ಎಚ್ಚರ… ಮನುಷ್ಯನನ್ನು ಕಾಡಲು ಬಂತು ಮತ್ತೊಂದು ಮಹಾಮಾರಿ, ನಿಮ್ಮ ಸ್ವಯಂ ರಕ್ಷಣೆಗೆ ಇಲ್ಲಿದೆ ಸಲಹೆಗಳು
ರಾಜ್ಯದಾದ್ಯಂತ ಜ್ವರ, ಶೀತದಂತಹ ಪ್ರಕರಣಗಳು ಕಂಡುಬರುತ್ತಿದ್ದು, ಹೆಚ್3ಎನ್2 ಫ್ಲೂ ಗಣನೀಯವಾಗಿ ಹೆಚ್ಚಾಗುತ್ತಿವೆ. ಅದರಲ್ಲಿಯೂ ಈ ವರ್ಷ ವೈದ್ಯರು ತೀವ್ರ ಆಯಾಸ ಮತ್ತು ಹೆಚ್ಚಿನ ಜ್ವರದಂತಹ ಲಕ್ಷಣಗಳನ್ನು ಗಮನಿಸಿದ್ದು ಆದಷ್ಟು ಎಚ್ಚರಿಕೆಯಿಂದ ಇರುವುದು ಬಹಳ ಅನಿವಾರ್ಯವಾಗಿದೆ. ಅದಕ್ಕೂ ಮೊದಲು ಹೆಚ್3ಎನ್2 ಜ್ವರದ ಕುರಿತು ತಿಳಿದುಕೊಂಡು, ಅದರ ಲಕ್ಷಣಗಳು ಕಂಡುಬಂದಾಗ ತ್ವರಿತವಾಗಿ ವೈದ್ಯಕೀಯ ಆರೈಕೆ ಪಡೆಯುವುದು ಮುಖ್ಯವಾಗಿದೆ. ಇಲ್ಲವಾದಲ್ಲಿ ಇದು ನ್ಯುಮೋನಿಯಾದಂತಹ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.

ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಜ್ವರ, ಶೀತ, ನಿರಂತರ ಕೆಮ್ಮು, ಗಂಟಲು ನೋವು. ಹಿಂದಿನ ಋತುಗಳಿಗೆ ಹೋಲಿಸಿದರೆ ಈ ವರ್ಷ ಬರುತ್ತಿರುವ ಜ್ವರದ ಲಕ್ಷಣಗಳು ಬಹಳ ತೀವ್ರವಾಗಿರುವಂತೆ ಕಂಡು ಬರುತ್ತಿದೆ. ಮಾತ್ರವಲ್ಲ ಎಲ್ಲ ಕಡೆಗಳಲ್ಲಿಯೂ ಇನ್ಫ್ಲುಯೆನ್ಸ ಎ ವೈರಸ್‌ನ ತಳಿಯಾದ ಹೆಚ್3ಎನ್2 (H3N2) ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬರುತ್ತಿದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ಆದಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಎಚ್ಚರಿಕೆ ನೀಡುತ್ತಾರೆ. ಹಾಗಾಗಿ ಹೆಚ್3ಎನ್2 ಫ್ಲೂ (Flu) ಬಗ್ಗೆ ತಿಳಿದುಕೊಂಡು ಅದರ ರೋಗಲಕ್ಷಣಗಳು ಕಂಡುಬಂದಾಗ ಎಚ್ಛೆತ್ತುಕೊಳ್ಳುವುದು ಅನಿವಾರ್ಯವಾಗಿದೆ. ದೊಡ್ಡ ದೊಡ್ಡ ರೋಗಕ್ಕಿಂತಲೂ ಜ್ವರ, ಶೀತವೇ ಹೆಚ್ಚು ಆಯಾಸ ನೀಡುವುದನ್ನು ನಾವು ಮರೆಯಬಾರದು. ಈ ರೀತಿ ಪದೇ ಪದೇ ಕಂಡುಬರುವ ಫ್ಲೂ ನಿಂದ ದೂರವಿರಲು ಈ ಸ್ಟೋರಿಯಲ್ಲಿ ನೀಡಿರುವ ಸರಳ ಸಲಹೆಗಳನ್ನು ಪಾಲನೆ ಮಾಡಿನೋಡಿ.
ಹೆಚ್3ಎನ್2 ಎಂದರೇನು?
ಇದೊಂದು ಇನ್ಫ್ಲುಯೆನ್ಸ ಎ ವೈರಸ್‌ನ ತಳಿಯಾಗಿದ್ದು, ಇದು ವಿಶ್ವದಾದ್ಯಂತ ಹೆಚ್ಚುತ್ತಿರುವ ಕಾಲೋಚಿತ ಜ್ವರಕ್ಕೆ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಸಾಮಾನ್ಯ ಶೀತ, ಜ್ವರಕ್ಕಿಂತ ಭಿನ್ನವಾಗಿರುವ ಈ ಹೆಚ್3ಎನ್2, ಹಠಾತ್ ಆಗಿ ಅಧಿಕ ಜ್ವರ, ಸ್ನಾಯು ನೋವು, ತಲೆನೋವು ಮತ್ತು ತೀವ್ರ ಆಯಾಸವನ್ನು ಉಂಟುಮಾಡಬಹುದು, ಕೆಲವೊಮ್ಮೆ ದುರ್ಬಲ ರೋಗನಿರೋಧಕ ಶಕ್ತಿ ಇರುವವರಲ್ಲಿ ನ್ಯುಮೋನಿಯಾದಂತಹ ತೊಂದರೆಗಳಿಗೆ ಕಾರಣವಾಗಬಹುದು. ಈ ತಳಿಯು ಆಗಾಗ ರೂಪಾಂತರಗೊಳ್ಳುತ್ತದೆ ಎಂಬುದು ತಿಳಿದು ಬಂದಿದ್ದು, ಇದು ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಇರುವವರಿಗೆ ಅಪಾಯಕಾರಿಯಾಗಿದೆ. ಅದಕ್ಕಾಗಿಯೇ ಪ್ರತಿ ವರ್ಷ ಫ್ಲೂ ಲಸಿಕೆಗಳನ್ನು ನವೀಕರಿಸಬೇಕಾಗುತ್ತದೆ. ಭಾರತದಲ್ಲಿ, ಫ್ಲೂ ಋತು ಸಾಮಾನ್ಯವಾಗಿ ತಂಪಾದ ವಾತಾವರಣ ಇರುವಾಗ ಕಂಡುಬರುತ್ತಿತ್ತು ಆದರೆ ಈ ವರ್ಷದ ಸ್ಪೈಕ್ ನಿರೀಕ್ಷೆಗಿಂತ ಮೊದಲೇ ಬಂದಿದೆ ಎಂದು ವೈದ್ಯರು ಹೇಳುತ್ತಾರೆ.
ಹೆಚ್3ಎನ್2 ಲಕ್ಷಣಗಳು:
ತೀವ್ರ ಜ್ವರ ಮತ್ತು ಶೀತ ನಿರಂತರ ಕೆಮ್ಮು ಮತ್ತು ಗಂಟಲು ನೋವು ದೇಹದ ನೋವು ಮತ್ತು ಸ್ನಾಯು ನೋವು ಆಯಾಸ ಮತ್ತು ತಲೆನೋವು ಸಾಂದರ್ಭಿಕವಾಗಿ, ವಾಕರಿಕೆ ಅಥವಾ ವಾಂತಿ. ಹಿಂದಿನ ಋತುಗಳಿಗೆ ಹೋಲಿಸಿದರೆ ಈಗ ಕಂಡುಬರುತ್ತಿರುವ ಜ್ವರ ತೀವ್ರವಾಗಿದ್ದು ಹೆಚ್ಚಿನ ಆಯಾಸ ಕಂಡುಬರುತ್ತದೆ ಎಂದು ವರದಿಯಾಗಿದೆ. ಹಾಗಾಗಿ ಈ ಲಕ್ಷಣಗಳು ಕಂಡುಬಂದ ತಕ್ಷಣ ಅದರಲ್ಲಿಯೂ ಅವು ಒಂದೆರಡು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ತಕ್ಷಣ ವೈದ್ಯಕೀಯ ಸಲಹೆಯನ್ನು ಪಡೆಯಿರಿ.
ಇದನ್ನೂ ಓದಿ: ಈ ಲಕ್ಷಣ ಕಡೆಗಣಿಸದಿದ್ದರೆ ಲಿಂಫೋಮಾ ಕ್ಯಾನ್ಸರ್ ಗುಣಪಡಿಸಬಹುದು ಎನ್ನುತ್ತಾರೆ ಡಾ. ಪ್ರಶಾಂತ ಬಿ
ಹೆಚ್3ಎನ್2 ಹೇಗೆ ಹರಡುತ್ತದೆ?
ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಉಸಿರಾಟದ ಹನಿಗಳ ಮೂಲಕ ಹೆಚ್3ಎನ್2 ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತದೆ. ವೈರಸ್‌ನಿಂದ ಕಲುಷಿತಗೊಂಡ ಮೇಲ್ಮೈಗಳನ್ನು ಸ್ಪರ್ಶಿಸಿ ನಂತರ ನಿಮ್ಮ ಮುಖ, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸುವುದರಿಂದಲೂ ಸೋಂಕು ಉಂಟಾಗಬಹುದು. ಶಾಲೆ, ಕಚೇರಿಗಳು ಮತ್ತು ಸಾರ್ವಜನಿಕ ಸಾರಿಗೆಯಂತಹ ಜನದಟ್ಟಣೆಯ ಸ್ಥಳಗಳು ಪ್ರಸರಣದ ಅಪಾಯವನ್ನು ಹೆಚ್ಚಿಸುತ್ತವೆ.
ಹೆಚ್3ಎನ್2 ಸೋಂಕಿನಿಂದ ಸುರಕ್ಷಿತವಾಗಿರುವುದು ಹೇಗೆ?
ಲಸಿಕೆ ಹಾಕಿಸಿಕೊಳ್ಳಿ:
ವಾರ್ಷಿಕವಾಗಿ ಜ್ವರ ಲಸಿಕೆಗಳು ಹೆಚ್3ಎನ್2 ವಿರುದ್ಧ ರಕ್ಷಣೆ ನೀಡುತ್ತದೆ ಅದರಲ್ಲಿಯೂ ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಲಸಿಕೆ ತೆಗೆದುಕೊಳ್ಳುವುದು ಒಳ್ಳೆಯದು.
ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ:
ನಿಮ್ಮ ಕೈಗಳನ್ನು ಆಗಾಗ ಸೋಪ್ ಮತ್ತು ನೀರಿನಿಂದ ತೊಳೆಯಿರಿ ಮತ್ತು ಹೊರಗೆ ಹೋಗುವಾಗ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.
ಮಾಸ್ಕ್ ಧರಿಸಿ:
ಜನದಟ್ಟಣೆ ಇರುವ ಪ್ರದೇಶಗಳಲ್ಲಿ, ಮಾಸ್ಕ್ ಧರಿಸುವುದರಿಂದ ವೈರಲ್ ಸೋಂಕು ಬರುವ ಅಪಾಯವನ್ನು ಕಡಿಮೆ ಮಾಡಬಹುದು.
ನಿಕಟ ಸಂಪರ್ಕವನ್ನು ತಪ್ಪಿಸಿ:
ಜ್ವರ ತರಹದ ಲಕ್ಷಣಗಳು ಕಂಡುಬರುವ ಜನರಿಂದ ದೂರವಿರಿ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ:
ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ, ಹೆಚ್ಚು ಹೆಚ್ಚು ನೀರು ಕುಡಿಯಿರಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ನಿದ್ರೆ ಮಾಡಿ. ನಿಮಗೆ ಅನಾರೋಗ್ಯ ಕಾಣಿಸಿಕೊಂಡರೆ ಹೊರಗೆ ಹೋಗದೆಯೇ ಮನೆಯಲ್ಲಿಯೇ ಇರಿ.
ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?
ಔಷಧಿಗಳಿಂದ ಕಡಿಮೆಯಾಗದ ನಿರಂತರ ಜ್ವರ ಉಸಿರಾಟದ ತೊಂದರೆ ತೀವ್ರ ಎದೆ ನೋವಿನಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಭೇಟಿ ಮಾಡಲು ಹಿಂದೇಟು ಹಾಕಬೇಡಿ. ಅದರಲ್ಲಿಯೂ ವಿಶೇಷವಾಗಿ ಮಕ್ಕಳು ಅಥವಾ ವೃದ್ಧರಲ್ಲಿ ಆರಂಭಿಕ ಪತ್ತೆ ಮತ್ತು ಸಕಾಲಿಕ ಚಿಕಿತ್ಸೆಯು ನ್ಯುಮೋನಿಯಾ ಅಥವಾ ಪರಿಸ್ಥಿತಿ ಮತ್ತಷ್ಟು ಹದಗೆಡುವುದನ್ನು ತಡೆಯಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
