ಮೆದುಳು ನಮ್ಮ ದೇಹದ ಒಂದು ಪ್ರಮುಖ ಅಂಗವಾಗಿದ್ದು, ಅದು ಇಡೀ ದೇಹದ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೀಗಿರುವಾಗ ಮೆದುಳಿನ ಕಾಳಜಿ ವಹಿಸುವುದು ತುಂಬಾ ಮುಖ್ಯ. ಹೆಚ್ಚಿನ ಜನರು ದೇಹಾದಾರೋಗ್ಯದ ಬಗ್ಗೆ ಕಾಳಜಿ ವಹಿಸುವಷ್ಟು ಮೆದುಳಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹಾಗಾಗಿ ಮೆದುಳಿನ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಮೆದುಳಿನ ಅಸ್ವಸ್ಥತೆಗಳನ್ನು ತಡೆಗಟ್ಟಲು ಪರಿಣಾಮಕಾರಿ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಲು ವಾರ್ಷಿಕವಾಗಿ ಜುಲೈ 22 ರಂದು ವಿಶ್ವ ಮೆದುಳಿನ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಮೆದುಳಿನ ದಿನ ಯಾವಾಗ ಆಚರಣೆಗೆ ಬಂತು ಹಾಗೂ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪಾಲಿಸಬೇಕಾದ ಸರಿಯಾದ ಆಹಾರಕ್ರಮಗಳೇನು ಎಂಬ ಮಾಹಿತಿ ಇಲ್ಲಿದೆ.
2013ರಲ್ಲಿ ವರ್ಲ್ಡ್ ಕಾಂಗ್ರೇಸ್ ಆಫ್ ನ್ಯೂರಾಲಜಿಯ ಸಾರ್ವಜನಿಕ ಜಾಗೃತಿ ಮತ್ತು ವಕೀಲರ ಸಮಿತಿಯು ವಿಶ್ವಾದ್ಯಂತ ಹೆಚ್ಚುತ್ತಿರುವ ಮೆದುಳಿನ ಸಮಸ್ಯೆಗಳ ಕಾರಣದಿಂದಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ವಿಶ್ವ ಮೆದುಳಿನ ದಿನವನ್ನು ಆಚರಿಸಲು ಪ್ರಸ್ತಾಪಿಸಿತು. ಇದರ ನಂತರ ವಿಶ್ವ ಮೆದುಳು ದಿನವನ್ನು ಮೊದಲ ಬಾರಿಗೆ 2014 ರಲ್ಲಿ ವರ್ಲ್ಡ್ ಫೆಡರೇಶನ್ ಆಫ್ ನ್ಯೂರಾಲಜಿ ಮತ್ತು ಇಂಟರ್ನ್ಯಾಷನಲ್ ಹೆಡ್ಏಕ್ ಸೊಸೈಟಿ ಆಚರಿಸಿತು. ನಂತರ ಪ್ರತಿವರ್ಷ ಜುಲೈ 22 ನೇ ತಾರೀಕಿಗೆ ವಿಶ್ವ ಮೆದುಳಿನ ದಿನವನ್ನು ಆಚರಿಸಲಾಗುತ್ತದೆ. ಮೆದುಳಿಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಇಡೀ ದೇಹದ ಚಲನೆಯನ್ನು ನಿಯಂತ್ರಿಸಲು ನಮ್ಮ ಮೆದುಳು ಸಹಾಯ ಮಾಡುತ್ತದೆ. ಆದ್ದರಿಂದ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಮೆದುಳು ಆರೋಗ್ಯಕರವಾಗಿರಲು ಮತ್ತು ಅದರ ಕಾರ್ಯವನ್ನು ಸರಾಗಗೊಳಿಸಲು ನಮ್ಮ ಜೀನನಶೈಲಿ ಮತ್ತು ಆಹಾರ ಪದ್ಧತಿಯು ಆರೋಗ್ಯಕರ ರೀತಿಯಲ್ಲಿರುವುದು ತುಂಬಾ ಮುಖ್ಯವಾಗಿದೆ.
ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ನಮ್ಮ ಮೆದುಳಿನ ಸುಮಾರು 60% ಕೊಬ್ಬಿನಿಂದ ಮಾಡಲ್ಪಟ್ಟಿದ್ದೆ ಮತ್ತು ಅದರಲ್ಲಿ ಅರ್ಧದಷ್ಟು ಕೊಬ್ಬು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಮಾಡಲ್ಪಟ್ಟಿದೆ. ಹೀಗಿರುವಾಗ ಮೀನುಗಳನ್ನು ಸೇವಿಸುವುದರಿಂದ ನಿಮ್ಮ ಮೆದುಳನ್ನು ಆರೋಗ್ಯರಕವಾಗಿರಿಸಬಹುದು.
ಅರಶಿನವು ಕರ್ಕ್ಯುಮಿನ್ ಎಂಬ ಅಂಶವನ್ನು ಹೊಂದಿದೆ. ಅದು ಮೆದುಳಿನ ಜೀವಕೋಶಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅಲ್ಲದೆ ಅರಶಿನ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಮೆದುಳಿನ ಕೋಶಗಳಿಗೆ ಹಾನಿಯಾಗುವ ಮೆಮೊರಿ ಸಮಸ್ಯೆಗಳು ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾಗಿ ಆಹಾರದಲ್ಲಿ ಅರಶಿನ ಸೇರಿಸಬೇಕು.
ಬ್ರೋಕೊಲಿ ಅಥವಾ ಕೇಸುಗಡ್ಡೆಯು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ಅಲ್ಲದೆ ಇದರಲ್ಲಿನ ವಿಟಮಿನ್ ಕೆ ಪೋಷಕಾಂಶ ಮೆದುಳಿನ ಕೋಶಗಳನ್ನು ಆರೋಗ್ಯವಾಗಿಡಲು ಮತ್ತು ರೋಗಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ವಯಸ್ಕರರ ಮೇಲೆ ನಡೆಸಿದ ಅಧ್ಯಯನವೊಂದು ವಿಟಮಿನ್ ಕೆ ಪೋಷಕಾಂಶವನ್ನು ಹೆಚ್ಚು ಸೇವಿಸುವ ಜನರು ಬಲವಾದ ಜ್ಞಾಪಕ ಶಕ್ತಿ ಮತ್ತು ಅರಿವಿನ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಕಂಡುಹಿಡಿದಿದೆ.
ಇದನ್ನೂ ಓದಿ:ವಿಶ್ವ ಯುವ ಕೌಶಲ್ಯ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಇತಿಹಾಸ ಮಹತ್ವ ಇಲ್ಲಿದೆ
ಸಿಹಿ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅವುಗಳು ನಮ್ಮ ಮೆದುಳಿಗೆ ಹಾನಿಯುಂಟುಮಾಡುತ್ತವೆ. ನೀವು ಅತಿಯಾದ ಸಕ್ಕರೆಯಿರುವ ಆಹಾರಗಳನ್ನು ಸೇವಿಸಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಇದು ಹೃದ್ರೋಗ, ಟೈಪ್2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಹೆಚ್ಚು ಸಕ್ಕರೆ ಸೇವನೆಯು ಮೆದುಳಿನಲ್ಲಿ ಇನ್ಸುಲಿನ್ ಪ್ರತಿರೋಧಕವನ್ನು ಹೆಚ್ಚಿಸುತ್ತದೆ, ಇದು ಕಲಿಕೆ, ನೆನಪಿನ ಶಕ್ತಿ ಮತ್ತು ನರಕೋಶಗಳ ಬೆಳವಣಿಗೆಯ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ.
ಟ್ರಾನ್ಸ್ ಕೊಬ್ಬು ಅನೇಕ ವಿಧಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಎಂದು ಅಧ್ಯಯನಗಳಲ್ಲಿ ಕಂಡುಬಂದಿದೆ. ಅವುಗಳ ಅತಿಯಾದ ಸೇವನೆಯು ಮೆದುಳಿನ ಉತ್ಪಾದಕತೆ ಮತ್ತು ನರಕೋಶಗಳ ಚಟುವಟಿಕೆಗಳನ್ನು ನಿಧಾನಗೊಳಿಸುತ್ತದೆ. ಇಂತಹ ವಸ್ತುಗಳ ಅತಿಯಾದ ಸೇವನೆಯಿಂದ ಮೆದುಳಿನ ಜೀವಕೋಶಗಳು ಕೂಡಾ ಹಾನಿಗೊಳಗಾಗುತ್ತವೆ. ಇದರಿಂದಾಗಿ ಮೆದುಳಿಗೆ ಸಂಬಂಧಿಸಿದ ಅನೇಕ ರೋಗಗಳ ಅಪಾಯವು ಹೆಚ್ಚಾಗುತ್ತದೆ.
ಆಲ್ಕೋಹಾಲ್ ದೇಹಕ್ಕೆ ಹಾನಿಕಾರಕವಾಗಿದೆ. ಇದು ಒಟ್ಟಾರೆ ದೈಹಿಕ, ವಿಶೇಷವಾಗಿ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ದೀರ್ಘ ಕಾಲದ ಆಲ್ಕೋಹಾಲ್ ಸೇವನೆಯು ನಿಮ್ಮ ಮೆದುಳಿನ ನರಪ್ರೇಕ್ಷಕ ಸಂವಹನವನ್ನು ಅಡ್ಡಿಪಡಿಸಬಹುದು. ಕಾಲಕ್ರಮೇಣ ಇದರಿಂದ ಜ್ಞಾಪಕ ಶಕ್ತಿಯ ನಷ್ಟ, ವಿಷಯಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿಯೂ ಕಡಿಮೆಯಾಗಬಹುದು.
ಧೂಮಪಾನವು ಮೆದುಳಿನ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕವಾಗಿದೆ. ಧೂಮಪಾನಿಗಳ ಮೆದುಳಿನ ಸರೆಬ್ರಲ್ ಕಾರ್ಟೆಕ್ಸ್ ಧೂಮಪಾನ ಮಾಡದವರಿಗಿಂತ ತೆಳ್ಳಗಿರುತ್ತದೆ ಎಂದು ಅಧ್ಯಯನಗಳಲ್ಲಿ ಕಂಡುಬಂದಿದೆ. ಸೆರೆಬ್ರಲ್ ಕಾರ್ಟೆಕ್ಸ್ ಮೆದುಳಿನ ಒಂದು ಭಾಗವಾಗಿದ್ದು, ಅದು ಜ್ಞಾಪಕ ಶಕ್ತಿ, ಕಲಿಕೆ ಮತ್ತು ಆಲೋಚನಾ ಕೌಶಲ್ಯಗಳಿಗೆ ಮುಖ್ಯವಾಗಿ ಬೇಕಾಗುತ್ತದೆ. ಇದರಲ್ಲಿ ಉಂಟಾಗುವ ಹಾನಿಯು ನಿಮ್ಮ ಸಾಮಾಜಿಕ ಕೌಶಲ್ಯಗಳನ್ನು ಕಡಿಮೆ ಮಾಡುವುದಲ್ಲದೆ ಮೆದುಳಿಗೆ ಸಂಬಂಧಿಸಿದ ಅನೇಕ ಗಂಭೀರ ಕಾಯಿಲೆಗಳನ್ನು ಉಂಟುಮಾಡಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: