Stress free life: ಬದುಕಿನಲ್ಲಿ ಏನಿದ್ದರೇನು ನೆಮ್ಮದಿಯೇ ಇಲ್ಲದಿದ್ದರೆ; ಖುಷಿಖುಷಿ ಬದುಕಿಗೆ ಈ 11 ಸೂತ್ರ ನೆನಪಿಟ್ಟುಕೊಳ್ಳಿ
ಆರೋಗ್ಯಕರ ಜೀವನಕ್ಕೆ ಇರುವ ಕೆಲ ಸರಳ ಉಪಾಯಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ. ನೀವೂ ಓದಿ, ನಿಮ್ಮ ಆಪ್ತರೊಂದಿಗೂ ಹಂಚಿಕೊಳ್ಳಿ.
ನಮ್ಮ ಬದುಕಿನ ಮೇಲೆ ಒತ್ತಡ (Stress) ಹಲವು ಅಡ್ಡಪರಿಣಾಮಗಳನ್ನು ಬೀರುತ್ತಿದೆ ಎಂಬುದು ಅರಿವಾದ ನಂತರವೂ ವಾಸ್ತವ ಒಪ್ಪಿಕೊಳ್ಳಲು ನಾವು ಹಿಂಜರಿಯುತ್ತಲೇ ಇರುತ್ತೇವೆ. ಸರಿಯಾದ ಸಮಯದಲ್ಲಿ ಸರಿಯಾದ ರೀತಿ ಬದುಕಿನ ಹಾದಿಯನ್ನು ಬದಲಿಸಿಕೊಳ್ಳದಿದ್ದರೆ ದೈಹಿಕ ಸಮಸ್ಯೆಗಳ ಜೊತೆಗೆ ಹಲವು ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಒತ್ತಡದ ಬದುಕು ನಮ್ಮ ದಕ್ಷತೆಯ ಮೇಲೆಯೂ ಪರಿಣಾಮ ಬೀರುತ್ತದೆ. ಆರೋಗ್ಯಕರ ಮತ್ತು ಸಂತಸದ ಜೀವನ ನಮ್ಮದಾಗಬೇಕಿದ್ದರೆ ತಲೆಯ ಮೇಲೆ ಕುಳಿತಿರುವ ಒತ್ತಡವನ್ನು ನಿವಾರಿಸಿಕೊಳ್ಳಬೇಕು. ಮಾನಸಿಕ ಒತ್ತಡವು ನಮ್ಮ ಆರೋಗ್ಯವನ್ನು ಹಾಳು ಮಾಡುವ ಹಲವು ರೋಗಗಳನ್ನು ಆಹ್ವಾನಿಸುತ್ತದೆ ಎನ್ನುವುದೂ ಈಗ ಗುಟ್ಟಾಗಿ ಉಳಿದಿಲ್ಲ.
ಏಕಕಾಲಕ್ಕೆ ಹಲವು ಕೆಲಸ ಮಾಡುವ ಸಾಮರ್ಥ್ಯವಿದೆ, ನಾನು ಮಲ್ಟಿಟಾಸ್ಕಿಂಗ್ ಪಂಟರ್ ಎಂದು ಎಷ್ಟೋ ಜನರು ಬೀಗುತ್ತಿರುತ್ತಾರೆ. ಆದರೆ ಇದನ್ನು ಸಾಧ್ಯವಾಗಿಸಲು ಅವರು ಅದೆಷ್ಟು ಒತ್ತಡ ಅನುಭವಿಸುತ್ತಾರೆ ಗೊತ್ತೆ? ಒತ್ತಡದ ಬದುಕು, ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಿಮುಗಿಸಬೇಕಾದುದು ಇಂದಿನ ಅನಿವಾರ್ಯತೆ ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಆರೋಗ್ಯಕರ ಜೀವನಕ್ಕೆ ಇರುವ ಕೆಲ ಸರಳ ಉಪಾಯಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ. ನೀವೂ ಓದಿ, ನಿಮ್ಮ ಆಪ್ತರೊಂದಿಗೂ ಹಂಚಿಕೊಳ್ಳಿ.
1. ವೇಳಾಪಟ್ಟಿ ಇರಲಿ ಜಗತ್ತಿನಲ್ಲಿ ಎಲ್ಲರಿಗೂ ಇರುವುದು ಒಂದು ದಿನಕ್ಕೆ 24 ಗಂಟೆ ಮಾತ್ರ. ಈ ಅವಧಿಯನ್ನೇ ಕೆಲವರು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಮಹತ್ವದ ಸಾಧನೆ ಮಾಡುತ್ತಾರೆ. ಈ ಉಪಾಯವನ್ನು ನೀವೂ ಅನುಸರಿಸಲು ಸಾಧ್ಯ. ಮಾಡಬೇಕಾದ್ದಿಷ್ಟೇ, ಒಂದು ವೇಳಾಪಟ್ಟಿ ರೂಪಿಸಿಕೊಳ್ಳಿ. ನಿದ್ದೆ, ಕಚೇರಿ ಕೆಲಸ, ಮಕ್ಕಳು, ಕುಟುಂಬ, ಗೆಳೆಯರು, ಅಧ್ಯಾತ್ಮ, ಮನರಂಜನೆ ಹೀಗೆ ನಿಮಗೆ ದೈನಂದಿನ ಕೆಲಸಗಳು, ಆಸಕ್ತಿಯನ್ನು ಮೊದಲು ಪಟ್ಟಿ ಮಾಡಿಕೊಳ್ಳಿ. ನಂತರ ನಿದ್ದೆಯ ಸಮಯ ಕಳೆದು, ಉಳಿದ ಅವಧಿಯಲ್ಲಿ ಅವಕ್ಕೆ ಸಮಯ ಹಂಚಿಕೆ ಮಾಡಿ. ಇಂಥದ್ದೊಂದು ವೇಳಾಪಟ್ಟಿ ರೂಪಿಸಿಕೊಳ್ಳಲು ಮತ್ತು ಅನುಸರಿಸಲು ಸಾಧ್ಯವಾದರೆ ನಿಮ್ಮ ಮನಸ್ಸಿಗೆ ಅದೆಷ್ಟು ಹಾಯ್ ಎನಿಸುತ್ತದೆ ಎನ್ನುವುದನ್ನು ಅನುಭವಿಸಿಯೇ ತಿಳಿಯಬೇಕು.
2. ಬೇಗ ಮಲಗಿ, ಬೇಗ ಏಳಿ ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಏಳುವುದರಿಂದ ಆರೋಗ್ಯ ಚೆನ್ನಾಗಿರುತ್ತೆ ಎನ್ನುವುದನ್ನು ಹಲವು ಗಾದೆಗಳು ಸಾರಿಹೇಳುತ್ತವೆ. ನಾವೂ ಚಿಕ್ಕಂದಿನಲ್ಲಿ ಇಂಥ ಗಾದೆಗಳನ್ನು ಕೇಳಿರುತ್ತೇವೆ, ಆದರೆ ದೊಡ್ಡವರಾದಂತೆ ಮರೆತಿರುತ್ತೇವೆ. ದೈನಂದಿನ ಜೀವನ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಪ್ರಯತ್ನಿಸಿ ನೋಡಿ. ಪ್ರತಿದಿನ ಒಂದೇ ರೀತಿಯ ವೇಳಾಪಟ್ಟಿ ಅನುಸರಿಸುವುದು ಮತ್ತು ಬೆಳಿಗ್ಗೆ ಬೇಗ ಏಳುವುದರಿಂದ ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ಆಗುವ ಉತ್ತಮ ಪರಿಣಾಮಗಳನ್ನು ಅನುಭವಿಸಿಯೇ ತಿಳಿಯಬೇಕು.
3. ನಿಮಗೇನು ಖುಷಿಕೊಡುತ್ತೆ? ನಿಮಗೆ ಖುಷಿಕೊಡುವ, ನಿಮ್ಮಲ್ಲಿ ಆಶಾವಾದ ಬೆಳೆಸುವ ಸಂಗತಿಗಳನ್ನು ಪಟ್ಟಿಮಾಡಿಕೊಂಡು ನಿಮಗೆ ಕಾಣಿಸುವಂತೆ ಇರಿಸಿಕೊಳ್ಳಿ. ಈ ತಂತ್ರದಿಂದ ನಿಮ್ಮ ಒತ್ತಡ ಸಾಕಷ್ಟು ಕಡಿಮೆಯಾಗುತ್ತದೆ. ಒಂದು ದಿನದಲ್ಲಿ ನೀವು ಏನೆಲ್ಲಾ ಮಾಡಬೇಕು ಎಂಬ ಪಟ್ಟಿಯನ್ನೂ ಸಿದ್ಧಪಡಿಸಿಕೊಳ್ಳಿ. ಇಂಥ ಪಟ್ಟಿಯಲ್ಲಿ ನಿಮ್ಮ ಕಚೇರಿ ಕೆಲಸ, ವೈಯಕ್ತಿಕ ಕೆಲಸ, ಇತರ ಜವಾಬ್ದಾರಿಗಳನ್ನೂ ಪಟ್ಟಿಯಲ್ಲಿ ಸೇರಿಸಿ. ನಿಮ್ಮ ಏಕಾಗ್ರತೆ ಕಾಪಾಡಿಕೊಳ್ಳಲು, ದಿನವೊಂದರಲ್ಲಿ ಆಗಬೇಕಾದ ಎಲ್ಲ ಕೆಲಸಗಳನ್ನು ಉತ್ತಮ ಪೂರ್ವಸಿದ್ಧತೆಯೊಂದಿಗೆ ಪೂರ್ಣಗೊಳಿಸಲು ಇದು ನೆರವಿಗೆ ಬರುತ್ತದೆ.
4. ಸವಾಲುಗಳನ್ನು ಒಪ್ಪಿಕೊಳ್ಳಿ, ಎದುರಿಸಿ ಪ್ರತಿ ಸವಾಲು ಸಹ ಅವಕಾಶ ಎಂಬ ಮಾತೊಂದಿದೆ. ನೀವು ತೆಗೆದುಕೊಂಡ ಯಾವುದೇ ನಿರ್ಧಾರ ನಿಮ್ಮನ್ನು ಸಂಕಷ್ಟ ಸ್ಥಿತಿಗೆ ದೂಡಿದರೆ ಹೆದರಿ ಹಿಂಜರಿಯಬೇಡಿ. ಬದಲಿಗೆ ಪರಿಸ್ಥಿತಿಯನ್ನು ಒಪ್ಪಿಕೊಳ್ಳಿ. ನಿಮ್ಮನ್ನು ನೀವು ಬೈದುಕೊಳ್ಳುತ್ತಾ ಕೂರುವ ಬದಲು ಪರಿಹಾರಗಳ ಬಗ್ಗೆ ಯೋಚಿಸಿ. ನಾವು ಕಷ್ಟದಲ್ಲಿದ್ದಾಗ ಹೆಚ್ಚು ಆಶಾವಾದಿಗಳಾಗಿ ಯೋಚಿಸಬೇಕು. ಆಗ ಮಾತ್ರ ಪರಿಹಾರದ ದಾರಿಗಳು ತೆರೆದುಕೊಳ್ಳುತ್ತವೆ. ಸದ್ಯದ ಕಷ್ಟಗಳಿಂದ ಹೊರಬರುವ ಜೊತೆಗೆ ಭವಿಷ್ಯದಲ್ಲಿ ಇಂಥ ತಪ್ಪುಗಳನ್ನು ಮಾಡಬಾರದು ಎಂಬ ಪಾಠ ಕಲಿಯಲು ಸಾಧ್ಯವಾಗುತ್ತದೆ.
5. ನೀವೇ ನಿಮ್ಮ ಮೊದಲ ಆಸ್ತಿ ಸಂಪಾದನೆಯ ಬೆನ್ನುಹತ್ತುವ ನಾವು ಎಷ್ಟೋ ಸಲ ನಮ್ಮ ನಿಜವಾದ ಆಸ್ತಿಯನ್ನೇ ಮರೆತುಬಿಡುತ್ತೇವೆ. ನಮ್ಮ ದೇಹ ಮತ್ತು ಮನಸ್ಸು ನಮಗಿರುವ ನಿಜವಾದ ಆಸ್ತಿ. ಇವನ್ನು ಸದೃಢವಾಗಿಟ್ಟುಕೊಳ್ಳಲು, ರೋಗರಹಿತವಾಗಿ ಬದುಕಲು ನಾವು ಸದಾ ಎಚ್ಚರದಿಂದ ಇರಬೇಕು. ವಿಷಾಹಾರ ಅಥವಾ ವಿಪರೀತ ಆಹಾರ ಸೇವನೆಯಿಂದ ದೇಹಕ್ಕೆ ಹೇಗೆ ಹಲವು ರೋಗಗಳು ಬರುತ್ತವೆಯೋ, ಹಾಗೆಯೇ ಕೆಟ್ಟ ವಿಚಾರಗಳ ಆಲೋಚನೆ ಮತ್ತು ವಿಶ್ರಾಂತಿ ರಹಿತ ಜೀವನ ಪದ್ಧತಿಯಿಂದ ಮನಸ್ಸು ದುರ್ಬಲವಾಗುತ್ತದೆ. ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ವಿಶ್ರಾಂತಿ ಬೇಕೆಂಬುದನ್ನು ನಾವು ತಿಳಿಯಬೇಕಿದೆ.
6. ವಿಶ್ರಾಂತಿ ಅದೆಷ್ಟೇ ಒತ್ತಡದ ಕೆಲಸ ನಿಮ್ಮದಾಗಿದ್ದರೂ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೂ ನಿಮ್ಮ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಬೇಕೆಬೇಕು ಎಂಬುದನ್ನು ಮರೆಯದಿರಿ. ಕೆಲಸದ ಮಧ್ಯೆಯೇ, ನೀವು ಕಚೇರಿಯಲ್ಲಿದ್ದರೂ ದೀರ್ಘವಾಗಿ ಉಸಿರಾಡುವುದನ್ನು ರೂಢಿಸಿಕೊಳ್ಳಿ. ಕೆಲಸದಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಸಿಕೊಳ್ಳಿ, ನಿಮಗಾಗಿ, ನಿಮ್ಮ ಸಂತೋಷಕ್ಕಾಗಿ ನೀವು ಕೆಲಸ ಮಾಡಿ. ಕೆಲಸ ಮಾಡುವಾಗಲೂ ಖುಷಿಯಾಗಿರುವುದು ರೂಢಿಸಿಕೊಳ್ಳಿ. ಯಾರೋ ಇನ್ನೊಬ್ಬರು ಒತ್ತಡ ಹೇರಿದರು ಎಂದು ಕೆಲಸ ಮಾಡಬೇಡಿ.
7. ಧ್ಯಾನ ಮಾಡುವುದು ರೂಢಿಸಿಕೊಳ್ಳಿ ಕೆಟ್ಟ ಮತ್ತು ಅತಿಯಾಗಿ ಒತ್ತಡ ತರುವ ಆಲೋಚನೆಗಳನ್ನು ದೂರವಿಡಲು ಧ್ಯಾನ ಅತ್ಯುತ್ತಮ ಮಾರ್ಗ. ಇದು ನಿಮ್ಮ ಮನಸ್ಸಿಗೆ ತಾಜಾತನ ತುಂಬುವ ಜೊತೆಗೆ ಉತ್ತಮ ಆಲೋಚನೆಗಳು ತುಂಬಿಕೊಳ್ಳುವಂತೆ ಮಾಡುತ್ತದೆ. ಧ್ಯಾನ ಮಾಡ್ತೀವಿ ಅಂತ ಯಾರಿಗೂ ಸಿಗದ ಜಾಗದಲ್ಲಿ ಕಣ್ಮುಚ್ಚಿ ಕೂರಬೇಕಾಗಿಲ್ಲ. ಯಾವಾಗ ನಿಮಗೆ ಹೆಚ್ಚು ಸಿಟ್ಟು, ಆತಂಕ, ಇರಿಸುಮುರಿಸು ಆಗುತ್ತದೋ ಆಗೆಲ್ಲಾ ದೀರ್ಘವಾಗಿ ಉಸಿರಾಡಿ ಪರಿಸ್ಥಿತಿಯನ್ನು ಅಂದಾಜಿಸಿ. ಉಸಿರಾಟದ ಮೇಲೆಯೇ ಗಮನವನ್ನು ಕೇಂದ್ರೀಕರಿಸಿ. ದಿನಕ್ಕೆ ಕನಿಷ್ಠ 20 ನಿಮಿಷ ಧ್ಯಾನ ಮಾಡಿದರೆ ಉದ್ವೇಗದಿಂದ ಬರುವ ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ ಎಷ್ಟೋ ಕಾಯಿಲೆಗಳು ಗುಣವಾಗುತ್ತವೆ.
8. ಅಡ್ಡಾದಿಡ್ಡಿ ಬದುಕು ಬೇಡ ನಿಮ್ಮ ಜೀವನ ಪದ್ಧತಿ ಸುಧಾರಿಸಬೇಕು, ಒತ್ತಡ ರಹಿತ ಜೀವನ ನಿಮ್ಮದಾಗಬೇಕು ಎಂದಾದರೆ ನಿಮ್ಮನ್ನು ಏಕಾಗ್ರತೆಯಿಂದ ದೂರ ಮಾಡುವ ಸಂಗತಿಗಳಿಂದ ದೂರವಿರಿ. ಮೊಬೈಲ್, ಲ್ಯಾಪ್ಟಾಪ್, ಟಿವಿ ಅಥವಾ ಇತರ ಯಾವುದೇ ವಿಷಯಗಳು ಗೀಳಾಗಿ ಪರಿವರ್ತನೆಯಾದರೆ ಏಕಾಗ್ರತೆ ಸಾಧಿಸಲು ಸಾಧ್ಯವಾಗುವುದಿಲ್ಲ. ಒಂದು ಕೆಲಸ ಮಾಡುವಾಗ ಮತ್ತೊಂದರ ಕಡೆಗೆ ಗಮನ ಕೊಡುವುದನ್ನು ಸಾಧ್ಯವಾದ ಮಟ್ಟಿಗೂ ಕಡಿಮೆ ಮಾಡಿ. ನೀವು ಕೆಲಸ ಮಾಡುವ ಟೇಬಲ್ ಮೇಲೆ ಬೇಡದ ವಸ್ತುಗಳನ್ನು ಇರಿಸಿಕೊಳ್ಳಬೇಡಿ.
9. ಏಕಾಗ್ರತೆ ಸಾಧಿಸಿ ಜೀವನದಲ್ಲಿ ಏನೆಲ್ಲಾ ಸಾಧಿಸಬೇಕು ಎಂದುಕೊಳ್ಳುವ ನಾವು ಕೊನೆಗೂ ಸೋಲುವುದು ಈ ವಿಚಾರದಲ್ಲಿ. ನಮ್ಮ ಬದುಕಿನ ಎಷ್ಟೋ ತೊಂದರೆಗಳಿಗೆ ಇದೇ ಮುಖ್ಯಕಾರಣ. ‘ಮಾಡುತ್ತಿರುವ ಕೆಲಸದ ಕಡೆಗೆ ಗಮನವಿರಲಿ’ ಎನ್ನುವುದು ನಮ್ಮ ಬದುಕಿನ ಮೊದಲ ಗುರಿಯಾಗಬೇಕು. ಆಗ ಮಾತ್ರ ನಮ್ಮ ಕಾರ್ಯಕ್ಷಮತೆ, ಕೆಲಸದ ವೇಗ ಸುಧಾರಿಸಲು ಸಾಧ್ಯ. ಮಾಡುತ್ತಿರುವ ಕೆಲಸದ ಗುಣಮಟ್ಟ ಸುಧಾರಿಸಲು ಸದಾ ಪ್ರಯತ್ನಪಡಿ. ಹೊಸಹೊಸ ಗುರಿಗಳ ಬೆನ್ನುಹತ್ತಿ. ಇವೆಲ್ಲವೂ ಸಾಧ್ಯವಾಗಬೇಕಾದರೆ ಮೊದಲು ಏಕಾಗ್ರತೆ ಬೇಕು.
10. ಮುಂದೂಡುವುದು ಸಲ್ಲದು ನಾಳೆ ಎಂಬುದು ನಮ್ಮ ಜೀವನದಲ್ಲಿ ಎಂದಿಗೂ ಬರದು, ನಾಳೆ ಮಾಡುವ ಕೆಲಸ ಇಂದೇ ಮಾಡು ಅಂತೆಲ್ಲಾ ಹಿರಿಯರು ಹೇಳುತ್ತಿರುತ್ತಾರೆ. ಆದರೆ ನಾವು ಮಾತ್ರ ಕೆಲಸಗಳನ್ನು ನಾಳೆ ಮಾಡೋಣ ಎಂದು ಮುಂದೂಡುತ್ತಲೇ ಇರುತ್ತೇವೆ. ಆದರೆ ಇದು ಎಂದಿಗೂ ಈಡೇರುವುದಿಲ್ಲ.
11. ಸದಾ ಖುಷಿಯಾಗಿರಿ ಕೊನೆಯ ಆದರೆ ತುಂಬಾ ಮುಖ್ಯವಾದ ಮಾತೆಂದರೆ ಸದಾ ಖುಷಿಯಾಗಿರಿ. ಹೀಗೆ ಖುಷಿಯಾಗಿರಲು ವ್ಯಾಯಾಮ, ಯೋಗದಿಂದ ದೇಹವನ್ನು ಉತ್ತಮ ಚಿಂತನೆಗಳಿಂದ ಮನಸ್ಸನ್ನು ಸ್ವಸ್ಥವಾಗಿ ಇರಿಸಿಕೊಳ್ಳುವುದು ಅತ್ಯಗತ್ಯ. ನಿಯಮಿತ ವ್ಯಾಯಾಮದಿಂದ ಮನಸ್ಸಿನ ಒತ್ತಡ ಹೆಚ್ಚಿಸುವ ಕೊರ್ಟಿಸೊಲ್ನಂಥ ಹಾರ್ಮೋನ್ಗಳು ನಿಯಂತ್ರಣದಲ್ಲಿರುತ್ತವೆ. ಸರಿಯಾಗಿ ಕುಳಿತುಕೊಳ್ಳುವುದು, ನಡೆಯುವುದು, ನಿಲ್ಲುವ ಭಂಗಿ ಸರಿದಂತೆ ಎಷ್ಟೋ ವಿಚಾರಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮಹತ್ತರವಾದುದನ್ನು ಸಾಧಿಸುವ ಸಾಮರ್ಥ್ಯ ಎಲ್ಲರಿಗೂ ಇದೆಯಾದರೂ, ನಾವೆಲ್ಲರೂ ಮನುಷ್ಯ ಮಾತ್ರರು ಮತ್ತು ಅದೇ ಕಾರಣಕ್ಕೆ ಸಾಕಷ್ಟು ಮಿತಿಗಳೂ ನಮಗಿವೆ ಎಂಬುದನ್ನು ಮರೆಯಬೇಡಿ. ನಿಮ್ಮ ಆಪ್ತರಿಗೆ ನೀವು ಕೊಡಬಹುದಾದ ಅತ್ಯುತ್ತಮ ಕೊಡುಗೆ ಎಂದರೆ ನಿಮ್ಮ ನೈಜ ಮುಗುಳ್ನಗು. ಅದು ಸಾಧ್ಯವಾಗಬೇಕಾದರೆ ನಿಮ್ಮ ದೇಹ ಮತ್ತು ಮನಸ್ಸು ಸ್ವಸ್ಥವಾಗಿರಬೇಕು.
(ಮಾಹಿತಿ: ಲೈಫ್ ಹ್ಯಾಕ್ ಮತ್ತು ಇತರ ಜಾಲತಾಣಗಳು)
ಇದನ್ನೂ ಓದಿ: Will: ನೆಮ್ಮದಿಯ ಬದುಕಿಗೆ ವಿಲ್ ಬೇಕು: ವಿಲ್ ಮಾಡುವುದು ಹೇಗೆ?
ಇದನ್ನೂ ಓದಿ: Personal Finance: ಕೊರೊನಾ ಕಲಿಸಿದ ಪಾಠ: ಮುಂದಿನ ತಲೆಮಾರಿಗೆ ಆಸ್ತಿಯ ಸುಗಮ ವರ್ಗಾವಣೆಗೆ ಹಲವು ಮಾರ್ಗಗಳು
(Important points to achieve stress free life tips for good life)
Published On - 9:22 pm, Wed, 4 August 21