World AIDS Day 2024: ಇಂದು ವಿಶ್ವ ಏಡ್ಸ್ ದಿನ; ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ
ಏಡ್ಸ್ ರೋಗ ಹೆಚ್.ಐ.ವಿ ವೈರಸ್‌ನಿಂದ ಉಂಟಾಗುವ ಗಂಭೀರ ಕಾಯಿಲೆಯಾಗಿದ್ದು, ಈ ರೋಗವು ಸೋಂಕಿತ ವ್ಯಕ್ತಿಯ ಜೀವಕ್ಕೆ ಮಾರಕವಾಗಿ ಪರಿಣಾಮಿಸಬಹುದು. ಅಷ್ಟೇ ಅಲ್ಲದೆ ಇಲ್ಲಿಯವರೆಗೆ ಇದು ಲಕ್ಷಾಂತರ ಜೀವಗಳನ್ನು ಸಹ ಬಲಿ ಪಡೆದುಕೊಂಡಿದೆ. ಹಾಗಾಗಿ ಈ ಮಾರಣಾಂತಿಕ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಈ ರೋಗದ ಬಗ್ಗೆ ಜನರಲ್ಲಿರುವ ಕೆಲವೊಂದು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.
ಏಡ್ಸ್ ಎಂಬುದು ಹೆಚ್‌ಐವಿ (ಹ್ಯೂಮನ್ ಇಮ್ಯೂನೊ ಡಿಫಿಷಿಯನ್ಸಿ ವೈರಸ್) ಎಂಬ ವೈರಸ್‌ನಿಂದ ಬರುವ ಸೋಂಕಾಗಿದ್ದು, ಇದು ಗಂಭೀರ ಮತ್ತು ಗುಣಡಿಸಲಾಗದ ಕಾಯಿಲೆಯಾಗಿದೆ. ಇದು ದೇಹದ ರೋಗ ನಿರೋಧಕ ವ್ಯವಸ್ಥೆ ಮೇಲೆ ದಾಳಿ ಮಾಡಿ, ಈ ವೈರಸ್ ದೇಹದಲ್ಲಿ ವೇಗವಾಗಿ ಹರಡಲು ಪ್ರಾರಂಭಿಸುತ್ತದೆ. ಆರಂಭಿಕ ಹಂತದಲ್ಲಿ ಸರಿಯಾದ ಚಿಕಿತ್ಸೆ ನೀಡದಿದ್ದರೆ ಈ ಕಾಯಿಲೆ ಮಾರಣಾಂತಿಕವಾಗಿ ಪರಿಣಾಮಿಸುತ್ತದೆ. ಹಾಗಾಗಿ ಈ ಗಂಭೀರ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಈ ರೋಗದ ಬಗ್ಗೆ ಜನರಲ್ಲಿರುವ ಕೆಲವೊಂದು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಏಡ್ಸ್ ದಿನದ ಇತಿಹಾಸ:
ವಿಶ್ವ ಏಡ್ಸ್ ದಿನವನ್ನು ಮೊದಲಿಗೆ 1988 ರಲ್ಲಿ ಆಚರಿಸಲಾಯಿತು. 1981 ರಲ್ಲಿ ಮೊದಲ ಬಾರಿಗೆ ಏಡ್ಸ್ ಪ್ರಕರಣವೊಂದು ವರದಿಯಾದ ಬಳಿಕ ನಂತರದ ವರ್ಷಗಳಲ್ಲಿ ಹಲವಾರು ಜನರು ಈ ಕಾಯಿಲೆಗೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡರು. ಹಾಗಾಗಿ ಈ ಗಂಭೀರ ಕಾಯಿಲೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಮತ್ತು ಸಮಾಜದಲ್ಲಿ ಈ ಕಾಯಿಲೆಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ತೊಡೆದುಹಾಕಬೇಕು ಎನ್ನುವ ಉದ್ದೇಶದಿಂದ 1987 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದ ಥಾಮಸ್ ನೆಟ್ಟರ್ ಮತ್ತು ಜೇಮ್ಸ್ ಡಬ್ಲ್ಯೂ ಬನ್ ಈ ಇಬ್ಬರು ಏಡ್ಸ್ ದಿನವನ್ನು ಆಚರಿಸುವ ಬಗ್ಗೆ ಪ್ರಸ್ತಾಪವನ್ನು ಮಾಡುತ್ತಾರೆ. ಅದರ ಮಾರನೇ ವರ್ಷವೇ ವಿಶ್ವ ಆರೋಗ್ಯ ಸಂಸ್ಥೆಯು ಈ ದಿನವನ್ನು ವಿಶ್ವ ಮಟ್ಟದಲ್ಲಿ ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ 01 ರಂದು ವಿಶ್ವ ಮಟ್ಟದಲ್ಲಿ ಏಡ್ಸ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ಏಡ್ಸ್ ದಿನದ ಪ್ರಾಮುಖ್ಯತೆ:
ವಿಶ್ವ ಏಡ್ಸ್ ದಿನವು ಎಚ್‌ಐವಿ ಸೋಂಕು, ಅದರ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಇದಲ್ಲದೆ ಈ ದಿನವು ಏಡ್ಸ್ ರೋಗದ ಕುರಿತು ಜಾಗೃತಿ ಮೂಡಿಸುವುದರ ಜೊತೆಜೊತೆಗೆ ಈ ರೋಗಕ್ಕೆ ತುತ್ತಾದವರು ಸಮಾಜದಲ್ಲಿ ಯಾವುದೇ ತಾರತಮ್ಯವಿಲ್ಲದೆ ಸುರಕ್ಷಿತ ಜೀವನ ನಡೆಸುವಂತಾಗಬೇಕು ಮತ್ತು ಈ ಮಾರಕ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದುಹಾಕಬೇಕು ಎನ್ನುವ ಉದ್ದೇಶವನ್ನು ಸಹ ಹೊಂದಿದೆ. ವಿಶ್ವ ಏಡ್ಸ್ ದಿನದಂದು ಪ್ರತಿಯೊಂದು ದೇಶದ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಈ ರೋಗದ ಹಡರುವಿಕೆ ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
ವಿಶ್ವ ಏಡ್ಸ್ ದಿನದ ಥೀಮ್:
ಪ್ರತಿ ವರ್ಷ ಒಂದು ಅರ್ಥಪೂರ್ಣ ಥೀಮ್‌ನೊಂದಿಗೆ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ. 2024 ರ ವಿಶ್ವ ಏಡ್ಸ್ ದಿನದ ಧ್ಯೇಯವಾಕ್ಯವು “ಸರಿಯಾದ ಹಾದಿಯನ್ನು ಹಿಡಿಯಿರಿ; ನನ್ನ ಆರೋಗ್ಯ, ನನ್ನ ಹಕ್ಕು (Take the right path: My health, my right) ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಸೇವೆಗಳು, ಚಿಕಿತ್ಸೆ ಮತ್ತು ಬೆಂಬಲಕ್ಕೆ ಸಮಾನ ಪ್ರವೇಶವನ್ನು ಒದಗಿಸುವುದು ಈ ಥೀಮ್‌ನ ಉದ್ದೇಶವಾಗಿದೆ.
ಏಡ್ಸ್ ರೋಗದ ಲಕ್ಷಣಗಳು:
ಹೆಚ್‌ಐವಿ ವೈರಸ್ ವ್ಯಕ್ತಿಯ ರಕ್ತವನ್ನು ಪ್ರವೇಶಿಸಿದ ಬಳಿಕ ಎರಡು ಅಥವಾ ಮೂರು ವಾರಗಳ ನಂತರ ಆತನಲ್ಲಿ ಜ್ವರ, ತಲೆನೋವು, ಕೀಲುಗಳಲ್ಲಿ ನೋವು ಮತ್ತು ಬಾಯಿ ಹಾಗೂ ಗಂಟಲಿನಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ;
- ರೋಗ ನಿರೋಧಕ ಶಕ್ತಿಯು ಸಂಪೂರ್ಣವಾಗಿ ಕುಂದುತ್ತದೆ.
- ದೇಹ ತೂಕ ಕಡಿಮೆಯಾಗುತ್ತಾ ಬರುತ್ತದೆ.
- ಅತಿಯಾದ ಆಯಾಸ
ಹೆಚ್.ಐ.ವಿ ಸೋಂಕು ಹೇಗೆ ಹರಡುತ್ತದೆ?
ಹೆಚ್ಚಿನವರು ಹೆಚ್.ಐ.ವಿ ಸೋಂಕು ಹರಡಲು ಅಸುರಕ್ಷಿತ ಲೈಂಗಿಕ ಸಂಪರ್ಕ ಮಾತ್ರವೇ ಕಾರಣ ಎಂಬ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಆದರೆ ಇದು ಮಾತ್ರವಲ್ಲದೆ ಈ ಸೋಂಕು ಹರಡಲು ಇನ್ನೂ ಹಲವಾರು ಕಾರಣಗಳಿವೆ.
- ಸೋಂಕು ತಗುಲಿರುವ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ಮಾಡುವುದರಿಂದಲೂ ಈ ಕಾಯಿಲೆ ಬರುತ್ತದೆ.
- ಸೋಂಕು ತಗುಲಿದ ವ್ಯಕ್ತಿಯ ರಕ್ತವನ್ನು ಇನ್ನೊಬ್ಬ ವ್ಯಕ್ತಿ ದಾನವಾಗಿ ಪಡೆದರೆ, ಆ ರಕ್ತದ ಮೂಲಕ ವ್ಯಕ್ತಿಯ ದೇಹಕ್ಕೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
- ಸೋಂಕಿತ ವ್ಯಕ್ತಿಗೆ ಬಳಸಿದ ಸಿರಿಂಜ್‌ಗಳು ಅಥವಾ ಇತರೆ ಇಂಜೆಕ್ಷನ್ ಉಪಕರಣಗಳನ್ನು ಇನ್ನೊಬ್ಬ ವ್ಯಕ್ತಿಗೆ ಬಳಸಿದರೂ ಸೋಂಕು ಹರಡುತ್ತದೆ.
- ಹೆ.ಐ.ವಿ ಸೋಂಕಿತ ತಾಯಿಯಿಂದ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಹಾಲುಣಿಸುವ ಸಮಯದಲ್ಲಿ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
- ಟ್ಯಾಟೂ ಹಾಕಿಸಿಕೊಳ್ಳುವುದರಿಂದಲೂ ಹೆಚ್.ಐ.ವಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅಂದರೆ ಒಬ್ಬರಿಗೆ ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸಿದಾಗ ಇದರಿಂದಲೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: Preventing stroke: 2050ರ ವೇಳೆಗೆ ಪಾರ್ಶ್ವವಾಯು ಪ್ರಕರಣಗಳು 10 ಮಿಲಿಯನ್ ಗೆ ಏರುವ ನಿರೀಕ್ಷೆ
ಹೆಚ್.ಐ.ವಿ ಸೋಂಕು ಬಾರದಂತೆ ತಡೆಗಟ್ಟುವುದು ಹೇಗೆ?
- ದೈಹಿಕ ಸಂರ್ಕದ ವೇಳೆ ಉತ್ತಮ ಗುಣಮಟ್ಟದ ಕಾಂಡೋಮ್‌ಗಳನ್ನು ಧರಿಸುವುದು
- ಲೈಂಗಿಕತೆಯಿಂದ ಹರಡುವ ರೋಗಗಳ ಪರೀಕ್ಷೆ ಮಾಡಿಸಿಕೊಳ್ಳುವುದು
- ಒಬ್ಬರಿಗೆ ಉಪಯೋಗಿಸಿದ ಸಿರಿಂಜ್‌ಗಳನ್ನು ಮತ್ತೊಬ್ಬರಿಗೆ ಉಪಯೋಗಿಸದಂತೆ ನೋಡಿಕೊಳ್ಳುವುದು
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ