Health Tips: ಧೂಮಪಾನಕ್ಕಿಂತಲೂ ಕುಳಿತುಕೊಳ್ಳುವ ಜೀವನಶೈಲಿ ಅಪಾಯಕಾರಿಯೇ? ಇಲ್ಲಿದೆ ತಜ್ಙರ ಎಚ್ಚರಿಕೆ
ದೀರ್ಘ ಗಂಟೆಗಳ ಕಾಲ ಕುಳಿತುಕೊಳ್ಳುವುದು ಜಡ ಜೀವನಶೈಲಿಯಾಗಿದೆ. ಇದು ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ನಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚು ಕುಳಿತುಕೊಳ್ಳುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಜಡ ಜೀವನಶೈಲಿಯನ್ನು ನಡೆಸುವುದು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ದೀರ್ಘಕಾಲ ಕುಳಿತುಕೊಳ್ಳುವುದು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೆಚ್ಚು ಹೊತ್ತು ಕುಳಿತುಕೊಂಡಿರುವ ಜೀವನಶೈಲಿಯು ಮರಣದ ಎಲ್ಲಾ ಕಾರಣಗಳನ್ನು ಹೆಚ್ಚಿಸುತ್ತದೆ. ಹೃದಯ ರಕ್ತನಾಳದ ಕಾಯಿಲೆಗಳು, ಮಧುಮೇಹ, ಸ್ಥೂಲಕಾಯತೆ, ಕರುಳಿನ ಕ್ಯಾನ್ಸರ್, ಅಧಿಕರಕ್ತದೊತ್ತಡ, ಖಿನ್ನತೆ ಮತ್ತು ಆತಂಕದಂತಹ ಅಪಾಯವನ್ನು ಹೆಚ್ಚಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮಾನವರ ದೇಹವನ್ನು ನೇರವಾಗಿ ನಿಲ್ಲುವಂತೆ ನಿರ್ಮಿಸಲಾಗಿದೆ. ಆದ್ದರಿಂದ ಆರೋಗ್ಯಕರವಾರಲು ಸಾಕಷ್ಟು ದೈಹಿಕ ಚಟುವಟಿಕೆಗಳು ಮತ್ತು ಓಡಾಟದ ಅಗತ್ಯವಿರುತ್ತದೆ.
ನಾವು ಹೆಚ್ಚು ಕಾಲ ಕುಳಿತುಕೊಂಡಾಗ ನಮ್ಮ ದೇಹಕ್ಕೆ ಏನಾಗುತ್ತದೆ?
1. ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ ಮತ್ತು ಕೊಬ್ಬಿನಾಮ್ಲಗಳು ರಕ್ತನಾಳಗಳಲ್ಲಿ ಸಂಗ್ರಹಗೊಳ್ಳಲು ಅನುವು ಮಾಡಿಕೊಡುತ್ತದೆ.
2. ಕೊಬ್ಬನ್ನು ಸಂಸ್ಕರಿಸುವ ನಮ್ಮ ದೇಹದ ಸಾಮಾರ್ಥ್ಯವನ್ನು ಕಡಿಮೆ ಮಾಡುತ್ತದೆ.
3. ಇದು ಮಧುಮೇಹ ಮತ್ತು ಬೊಜ್ಜಿಗೆ ಕಾರಣವಾಗುವ ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ.
4. ನಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.
5. ಸ್ನಾಯುಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ.
6. ನಮ್ಮ ಮೆದುಳಿನ ಮೇಲೆ ಪರಿಣಾಮವನ್ನು ಬೀರುತ್ತದೆ.
ಹೆಚ್ಚು ಕಾಲ ಕುಳಿತುಕೊಂಡಿರುವ ಜಡ ಜೀವನಶೈಲಿಯ ಅಪಾಯಕಾರಿ ಅಡ್ಡ ಪರಿಣಾಮಗಳು:
ತೂಕ: ಓಡಾಡುವುದು ಮತ್ತು ವ್ಯಾಯಾಮ ಮಾಡುವುದು ನಮ್ಮ ದೇಹವು ಕೊಬ್ಬು ಮತ್ತು ಸಕ್ಕರೆಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ನಮ್ಮನ್ನು ಆರೋಗ್ಯಕರವಾಗಿ ಮಾಡುತ್ತದೆ. ನಾವು ಹೆಚ್ಚು ಸಮಯ ಕುಳಿತುಕೊಂಡರೆ, ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ಅಂತಿಮವಾಗಿ ನಿಷ್ಪರಿಣಾಮಕಾರಿಯಾಗುತ್ತದೆ, ಇದು ನಮ್ಮ ದೇಹದಲ್ಲಿ ಕೊಬ್ಬುಗಳು ಮತ್ತು ಸಕ್ಕರೆಯನ್ನು ಕೇವಲ ಕೊಬ್ಬಿನಂತೆ ಉಳಿಸುತ್ತದೆ. ದೀರ್ಘಕಾಲ ಕುಳಿತುಕೊಳ್ಳುವುದು ಮೆಟಬಾಲಿಕ್ ಸಿಂಡ್ರೋಮ್ ನಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಪ್ರತಿದಿನ 45 ರಿಂದ 50 ನಿಮಿಷಗಳ ಕಾಲದ ವ್ಯಾಯಾಮದ ಅಗತ್ಯವಿದೆ ಎಂದು ವೈದ್ಯರು ಹೇಳುತ್ತಾರೆ.
ಆತಂಕ ಮತ್ತು ಖಿನ್ನತೆ: ನಾವು ಸಕ್ರಿಯವಾಗಿ ಓಡಾಡುವುದನ್ನು ನಿಲ್ಲಿಸಿದಂತೆ ಆತಂಕ ಮತ್ತು ಖಿನ್ನತೆಯು ಪ್ರಾರಂಭವಾಗುತ್ತದೆ. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಹೆಚ್ಚಿದ ಕುಳಿತುಕೊಳ್ಳುವಿಕೆಯ ಅಭ್ಯಾಸವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ವೈದ್ಯರು ಹೇಳುತ್ತಾರೆ. ಆರೋಗ್ಯ ತಜ್ಞರ ಪ್ರಕಾರ ಕುಳಿತುಕೊಳ್ಳುವಿಕೆಯು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮತ್ತು ಸ್ನಾಯುವಿನ ಕ್ಷೀಣತೆಗೆ, ಬೆನ್ನು ಮೂಳೆಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಆದ್ದರಿಂದ ಪ್ರತಿನಿತ್ಯ ಸ್ವಲ್ಪ ಹೊತ್ತು ಓಡಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಇದನ್ನೂ ಓದಿ:Health Tips for 2023: ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪಾಲಿಸಿ
ಕ್ಯಾನ್ಸರ್: ದೀರ್ಘ ಸಮಯಗಳ ಕಾಲ ಕುಳಿತುಕೊಳ್ಳುವುದು ಶ್ವಾಸಕೋಶ, ಗರ್ಭಾಶಯ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ಕೆಲವು ರೀತಿಯ ಕ್ಯಾನ್ಸರ್ ನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಕೆಲವು ಆರೋಗ್ಯ ತಜ್ಞರು ಹೇಳುತ್ತಾರೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಪ್ರಕಾರ ಒಬ್ಬ ವ್ಯಕ್ತಿ ಪ್ರತಿ ವಾರ ಕನಿಷ್ಠ 150 ನಿಮಿಷಗಳ ಕಾಲ ವ್ಯಾಯಾಮದಂತಹ ದೈಹಿಕ ಚಟುವಟಿಕೆಯನ್ನು ಮಾಡುವುದು ಮುಖ್ಯವಾಗಿದೆ.
ಹೃದಯರೋಗ: ಹೆಚ್ಚು ಹೊತ್ತು ಕುಳಿತುಕೊಂಡಿರುವುದು ಹೃದ್ರೋಗಕ್ಕೂ ಕೂಡಾ ಕಾರಣವಾಗುತ್ತದೆ. ಹೆಚ್ಚು ಕಾಲ ಕುಳಿತುಕೊಂಡಿರುವವರು ಹೃದಯ ರಕ್ತನಾಳಗಳ ಕಾಯಿಲೆಯಿಂದ ಸಾಯುವ ಅಪಾಯವು ಶೇಕಡಾ 64% ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹೆಚ್ಚು ಕಾಲ ಕುಳಿತುಕೊಳ್ಳುವ ಅಭ್ಯಾಸವು ಅಧಿಕ ರಕ್ತದೊತ್ತಡ, ಕಳಪೆ ಕೊಲೆಸ್ಟ್ರಾಲ್ ಮಟ್ಟಗಳಿಗೆ ಕಾರಣವಾಗಬಹುದು, ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ಇದು ರಕ್ತನಾಳಗಳ ಗೋಡೆಗಳನ್ನು ಹಾನಿಗೊಳಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:42 pm, Wed, 17 May 23