ಕೊರೊನಾ ಜತೆಜತೆಗೆ ಶ್ವಾಸಕೋಶಕ್ಕೆ ಬೇರೆ ಸೋಂಕು ತಗುಲಿದರೆ ಏನಾಗುತ್ತದೆ? ಹೊಸ ಅಧ್ಯಯನ ಹೇಳಿದ್ದೇನು?

| Updated By: Skanda

Updated on: Sep 11, 2021 | 1:49 PM

ಏಕಕಾಲಕ್ಕೆ ಎರಡು ವೈರಾಣುಗಳು ದೇಹದ ಮೇಲೆ ದಾಳಿ ಇಟ್ಟಾಗ ಅವುಗಳ ನಡುವೆಯೇ ಒಂದು ಸಂಘರ್ಷವೂ ಏರ್ಪಡುತ್ತದೆ. ಏಕೆಂದರೆ ಅವುಗಳಿಗೆ ನೆಲೆಯೂರಲು ಮೂಲವಾಗಿರುವ ಮಾನವ ಶರೀರ ಒಂದೇ ಆಗಿರುವುದರಿಂದ ಸಹಜವಾಗಿಯೇ ಅವು ಸಾಮ್ರಾಜ್ಯ ಸ್ಥಾಪನೆಗೆ ಹೊಡೆದಾಡುವ ಸಾಮ್ರಾಟರಂತೆಯೇ ವರ್ತಿಸುತ್ತವೆ.

ಕೊರೊನಾ ಜತೆಜತೆಗೆ ಶ್ವಾಸಕೋಶಕ್ಕೆ ಬೇರೆ ಸೋಂಕು ತಗುಲಿದರೆ ಏನಾಗುತ್ತದೆ? ಹೊಸ ಅಧ್ಯಯನ ಹೇಳಿದ್ದೇನು?
ಸಾಂದರ್ಭಿಕ ಚಿತ್ರ
Follow us on

ಕೊರೊನಾ ಇಡೀ ವಿಶ್ವವನ್ನು ವ್ಯಾಪಿಸಿ ಒಂದೂವರೆ ವರ್ಷ ಕಳೆದು ಹೋಗಿದೆ. ಜಾಗತಿಕ ಮಟ್ಟದಲ್ಲಿಯೇ ಆರೋಗ್ಯ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲಗೊಳಿಸಿದ ಕೊರೊನಾ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗಿದೆ. ಸದ್ಯ SARS-CoV-2 ವೈರಾಣುವಿಗೆ ಲಸಿಕೆಯ ಹೊರತಾಗಿ ಇನ್ಯಾವುದೇ ಪ್ರಭಾವಶಾಲಿ ಔಷಧಿಗಳು ಲಭ್ಯವಾಗಿಲ್ಲ. ಹೆಚ್ಚಾಗಿ ಉಸಿರಾಟದ ಮೂಲಕವೇ ದೇಹವನ್ನು ಪ್ರವೇಶಿಸುವ ಕೊರೊನಾ ಸೋಂಕು ಶ್ವಾಸಕೋಶದ ಸಮಸ್ಯೆ ಹಾಗೂ ಹೃದಯ ಸಂಬಂಧಿ ಸಮಸ್ಯೆ ಇರುವವರನ್ನು ಗಂಭೀರವಾಗಿ ಕಾಡುತ್ತಿದೆ. ಇದೀಗ ಕೊವಿಡ್​ 19 ಕುರಿತಾಗಿ ಮತ್ತೊಂದು ಸಂಶೋಧನೆ ನಡೆದಿದ್ದು, ಕೊರೊನಾ ಸೋಂಕಿಗೆ ತುತ್ತಾದ ಸಂದರ್ಭದಲ್ಲೇ ಶ್ವಾಸಕೋಶಕ್ಕೆ ತೊಂದರೆ ಕೊಡಬಲ್ಲ ಬೇರೊಂದು ವೈರಾಣು ದೇಹವನ್ನು ಹೊಕ್ಕರೆ ಏನಾಗುತ್ತದೆ? ಎಂಬ ವಿವರಗಳು ಲಭ್ಯವಾಗಿವೆ.

SARS-CoV-2 ಎಂಬ ವೈರಾಣು ಕೊವಿಡ್​ 19ಗೆ ಕಾರಣ ಎನ್ನುವುದು ತಿಳಿದಿರುವ ವಿಚಾರ. ಸದ್ಯ ಇದು ವ್ಯಾಪಕವಾಗಿರುವುದರಿಂದ ಎಲ್ಲರ ಗಮನವೂ ಸಹಜವಾಗಿಯೇ ಇದರತ್ತ ಇದೆ. ಆದರೆ, ಮಾನವ ಕುಲವನ್ನು ಕೊರೊನಾ ಮಾತ್ರವಲ್ಲದೇ ಇನ್ನೂ ಹತ್ತು ಹಲವು ಸಮಸ್ಯೆಗಳು ನಿರಂತರವಾಗಿ ನಮ್ಮನ್ನು ಭಾದಿಸುತ್ತಲೇ ಇವೆ. ಉದಾಹರಣೆಗೆ Influenza A (IAV) ಹಾಗೂ Respiratory Syncytial Viruses (RSV) ಪ್ರತಿ ವರ್ಷ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿವೆ. ಈ ಪೈಕಿ Influenza A, SARS-CoV-2 ಬಿಟ್ಟರೆ ಬಹುತೇಕ ವೈರಾಣುಗಳ ವಿರುದ್ಧ ಹೋರಾಡಲು ಸಶಕ್ತ ಲಸಿಕೆಗಳೂ ಲಭ್ಯವಿಲ್ಲ ಎನ್ನುವುದು ಗಮನಾರ್ಹ.

ಗ್ಲ್ಯಾಸ್ಗೋ ವಿಶ್ವವಿದ್ಯಾನಿಲಯದ ಇತ್ತೀಚಿನ ಅಧ್ಯಯನವು ಬೇರೆ ಬೇರೆ ವೈರಸ್‌ಗಳು ಒಬ್ಬ ವ್ಯಕ್ತಿಯನ್ನು ಏಕಕಾಲಕ್ಕೆ ಭಾದಿಸಿದರೆ ಏನೆಲ್ಲಾ ತೊಂದರೆಗಳಾಗುತ್ತವೆ ಎನ್ನುವುದನ್ನು ಕಂಡುಹಿಡಿದಿದೆ. ಅವು ನಮ್ಮನ್ನು ಹೇಗೆ ಅನಾರೋಗ್ಯಕ್ಕೆ ತಳ್ಳುತ್ತವೆ ಮತ್ತು ಅವುಗಳಿಂದ ನಾವು ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದನ್ನು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.

ಸಾಮಾನ್ಯವಾಗಿ ಉಸಿರಾಟಕ್ಕೆ ತೊಂದರೆಮಾಡುವ, ಶ್ವಾಸಕೋಶವನ್ನು ಭಾದಿಸುವ ವೈರಾಣುಗಳು ಸಮಶೀತೋಷ್ಣ ವಲಯ ಅಥವಾ ಸಮಭಾಜಕ ಪ್ರದೇಶಗಳಲ್ಲಿ ಚಳಿಗಾಲದ ಸಂದರ್ಭದಲ್ಲಿ ಕಂಡುಬರುತ್ತದೆ. ಈ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ವೈರಸ್‌ಗಳಿಂದ ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಅಂದರೆ ಒಂದು ಸೋಂಕಿನಿಂದ ಬಳಲುತ್ತಿರುವ ಹೊತ್ತಿನಲ್ಲೇ ಮತ್ತೊಂದು ಕೂಡಾ ದೇಹವನ್ನು ಪ್ರವೇಶಿಸಿ ಅದರೊಟ್ಟಿಗೆ ಕಾಡಲಾರಂಭಿಸುತ್ತದೆ. ಅಧ್ಯಯನಗಳ ಪ್ರಕಾರ ಶೇಕಡಾ 30ರಷ್ಟು ಸೋಂಕುಗಳು ಒಂದಕ್ಕಿಂತ ಹೆಚ್ಚು ವೈರಸ್‌ಗಳೊಂದಿಗೆ ಉಲ್ಬಣವಾಗುವ ಸಾಧ್ಯತೆಗಳಿರುತ್ತದೆ. ಇದರ ಅರ್ಥವೇನೆಂದರೆ, ಕೆಲವು ಸಮಯದಲ್ಲಿ ಎರಡು ವಿಭಿನ್ನ ವೈರಸ್‌ಗಳು ಮೂಗು ಅಥವಾ ಶ್ವಾಸಕೋಶವನ್ನು ಪ್ರವೇಶಿಸಿ ಜೀವಕೋಶಗಳಿಗೆ ಸೋಂಕು ಹರಡಿಸುತ್ತವೆ.

ಇನ್ಫ್ಲ್ಯುಯೆನ್ಸಾ ವೈರಸ್​ಗಳಲ್ಲಿ ಆಂಟಿಜೆನಿಕ್ ಶಿಫ್ಟ್ ಎಂಬ ಪ್ರಕ್ರಿಯೆಯನ್ನು ನೋಡಿದರೆ ನಮಗೆ ಈ ಸಹ-ಸೋಂಕು ಪರಿಕಲ್ಪನೆ ಅಥವಾ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಸೋಂಕು ಭಾದಿಸುವ ಕ್ರಿಯೆಯ ಬಗ್ಗೆ ಒಂದಷ್ಟು ಮಾಹಿತಿ ಸಿಗುತ್ತದೆ. ಅಚ್ಚರಿಯ ವಿಚಾರವೆಂದರೆ ಇದು ವೈರಾಣುಗಳ ನಡುವಿನ ಸಂಪರ್ಕದಿಂದ (ಲೈಂಗಿಕ ಕ್ರಿಯೆಗೆ ಸಮಾನವಾಗಿ ಇದನ್ನು ಅರ್ಥೈಸಿಕೊಳ್ಳಬಹುದು) ಉಂಟಾಗುತ್ತವೆ. ಒಂದೇ ಜೀವಕೋಶದಲ್ಲಿ ಎರಡು ಬೇರೆ ಬೇರೆ ವೈರಾಣುಗಳು ಸಂಪರ್ಕಕ್ಕೆ ಬಂದು ಅವುಗಳಲ್ಲಿ ಜೀನ್​ (ಮೂಲಧಾತು) ಬದಲಾವಣೆಗೊಂಡಾಗ ಹೊಸದೊಂದು ವೈರಾಣು ಉಗಮವಾಗುತ್ತದೆ. ಸಾಮಾನ್ಯವಾಗಿ ಅದನ್ನು ರೂಪಾಂತರಿ ವೈರಾಣು ಎಂದು ಕರೆಯಲಾಗುತ್ತದೆ.

ಏಕಕಾಲಕ್ಕೆ ಎರಡು ವೈರಾಣುಗಳು ದೇಹದ ಮೇಲೆ ದಾಳಿ ಇಟ್ಟಾಗ ಅವುಗಳ ನಡುವೆಯೇ ಒಂದು ಸಂಘರ್ಷವೂ ಏರ್ಪಡುತ್ತದೆ. ಏಕೆಂದರೆ ಅವುಗಳಿಗೆ ನೆಲೆಯೂರಲು ಮೂಲವಾಗಿರುವ ಮಾನವ ಶರೀರ ಒಂದೇ ಆಗಿರುವುದರಿಂದ ಸಹಜವಾಗಿಯೇ ಅವು ಸಾಮ್ರಾಜ್ಯ ಸ್ಥಾಪನೆಗೆ ಹೊಡೆದಾಡುವ ಸಾಮ್ರಾಟರಂತೆಯೇ ವರ್ತಿಸುತ್ತವೆ. ಆದರೆ, ಕೆಲವು ವೈರಾಣುಗಳು ಎದುರಾಳಿ ವೈರಾಣುವಿಗೆ ಪ್ರತಿರೋಧ ಒಡ್ಡಿದರೆ ಇನ್ನು ಕೆಲವು ಮಾತ್ರ ಅಚ್ಚರಿಯ ರೀತಿಯಲ್ಲಿ ಸಾಂಗತ್ಯಕ್ಕಾಗಿ ಹಾತೊರೆಯುತ್ತವೆ. ಈ ಸಂಘರ್ಷಣೆ ಹಾಗೂ ಆಕರ್ಷಣೆ ಪ್ರಕ್ರಿಯೆಗೆ ಕಾರಣವಾಗುವ ಅಂಶ ಯಾವುದು ಎನ್ನುವುದು ಈ ತನಕವೂ ನಿಗೂಢವಾಗಿಯೇ ಉಳಿದಿದೆ. ಅದೇನೇ ಇದ್ದರೂ ಒಬ್ಬ ವ್ಯಕ್ತಿ ಯಾವ ಮಟ್ಟಿಗೆ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಎನ್ನುವುದನ್ನು ನಿರ್ಧರಿಸುವಲ್ಲಿ ವೈರಾಣುಗಳ ಈ ವರ್ತನೆಯೂ ಕಾರಣ ಎಂಬ ಅಭಿಪ್ರಾಯ ಇದೆ.

ವೈರಾಣುಗಳ ಈ ಗುಣ ಸ್ವಭಾವ, ವರ್ತನೆಗಳನ್ನು ಅರ್ಥೈಸಿಕೊಳ್ಳುವ ಸಲುವಾಗಿಯೇ ಗ್ಲ್ಯಾಸ್ಗೋ ವಿಶ್ವವಿದ್ಯಾನಿಲಯದ ಅಧ್ಯಯನಕಾರರು ಮನುಷ್ಯರನ್ನು ಸಾಮಾನ್ಯವಾಗಿ ಭಾದಿಸುವ ಹಾಗೂ ಇದುವರೆಗೆ ಹಲವರ ಸಾವಿಗೂ ಕಾರಣವಾಗಿರುವ IAV ಹಾಗೂ RSV ವೈರಾಣುಗಳನ್ನೇ ಅಧ್ಯಯನಕ್ಕೆ ಆಯ್ದುಕೊಂಡರು. ಅತ್ಯಂತ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ, ಕ್ರಯೋ ಎಲೆಕ್ಟ್ರಾನ್​ ಮೈಕ್ರೋಸ್ಕೋಪಿಯೊಂದಿಗೆ ಅವುಗಳ ಮೇಲೆ ನಿಗಾ ಇರಿಸಿದರು. ಅಂತಿಮವಾಗಿ ಆ ಎರಡೂ ವೈರಾಣುಗಳಿಂದ ಹೊರತಾಗಿ ಹೊಸದೊಂದು ವೈರಾಣು ಪತ್ತೆಯಾಗಿದ್ದಲ್ಲದೇ ಅದರಲ್ಲಿ IAV ಹಾಗೂ RSV ವೈರಾಣುಗಳ ಅಂಶ ಇರುವುದೂ ಕಾಣಸಿಕ್ಕಿತು. ಇದು ಎರಡು ವೈರಾಣುಗಳ ಸಮ್ಮಿಲನಕ್ಕೆ ಸಿಕ್ಕ ಸಾಕ್ಷಿಯೂ ಹೌದು.

ರೋಗವನ್ನು ಉಂಟುಮಾಡುವ ರೋಗಕಾರಕಗಳನ್ನು ಅಧ್ಯಯನಕ್ಕೆ ಒಳಪಡಿಸುವುದು ಅತ್ಯಂತ ಪ್ರಮುಖ ವಿಚಾರ. ಇದು ಲಸಿಕೆ ಹಾಗೂ ಚಿಕಿತ್ಸಾ ವಿಧಾನವನ್ನು ಕಂಡುಹಿಡಿದುಕೊಳ್ಳಲು ಸಹಾಯಕವಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಮಹತ್ವದ್ದಾಗಿದೆ. ಗಮನಾರ್ಹ ಅಂಶವೆಂದರೆ ಈ ಅಧ್ಯಯನದಲ್ಲಿ ಸಂಶೋಧಕರು ಎರಡು ವೈರಸ್‌ಗಳ ನಡುವೆ ಯಾವುದೇ ಜೆನೆಟಿಕ್ ಇಂಜಿನಿಯರಿಂಗ್ ಮಾಡದೇ, ವಾಸ್ತವವಾಗಿ ಜಗತ್ತಿನಲ್ಲಿ ಈಗ ಏನಾಗುತ್ತಿದೆ ಎಂಬುದನ್ನು ಪ್ರಯೋಗಾಲಯದ ಮೂಲಕ ತೋರಿಸುವ ಕೆಲಸವನ್ನು ಮಾತ್ರ ಮಾಡಿದ್ದಾರೆ.

ಪ್ರಸ್ತುತ ಕೊರೊನಾ ವ್ಯಾಪಕವಾಗಿ ಹಬ್ಬಿರುವ ಸಂದರ್ಭದಲ್ಲಿ ಇಂಥದ್ದೊಂದು ಅಧ್ಯಯನ ಭವಿಷ್ಯದ ದೃಷ್ಟಿಯಿಂದ ಅತ್ಯವಶ್ಯಕವಾಗಿದ್ದು, ಇದು ನಿಸ್ಸಂದೇಹವಾಗಿ ಮುಂದಿನ ದಿನಗಳಲ್ಲಿ ಏಕಕಾಲಕ್ಕೆ ಭಾದಿಸುವ ಎರಡು ಸೋಂಕುಗಳು ಮನುಷ್ಯರನ್ನು ಹೇಗೆ ಅಪಾಯಕ್ಕೆ ತಳ್ಳುತ್ತವೆ ಹಾಗೂ ಅದನ್ನು ತಡೆಗಟ್ಟಲು ಏನು ಮಾಡಬೇಕು ಎಂಬ ವಿಚಾರವನ್ನು ಪ್ರಸ್ತಾಪಿಸಲಿದೆ ಎಂದು ಅಧ್ಯಯನಕಾರರು ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
Nipah virus: ನಿಫಾ ವೈರಸ್​ ವಿರುದ್ಧ ಕೊವಿಶೀಲ್ಡ್​ ಲಸಿಕೆ ಬಳಕೆ; ಅಧ್ಯಯನ ಹೇಳಿದ್ದೇನು? 

ವಾಯು ಮಾಲಿನ್ಯವು ಶೇ 40 ಭಾರತೀಯರ ಜೀವಿತಾವಧಿಯನ್ನು 9 ವರ್ಷ ಕಡಿತಗೊಳಿಸಬಹುದು: ಅಮೆರಿಕದ ಅಧ್ಯಯನ ವರದಿ

(Here is what happens when two very different respiratory viruses infect the same cell new study report in Kannada)