Health Tips: ಹೃದಯಾಘಾತದಿಂದ ಪಾರಾಗಲು 10 ಮಾರ್ಗಗಳು; ಆಯುರ್ವೇದ ತಜ್ಞರ ಸಲಹೆ ಇಲ್ಲಿದೆ

TV9 Digital Desk

| Edited By: Sushma Chakre

Updated on: Sep 06, 2021 | 2:33 PM

Ayurveda Tips for Heart Attack | ಭಾರತದಲ್ಲಿ ಪ್ರತಿ 4 ಸಾವಿನಲ್ಲಿ 1 ಸಾವು ಹೃದಯ ಸಂಬಂಧಿ ಸಮಸ್ಯೆಯಿಂದ ಉಂಟಾಗುತ್ತಿದೆ. ಇವುಗಳಲ್ಲಿ ಶೇ. 80ರಷ್ಟು ಸಾವುಗಳು ಹೃದಯಾಘಾತದಿಂದಲೇ ಆಗಿರುತ್ತವೆ. ಹೃದಯಾಘಾತದಿಂದ ಸಾವನ್ನಪ್ಪುವ ಶೇ. 40ರಷ್ಟು ಜನರು 55 ವರ್ಷದೊಳಗಿನವರಾಗಿದ್ದಾರೆ.

Health Tips: ಹೃದಯಾಘಾತದಿಂದ ಪಾರಾಗಲು 10 ಮಾರ್ಗಗಳು; ಆಯುರ್ವೇದ ತಜ್ಞರ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ

ಜನರ ಜೀವನಶೈಲಿ ಬದಲಾದಂತೆ ನಮ್ಮ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಸ್ವರೂಪವೂ ಬದಲಾಗುತ್ತಿದೆ. ಜಗತ್ತನ್ನು ಕಾಡುತ್ತಿರುವ ಕೊವಿಡ್ ಬೆನ್ನಲ್ಲೇ ಮತ್ತೊಮ್ಮೆ ಹೃದಯಾಘಾತದ ಸಮಸ್ಯೆ ಕೂಡ ಜನರನ್ನು ಹೆಚ್ಚಾಗಿ ಕಾಡತೊಡಗಿದೆ. ಕೆಲವೇ ಕೆಲವು ದಿನಗಳ ಹಿಂದೆ ಹಿಂದಿ ಬಿಗ್ ಬಾಸ್​ 13ನೇ ಸೀಸನ್​ನ ವಿಜೇತ ಸಿದ್ಧಾರ್ಥ್​ ಶುಕ್ಲ ತಮ್ಮ 40ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ನೋಡಲು ಬಹಳ ಫಿಟ್ ಆಗಿದ್ದ, ಯಾವುದೇ ರೋಗಗಳಿಲ್ಲದ ಸಿದ್ಧಾರ್ಥ್​ ಅಚಾನಕ್ಕಾಗಿ ಹೃದಯಾಘಾತಕ್ಕೆ ಒಳಗಾಗಿದ್ದು ಎಲ್ಲರಿಗೂ ಆಘಾತ ಉಂಟುಮಾಡಿತ್ತು. ಇದೇ ರೀತಿ ಇತ್ತೀಚೆಗೆ 30 ವರ್ಷದೊಳಗಿನವರು ಕೂಡ ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಅಂಕಿ-ಅಂಶಗಳ ಪ್ರಕಾರ, ಕೇವಲ 50 ವರ್ಷ ದಾಟಿದವರಿಗೆ ಮಾತ್ರ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎಂಬುದು ಸುಳ್ಳು. ಇತ್ತೀಚಿನ ದಿನಗಳಲ್ಲಿ 40 ವರ್ಷದೊಳಗಿನವರಲ್ಲಿ ಕೂಡ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ.

ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಪ್ರತಿ 4 ಸಾವಿನಲ್ಲಿ 1 ಸಾವು ಹೃದಯ ಸಂಬಂಧಿ ಸಮಸ್ಯೆಯಿಂದ ಉಂಟಾಗುತ್ತಿದೆ. ಇವುಗಳಲ್ಲಿ ಶೇ. 80ರಷ್ಟು ಸಾವುಗಳು ಹೃದಯಾಘಾತದಿಂದಲೇ ಆಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಹಿಂದಿನ ಕಾಲಕ್ಕಿಂತಲೂ ಭಾರತೀಯರು 8ರಿಂದ 10 ವರ್ಷ ಮೊದಲೇ ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಿಂತಲೂ ಆಘಾತಕಾರಿ ವಿಷಯವೆಂದರೆ ಹೃದಯಾಘಾತದಿಂದ ಸಾವನ್ನಪ್ಪುವ ಶೇ. 40ರಷ್ಟು ಜನರು 55 ವರ್ಷದೊಳಗಿನವರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಬಹುತೇಕ ಮಂದಿಯನ್ನು ಅವರ ದೈನಂದಿನ ಜೀವನ ನಡೆಸಲು ಸಾಧ್ಯವಾಗದಂತೆ ಅಶಕ್ತರನ್ನಾಗಿ ಮಾಡುತ್ತದೆ. ಅನಿರೀಕ್ಷಿತ ಸಂದರ್ಭಗಳಲ್ಲಿ ಹೃದ್ರೋಗ ಕಂಡು ಬರುತ್ತದೆ. ಅಂಕಿ-ಅಂಶ ಗಮನಿಸಿದರೆ, ಒಂದು ವರ್ಷದಲ್ಲಿ ಸುಮಾರು 12 ಲಕ್ಷ ಮಂದಿ ಅಮೆರಿಕವೊಂದರಲ್ಲೇ ಹೃದಯ ಸಂಬಂಧಿ ರೋಗಗಳಿಂದ ಸಾವಿಗೀಡಾಗುತ್ತಾರೆ. ಇಂದು ಲಭ್ಯವಿರುವ ಆಧುನಿಕ ತಾಂತ್ರಿಕತೆ ಮತ್ತು ಅಭಿವೃದ್ಧಿಯಿಂದಾಗಿ ಹಲವು ವಿಧದ ಹೃದ್ರೋಗಗಳನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದು. ರೋಗಿಗಳಿಗೆ ತಮ್ಮ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆ, ಹೃದ್ರೋಗದ ಕುರಿತು ಅನಗತ್ಯ ಭೀತಿಯನ್ನು ಹೋಗಲಾಡಿಸುವುದು ಕೂಡ ಮುಖ್ಯವಾಗಿದೆ. ಹೃದ್ರೋಗಗಳಲ್ಲಿ ಹಲವು ವಿಧಗಳಿವೆ. ಹೃದಯದ ಮಾಂಸಖಂಡಗಳಿಗೆ ಸಾಕಷ್ಟು ಪ್ರಮಾಣದಲ್ಲಿ ರಕ್ತ ಲಭಿಸದೆ ಇರುವುದರಿಂದ ಆಂಜೈನಾ ಮತ್ತು ಹಾರ್ಟ್ ಅಟ್ಯಾಕ್ ಬರುತ್ತದೆ. ಇದನ್ನು ಸಾಮಾನ್ಯವಾಗಿ ಇಶ್ಚಿಮಿಕ್ ಹಾರ್ಟ್ ಡಿಸೀಸ್ ಎನ್ನುತ್ತಾರೆ.

ಹೃದಯ ಸಂಬಂಧಿ ಸಮಸ್ಯೆಗಳಿಂದ ಪಾರಾಗಲು 10 ಸಲಹೆಗಳನ್ನು ಆಯುರ್ವೇದ ತಜ್ಞರು ನೀಡಿದ್ದಾರೆ. ಇದರಿಂದ ಚಿಕ್ಕ ವಯಸ್ಸಿನಲ್ಲಿ ಹೃದಯದ ಸಮಸ್ಯೆಗಳನ್ನು ತಡೆಯಬಹುದು ಎಂದು ಅವರು ತಿಳಿಸಿದ್ದಾರೆ.

1. ಬಹುತೇಕ ಜನರಿಗೆ ಬೆಳಗ್ಗೆ 9, 10, 11 ಗಂಟೆಗೆಲ್ಲ ಏಳುವ ಅಭ್ಯಾಸವಿರುತ್ತದೆ. ಆದರೆ, ರಾತ್ರಿ ಬೇಗ ಮಲಗಿ ಬೆಳಗ್ಗೆ ಸೂರ್ಯೋದಯಕ್ಕೂ 2 ಗಂಟೆ ಮೊದಲು ಎದ್ದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು. ಬೆಳಗ್ಗೆ ಬೇಗ ಏಳುವವರ ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದಿಲ್ಲ.

2. ದಿನವೂ ಬೆಳಗ್ಗೆ ಎದ್ದ ಕೂಡಲೆ ಎರಡು ಲೋಟ ಬಿಸಿ ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿರುವ ರಾಸಾಯನಿಕಗಳು ಹೊರಹೋಗುತ್ತವೆ. ಇದರಿಂದ ದೇಹದ ರಕ್ತ ಸಂಚಲನ ಸುಧಾರಿಸುತ್ತದೆ.

3. ಪ್ರತಿ ದಿನ ಯೋಗ, ಧ್ಯಾನ (Meditation) ಮಾಡುವುದರಿಂದ ಆರೋಗ್ಯ ಬಹಳ ಸುಧಾರಿಸುತ್ತದೆ. ಇದರಿಂದ ಅಧಿಕ ಒತ್ತಡ (Stress), ಟೆನ್ಷನ್(Tension), ತಲೆನೋವು ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ರೋಗಗಳಿಗೆ ಯೋಗ, ಧ್ಯಾನ, ವ್ಯಾಯಾಮ ಅತ್ಯುತ್ತಮ ಪರಿಹಾರ.

4. ಆಯುರ್ವೇದ ತಜ್ಞರ ಪ್ರಕಾರ, ಇಡೀ ದೇಹಕ್ಕೆ ಎಣ್ಣೆ ಹೆಚ್ಚಿಕೊಂಡು ಬಿಸಿಲಿನಲ್ಲಿ ನಿಲ್ಲುವುದರಿಂದ (Sunbath) ರಕ್ತದ ಸಂಚಲನ ಚೆನ್ನಾಗಿ ಆಗುತ್ತದೆ. ಇದರಿಂದ ರಕ್ತದಲ್ಲಿರುವ ಕೆಟ್ಟ ಅಂಶಗಳು ಹೊರಹೋಗುತ್ತದೆ ಹಾಗೇ, ದೇಹ ಒಣಗುವುದನ್ನು ಕಡಿಮೆ ಮಾಡುತ್ತದೆ. ಮೂಳೆಗಳ ಸಂದಿನಲ್ಲಿ ಉಂಟಾಗಿರುವ ಬಿಗಿತವನ್ನು ಕಡಿಮೆ ಮಾಡಿ, ಉಲ್ಲಾಸ, ಉತ್ಸಾಹದಿಂದ ಇರುವಂತೆ ಮಾಡುತ್ತದೆ.

5. ನಾವು ಯಾವ ಸಮಯದಲ್ಲಿ ಆಹಾರ ಸೇವಿಸುತ್ತೇವೆ ಎಂಬುದು ಕೂಡ ಹೃದಯ ಸಂಬಂಧಿ ರೋಗಗಳ ಮೇಲೆ ಪರಿಣಾಮ ಬೀರುತ್ತದೆ. ಬೆಳಗ್ಗೆ 7 ಗಂಟೆಗೆ ತಿಂಡಿ, ಮಧ್ಯಾಹ್ನ 12ರಿಂದ 12.30ರೊಳಗೆ ಊಟ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಊಟದ ನಡುವೆ ಕನಿಷ್ಟ 4ರಿಂದ 5 ಗಂಟೆಗಳ ಅಂತರ ಇಟ್ಟುಕೊಳ್ಳಿ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಪ್ರತಿಯೊಬ್ಬರೂ ಹೆಚ್ಚು ನೀರು ಕುಡಿಯುವುದು ಬಹಳ ಅಗತ್ಯ. ಅದರ ಜೊತೆಗೆ ಆಗಾಗ ಡ್ರೈಫ್ರೂಟ್ಸ್​, ಹಣ್ಣುಗಳನ್ನು ತಿನ್ನಬಹುದು. ರಾತ್ರಿ ಮಲಗುವುದಕ್ಕಿಂತ 2 ಗಂಟೆ ಮೊದಲು ಊಟ ಮಾಡುವುದನ್ನು ಅಭ್ಯಾಸ ಮಾಡಿ.

6. ಮಧ್ಯಾಹ್ನ ನಿದ್ರೆ ಮಾಡುವುದು ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ. ಇದರಿಂದ ನಿದ್ರೆಯ ಸೈಕಲ್ ಬದಲಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವೃದ್ಧರು ಸುಸ್ತಾಗಿದ್ದರೆ ಊಟವಾದ ನಂತರ 10ರಿಂದ 15 ನಿಮಿಷ ನಿದ್ರೆ ಮಾಡಬಹುದು.

7. ಎಲ್ಲರ ಮನೆಯಲ್ಲೂ ಬಳಕೆಯಾಗುವ ಅರಿಶಿಣವನ್ನು ಬಿಸಿ ಹಾಲಿಗೆ ಹಾಕಿಕೊಂಡು ಕುಡಿದರೆ ಬಹಳಷ್ಟು ಉಪಯೋಗಗಳಿವೆ. ರಾತ್ರಿ ಮಲಗುವ ಮೊದಲು ಬಾದಾಮಿ ಹಾಲಿಗೆ ಕೊಂಚ ಅರಿಶಿಣ ಹಾಕಿ ಕುಡಿದರೆ ಇನ್ನೂ ಒಳ್ಳೆಯದು. ಸೋಂಕುಗಳಿಂದ ಬಚಾವಾಗಲು ಅರಿಶಿಣ ದಿವೌಷಧ ಎಂದರೂ ತಪ್ಪಾಗಲಾರದು.

8. ಬೇಸಿಗೆಯಲ್ಲಿ ಹೆಚ್ಚು ವರ್ಕೌಟ್ ಮಾಡಬೇಡಿ. ಜಿಮ್ ವರ್ಕೌಟ್ ಬದಲು ಬೇಸಿಗೆಯಲ್ಲಿ ಯೋಗ, ಪ್ರಾಣಾಯಾಮಕ್ಕೆ ಆದ್ಯತೆ ನೀಡಿ. ಬೇಸಿಗೆಯಲ್ಲಿ ದೇಹದಲ್ಲಿ ನಿರ್ಜಲೀಕರಣ ಹೆಚ್ಚಾಗಿರುವುದರಿಂದ ಹೆಚ್ಚು ವರ್ಕೌಟ್ ಮಾಡಿದಾಗ ದೇಹದ ಉಷ್ಣತೆ ಹೆಚ್ಚಾಗಿ, ಶಕ್ತಿ ಕುಂದುತ್ತದೆ. ಚಳಿಗಾಲದಲ್ಲಿ ಬೇಕಾದರೆ ಜಿಮ್​ನಲ್ಲಿ ಅಥವಾ ಮನೆಯಲ್ಲೇ ವರ್ಕೌಟ್ ಮಾಡಬಹುದು.

9. ಧ್ಯಾನ ಅಥವಾ ಪ್ರಾಣಾಯಾಮದಿಂದ ಉಪಯೋಗಗಳು ಹಲವು. ನಿಮ್ಮ ಟೆನ್ಷನ್, ಅಧಿಕ ಒತ್ತಡ ಮುಂತಾದ ಎಲ್ಲವನ್ನೂ ಇದು ನಿಯಂತ್ರಿಸುತ್ತದೆ. ಹೀಗಾಗಿ, ಧ್ಯಾನವನ್ನು ರೂಢಿಸಿಕೊಳ್ಳುವುದು ಉತ್ತಮ.

10. ಸಂರಕ್ಷಿತ ಆಹಾರಗಳ ಬದಲು ಆದಷ್ಟೂ ತಾಜಾ ಆಹಾರ, ಹಣ್ಣು, ತರಕಾರಿಗಳನ್ನೇ ಸೇವಿಸಿ. ಹಳೆಯ ಅಡುಗೆಯನ್ನು ಪ್ರಿಜ್​ನಲ್ಲಿಟ್ಟು ಊಟ ಮಾಡುವ ಬದಲು ಆಯಾ ದಿನದ ಪದಾರ್ಥಗಳನ್ನು ಅಂದೇ ತಯಾರಿಸಿಕೊಂಡು, ಫ್ರೆಶ್ ಆಗಿ ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ.

ಇದನ್ನೂ ಓದಿ: Coffee Health Benefits: ದಿನಕ್ಕೆ ಮೂರೇ ಮೂರು ಕಪ್ ಕಾಫಿ ಕುಡಿದರೆ ಏನೆಲ್ಲ ಉಪಯೋಗವಿದೆ ಗೊತ್ತಾ?

Alcohol Benefits: ಮದ್ಯಪ್ರಿಯರೇ ಶಾಕ್ ಆಗಬೇಡಿ; ಆಲ್ಕೋಹಾಲ್ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗವಿದೆ ಗೊತ್ತಾ?

(Health Tips: Ayurveda expert suggests 10 tips to keep heart attack diseases away Lifestyle to Reduce Heart Attack Risk)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada