ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿದ ನಂತರವೂ ಬೆನ್ನು ನೋವು ಬರಬಾರದು ಎಂದರೆ ಹೀಗೆ ಮಾಡಿ
ದೀರ್ಘಕಾಲದ ವರೆಗೆ ಕುಳಿತುಕೊಳ್ಳುವುದು ಮತ್ತು ಹೆಚ್ಚು ಸಮಯ ನಿಂತುಕೊಂಡು ಕೆಲಸ ಮಾಡುವುದು ಕೂಡ ಬೆನ್ನುನೋವು ಮತ್ತು ಕೆಳ ಬೆನ್ನು ನೋವಿಗೆ ಕಾರಣವಾಗಬಹುದು. ಜೊತೆಗೆ ಅನೇಕರು ಕಚೇರಿಗಳ ಕುರ್ಚಿಯಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಅವರ ಭಂಗಿ ಸರಿಯಾಗಿ ಇರುವುದಿಲ್ಲ. ಹೀಗಾಗಿ ಇದ್ದಕ್ಕಿದ್ದಂತೆ ಬೆನ್ನು ಮತ್ತು ಕೆಳ ಬೆನ್ನುನೋವಿನ ಅನುಭವಾಗುತ್ತದೆ. ಕೆಲವರು ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಆದರೆ ಇದು ನಾವು ಮಾಡುವ ದೊಡ್ಡ ತಪ್ಪು. ಹಾಗಾದರೆ ಈ ಬೆನ್ನು ನೋವು ಬರದಂತೆ ತಡೆಯುವುದು ಹೇಗೆ? ಇದಕ್ಕೆ ಪರಿಹಾರವೇನು ತಿಳಿದುಕೊಳ್ಳಿ
![ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿದ ನಂತರವೂ ಬೆನ್ನು ನೋವು ಬರಬಾರದು ಎಂದರೆ ಹೀಗೆ ಮಾಡಿ](https://images.tv9kannada.com/wp-content/uploads/2025/01/get-rid-of-back-pain.jpg?w=1280)
ಪ್ರತಿನಿತ್ಯ ಆಫೀಸ್ ಗೆ ಹೋಗುವವರು ಸಮಯದ ಅರಿವಿಲ್ಲದೆ ಕೆಲಸ ಮಾಡುತ್ತಾರೆ. ಅಲ್ಲಿನ ಒತ್ತಡದಿಂದ ನಾವು ಯಾವ ಭಂಗಿಯಲ್ಲಿ ಎಷ್ಟು ಸಮಯ ಕುಳಿತಿರುತ್ತೇವೆ ಎಂಬುದು ಕೂಡ ನಮ್ಮ ಗಮನಕ್ಕೆ ಬರುವುದಿಲ್ಲ. ಕ್ರಮೇಣ ಈ ಅಭ್ಯಾಸ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಲ್ಲಿ ಅತಿಯಾಗಿ ಕಾಡುವುದು, ಬೆನ್ನು ನೋವು. ಈ ಸಮಸ್ಯೆ ನಮಗೆ ಹಲವಾರು ಕಾರಣಗಳಿಂದ ಉಂಟಾಗಬಹುದು. ದೀರ್ಘಕಾಲದ ವರೆಗೆ ಕುಳಿತುಕೊಳ್ಳುವುದು ಮತ್ತು ಹೆಚ್ಚು ಸಮಯ ನಿಂತುಕೊಂಡು ಕೆಲಸ ಮಾಡುವುದು ಕೂಡ ಬೆನ್ನುನೋವು ಮತ್ತು ಕೆಳ ಬೆನ್ನು ನೋವಿಗೆ ಕಾರಣವಾಗಬಹುದು. ಜೊತೆಗೆ ಅನೇಕರು ಕಚೇರಿಗಳ ಕುರ್ಚಿಯಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಅವರ ಭಂಗಿ ಸರಿಯಾಗಿ ಇರುವುದಿಲ್ಲ. ಹೀಗಾಗಿ ಇದ್ದಕ್ಕಿದ್ದಂತೆ ಬೆನ್ನು ಮತ್ತು ಕೆಳ ಬೆನ್ನುನೋವಿನ ಅನುಭವಾಗುತ್ತದೆ. ಕೆಲವರು ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಆದರೆ ಇದು ನಾವು ಮಾಡುವ ದೊಡ್ಡ ತಪ್ಪು. ಹಾಗಾದರೆ ಈ ಬೆನ್ನು ನೋವು ಬರದಂತೆ ತಡೆಯುವುದು ಹೇಗೆ? ಇದಕ್ಕೆ ಪರಿಹಾರವೇನು ತಿಳಿದುಕೊಳ್ಳಿ.
ಸಾಮಾನ್ಯವಾಗಿ ಬೆನ್ನು ನೋವು ಆರಂಭವಾಗಿ ಎರಡು ಮೂರು ದಿನಗಳಲ್ಲಿ ನಿಮ್ಮ ನೋವು ಕಡಿಮೆಯಾಗದಿದ್ದರೆ, ಅದಕ್ಕೆ ಕಾಳಜಿ ವಹಿಸುವುದು ಅಗತ್ಯ. ಈ ಸಮಸ್ಯೆಯಿಂದ ಬಳಲುತ್ತಿರುವವರು ಆದಷ್ಟು ಬೇಗ ವೈದ್ಯರ ಬಳಿಗೆ ಹೋಗಬೇಕು. ಬೆನ್ನು ನೋವನ್ನು ಬೇಗ ಕಡಿಮೆ ಮಾಡಲು ವೈದ್ಯರು ಔಷಧಿಗಳನ್ನು ಸೂಚಿಸುತ್ತಾರೆ. ಇದರ ಜೊತೆಗೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಬೆನ್ನು ನೋವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.
ನಿಯಮಿತ ವ್ಯಾಯಾಮ
ವೈದ್ಯರ ಪ್ರಕಾರ, ಬೆನ್ನು ಮತ್ತು ಕೆಳ ಬೆನ್ನು ನೋವಿನಿಂದ ಬಳಲುತ್ತಿರುವವರು ಕೆಲವು ಸರಳ ಯೋಗಾಸನಗಳನ್ನು ಮಾಡಲು ಆರಂಭಿಸಬೇಕು. ಇದರಿಂದ ಸುಲಭವಾಗಿ ಈ ರೀತಿಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು ಉತ್ತಮ ಪ್ರಯೋಜನವನ್ನು ನೀಡುತ್ತದೆ.
ಐಸ್ ಕೋಲ್ಡ್ ಕಂಪ್ರೆಸ್ ಅಥವಾ ಬಿಸಿ ಕಂಪ್ರೆಸ್
ಯಾವುದಾದರೂ ಗಾಯದಿಂದಾಗಿ ಬೆನ್ನುನೋವು ಬರುತ್ತಿದ್ದರೆ, ಐಸ್ ಕೋಲ್ಡ್ ಕಂಪ್ರೆಸ್ ನಿಮಗೆ ಪರಿಹಾರ ನೀಡುತ್ತದೆ. ರಕ್ತ ಹೆಪ್ಪುಗಟ್ಟುತ್ತಿರುವಂತೆ ಕಂಡು ಬಂದರೆ, ಬಿಸಿ ಕಂಪ್ರೆಸ್ ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ ಇದನ್ನು ಪ್ರಯತ್ನಿಸುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ.
ದೇಹದ ಭಂಗಿಯಲ್ಲಿ ಬದಲಾವಣೆ
ಆಫೀಸ್ ನಲ್ಲಿ ಒಂದೇ ಸ್ಥಳದಲ್ಲಿ ಕುಳಿತು ನಿರಂತರವಾಗಿ ಕೆಲಸ ಮಾಡಿದರೆ, ಬೆನ್ನು ಮತ್ತು ಕೆಳ ಬೆನ್ನು ನೋವು ಬೇಗನೆ ಬರಬಹುದು. ಹೆಚ್ಚಿನ ಜನರು, ತಾವು ಯಾವ ರೀತಿಯಲ್ಲಿ, ಎಷ್ಟು ಸಮಯ ಕುಳಿತುಕೊಂಡಿದ್ದೇವೆ ಎಂಬುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲಿಯೂ ಕುರ್ಚಿಯಲ್ಲಿ ಕುಳಿತು ಅಲ್ಲಿಯೇ ಮಲಗುವುದು ಸೊಂಟದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ತಜ್ಞರು ಹೇಳುವ ಪ್ರಕಾರ, ಸರಿಯಾಗಿ ನಿದ್ರೆ ಮಾಡಬೇಕು. ಆ ವೇಳಾಪಟ್ಟಿಯನ್ನು ಪ್ರತಿನಿತ್ಯ ಅನುಸರಿಸಬೇಕು. ಇದೆಲ್ಲದರ ಜೊತೆಗೆ ಕುರ್ಚಿಯ ಮೇಲೆ ಕುಳಿತುಕೊಂಡಿರುವಾಗ ನಿಮ್ಮ ಬೆನ್ನುಮೂಳೆ ನೇರವಾಗಿರುವುದು ಬಹಳ ಮುಖ್ಯ.
ಮನಸ್ಸನ್ನು ಶಾಂತವಾಗಿಡುವುದು
ಇದು ನಿಮಗೆ ಆಶ್ಚರ್ಯ ಎನಿಸಿದರೂ ಸತ್ಯ. ಈ ರೀತಿಯ ಅಭ್ಯಾಸ ದೇಹದ ವಿವಿಧ ಭಾಗಗಳಲ್ಲಿ ನೋವನ್ನು ನಿವಾರಿಸುತ್ತದೆ. ಅದಲ್ಲದೆ ಮಾನಸಿಕ ಒತ್ತಡ ಮತ್ತು ಖಿನ್ನತೆಯ ನಡುವೆ ಸಂಬಂಧವಿದೆ ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. ಆದ್ದರಿಂದ ನಿಮಗೆ ದೈಹಿಕವಾಗಿ ಯಾವುದೇ ರೀತಿಯ ನೋವು ಕಾಣಬಾರದು ಎಂದುಕೊಂಡರೆ ಒತ್ತಡವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ.
ಇದನ್ನೂ ಓದಿ: ಬಜೆ ಬೇರಿನ ಉಪಯೋಗ ತಿಳಿದರೆ ಆಶ್ಚರ್ಯ ಪಡೋದು ಖಂಡಿತ
ಸಾಕಷ್ಟು ನಿದ್ರೆ ಮಾಡುವುದು
ನಿದ್ರೆಗೂ, ಬೆನ್ನು ಮತ್ತು ಕೆಳ ಬೆನ್ನುನೋವಿಗೂ ಸಂಬಂಧವಿದೆಯೇ ಎಂಬ ಪ್ರಶ್ನೆ ಹುಟ್ಟಬಹುದು. ಆದರೆ ನಮ್ಮ ನಿದ್ರೆ ನಿಜವಾಗಿಯೂ ಬೆನ್ನು ನೋವಿನ ಮೇಲೆ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ. ಕಡಿಮೆ ನಿದ್ರೆ ಬೆನ್ನು ನೋವನ್ನು ಹೆಚ್ಚಿಸುತ್ತದೆ. ದಿನವಿಡೀ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಆ ನಂತರ ನೀವು ಆರಾಮವಾಗಿ ಮಲಗಿದರೆ, ದೇಹವು ವಿಶ್ರಾಂತಿ ಪಡೆಯುತ್ತದೆ. ಇದರಿಂದ ವಿವಿಧ ಸ್ನಾಯುಗಳು ಮತ್ತು ನರಗಳು ವಿಶ್ರಾಂತಿ ತೆಗೆದುಕೊಳ್ಳುತ್ತದೆ. ಆದ್ದರಿಂದ ದೇಹ ಆರೋಗ್ಯವಾಗಿರಲು ಜೊತೆಗೆ ನೋವು ಒತ್ತಡ ಮುಕ್ತವಾಗಿರಲು, ದಿನಕ್ಕೆ 7 ರಿಂದ 8 ಗಂಟೆ ಚೆನ್ನಾಗಿ ನಿದ್ರೆ ಮಾಡಿ, ಆರೋಗ್ಯವಾಗಿರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Tue, 28 January 25