ಮನುಷ್ಯನ ಆಹಾರ ಪದ್ಧತಿ, ಜೀವನ ಶೈಲಿ ಬದಲಾಗುತ್ತಾ ಹೋದಂತೆ ಕೆಲವೊಂದಷ್ಟು ಕಾಯಿಲೆಗಳು ವಯಸ್ಸಿನಷ್ಟೇ ಸಹಜವಾಗಿ ದೇಹಕ್ಕೆ ಅಂಟಿಕೊಳ್ಳುತ್ತವೆ ಎಂಬಂತಾಗಿದೆ. ಅದರಲ್ಲಿ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳು ತೀರಾ ಸಾಮಾನ್ಯವೆಂಬಂತಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಯುವ ಸಮುದಾಯವನ್ನೂ ಬಾಧಿಸುತ್ತಿವೆ. ಮಧುಮೇಹ ಸಮಸ್ಯೆ ಮೇಲ್ನೋಟಕ್ಕೆ ಸಾಮಾನ್ಯ ಎನ್ನಿಸಿದರೂ ಅದು ದೇಹದ ಮೇಲೆ ಬೀರುವ ಪರಿಣಾಮ ಗಂಭೀರವಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಸಿಗದೆ ಎಷ್ಟೋ ಜನ ಹೈರಾಣಾಗಿ ಹೋಗುತ್ತಾರೆ. ಸುಸ್ತು, ಬಳಲಿಕೆ, ನಿಶ್ಶಕ್ತಿ ಸೇರಿದಂತೆ ಹಲವು ಅಡ್ಡಪರಿಣಾಮಗಳನ್ನೂ ಹೊತ್ತು ಬರುವ ಮಧುಮೇಹವನ್ನು ನಿಯಂತ್ರಿಸಲು ಕೆಲ ಸರಳ ಸೂತ್ರಗಳನ್ನು ನೀಡಲಾಗಿದೆ. ವೈದ್ಯರ ಸಲಹೆ, ಸೂಚನೆಯ ಜತೆಗೆ ಇವನ್ನು ಪಾಲಿಸಿದರೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಕೊಂಚ ಸುಲಭವಾಗಬಹುದು ಎನ್ನುವುದಷ್ಟೇ ಈ ಲೇಖನದ ಉದ್ದೇಶ.
ನಿಯಮಿತ ಆಹಾರ ಸೇವನೆ ಮತ್ತು ವ್ಯಾಯಾಮ
ಮಧುಮೇಹಿಗಳು ಆಹಾರದ ವಿಚಾರದಲ್ಲಿ ನಿಗಾ ವಹಿಸಲೇಬೇಕು. ಬೇಕಾಬಿಟ್ಟಿ ತಿನ್ನುವುದು, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದು, ಬಾಯಿ ರುಚಿಗೆ ಹೆಚ್ಚು ಮಹತ್ವ ಕೊಟ್ಟು ಆರೋಗ್ಯವನ್ನು ಕಡೆಗಣಿಸುವುದು ಅವರ ಮೇಲೆ ಯಾವ ಕ್ಷಣದಲ್ಲಾದರೂ ಅಡ್ಡ ಪರಿಣಾಮ ಬೀರಬಹುದು. ಇದು ಎಲ್ಲರಲ್ಲೂ ಒಂದೇ ತೆರನಾಗಿ ಇರುವುದಿಲ್ಲವಾದರೂ ತಕ್ಕಮಟ್ಟಿಗೆ ಎಚ್ಚರಿಕೆ ವಹಿಸುವುದು ಅಗತ್ಯ. ಬಹುಮುಖ್ಯವಾಗಿ ಮಧುಮೇಹ ಉಳ್ಳವರು ನಾಲ್ಕೈದು ಗಂಟೆಗಳ ಕಾಲ ಏನೂ ಸೇವಿಸದೇ ಇರುವುದು ಒಳ್ಳೆಯದಲ್ಲ. ಹೀಗಾಗಿ, ಪ್ರತಿ 2.5ರಿಂದ 3 ತಾಸಿಗೊಮ್ಮೆ ನಿಯಮಿತವಾಗಿ ಆರೋಗ್ಯಕರ ಆಹಾರ ಸೇವಿಸುತ್ತಿರಬೇಕು. ಹೀಗೆ ನಿಗದಿತ ಸಮಯಕ್ಕೆ ಸರಿಯಾಗಿ ಏನಾದರೂ ಆಹಾರ ಸೇವಿಸುತ್ತಿರುವುದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮಪ್ರಮಾಣದಲ್ಲಿ ಕಾಪಾಡಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಆಹಾರ ಸೇವನೆಯ ಜತೆಗೆ ದೈಹಿಕ ವ್ಯಾಯಾಮವೂ ಅತ್ಯಗತ್ಯವಾಗಿದ್ದು, ಅದು ಆರೋಗ್ಯ ವರ್ಧನೆಗೆ ಮತ್ತಷ್ಟು ಸಹಾಯ ಮಾಡುತ್ತದೆ. ಆದರೆ, ಸಕ್ಕರೆ ಪ್ರಮಾಣ ತೀರಾ ಕಡಿಮೆ ಅಥವಾ ತೀರಾ ಜಾಸ್ತಿ ಇರುವ ಸಮಯದಲ್ಲಿ ದೈಹಿಕ ವ್ಯಾಯಾಮ ಮಾಡದೇ ಇರುವುದು ಒಳಿತು.
ಕೊಬ್ಬಿನಾಂಶ ನಿಯಂತ್ರಣ
ಮಧುಮೇಹಿಗಳಿಗೆ ದೇಹದಲ್ಲಿ ಉತ್ತಮ ಕೊಬ್ಬಿನಾಂಶದ ಪ್ರಮಾಣ ಕಡಿಮೆಯಾಗಿ, ಬೇಡದೇ ಇರುವ ಅಥವಾ ಅನಗತ್ಯ ಕೊಬ್ಬು ಹೆಚ್ಚಳವಾಗುವುದು ಕೂಡಾ ಒಂದು ಪ್ರಮುಖ ಸಮಸ್ಯೆ. ಇದು ಹೃದಯ ಸಂಬಂಧಿ ತೊಂದರೆ ಹಾಗೂ ಸ್ಟ್ರೋಕ್ನಂತಹ ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಕಾರಣ ಕೊಬ್ಬಿನಾಂಶ ನಿಯಂತ್ರಣದತ್ತ ನಿಗಾ ವಹಿಸಲೇಬೇಕು. ಆದ್ದರಿಂದ ಮಧುಮೇಹ ಸಮಸ್ಯೆ ಹೊಂದಿದವರು ಫಾಸ್ಟ್ ಫುಡ್, ಪಿಜ್ಜಾ, ಬರ್ಗರ್, ಕರಿದ ತಿಂಡಿಗಳಿಂದ ಆದಷ್ಟು ದೂರವಿರಲೇಬೇಕು.
ರಕ್ತದಲ್ಲಿನ ಸಕ್ಕರೆ ಪ್ರಮಾಣದ ನಿಯಮಿತ ಪರೀಕ್ಷೆ
ಒಮ್ಮೆ ಮಧುಮೇಹ ಕಾಣಿಸಿಕೊಂಡಿತೆಂದರೆ ದೇಹದ ಆರೋಗ್ಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವತ್ತ ಮೊದಲಿಗಿಂತಲೂ ತುಸು ಹೆಚ್ಚೇ ಗಮನ ಕೊಡಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ತೀರಾ ಹೆಚ್ಚಾದರೂ, ತೀರಾ ಕಡಿಮೆಯಾದರೂ ಅಪಾಯ ಕಟ್ಟಿಟ್ಟ ಬುತ್ತಿಯಾದ್ದರಿಂದ ಸಮತೋಲನ ಸ್ಥಿತಿ ಕಾಯ್ದುಕೊಳ್ಳುವುದು ಅಗತ್ಯ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆ ಮಾಡಿಕೊಳ್ಳಲು ಒಂದು ಗ್ಲೂಕೋಮೀಟರ್ ತರಿಸಿಟ್ಟುಕೊಳ್ಳುವುದು ಉತ್ತಮ. ಕನಿಷ್ಠ ಮೂರು ತಿಂಗಳಿಗೊಮ್ಮೆ ಅಥವಾ ಅದು ತಪ್ಪಿದರೂ ವರ್ಷಕ್ಕೆ ಎರಡು ಬಾರಿಯಾದರೂ ಈ ಪರೀಕ್ಷೆ ನಡೆಸುವುದು ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸಹಕಾರಿ.
ಔಷಧ ಸೇವನೆ
ಹೆಚ್ಚಿನವರು ಆರೋಗ್ಯ ತಪಾಸಣೆ ನಡೆಸಿದ ನಂತರ ಮಧುಮೇಹವಿದೆ ಎಂದು ಗೊತ್ತಾದ ತಕ್ಷಣ ಗಾಬರಿಯಾಗಿ ತೀರಾ ಕಾಳಜಿ ವಹಿಸಲಾರಂಭಿಸುತ್ತಾರೆ. ಆದರೆ, ದಿನ ಕಳೆದಂತೆ ಅದರ ಬಗ್ಗೆ ನಿರ್ಲಕ್ಷ್ಯ ತೋರಲಾರಂಭಿಸಿ ಔಷಧ, ಮಾತ್ರೆ ಯಾವುದನ್ನೂ ಸರಿಯಾಗಿ ಸೇವಿಸದೇ ನನಗೇನೂ ಆಗುವುದಿಲ್ಲ ಎಂಬಂತೆ ಇರುತ್ತಾರೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ಮತ್ತಷ್ಟು ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಹೀಗಾಗಿ ವೈದ್ಯರು ನೀಡಿದ ಮಾತ್ರೆ, ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ಸೇವಿಸಲೇಬೇಕು.
ಬೊಜ್ಜು ನಿವಾರಣೆ
ಮಧುಮೇಹ ನಿಯಂತ್ರಣ ಸಾಧ್ಯವಾಗಬೇಕೆಂದರೆ ಬೊಜ್ಜು ಕರಗಿಸುವುದು ಅತ್ಯಗತ್ಯ. ದೇಹದಲ್ಲಿ ಅಧಿಕ ಪ್ರಮಾಣದ ಬೊಜ್ಜು ಇದ್ದರೆ ಯಾವಾಗ ಕೊಬ್ಬಿನಾಂಶ ಮೇಲೆ ಹೋಗುತ್ತದೆ ಎಂದು ಊಹಿಸಲಿಕ್ಕೂ ಆಗುವುದಿಲ್ಲ. ಅಲ್ಲದೇ, ಅದು ಹೃದಯ ಸಂಬಂಧಿ ಸಮಸ್ಯೆಗಳಿಂದ ಹಿಡಿದು ಬೇರೆ ಬೇರೆ ತೊಂದರೆಗಳಿಗೆ ಹಾದಿಯಾಗುವುದರಿಂದ ಬೊಜ್ಜು ಕರಗಿಸುವುದಕ್ಕೆ ಗಮನ ಹರಿಸಬೇಕು.
ಇದನ್ನೂ ಓದಿ:
ಮಧುಮೇಹ ನಿಯಂತ್ರಣಕ್ಕೆ ಪಾಲಿಸಬಹುದಾದ ಸಲಹೆಗಳು
’Jamun Health Benefits: ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ನೇರಳೆ ಹಣ್ಣನ್ನು ಸೇವಿಸಿ