World Autism Awareness Day 2025: ಮಕ್ಕಳಲ್ಲಿ ಆಟಿಸಂ ಪತ್ತೆ ಮಾಡಲು ಈ ರೀತಿ ಮಾಡಿ
ಪೋಷಕರ ಒತ್ತಡದ ದಿನಚರಿ, ಬೆಳೆಯುವ ಪರಿಸರ, ಒಂಟಿತನ, ಕೌಟುಂಬಿಕ ಸಮಸ್ಯೆಗಳು, ವಿಭಕ್ತ ಕುಟುಂಬ ಹೀಗೆ ನಾನಾ ರೀತಿಯ ಪರೋಕ್ಷ ಕಾರಣಗಳಿಂದಾಗಿ ಮಕ್ಕಳು ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಆಟಿಸಂ ಇಂತಹ ಸಮಸ್ಯೆಗಳಲ್ಲೊಂದು. ಹಾಗಾಗಿ ಪ್ರತಿಯೊಬ್ಬ ಪೋಷಕರು ಕೂಡ ಈ ಆಟಿಸಂ ಬಗ್ಗೆ ತಿಳಿದುಕೊಂಡು, ಅಂತಹ ಲಕ್ಷಣಗಳು ತಮ್ಮ ಮಕ್ಕಳಲ್ಲಿಯೂ ಕಂಡು ಬರುತ್ತಿದ್ದರೆ, ಸಾಧ್ಯವಾದಷ್ಟು ಬೇಗನೆ ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸಬೇಕು. ಇಲ್ಲವಾದಲ್ಲಿ ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು ಸಾಧ್ಯವಾಗದೆ ಹೋಗಬಹುದು.

‘ಆಟಿಸಂ’ (Autism) ಒಂದು ರೀತಿಯ ನರ ಸಂಬಂಧಿತ ಕಾಯಿಲೆಯಾಗಿದ್ದು ಅನುವಂಶಿಕವಾಗಿ ಅಥವಾ ನರಗಳ ದೋಷದಿಂದ ಬರುತ್ತದೆ. ಅದರಲ್ಲಿಯೂ ಇತ್ತೀಚಿಗೆ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಇದನ್ನು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಬೇಕಾಗಿದೆ. ಹಾಗಾಗಿ ಈ ಆರೋಗ್ಯ ಸಮಸ್ಯೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕಾಗಿದೆ. ಅದಕ್ಕಾಗಿಯೇ ವಿಶ್ವ ಆಟಿಸಂ ಜಾಗೃತಿ ದಿನ (World Autism Awareness Day) ವನ್ನು ಪ್ರತಿವರ್ಷ ಏಪ್ರಿಲ್ 2 ರಂದು ಆಚರಿಸಲಾಗುತ್ತದೆ. ಆಟಿಸಂ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸಮಾಜದಲ್ಲಿ ಆಟಿಸಂ ಪೀಡಿತ ಮಕ್ಕಳಿಗೆ ಬೆಂಬಲ ಒದಗಿಸುವುದು ಈ ದಿನದ ಉದ್ದೇಶವಾಗಿದೆ. ಹಾಗಾದರೆ ಮಕ್ಕಳಲ್ಲಿ ಆಟಿಸಂ ಪತ್ತೆ ಮಾಡುವುದು ಹೇಗೆ? ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತಿದ್ದರೆ ವೈದ್ಯರ ಸಂಪರ್ಕ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಆಟಿಸಂನಲ್ಲಿ ಕಂಡುಬರುವ ಲಕ್ಷಣಗಳು:
- ಚಿಕ್ಕ ವಯಸ್ಸಿನಲ್ಲಿ ಮಗುವು ವಾತಾವರಣದ ಸಂವೇದನೆಗಳಿಗೆ ಗಮನಹರಿಸದಿರುವುದು.
- ಮುಗುಳ್ನಗು ತೋರದಿರುವುದು. ಬೇರೆಯವರು ಮಾತನಾಡುವಾಗ ಗಮನ ಹರಿಸದಿರುವುದು.
- ಮಗುವಿನ ಹೆಸರನ್ನು ಎಷ್ಟು ಬಾರಿ ಕರೆದಾಗಲೂ ಸ್ಪಂದಿಸದಿರುವುದು.
- ಬಾಲ್ಯಾವಸ್ಥೆಯಲ್ಲಿ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದಿರುವುದು.
- ತೊದಲು ನುಡಿಗಳನ್ನು ಆಡದಿರುವುದು.
- ಇನ್ನು 5 ವರ್ಷದ ನಂತರದ ವಯಸ್ಸಿನವರಲ್ಲಿ ಯಾವುದೇ ರೀತಿಯ ಚಟುವಟಿಕೆಯಲ್ಲಿ ಆಸಕ್ತಿ ತೋರದಿರುವುದು.
- ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಹಿಂದುಳಿಯುವುದು. ಪ್ರತಿ ವಿಷಯಗಳಲ್ಲಿಯೂ ಹಿಂಜರಿಕೆಯ ಸ್ವಭಾವ ಕಂಡುಬರುವುದು.
- ಮಾತನಾಡುವ ಪ್ರವೃತ್ತಿ ಕಂಡುಬರದಿರುವುದು, ಪ್ರತಿಕ್ರಿಯೆ ನೀಡದಿರುವುದು.
- ನೀವು ತೋರಿಸುವ ವಸ್ತು ಅಥವಾ ವ್ಯಕ್ತಿಯನ್ನು ನೋಡದೆ ಇರುವುದು.
- ಆಟ, ವಿದ್ಯಾಭ್ಯಾಸ ಇತ್ಯಾದಿ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿರುವುದು.
- ಅವರದ್ದೇ ವಯಸ್ಸಿನ ಮಕ್ಕಳ ಜೊತೆಗೆ ಬೆರೆಯದಿರುವುದು ಅಥವಾ ಸ್ನೇಹಿತರನ್ನು ಮಾಡಿಕೊಳ್ಳದಿರುವುದು.
- ತಮಗೆ ಏನು ಬೇಕು ಎನ್ನುವುದನ್ನು ಹೇಳದಿರುವುದು ಅಥವಾ ಏನನ್ನೂ ಹಂಚಿಕೊಳ್ಳದೆ ಇರುವುದು ಆಟಿಸಂ ಲಕ್ಷಣವಾಗಿದೆ.
- ನೀವು ಹೇಳುವ ಮಾತುಗಳನ್ನು ಅರ್ಥ ಮಾಡಿಕೊಳ್ಳದೆ ಮಾತನಾಡಿದ ಶಬ್ದಗಳನ್ನು ಪುನರಾವರ್ತಿಸುತ್ತಿದ್ದರೆ ಅದು ಆಟಿಸಂ ಲಕ್ಷಣವಾಗಿದೆ.
- ಒಂದು ಚಟುವಟಿಕೆಯಿಂದ ಮತ್ತೊಂದಕ್ಕೆ ಬರಲು ಒಪ್ಪದಿರುವುದು. ಒಂದೇ ರೀತಿಯ ಚಟುವಟಿಕೆ, ಆಟ ಇಷ್ಟವಾಗುವಂತದ್ದು.
ಆಟಿಸಂನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಔಷಧಿಯ ಜತೆಗೆ ನಡವಳಿಕೆಯ ಥೆರಪಿಯಿಂದ ಖಿನ್ನತೆ, ನಿದ್ರಾಹೀನತೆಯ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:21 am, Wed, 2 April 25