ತಲೆಹೊಟ್ಟು ಸಾಮಾನ್ಯವಾಗಿ ಎದುರಾಗುವ ಸಮಸ್ಯೆಗಳಲ್ಲಿ ಒಂದಾಗಿದೆ. ಕಲುಷಿತ ನೀರು ಮತ್ತು ವಾಯು ಮಾಲಿನ್ಯದಿಂದಾಗಿ ತಲೆಹೊಟ್ಟು ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ತಲೆ ಕೂದಲು ಉದುರುವ ಸಮಸ್ಯೆ ಎದುರಾಗುತ್ತದೆ. ಇತ್ತೀಚಿನ ಯುವ ಪೀಳೆಗೆಗೆ ತಲೆಹೊಟ್ಟೆ ಹೆಚ್ಚು ಆತಂಕಕಾರಿ ಸಂಗತಿಯಾಗಿದೆ. ತಲೆಹೊಟ್ಟು ನಿವಾರಣೆಗೆ ವಿವಿಧ ರೀತಿಯ ಶಾಂಪು ಬಳಸಿದರೂ, ಕೆಲವೊಮ್ಮೆ ಯಾವುದೇ ಪ್ರಯೋಜನವಾಗುವುದಿಲ್ಲ. ಆದರೆ ಇದಕ್ಕಾಗಿ ಚಿಂತೆಗೀಡಾಗಿ ಬೇರೆ ಬೇರೆ ಔಷಧಿ ಬಳಸುವ ಬದಲು ನೈಸರ್ಗಿಕವಾಗಿ ಸಿಗುವ ಒಂದಷ್ಟು ಪದಾರ್ಥಗಳನ್ನು ಬಳಸುವುದು ಸೂಕ್ತ. ಹಾಗಿದ್ದರೆ ತಲೆಹೊಟ್ಟು ಕಡಿಮೆ ಮಾಡುವುದು ಹೇಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ತೆಂಗಿನ ಎಣ್ಣೆ ತೆಂಗಿನ ಎಣ್ಣೆಯಲ್ಲಿ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ನೆತ್ತಿಯ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತರ ತಲೆ ಸ್ನಾನ ಮಾಡಬೇಕು. ಇದನ್ನು ನಿಯಮಿತವಾಗಿ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ ಹಾಗೂ ಮತ್ತೆ ಅದು ಬಾರದಂತೆ ನೋಡಿಕೊಳ್ಳುತ್ತದೆ.
ಸೀಗೆಕಾಯಿ ಸೀಗೆಕಾಯಿ ಬಳಸುವುದು ಕೂದಲಿನ ಬೆಳವಣಿಗೆಗೂ ಕೂಡ ಒಳ್ಳೆಯದು. ಅಂತೆಯೇ ಸೀಗೆಕಾಯಿ ತಲೆಹೊಟ್ಟಿನ ಸಮಸ್ಯೆಗೂ ಕೂಡ ರಾಮಬಾಣವಾಗಿದೆ. ಶಾಂಪು ಬಳಸುವುದನ್ನು ಆದಷ್ಟು ಕಡಿಮೆ ಮಾಡಿ ಮತ್ತು ವಾರಕ್ಕೆ ಎರಡು ಬಾರಿಯಾದರೂ ಸೀಗೆಕಾಯಿಯನ್ನು ಹಚ್ಚಿ ತಲೆಗೆ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
ನಿಂಬೆ ರಸ ನಿಂಬೆ ರಸವನ್ನು ಬಿಸಿ ನೀರಿನಲ್ಲಿ ಬೆರಸಿ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟು ದೂರವಾಗುತ್ತದೆ. ಇದನ್ನು ನೀವು ಬಳಸುವ ಎಣ್ಣೆಯ ಜತೆಗೆ ಮಿಶ್ರಣ ಮಾಡಿ ಕೂಡ ತಲೆಗೆ ಹಚ್ಚಬಹುದು. ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಆಲೋವೇರಾ ಆಲೋವೇರಾದ ಲೋಳೆಯನ್ನು ನೆತ್ತಿಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಮತ್ತು ತಲೆಹೊಟ್ಟು ದೂರವಾಗುತ್ತದೆ. ಆಲೋವೇರಾದ ಲೋಳೆಯನ್ನು ಹಚ್ಚಿ ಅರೆಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಕರ್ಪೂರ ತೆಂಗಿನ ಎಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ಕೂದಲಿಗೆ ಹಚ್ಚಿ, ಅರ್ಧ ಘಂಟೆಯ ನಂತರ ಸ್ನಾನ ಮಾಡುವುದರಿಂದಲೂ ತಲೆಹೊಟ್ಟು ಕಡಿಮೆಯಾಗುತ್ತದೆ.
ದಾಸವಾಳದ ಎಲೆ ದಾಸವಾಳದ ಎಲೆಗಳು ಕೂದಲಿಗೆ ಒಳ್ಳೆಯದು ಎಂದು ತಿಳಿದಿದೆ. ಅಂತೆಯೇ ಇದು ತಲೆಹೊಟ್ಟಿಗೂ ರಾಮಬಾಣವಾಗಿ ಕೆಲಸ ನಿರ್ವಹಿಸುತ್ತದೆ. ದಾಸವಾಳದ ಎಲೆಗಳನ್ನು ಬಿಸಿ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ, ನೆತ್ತಿಯ ಮೇಲೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ಸ್ನಾನ ಮಾಡಿ. ಇದರಿಂದ ತಲೆ ಹೊಟ್ಟು ದೂರವಾಗುತ್ತದೆ.
ಇದನ್ನೂ ಓದಿ:
Health Benefits: ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಸೇವಿಸುವ ಸಮಯದ ಬಗ್ಗೆ ತಿಳಿಯವುದನ್ನು ಮರೆಯಬೇಡಿ
Health Tips: ಕೆಮ್ಮು ಮತ್ತು ಮನೆಮದ್ದು; ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ಮಳೆಗಾಲಕ್ಕೆ ಔಷಧಿ