ಘಜಿಯಾಬಾದ್: ಉತ್ತರ ಪ್ರದೇಶದ ಘಜಿಯಾಬಾದ್‌ನಲ್ಲಿ ನಾಯಿ ಕಚ್ಚಿ 14 ವರ್ಷದ ಬಾಲಕ ಈ ವಾರ ಸಾವನ್ನಪ್ಪಿದ್ದ. ರೇಬಿಸ್‌ಗೆ ಬಲಿಯಾದ ಈ ಬಾಲಕನ ಮೇಲೆ 1 ತಿಂಗಳ ಹಿಂದೆ ನಾಯಿ ದಾಳಿ ಮಾಡಿತ್ತು. ಆದರೆ ಭಯದಿಂದ ಆತ ತನ್ನ ಪೋಷಕರಿಗೆ ಈ ಬಗ್ಗೆ ಹೇಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ ಬಾಲಕನ ಸಾವು ಬೀದಿನಾಯಿಗಳ ಕಾಟದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಹಾಗೇ, ಈ ಮಾರಣಾಂತಿಕ ವೈರಲ್ ಕಾಯಿಲೆಯ ಬಗ್ಗೆ ಆತಂಕ ಸೃಷ್ಟಿಸಿದೆ.
ರೇಬೀಸ್ ಮಾರಣಾಂತಿಕವಾದರೂ ತಡೆಗಟ್ಟಬಹುದಾದ ವೈರಲ್ ಕಾಯಿಲೆಯಾಗಿದ್ದು, ಇದು ಸೋಂಕಿತ ಪ್ರಾಣಿ ಕಚ್ಚುವುದರಿಂದ ಹರಡುತ್ತದೆ. ಈ ವೈರಸ್ ಸಸ್ತನಿಗಳ ನರಮಂಡಲದೊಳಗೆ ನುಸುಳುತ್ತದೆ. ಮೆದುಳಿನಲ್ಲಿ ತೀವ್ರವಾದ ಅನಾರೋಗ್ಯವನ್ನು ಉಂಟುಮಾಡುತ್ತದೆ. ನಂತರ ಆ ಜೀವಿ ಬದುಕುಳಿಯಲು ಸಾಧ್ಯವಿಲ್ಲ.
ಇದನ್ನೂ ಓದಿ: Viral: ಅಪರೂಪದ ಪುನರ್ಮಿಲನ; 12 ವರ್ಷಗಳ ನಂತರ ಪೋಷಕರ ಮಡಿಲು ಸೇರಿದ ನಾಯಿ
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ನಾಯಿಗಳಿಂದಲೇ ಬಹುಪಾಲು ಮಾನವನಿಗೆ ರೇಬೀಸ್ ಹರಡುತ್ತದೆ. ಮನುಷ್ಯರಿಗೆ ಹರಡಿರುವ ರೇಬೀಸ್ ಪ್ರಕರಣಗಳಲ್ಲಿ ಶೇ. 99ರಷ್ಟು ನಾಯಿಯಿಂದಲೇ ಬಂದಿದೆ. ರೇಬೀಸ್ ಹರಡುವ ಇತರ ಪ್ರಾಣಿಗಳಲ್ಲಿ ಬೆಕ್ಕುಗಳು, ನರಿಗಳು ಮತ್ತು ಮುಂಗುಸಿಗಳು ಸೇರಿವೆ.
ಮನುಷ್ಯರಿಗೆ ರೇಬೀಸ್ ಹರಡುವಿಕೆಯು ಸಾಮಾನ್ಯವಾಗಿ ಸೋಂಕಿತ ಪ್ರಾಣಿಯಿಂದ ಆಳವಾದ ಕಡಿತ ಅಥವಾ ಪರಚುವಿಕೆಯ ನಂತರ ಸಂಭವಿಸುತ್ತದೆ. ಸೋಂಕಿತ ಪ್ರಾಣಿಯ ಲಾಲಾರಸವು ಕಣ್ಣುಗಳು ಅಥವಾ ಬಾಯಿ ಅಥವಾ ತಾಜಾ ಚರ್ಮದ ಗಾಯಗಳ ಮೂಲಕ ನೇರ ಸಂಪರ್ಕಕ್ಕೆ ಬಂದರೆ ಈ ವೈರಸ್ ಹರಡಬಹುದು.
ಇದನ್ನೂ ಓದಿ: ರೇಬೀಸ್ ಇನ್ನು ಅಧಿಸೂಚಿತ ಕಾಯಿಲೆ, ನಾಯಿ ಕಡಿತದ ರೇಬೀಸ್ ಕಾಯಿಲೆ 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ: ಆರೋಗ್ಯ ಸಚಿವ ಸುಧಾಕರ್
ರೇಬೀಸ್‌ನ ಲಕ್ಷಣಗಳೇನು?:
ರೇಬೀಸ್‌ನ ಆರಂಭಿಕ ಲಕ್ಷಣಗಳು ಕಚ್ಚುವಿಕೆಯ ನಂತರ ಕೆಲವು ದಿನಗಳಿಂದ 1 ವರ್ಷದವರೆಗೆ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ಜ್ವರ, ತಲೆನೋವು, ಸ್ನಾಯು ನೋವು, ಹಸಿವಿನ ಕೊರತೆ, ವಾಕರಿಕೆ ಮತ್ತು ಆಯಾಸದಂತಹ ರೋಗಲಕ್ಷಣಗಳೊಂದಿಗೆ ಕಚ್ಚಿದ ಜಾಗದ ಸುತ್ತಲೂ ಜುಮ್ಮೆನಿಸುವಿಕೆ, ಚುಚ್ಚುವಿಕೆ ಅಥವಾ ತುರಿಕೆಯನ್ನು ಒಳಗೊಂಡಿರುತ್ತದೆ.