದೆ ತಿಳಿದಿದೆಯೇ?
ಸನ್ನಿ ಬರದಂತೆ ತಡೆಯಲು ಏನು ಮಾಡಬೇಕು?
ಬಾಣಂತಿಯರಿಗೆ ಇಂತಹ ಸಮಯದಲ್ಲಿ ಮನಃಶಾಂತಿ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ. ಕೆಲವೊಂದು ಬಾರಿ ಡೆಲಿವರಿ ಆದ ಮೇಲೆ ಸನ್ನಿಯಾಗುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಹಾರ್ಮೋನ್ ಕಡಿಮೆ ಆಗುವುದರಿಂದ ಅವರಿಗೆ ಖಿನ್ನತೆ, ಒತ್ತಡ ಹೆಚ್ಚಾಗುತ್ತದೆ. ಅಥವಾ ಮಗುವನ್ನು ನೋಡಿಕೊಳ್ಳುವುದರ ಬಗ್ಗೆ ವಿಶ್ವಾಸ ಇಲ್ಲದಿರುವುದು ಇತ್ಯಾದಿ ಸಮಸ್ಯೆ ಕಂಡುಬರುತ್ತದೆ. ಹಾಗಾಗಿ ಈ ಸಮಯದಲ್ಲಿ ಕುಟುಂಬದವರ ಆರೈಕೆ ಬಹಳ ಮುಖ್ಯವಾಗಿರುತ್ತದೆ. ಅವರ ಸುತ್ತಮುತ್ತ ವಾತಾವರಣ ಚೆನ್ನಾಗಿರಬೇಕಾಗುತ್ತದೆ.
ಡಾ. ಶಿಲ್ಪಾ ಅವರ ಆರೋಗ್ಯ ಸಲಹೆ ವಿಡಿಯೋ ಇಲ್ಲಿದೆ
ಹೊಟ್ಟೆಗೆ ಬಟ್ಟೆ ಅಥವಾ ಬೆಲ್ಟ್ ಕಟ್ಟುವುದು ಒಳ್ಳೆಯದೇ?
ಡಾ. ಶಿಲ್ಪಾ ಅವರು ತಿಳಿಸಿರುವ ಮಾಹಿತಿ ಪ್ರಕಾರ “ಈ ಸಮಯದಲ್ಲಿ ಕಿವಿಯಲ್ಲಿ ಹತ್ತಿ ಇಟ್ಟುಕೊಳ್ಳುವುದು ಒಳ್ಳೆಯದು ಆದರೆ ಇದು ಅವರವರ ಆಯ್ಕೆಗೆ ಬಿಟ್ಟಿದ್ದು. ಆದರೆ ಈ ರೀತಿ ಮಾಡುವುದರಿಂದ ತಂಪು ಗಾಳಿ ಒಳಗೆ ಹೋಗುವುದಿಲ್ಲ. ಇನ್ನು ಈ ಸಮಯದಲ್ಲಿ ಹೊಟ್ಟೆಗೆ ಬಟ್ಟೆ ಅಥವಾ ಬೆಲ್ಟ್ ಕಟ್ಟುವುದು ಒಳ್ಳೆಯದೇ ಎಂಬ ಪ್ರಶ್ನೆ ಮೂಡುತ್ತದೆ. ಹೌದು ಈ ರೀತಿ ಮಾಡುವುದರಿಂದ ಬೊಜ್ಜು ಸ್ವಲ್ಪ ಕಡಿಮೆಯಾಗುತ್ತದೆ ಜೊತೆಗೆ ಹೊಟ್ಟೆ ಅಲ್ಲಾಡುವುದಿಲ್ಲ. ದಿನದಲ್ಲಿ ಎಂಟು ತಾಸು ವಿಶ್ರಾಂತಿ ನೀಡಿ ಉಳಿದ ಸಮಯ ಈ ರೀತಿ ಕಟ್ಟಿಕೊಳ್ಳಬಹುದು. ಇದೆಲ್ಲದರ ಜೊತೆಗೆ ವೈದ್ಯರು ನೀಡಿರುವ ಮಾತ್ರೆ, ಔಷಧಿಗಳನ್ನು ತಪ್ಪದೆ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Sat, 3 May 25