ವೈದ್ಯಕೀಯ, ನರ್ಸಿಂಗ್​ ಅಂತಿಮ ವರ್ಷದ ವಿದ್ಯಾರ್ಥಿಗಳು ಕೊವಿಡ್​ ಚಿಕಿತ್ಸಾ ಕೆಲಸಕ್ಕೆ ನಿಯೋಜನೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ನಿರ್ಧಾರ

ಒಂದು ವಾರದ ಹಿಂದೆ ಖ್ಯಾತ ಹೃದಯ ರೋಗ ತಜ್ಞ ಡಾ. ದೇವಿ ಶೆಟ್ಟಿ ಕೊಟ್ಟ ಸಲಹೆಯನ್ನು ಕೇಂದ್ರ ಸರಕಾರ ತೆಗೆದುಕೊಂಡಂತಿದೆ. ಕೊವಿಡ್​ ಸೋಂಕಿತರ ಚಿಕಿತ್ಸೆಗೆ ವೈದ್ಯಕೀಯ ಮತ್ತು ನರ್ಸಿಂಗ್​ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

  • TV9 Web Team
  • Published On - 18:29 PM, 3 May 2021
ವೈದ್ಯಕೀಯ, ನರ್ಸಿಂಗ್​ ಅಂತಿಮ ವರ್ಷದ ವಿದ್ಯಾರ್ಥಿಗಳು ಕೊವಿಡ್​ ಚಿಕಿತ್ಸಾ ಕೆಲಸಕ್ಕೆ ನಿಯೋಜನೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ನಿರ್ಧಾರ
ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೊವಿಡ್ ಪರಿಶೀಲನಾ ಸಮಿತಿಯು ಕೊವಿಡ್ ನಿರ್ವಹಣಾ ಕರ್ತವ್ಯಗಳಲ್ಲಿ ವೈದ್ಯಕೀಯ ಇಂಟರ್ನಿಗಳನ್ನು ಅವರ ಬೋಧಕ ವರ್ಗದ ಮೇಲ್ವಿಚಾರಣೆಯಲ್ಲಿ ನಿಯೋಜಿಸಲು ನಿರ್ಧರಿಸಿತು. ಈ ರೀತಿಯ ಕರ್ತವ್ಯದಲ್ಲಿ ತೊಡಗಿಕೊಳ್ಳುವ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಲಸಿಕೆ ಹಾಕಲು ಸಮಿತಿ ನಿರ್ಧರಿಸಿದೆ.

ಖ್ಯಾತ ಹೃದಯ ತಜ್ಞ ಡಾ. ದೇವಿ ಶೆಟ್ಟಿ ಅವರು ಕೊಟ್ಟ ಸಲಹೆಯನ್ನು ಪ್ರಧಾನಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಪರಿಗಣಿಸಿದಂತಿದೆ. ಒಂದು ವಾರದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದ ವಿಡಿಯೋದಲ್ಲಿ ಡಾ. ಶೆಟ್ಟಿ ಅವರು ಕೊವಿಡ್​ನಿಂದ ಮುಂದೆ ಬರಬಹುದಾದ ಸಂಕಟಗಳ ಬಗ್ಗೆ ವಿವರಿಸುತ್ತ, ಇನ್ನು ಮುಂದೆ ವೈದ್ಯರುಗಳ ಕೊರತೆ ಉಂಟಾಗುತ್ತದೆ. ಆ ಕುರಿತಾಗಿ ಈಗಲೇ ಸರಕಾರ ಎಚ್ಚೆತ್ತುಕೊಂಡು ಕೊನೆಯ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರನ್ನು ಕೊವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಿ ಎಂಬ ಸಲಹೆ ನೀಡಿದ್ದರು.

ಇಂದಿನ ಸಭೆಯಲ್ಲಿ ಕೊವಿಡ್ ನಿಯಂತ್ರಣಕ್ಕೆ ಸಮರ್ಪಕ ಮಾನವ ಸಂಪನ್ಮೂಲಗಳ ಒದಗಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಲಭ್ಯತೆಯನ್ನು ಹೆಚ್ಚಿಸುವಂತಹ ನಿರ್ಧಾರಗಳನ್ನು ತೆಗೆದುಕೊಂಡರು.

ಪರಿಶೀಲನಾ ಸಭೆಯು ನೀಟ್-ಪಿಜಿಯನ್ನು ಕನಿಷ್ಠ ನಾಲ್ಕು ತಿಂಗಳು ಮುಂದೂಡಲು ನಿರ್ಧರಿಸಿತು; ಆಗಸ್ಟ್ 31 ರ ಒಳಗೆ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎಂದು ಸಮಿತಿ ಹೇಳಿದೆ. ಪರೀಕ್ಷೆಗಳು ನಡೆಯುವ ಮೊದಲು ಅಭ್ಯರ್ಥಿಗಳಿಗೆ ಕನಿಷ್ಠ ಒಂದು ತಿಂಗಳ ನೋಟಿಸ್ ನೀಡಲಾಗುವುದು. ಇದರಿಂದಾಗಿ ಕೋವಿಡ್ ಕರ್ತವ್ಯಕ್ಕೆ ಹೆಚ್ಚಿನ ಸಂಖ್ಯೆಯ ವೈದ್ಯರ ಲಭ್ಯವಾಗಲಿದೆ ಎಂಬ ಭರವಸೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಪ್ರಯತ್ನದಲ್ಲಿ, ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ಸೇವೆಗಳನ್ನು ಟೆಲಿ-ಸಮಾಲೋಚನೆ ಮತ್ತು ಸೌಮ್ಯವಾದ ಕೋವಿಡ್ ಪ್ರಕರಣಗಳ ಮೇಲ್ವಿಚಾರಣೆಯಂತಹ ಕೆಲಸಕ್ಕೆ ಬಳಸಿಕೊಳ್ಳಬಹುದು ಸರ್ಕಾರ ಹೇಳಿದೆ. “ಇದು ಕೋವಿಡ್ ಕರ್ತವ್ಯದಲ್ಲಿ ತೊಡಗಿರುವ ಅಸ್ತಿತ್ವದಲ್ಲಿರುವ ವೈದ್ಯರ ಕೆಲಸದ ಹೊರೆ ಕಡಿಮೆ ಮಾಡುತ್ತದೆ ಮತ್ತು ಚಿಕಿತ್ಸೆಯ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತದೆ” ಎಂದು ಪ್ರಧಾನ ಮಂತ್ರಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದರ ಜೊತೆಗೆ ಹಿರಿಯ ವೈದ್ಯರು ಮತ್ತು ದಾದಿಯರ ಮೇಲ್ವಿಚಾರಣೆಯಲ್ಲಿ ಬಿಎಸ್ಸಿ / ಜಿಎನ್‌ಎಂ ಪದವಿ ಗಳಿಸಿದ ಅರ್ಹ ದಾದಿಯರನ್ನು ಪೂರ್ಣ ಸಮಯದ ಕೋವಿಡ್ ನರ್ಸಿಂಗ್ ಕರ್ತವ್ಯದಲ್ಲಿ ಬಳಸಿಕೊಳ್ಳಬೇಕು. ಕೋವಿಡ್ ಸಂಬಂಧಿತ ಕರ್ತವ್ಯಗಳಲ್ಲಿ ತೊಡಗಿರುವ ಎಲ್ಲರನ್ನೂ ಸರ್ಕಾರದ ವಿಮಾ ಯೋಜನೆಯಡಿ ಒಳಪಡಿಸಲಾಗುತ್ತದೆ ಎಂದು ಸಮಿತಿ ಹೇಳಿದೆ.

ಇದನ್ನೂ ಓದಿ: 

ಕೊವಿಡ್ ಲಸಿಕೆ ಸಿದ್ಧಪಡಿಸಲು ಹೊಸ ನಿರ್ದೇಶನವನ್ನು ಕೇಂದ್ರ ಸರ್ಕಾರ ನೀಡಿಲ್ಲ ಎಂಬ ಆರೋಪ ಸರಿಯಲ್ಲ: ಆರೋಗ್ಯ ಸಚಿವಾಲಯ

Oxygen Shortage: ಕೊವಿಡ್​ ಕೇಂದ್ರದಲ್ಲಿಯೇ ಆಕ್ಸಿಜನ್ ಘಟಕ ಸ್ಥಾಪನೆ; ರಾಷ್ಟ್ರರಾಜಧಾನಿಯಲ್ಲೇ ಮೊದಲ ಪ್ರಯೋಗ ಇದು

(PM Narendra Modi led committee decided to deploy MBBS and nursing students to treat Covid patients)