ಮಕ್ಕಳು ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಈ ವಿಚಾರ ಕಾರಣ? ನಿಯಂತ್ರಣ ಹೇಗೆ? ಡಾ. ನಿವೇದಿತಾ ಹೇಳೋದೇನು?
ಅತಿಯಾದರೆ ಅಮೃತವು ವಿಷ ಎನ್ನುವ ಮಾತಿದೆ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನಗಳು ಮುಂದುವರೆದಂತೆ ಮಕ್ಕಳು ಒಳ್ಳೆಯದನ್ನು ಕಲಿಯುವುದಕ್ಕಿಂತ ಕೆಟ್ಟದ್ದನ್ನೇ ಹೆಚ್ಚು ಕಲಿಯುತ್ತಿದ್ದಾರೆ. ಏನು ಅರಿಯದ ವಯಸ್ಸಿನಲ್ಲಿ ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರಬುದ್ಧತೆ ಇಲ್ಲದ ವಯಸ್ಸಿನಲ್ಲಿ ಮಕ್ಕಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕಾರಣವೇನು? ಮಕ್ಕಳಲ್ಲಿ ಇಂತಹ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಗಟ್ಟುವುದು ಹೇಗೆ? ಎನ್ನುವ ಬಗ್ಗೆ ಮಕ್ಕಳ ತಜ್ಞರಾದ ಡಾ. ನಿವೇದಿತಾ ಹೆಚ್ ವಿ ಯವರು ಟಿವಿ 9 ಯೊಂದಿಗೆ ಮಾತನಾಡಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.
ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎನ್ನುವ ಮಾತಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಮಕ್ಕಳು ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಕ್ಕಳ ಮನಸ್ಥಿತಿಯು ಹೀಗೆ ಬದಲಾಗುತ್ತಾ ಹೋದರೆ ಮುಂದಿನ ಭವಿಷ್ಯವೇನು ಎನ್ನುವ ಪ್ರಶ್ನೆಯೊಂದು ಮೂಡಿದೆ. ಹೀಗಾಗಿ ಹೆಚ್ಚುತ್ತಿರುವ ಬಾಲಪರಾಧ ಪ್ರಕರಣಗಳು ಹಾಗೂ ಸೋಶಿಯಲ್ ಮೀಡಿಯಾದ ಪ್ರಭಾವದ ಕುರಿತು ಮಕ್ಕಳ ತಜ್ಞರಾದ ಡಾ. ನಿವೇದಿತಾ ಹೆಚ್ ವಿ ಯವರು ಟಿವಿ 9 ನೊಂದಿಗೆ ಮಾತನಾಡಿದ್ದಾರೆ.
ಮಕ್ಕಳ ಮೇಲೆ ಸೋಶಿಯಲ್ ಮೀಡಿಯಾದ ಪ್ರಭಾವವೇನು?
ಇಂದಿನ ಯುಗದಲ್ಲಿ ಸ್ಮಾರ್ಟ್ ಫೋನ್ಗಳು ಎಲ್ಲರ ಕೈಯಲ್ಲಿಯು ಇದೆ. ಹೀಗಾಗಿ ಸೋಶಿಯಲ್ ಮೀಡಿಯಾದ ಬಳಕೆಯು ಹೆಚ್ಚಾಗುತ್ತಿದೆ. ವೃದ್ಧರಿಂದ ಮಕ್ಕಳವರೆಗೂ ಸೋಶಿಯಲ್ ಮೀಡಿಯಾದಲ್ಲಿ ಕಳೆಯುವುದೇ ಹೆಚ್ಚು. ಹೀಗಾಗಿ ಭಾರತದಂತಹ ದೇಶದಲ್ಲಿ ಮಕ್ಕಳಲ್ಲಿ ಬಾಲಪರಾಧಗಳಲ್ಲಿ ತೊಡಗಿಕೊಳ್ಳುವುದು ಸಂಖ್ಯೆಯೇ ಹೆಚ್ಚು. ಹದಿನೆಂಟು ವರ್ಷಗಳಿಗಿಂತ ಕಡಿಮೆ ವಯಸ್ಸಿನವರು ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡವರ ಸುದ್ದಿಯನ್ನು ಆಗಾಗ ಮಾಧ್ಯಮದಲ್ಲಿ ಕೇಳುತ್ತಿದ್ದೇವೆ. ಭಾರತ ದೇಶದಲ್ಲಿ ಜನಸಂಖ್ಯೆಯ ಶೇಕಡಾ 40 ರಷ್ಟು ಮಕ್ಕಳಿದ್ದಾರೆ. ಇವರೇ ನಮ್ಮ ಮುಂದಿನ ಭವಿಷ್ಯ. ಆದರೆ 2022 ರ ಅಧ್ಯಯನ ಪ್ರಕಾರವಾಗಿ ನಗರ ಪ್ರದೇಶದಲ್ಲಿ ಶೇಕಡಾ 80 ರಷ್ಟು 13 ರಿಂದ 17 ವಯಸ್ಸಿನ ಮಕ್ಕಳು ಒಂದು ಗಂಟೆಗಿಂತ ಹೆಚ್ಚು ಕಾಲ ಸೋಶಿಯಲ್ ಮೀಡಿಯಾದಲ್ಲೇ ಕಳೆಯುತ್ತಿದ್ದು, ಇದರಿಂದ ಧನಾತ್ಮಕ ಪರಿಣಾಮಕ್ಕಿಂತ ಋಣಾತ್ಮಕ ಪರಿಣಾಮಗಳೇ ಹೆಚ್ಚು.
ಬಾಲಪರಾಧ ಹೆಚ್ಚಾಗಲು ಕಾರಣಗಳೇನು?
ಮಕ್ಕಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಹಿಂದೆ ಕಾರಣಗಳು ಹಲವು ಇರಬಹುದು. ಈಗಿನ ದಿನಗಳಲ್ಲಿ ಸುಲಭವಾಗಿ ದೊರೆಯುವ ಸಿಮ್ಕಾರ್ಡ್ಗಳು ಹಾಗೂ ಇಂಟರ್ನೆಟ್ ಸೌಲಭ್ಯ ಮಕ್ಕಳನ್ನು ದಾರಿ ತಪ್ಪಿಸಲು ಪ್ರಮುಖ ಕಾರಣವಾಗಿದೆ. ಅದರೊಂದಿಗೆ ಅತಿಯಾದ ಸೋಶಿಯಲ್ ಮೀಡಿಯಾ ಬಳಕೆ, ಕೌಟುಂಬಿಕ ಸಮಸ್ಯೆ, ಬಡತನ, ಗೆಳೆಯರ ಒತ್ತಡ, ಮಕ್ಕಳ ಮೇಲಿನ ಪೋಷಕರ ನಿರ್ಲಕ್ಷ್ಯ, ಮಾದಕ ದ್ರವ್ಯಗಳಾದ ಧೂಮಪಾನ, ಮದ್ಯಪಾನ, ಡ್ರಗ್ಸ್ ಸೇವನೆಯಿಂದಾಗಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಈ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂದಿದ್ದಾರೆ.
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳೇನು?
ಮಕ್ಕಳಲ್ಲಿ ಸೋಶಿಯಲ್ ಮೀಡಿಯಾಗಳ ಬಳಕೆಯಿಂದ ಏನಾಗಬಹುದು ಎನ್ನುವ ಬಗ್ಗೆ ಯೋಚಿಸುವ ಪ್ರಬುದ್ಧತೆಯಿಲ್ಲದ ಕಾರಣ ಋಣಾತ್ಮಕ ಪರಿಣಾಮಗಳೇ ಹೆಚ್ಚು. ಭಾರತ ದೇಶದಲ್ಲಿ ಶೇಕಡಾ 30 ರಷ್ಟು ಮಕ್ಕಳು ಅಶ್ಲೀಲಯ ವಿಡಿಯೋಗಳನ್ನು ನೋಡುತ್ತಾರೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವ ಹೆಚ್ಚಿನ ಮಕ್ಕಳಲ್ಲಿ ಸೈಬರ್ ದೌರ್ಜನ್ಯ, ಬೆದರಿಕೆ, ಖಿನ್ನತೆ, ಒಂಟಿತನ, ಆಕ್ರಮಣ ಕಾರಿ ವರ್ತನೆ, ಅನಿಯಂತ್ರಿತ ವರ್ತನೆಗಳಂತಹ ಸಮಸ್ಯೆಗಳು ಕಾಡುತ್ತದೆ. ಈ ಹಿಂಸಾತ್ಮಕ ಲೈಂಗಿಕ ವಿಷಯಗಳನ್ನು ನೋಡುವುದರಿಂದ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದೇ ಹೆಚ್ಚು.
ಇದನ್ನೂ ಓದಿ: ಆಷಾಢ ಮಾಸದಲ್ಲಿ ಗರ್ಭ ಧರಿಸಬಾರದು ಯಾಕೆ? ಡಾ. ಅಶೋಕ್ ಕೃಷ್ಣ ಭಟ್ ಹೇಳುವುದೇನು?
ಮಕ್ಕಳು ಅತಿಯಾಗಿ ಮೊಬೈಲ್ ಬಳಸುವುದನ್ನು ನಿಯಂತ್ರಿಸುವುದು ಹೇಗೆ?
ಕಳೆದ ಕೆಲವು ವರ್ಷಗಳಿಂದ ಸೋಶಿಯಲ್ ಮೀಡಿಯಾದಿಂದಲೇ ಬಾಲಾಪರಾಧಗಳು ಹೆಚ್ಚಾಗುತ್ತಿದೆ ಎನ್ನುವುದು ಅಧ್ಯಯನದಿಂದಲೇ ತಿಳಿದು ಬಂದಿದೆ. ಇದೊಂದು ಗಂಭೀರವಾದ ಸಮಸ್ಯೆಯಾಗಿರುವ ಕಾರಣ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ. ಹೀಗೆ ಮುಂದುವರೆದರೆ ಜೈಲು ವಾಸದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ, ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಹಾಗೂ ನಿರುದ್ಯೋಗ ಸಮಸ್ಯೆಗಳು ಕಾಡಬಹುದು. ಹೀಗಾಗಿ ಪೋಷಕರು ಹಾಗೂ ಶಿಕ್ಷಕ ವರ್ಗವು ಮಕ್ಕಳ ನಡೆ ನುಡಿಗಳ ಬಗ್ಗೆ ಹೆಚ್ಚು ಗಮನವಹಿಸುವುದು ಅವಶ್ಯಕ.
- ತಂದೆ ತಾಯಿಯು ಸೋಶಿಯಲ್ ಮೀಡಿಯಾದ ಬಗ್ಗೆ ಜ್ಞಾನವನ್ನು ಹೊಂದಿರುವುದು ಅಗತ್ಯ. ಇದರಿಂದ ಮಕ್ಕಳಿಗೆ ಸರಿ ತಪ್ಪುಗಳ ಮನವರಿಕೆ ಮಾಡಿಕೊಡಬಹುದು.
- ಪೋಷಕರು ಮಕ್ಕಳಿಗೆ ಹೆಚ್ಚು ಸಮಯ ಮೊಬೈಲ್ ಬಳಸದಂತೆ ನೋಡಿಕೊಳ್ಳಬೇಕು. ಮಕ್ಕಳು ಮೊಬೈಲ್ ಬಳಸುವ ಅವಧಿಯು ಒಂದು ಗಂಟೆಗಿಂತ ಹೆಚ್ಚು ಸಮಯ ಮೀರಬಾರದು.
- ಪೋಷಕರು ವೆಬ್ ಹಿಸ್ಟರಿ ನೋಡುವುದರ ಮೂಲಕ ಹದಿಹರೆಯದ ವಯಸ್ಸಿನ ಮಕ್ಕಳು ಮೊಬೈಲ್ ನಲ್ಲಿ ಏನು ನೋಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯ.
- ಪೋಷಕರು ಮಕ್ಕಳ ಬಿಡುವಿನ ಸಮಯದಲ್ಲಿ ಪುಸ್ತಕ ಓದುವ ಅಭ್ಯಾಸ, ಯೋಗಾಭ್ಯಾಸ, ಕರಕುಶಲ ವಸ್ತುಗಳ ತಯಾರಿಕೆ ಹೀಗೆ ಇನ್ನಿತ್ತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.
- ಶಾಲೆಯಲ್ಲಿ ಶಿಕ್ಷಕರು ಕೂಡ ಮಕ್ಕಳ ನಡವಳಿಕೆಗಳು, ಓದುವಿಕೆಯಲ್ಲಿ ಮಕ್ಕಳ ತೊಡಗುವಿಕೆ ಎಷ್ಟರ ಮಟ್ಟಿಗಿದೆ ಎನ್ನುವುದರ ಸೂಕ್ತ ಮಾಹಿತಿಯನ್ನು ಮಕ್ಕಳ ಹೆತ್ತವರಿಗೆ ತಿಳಿಸುತ್ತಿರಬೇಕು.
- ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಆಪ್ ನಲ್ಲಿರುವ ಹೆತ್ತವರು, ಪೋಷಕರ ನಿಯಂತ್ರಣ ವೈಶಿಷ್ಟ್ಯಗಳನ್ನು ಬಳಸಿಕೊಳ್ಳುವುದು ಉತ್ತಮ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರುವ ಹಾನಿಕಾರಕ ವಿಷಯಗಳನ್ನು ನೋಡುವುದನ್ನು ತಪ್ಪಿಸುತ್ತದೆ. ಮಕ್ಕಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತವೆ ಎಂದಿದ್ದಾರೆ ಮಕ್ಕಳ ತಜ್ಞರು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ