ಹರ್ನಿಯಾ ಎಂದರೇನು? ಹೇಗೆ ರೂಪುಗೊಳ್ಳುತ್ತದೆ? ಈ ಭಾಗದಲ್ಲಿ ಯಾಕೆ ಕಾಣಿಸಿಕೊಳ್ಳುತ್ತದೆ, ಇಲ್ಲಿದೆ ವೈದ್ಯರ ಉತ್ತರ
ಹರ್ನಿಯಾ ಹೇಗೆ ಉಂಟಾಗುತ್ತದೆ ಎಂಬುದಕ್ಕೆ ಹಲವರು ಹಲವು ರೀತಿಯ ಕಾರಣ ಕೊಡಬಹುದು. ಆದರೆ ಸಾಮಾನ್ಯವಾಗಿ ಹೇಳುವುದಾದರೆ ಉದರ, ತೊಡೆಸಂದುಗಳ ಸ್ನಾಯು ನಿಶಕ್ತವಾದಾಗ ಕೆಮ್ಮು, ಮಲಬದ್ಧತೆ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿ ಹಾಗೇ ಅತಿಯಾದ ಭಾರ ಎತ್ತುವ ಕೆಲಸ ಮಾಡುವ ವ್ಯಕ್ತಿಯಲ್ಲಿ ಚರ್ಮ ಉಬ್ಬಿ ಕರುಳಿನ ಒಂದು ಭಾಗ ಈ ನಿಶಕ್ತ ಭಾಗದಲ್ಲಿ ನುಗ್ಗಿ ಹರ್ನಿಯಾವನ್ನು ಉಂಟುಮಾಡುತ್ತದೆ.ಕೆಲವರಲ್ಲಿ ಇದು ತಾನಾಗಿಯೇ ಕಡಿಮೆಯಾದರೂ, ಸೂಕ್ತ ಚಿಕಿತ್ಸೆ ಸಿಗದಿದ್ದಾಗ, ಹರ್ನಿಯಾ ದೊಡ್ಡದಾಗಿ ಸಮಸ್ಯೆ ಉಂಟುಮಾಡುತ್ತದೆ. ಈ ಸಮಸ್ಯೆಗೆ ನೀವು ಏನು ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ ನೋಡಿ.

ಹರ್ನಿಯಾ ಸಮಸ್ಯೆ ಬಗ್ಗೆ ಸಾಕಷ್ಟು ಜನರಿಗೆ ತಿಳುವಳಿಕೆ ಕಡಿಮೆ. ಸಣ್ಣ ಗಂಟು ಕಾಣಿಸಿಕೊಂಡಿದೆ , ಗುಣವಾಗಬಹುದು ಎಂದು ನಿರ್ಲಕ್ಷಿಸಿದವರೇ ಹೆಚ್ಚು. ಅದರಲ್ಲೂ ನೋವಿಲ್ಲದ ಹರ್ನಿಯಾ ತೀವ್ರ ಸ್ವರೂಪ ಪಡೆಯುವವರೆಗೂ ಚಿಕಿತ್ಸೆಯ ಬಗ್ಗೆ ಯೋಚಿಸುವವರು ಬಹಳ ಕಡಿಮೆ. ಆದರೆ ನೆನಪಿರಲಿ ಹರ್ನಿಯಾ ನಿರ್ಲಕ್ಷಿಸುವ ಸಮಸ್ಯೆ ಅಲ್ಲವೇ ಅಲ್ಲ. ಸಮಸ್ಯೆ ತೀವ್ರ ಸ್ವರೂಪ ಪಡೆದಲ್ಲಿ ಜೀವಕ್ಕೆ ಕಂಟಕವಾಗಬಲ್ಲದು. ಹೀಗಾಗಿ ಹರ್ನಿಯಾ ಎಂದರೇನು? ಹೇಗೆ ರೂಪುಗೊಳ್ಳುತ್ತದೆ? ಯಾವ ಕಾರಣಕ್ಕೆ ಹೊಟ್ಟೆ, ತೊಡೆಸಂದಿ ಹಾಗೇ ಹೊಕ್ಕುಳ ಬಳಿ ಗಂಟು ಕಾಣಿಸಿಕೊಳ್ಳುತ್ತದೆ ಎಂಬುದನ್ನು ಅರಿತುಕೊಳ್ಳುವುದು, ತಿಳಿ ಹೇಳುವುದು ಅತ್ಯಗತ್ಯ.
“ಡಾಕ್ಟ್ರೇ ಕಿಬ್ಬೊಟ್ಟೆಯಲ್ಲಿ ಒಂದು ಗಂಟು ಕಾಣಿಸಿಕೊಂಡಿದೆ.. ಇಷ್ಟು ದಿನ ನೋವಿರಲಿಲ್ಲ ಆದರೆ ಈಗ ಭಾರ ಎನಿಸುತ್ತಿದೆ, ವಾಕರಿಕೆ , ಊಟ ಸೇರುತ್ತಿಲ್ಲ..” ಹೀಗೆ ಆಸ್ಪತ್ರೆಗೆ ಬಂದವರಲ್ಲಿ ಹರ್ನಿಯಾ ಅದಾಗಲೇ ಗಂಭೀರ ಸ್ವರೂಪ ಪಡೆದಿರುತ್ತದೆ. ಆದರೆ ಈ ಸಮಸ್ಯೆಗೆ ಚಿಕಿತ್ಸೆಯಿದೆ. ಕೆಲವೊಮ್ಮೆ ಆರಂಭಿಕ ಹಂತದಲ್ಲಿ ಸಣ್ಣ ಚಿಕಿತ್ಸೆ ಮೂಲಕವೇ ಗುಣಪಡಿಸಬಹುದು, ಆದರೆ ಹಲವು ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯು ಅನಿವಾರ್ಯವಾಗುತ್ತದೆ.
ಹರ್ನಿಯಾ ಯಾಕೆ ಉಂಟಾಗುತ್ತದೆ?
ಹರ್ನಿಯಾ ಹೇಗೆ ಉಂಟಾಗುತ್ತದೆ ಎಂಬುದಕ್ಕೆ ಹಲವರು ಹಲವು ರೀತಿಯ ಕಾರಣ ಕೊಡಬಹುದು. ಆದರೆ ಸಾಮಾನ್ಯವಾಗಿ ಹೇಳುವುದಾದರೆ ಉದರ, ತೊಡೆಸಂದುಗಳ ಸ್ನಾಯು ನಿಶಕ್ತವಾದಾಗ ಕೆಮ್ಮು, ಮಲಬದ್ಧತೆ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿ ಹಾಗೇ ಅತಿಯಾದ ಭಾರ ಎತ್ತುವ ಕೆಲಸ ಮಾಡುವ ವ್ಯಕ್ತಿಯಲ್ಲಿ ಚರ್ಮ ಉಬ್ಬಿ ಕರುಳಿನ ಒಂದು ಭಾಗ ಈ ನಿಶಕ್ತ ಭಾಗದಲ್ಲಿ ನುಗ್ಗಿ ಹರ್ನಿಯಾವನ್ನು ಉಂಟುಮಾಡುತ್ತದೆ.ಕೆಲವರಲ್ಲಿ ಇದು ತಾನಾಗಿಯೇ ಕಡಿಮೆಯಾದರೂ, ಸೂಕ್ತ ಚಿಕಿತ್ಸೆ ಸಿಗದಿದ್ದಾಗ, ಹರ್ನಿಯಾ ದೊಡ್ಡದಾಗಿ ಸಮಸ್ಯೆ ಉಂಟುಮಾಡುತ್ತದೆ.
ಹರ್ನಿಯಾ ಗಂಟಿನಲ್ಲಿ ದೊಡ್ಡ ಕರುಳು, ಸಣ್ಣ ಕರುಳು ಅಥವಾ ಕೆಲವೊಮ್ಮೆ ಮೂತ್ರಚೀಲ ಸಿಲುಕುತ್ತದೆ. ಇದರಿಂದ ಆ ಭಾಗದಲ್ಲಿ ರಕ್ತಸಂಚಲನದಲ್ಲಿ ವ್ಯತ್ಯಯ ಉಂಟಾಗುತ್ತದೆ. ಬಳಿಕ ನೋವು, ವಾಕರಿಕೆ, ಊಟ ಸೇರದಿರುವುದು, ಹರ್ನಿಯಾ ಭಾಗದಲ್ಲಿ ಭಾರವೆನಿಸುವ ಅನುಭವ , ಸೆಳೆತ ಕಾಡುತ್ತದೆ. ಕರುಳಿನ ಭಾಗ ಹರ್ನಿಯಾ ಭಾಗದೊಳಗೆ ಸೇರುವ ಮೊದಲೇ ಚಿಕಿತ್ಸೆ ಪಡೆಯುವುದು ಮುಖ್ಯ
ಹರ್ನಿಯಾ ಲಕ್ಷಣಗಳೇನು?
ಹೊಟ್ಟೆ, ತೊಡೆಸಂದಿಯಲ್ಲಿ ಗಂಟು ಕಾಣಿಸಿಕೊಳ್ಳುವುದು ಹರ್ನಿಯಾದ ಮೊದಲ ಮತ್ತು ಸಾಮಾನ್ಯ ಲಕ್ಷಣ. ಇದು ನೋವು ರಹಿತವಾಗಿರಲೂಬಹುದು. ಕೆಲವೊಮ್ಮೆ ವ್ಯಕ್ತಿ ಮಲಗಿದಾಗ ಈ ಗಂಟು ಕಾಣೆಯಾಗುತ್ತದೆ. ಆರಂಭಿಕ ಹಂತದಲ್ಲಿ ಹರ್ನಿಯಾಗೆ ಚಿಕಿತ್ಸೆ ಪಡೆಯುವುದು ಉತ್ತಮ.
ನೋವಿನಿಂದ ಕೂಡಿರುವ ಹರ್ನಿಯಾ ಅಪರೂಪ. ಆದರೆ ಇದು ಬಹಳ ತ್ರಾಸದಾಯಕ. ಸಾಕಷ್ಟು ನೋವು, ಸೆಳೆತ ಉಂಟಾಗುತ್ತದೆ . ಇಂತಹ ಸಮಯದಲ್ಲಿ ಚಿಕಿತ್ಸೆಯ ಜತೆಗೆ ಮಲಬದ್ಧತೆ ಉಂಟಾಗದಂತೆ , ಕೆಮ್ಮು ಉಂಟಾಗದಂತೆ ನೋಡಿಕೊಳ್ಳಬೇಕು. ಹಾಗೇ ಅತಿಯಾದ ಭಾರ ಎತ್ತುವ ಕೆಲಸವನ್ನೂ ಮಾಡಬಾರದು. ಇದರಿಂದ ಹರ್ನಿಯಾ ಮತ್ತಷ್ಟು ನೋವು ನೀಡಲು ಆರಂಭಿಸುತ್ತದೆ. ಕೆಲವು ಪ್ರಕರಣಗಳಲ್ಲಿ ವಾಕರಿಕೆ, ಮಲಬದ್ಧತೆ ಜತೆಗೆ ಗಂಟನ್ನು ಒಳಭಾಗಕ್ಕೆ ಒತ್ತಲು ಸಾಧ್ಯವಾಗದಷ್ಟು ನೋವು ಕಾಣಿಸಿಕೊಳ್ಳುತ್ತದೆ. ಇದು ಆಂತಕಕಾರಿ ಹಂತವಾಗಿದ್ದು ವೈದ್ಯರ ಭೇಟಿ ಅತ್ಯಗತ್ಯ.
ಇದನ್ನೂ ಓದಿ: ಸಿಸೇರಿಯನ್ ನಂತರ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ
ಶಸ್ತ್ರಚಿಕಿತ್ಸೆವೊಂದೇ ದಾರಿ
ಹರ್ನಿಯಾ ನೋಡಲು ಸಣ್ಣ ಸಮಸ್ಯೆ ಎನಿಸಿದರೂ , ಗುಣಮುಖವಾಗಲು ಶಸ್ತ್ರಚಿಕಿತ್ಸೆಯೊಂದೇ ದಾರಿ. ಹರ್ನಿಯಾ ಒಳಗಿನ ಕರುಳಿನ ಭಾಗವನ್ನು ವಾಪಸ್ ಅದರ ಜಾಗದೊಳಗೆ ಕೂರಿಸುವುದು ಮುಖ್ಯವಾಗುತ್ತದೆ. ಜೊತೆಗೆ ರಚನೆಯಾದ ಗ್ಯಾಪ್‌ನ್ನು ಹೊಲಿಗೆಯಿಂದ ಮುಚ್ಚಬೇಖು ಮತ್ತು ಹರ್ನಿಯಾ ಮರುಕಳಿಸದಂತೆ ತಡೆಯಲು ಪ್ರೊಸ್ತೇಸಿಸ್ ರೀತಿಯ ಮೆಶ್‌ನ್ನು ಕೂರಿಸಬೇಕಾಗುತ್ತದೆ. ಈ ವಿಧಾನವನ್ನು ಹರ್ನಿಯೋಪ್ಲ್ಯಾಸ್ಟಿ ಎಂದು ಕರೆಯಲಾಗುತ್ತದೆ. ರಚನೆಯಾದ ಗಂಟನ್ನು ಒಳ ತಳ್ಳಿ ಹೊಲಿಗೆ ಹಾಕಬಹುದೇ, ತೆರೆದ ಚಿಕಿತ್ಸೆ ನಡೆಸಬೇಕೆ ಅಥವಾ ಲ್ಯಾಪರೋಸ್ಕೋಪಿಕ್ ಚಿಕಿತ್ಸೆ ನೀಡಬೇಕೆ ಎಂಬುದನ್ನು ತಜ್ಞರು ಹರ್ನಿಯಾ ಯಾವ ಹಂತದಲ್ಲಿದೆ ಎಂಬುದನ್ನು ಗಮನಿಸಿ ನಿರ್ಧರಿಸುತ್ತಾರೆ.
ಶಸ್ತ್ರಚಿಕಿತ್ಸೆ ಬಳಿಕ ಆರೈಕೆ ಹೇಗೆ?
ಶಸ್ತ್ರಚಿಕಿತ್ಸೆ ಬಳಿಕ 1-2 ತಿಂಗಳವರೆಗೆ ಭಾರ ಎತ್ತುವ ಕೆಲಸ ಮಾಡಬೇಡಿ. ಹಾಗೇ ದೇಹದಲ್ಲಿ ಶೀತ, ಕೆಮ್ಮು ಅಂತಹ ಸಮಸ್ಯೆ ಕಾಡದಂತೆ ಎಚ್ಚರಿಕೆ ವಹಿಸಿ . ಚಿಕಿತ್ಸೆ ಬಳಿಕ ನಿಧಾನವಾಗಿ ದೇಹದ ಸ್ನಾಯುಗಳು ಬಲಗೊಳ್ಳಲು ಸಹಾಯಮಾಡುವ ವ್ಯಾಯಾಮ, ಆಹಾರ ಸೇವೆನೆಯನ್ನು ತಜ್ಞರ ಸಲಹೆ ಮೇರೆಗೆ ಕೈಗೊಳ್ಳಿ.
ಡಾ. ಅವಿನಾಶ್ ಕೆ. ಎಂಬಿಬಿಎಸ್, ಎಂಎಸ್, ಡಿಎನ್‌ಬಿ, ಎಫ್‌ಎಎಲ್‌ಎಸ್(ಹರ್ನಿಯಾ), ಎಫ್‌ಐಎಜಿಇಎಸ್, ಇಎಫ್‌ಐಎಜಿಇಎಸ್ ಕನ್ಸಲ್ಟೆಂಟ್ ಹಾಗೂ ಜನರಲ್ ಸರ್ಜನ್ , ಕೆಎಂಸಿ ಆಸ್ಪತ್ರೆ ಅಂಬೇಡ್ಕರ್ ಸರ್ಕಲ್ , ಮಂಗಳೂರು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ