ಕೊರೊನಾ ಲಸಿಕೆ ಎರಡನೇ ಡೋಸ್​ ಪಡೆಯುವವರ ಗಮನಕ್ಕೆ: ನಿಮಗೆ ನಿಗದಿಪಡಿಸಿರುವ ದಿನಾಂಕವನ್ನು ಹೆಚ್ಚು ಮುಂದೂಡಬೇಡಿ

ಕೊರೊನಾ ಲಸಿಕೆ ಎರಡನೇ ಡೋಸ್​ ಪಡೆಯುವವರ ಗಮನಕ್ಕೆ: ನಿಮಗೆ ನಿಗದಿಪಡಿಸಿರುವ ದಿನಾಂಕವನ್ನು ಹೆಚ್ಚು ಮುಂದೂಡಬೇಡಿ
ಪ್ರಾತಿನಿಧಿಕ ಚಿತ್ರ

ಕೊವ್ಯಾಕ್ಸಿನ್​ ಲಸಿಕೆಯ ಮೊದಲ ಡೋಸ್ ಉತ್ಪಾದಿಸುವ ಪ್ರತಿಕಾಯಗಳ ಪ್ರಮಾಣ ಕೊವಿಶೀಲ್ಡ್​ಗಿಂತ ಕಡಿಮೆ ಇರುವ ಕಾರಣಕ್ಕಾಗಿ ಈ ಪ್ರತ್ಯೇಕ ನಿಯಮ ರೂಪಿಸಲಾಗಿದೆ. ಹಾಗಿದ್ದರೂ ಸಮಯಕ್ಕೆ ಸರಿಯಾಗಿ ಕೊವ್ಯಾಕ್ಸಿನ್​ ಎರಡು ಡೋಸ್ ತೆಗೆದುಕೊಂಡುಬಿಟ್ಟರೆ ನಂತರ ಅದು ಪರಿಣಾಮಕಾರಿಯಾಗುತ್ತದೆ ಎನ್ನುವುದು ಗಮನಾರ್ಹ.

TV9kannada Web Team

| Edited By: Skanda

Jun 11, 2021 | 1:41 PM

ಕೊರೊನಾ ಎರಡನೇ ಅಲೆ ಉಚ್ಛ್ರಾಯ ಸ್ಥಿತಿಗೆ ತಲುಪಿ ಇಳಿಮುಖವಾಗುತ್ತಿರುವಂತೆ ತೋರುತ್ತಿದೆ. ಆದರೂ, ಮೂರನೇ ಅಲೆಯ ಸಾಧ್ಯತೆಯನ್ನು ತಜ್ಞರು ಈಗಾಗಲೇ ಎಚ್ಚರಿಕೆ ರೂಪದಲ್ಲಿ ನೀಡಿರುವುದರಿಂದ ಖಂಡಿತವಾಗಿಯೂ ಎರಡನೇ ಅಲೆ ಕಡಿಮೆಯಾಗುತ್ತಿದೆ ಎಂದು ಮೈಮರೆಯುವಂತಿಲ್ಲ. ಸದ್ಯಕ್ಕೆ ಕೊರೊನಾದಿಂದ ದೇಹಕ್ಕೆ ಆಗಬಹುದಾದ ಹಾನಿ ತಡೆಗಟ್ಟಲು ಲಸಿಕೆಯೊಂದೇ ಲಭ್ಯವಿರುವ ಅಸ್ತ್ರವಾಗಿರುವುದರಿಂದ ಮೂರನೇ ಅಲೆ ಏಳುವ ಮೊದಲು ದೇಶದ ಎಲ್ಲಾ ನಾಗರೀಕರು ಲಸಿಕೆ ತೆಗೆದುಕೊಳ್ಳುವಂತೆ ಆಗಬೇಕೆಂದು ಸರ್ಕಾರ ಯೋಜನೆ ರೂಪಿಸುತ್ತಿದೆ. ಆದರೆ, ಅವ್ಯವಸ್ಥೆ, ಅಜಾಗರೂಕತೆ, ನಿರ್ಲಕ್ಷ್ಯಗಳ ಕಾರಣದಿಂದ ಎಷ್ಟೋ ಮಂದಿ ಲಸಿಕೆಯಿಂದ ವಂಚಿತರಾಗುತ್ತಿದ್ದು, ಎರಡನೇ ಡೋಸ್ ಪಡೆಯದೇ ಉಳಿದವರು ಕೂಡಾ ಇದ್ದಾರೆ. ಹಾಗಾದರೆ ಎರಡನೇ ಡೋಸ್ ಲಸಿಕೆ ಪಡೆಯಲಿಲ್ಲವೆಂದರೆ ಏನಾಗುತ್ತದೆ? ಎಂಬ ಬಗ್ಗೆ ಇಲ್ಲಿ ಸಂಕ್ಷಿಪ್ತ ವಿವರವನ್ನು ಕಟ್ಟಿಕೊಡಲಾಗಿದೆ.

ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿರುವ ಕೊವಿಶೀಲ್ಡ್​ ಲಸಿಕೆ ಹಾಗೂ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್​ ಲಸಿಕೆ ಇವೆರಡನ್ನೂ ಭಾರತದಲ್ಲಿ ಆರಂಭದಿಂದ ವಿತರಿಸಲಾಗುತ್ತಿದೆ. ಆದರೆ, ಸದ್ಯ ಕೊವ್ಯಾಕ್ಸಿನ್​ ಲಸಿಕೆಯ ಅಭಾವ ಸೃಷ್ಟಿಯಾಗಿದ್ದು ಈಗೇನಿದ್ದರೂ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಆದ್ಯತೆ ಮೇರೆಗೆ ಕೊವ್ಯಾಕ್ಸಿನ್ ನೀಡಲಾಗುತ್ತಿದೆ. ಆದರೆ, ಎಷ್ಟೋ ಕಡೆ ಎರಡನೇ ಡೋಸ್ ಪಡೆಯುವವರಿಗೆ ನೀಡಿದ ದಿನಾಂಕ ಮುಗಿದರೂ ಲಸಿಕೆ ಸಿಗದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಅಂದಹಾಗೆ, ಕೊವಿಶೀಲ್ಡ್ ಅಥವಾ ಕೊವ್ಯಾಕ್ಸಿನ್​ ಲಸಿಕೆಗಳನ್ನು ಪಡೆಯುವವರು ಎರಡು ಡೋಸ್​ ಪಡೆದರೆ ಮಾತ್ರ ಅದು ದೇಹದ ಮೇಲೆ ಪರಿಣಾಮ ಬೀರುವುದು ಸಾಧ್ಯ ಎನ್ನುವುದನ್ನು ತಜ್ಞರು ಪದೇ ಪದೇ ಹೇಳಿದ್ದಾರೆ. (ನೆನಪಿಡಿ: ಈಗಿರುವ ನಿಯಮದ ಪ್ರಕಾರ ಮೊದಲ ಡೋಸ್​ನಲ್ಲಿ ಯಾವ ಕಂಪೆನಿಯ ಲಸಿಕೆ ಪಡೆದಿರುತ್ತೀರೋ ಎರಡನೇ ಡೋಸ್​ಗೂ ಕಡ್ಡಾಯವಾಗಿ ಅದನ್ನೇ ತೆಗೆದುಕೊಳ್ಳಬೇಕು) ಮೊದಲ ಡೋಸ್​ ಲಸಿಕೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪಾದನೆಗೆ ಸಹಕರಿಸಿದರೆ ಎರಡನೇ ಡೋಸ್​ ಅದನ್ನು ಇನಷ್ಟು ಬಲಗೊಳಿಸಿ ವೈರಾಣುವಿನ ವಿರುದ್ಧ ಹೋರಾಡಲು ದೇಹಕ್ಕೆ ಅಗತ್ಯ ಶಕ್ತಿ ನೀಡುತ್ತದೆ. ಹೀಗಾಗಿ ಎರಡು ಡೋಸ್​ ಪಡೆದವರ ದೇಹ ಮಾತ್ರ ಕೊರೊನಾ ವಿರುದ್ಧ ಸಶಕ್ತವಾಗಿ ಹೋರಾಡಬಲ್ಲದು.

ಆದರೆ, ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಇವೆರೆಡೂ ಲಸಿಕೆಗಳಿಗೂ ಮೊದಲ ಹಾಗೂ ಸೆಕೆಂಡ್​ ಡೋಸ್​ಗಳ ನಡುವಿನ ಅಂತರ ವಿಭಿನ್ನವಾಗಿರುವುದು ಕೆಲವರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈಗಿರುವ ನಿಯಮದ ಪ್ರಕಾರ ಮೊದಲ ಡೋಸ್ ಕೊವಿಶೀಲ್ಡ್ ಪಡೆದವರು 12ರಿಂದ 16ವಾರಗಳ ಅಂತರದಲ್ಲಿ ಎರಡನೇ ಡೋಸ್​ ಪಡೆಯಬೇಕು. ಅಂತೆಯೇ, ಮೊದಲ ಡೋಸ್ ಕೊವ್ಯಾಕ್ಸಿನ್​ ಪಡೆದವರು 6 ವಾರಗಳ ಅಂತರದಲ್ಲಿ ಎರಡನೇ ಡೋಸ್ ಸ್ವೀಕರಿಸಬೇಕು.

ಕೊವ್ಯಾಕ್ಸಿನ್​ಗೆ ಕಡಿಮೆ ಅಂತರ ಏಕೆ? ತಜ್ಞರು ಹೇಳುವ ಪ್ರಕಾರ ಕೊವ್ಯಾಕ್ಸಿನ್​ ಲಸಿಕೆಯ ಮೊದಲ ಡೋಸ್ ಉತ್ಪಾದಿಸುವ ಪ್ರತಿಕಾಯಗಳ ಪ್ರಮಾಣ ಕೊವಿಶೀಲ್ಡ್​ಗಿಂತ ಕಡಿಮೆ ಇರುವ ಕಾರಣಕ್ಕಾಗಿ ಈ ಪ್ರತ್ಯೇಕ ನಿಯಮ ರೂಪಿಸಲಾಗಿದೆ. ಹಾಗಿದ್ದರೂ ಸಮಯಕ್ಕೆ ಸರಿಯಾಗಿ ಕೊವ್ಯಾಕ್ಸಿನ್​ ಎರಡು ಡೋಸ್ ತೆಗೆದುಕೊಂಡುಬಿಟ್ಟರೆ ನಂತರ ಅದು ಪರಿಣಾಮಕಾರಿಯಾಗುತ್ತದೆ ಎನ್ನುವುದು ಗಮನಾರ್ಹ.

ನಿಗದಿಪಡಿಸಿದ ದಿನಾಂಕಕ್ಕೆ ಎರಡನೇ ಡೋಸ್ ಪಡೆಯದಿದ್ದರೆ ಏನು ಸಮಸ್ಯೆ? ಕೊರೊನಾ ಲಸಿಕೆ ಅಭಾವದ ಹೊರತಾಗಿಯೂ ಜನ ಎರಡನೇ ಡೋಸ್​ನಿಂದ ವಂಚಿತರಾಗುತ್ತಿರುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ವೈಯಕ್ತಿಕ ಸಮಸ್ಯೆಯಿಂದ ಹಿಡಿದು ಮೊದಲ ಡೋಸ್ ಪಡೆದಾಗ ಜ್ವರ ಬಂದಿತ್ತೆಂಬ ಭಯವೂ ಹಿಂಜರಿಕೆಗೆ ಈಡುಮಾಡುತ್ತಿದೆ. ಆದರೆ, ನೆನಪಿಡಲೇಬೇಕಾದ ವಿಚಾರವೆಂದರೆ ಎರಡನೇ ಡೋಸ್​ ಲಸಿಕೆಯನ್ನು ನಿಮಗೆ ನಿಗದಿಪಡಿಸಿದ ದಿನಾಂಕಕ್ಕೆ ಆದಷ್ಟು ಹತ್ತಿರದಲ್ಲೇ ತೆಗೆದುಕೊಳ್ಳುವುದು ಅತ್ಯಂತ ಸೂಕ್ತ. ತೆಗೆದುಕೊಂಡರಾಯಿತು ಎಂದು ತಡಮಾಡುತ್ತಾ ಹೋದಂತೆ ನಿಮ್ಮ ದೇಹದಲ್ಲಿ ಮೊದಲ ಡೋಸ್ ಪ್ರಭಾವ ಕ್ಷೀಣಿಸುವ ಸಾಧ್ಯತೆ ಇರುವುದರಿಂದ ನಿಗದಿತ ಅಂತರದೊಳಗೆ ಲಸಿಕೆ ಪಡೆಯದಿದ್ದರೆ ಮೊದಲ ಡೋಸ್ ವ್ಯರ್ಥವಾಗುವ ಅಪಾಯವಿದೆ.

ಅಬ್ಬಬ್ಬಾ ಅಂದರೂ ಎಷ್ಟು ದಿನ ಕಾಯಬಹುದು? ಒಂದು ವೇಳೆ ಮೊದಲ ಡೋಸ್ ಲಸಿಕೆ ಪಡೆದ ನಂತರ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿದ್ದರೆ ಅಂತಹವರು ನಿಗದಿತ ಸಮಯಕ್ಕಿಂತ ಹೆಚ್ಚುವರಿಯಾಗಿ 2ರಿಂದ 3 ತಿಂಗಳು ಬಿಟ್ಟು ಎರಡನೇ ಡೋಸ್ ಲಸಿಕೆ ಪಡೆಯಬಹುದು. ಏಕೆಂದರೆ ನಿಮ್ಮ ದೇಹವನ್ನು ಕೊರೊನಾ ವೈರಾಣು ಪ್ರವೇಶಿಸಿದಾಗ ಸ್ವಾಭಾವಿಕವಾಗಿ ಪ್ರತಿಕಾಯ ವೃದ್ಧಿಸುವ ಕೆಲಸ ಆಗಲಿದ್ದು, ಅದು ಮೊದಲ ಡೋಸ್ ಲಸಿಕೆಯ ಪ್ರಭಾವದಂತೆಯೇ ಹೆಚ್ಚು ದಿನಗಳ ಕಾಲ ಪ್ರತಿಕಾಯವನ್ನು ದೇಹದಲ್ಲಿ ಉಳಿಸಲು ಸಹಾಯ ಮಾಡಲಿದೆ. ಅದರ ಹೊರತಾಗಿ ಉಳಿದವರು ನಿಗದಿತ ಸಮಯಕ್ಕಿಂತ ಹೆಚ್ಚು ತಡಮಾಡುವುದು ಸೂಕ್ತವಲ್ಲ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೋವಿಡ್​ ಲಸಿಕೆಯ ತೀವ್ರ ಅಭಾವ, ಎರಡನೇ ಡೋಸ್​ ಪಡೆಯಲು ತೊಂದರೆ 

Explainer: ಲಸಿಕೆ ಸರ್ಟಿಫಿಕೇಟ್​ನಲ್ಲಿ ಯೂನಿಕ್ ಹೆಲ್ತ್ ಐಡಿ: ಏನಿದರ ವೈಶಿಷ್ಟ್ಯ? ಏನೆಲ್ಲಾ ಅನುಕೂಲ? ಏಕಿಷ್ಟು ಗೊಂದಲ?

Follow us on

Related Stories

Most Read Stories

Click on your DTH Provider to Add TV9 Kannada