ಹುಟ್ಟುವ ಪ್ರತೀ ಮಗುವು ವಿಭಿನ್ನ, ವಿಶೇಷ. ಮಗು ಹೇಗೇ ಇರಲಿ ತಾಯಿಗೆ ತನ್ನ ಮಗುವೇ ಪ್ರಪಂಚ. ಅದರ ಆಟ, ಮೃದು ಸ್ಪರ್ಶ, ಅಪ್ಪುಗೆ ತಾಯಿಗೆ ಸ್ವರ್ಗ ಸುಖ. ಪ್ರತೀ ಹೆಣ್ಣಿನ ಬದುಕು ಪರಿಪೂರ್ಣವಾಗುವುದು ಆಕೆ ತಾಯಿಯಾದಾಗಲೇ. ಆದರೆ ಕೆಲವೊಮ್ಮೆ ಆನುವಂಶಿಕವಾಗಿ ಬರುವ ವರ್ಣತಂತು ಅಥವಾ ಕ್ರೋಮೋಸೋಮ್ಗಳಿಂದ ಹುಟ್ಟಿದ ಮಕ್ಕಳು ಡೌನ್ ಸಿಂಡ್ರೋಮ್ಗೆ (Down Syndrome) ಒಳಗಾಗುತ್ತಾರೆ. ವೈದ್ಯಕೀಯ ಲೋಕಕ್ಕೆ ಇಂದಿಗೂ ಡೌನ್ ಸಿಂಡ್ರೋಮ್ ಮಕ್ಕಳಲ್ಲಿ ಕಂಡುಬರಲು ಕಾರಣವೇನೆಂದು ತಿಳಿದಿಲ್ಲ. ಆನುವಂಶಿಕವಾಗಿಯೂ ಈ ಸ್ಥಿತಿ ಬರುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ. ಮಗುವಿನ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವ ಸ್ಥಿತಿಯನ್ನು ಡೌನ್ ಸಿಂಡ್ರೋಮ್ ಎಂದು ಕರೆಯುತ್ತಾರೆ.
ವಿಶ್ವ ಡೌನ್ ಸಿಂಡ್ರೋಮ್ ಡೇ:
ಪ್ರತೀ ವರ್ಷ ಮಾರ್ಚ್ 21ರಂದು ವಿಶ್ವ ಡೌನ್ ಸಿಂಡ್ರೋಮ್ ಡೇಯನ್ನು ಆಚರಿಸಲಾಗುತ್ತದೆ. ಡೌನ್ ಸಿಂಡ್ರೋಮ್ ಬಗೆಗೆ ಜಾಗೃತಿ ಮೂಡಿಸಲು, ಅಂತಹ ಸ್ಥಿತಿ ಹೊಂದಿರುವ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಅವರ ಶಕ್ತಿಯೇನು ಎಂಬುದರ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. 2006 ಮಾರ್ಚ್ 21 ರಂದು ಮೊದಲ ಬಾರಿಗೆ ಇದರ ಆಚರಣೆಯನ್ನು ಜಾರಿಗೆ ತರಲಾಯಿತು. 2022ರಲ್ಲಿ ಡೌನ್ ಸಿಂಡ್ರೋಮ್ ಸ್ಥಿತಿಯಲ್ಲಿರುವವರಿಗೂ ಎಲ್ಲ ಹಕ್ಕುಗಳನ್ನು ನೀಡಲು ನಾವು ನಿರ್ಧರಿಸಬೇಕು ಎನ್ನುವ ಥೀಮ್ ಮೂಲಕ ಆಚರಿಸಲಾಗುತ್ತಿದೆ. ಇಂದು ಜಗತ್ತಿನಾದ್ಯಂತ ವಿಶ್ವ ಡೌನ್ ಸಿಂಡ್ರೋಮ್ ದಿನ ಆಚರಿಸಲಾಗುತ್ತಿದೆ.
ಬೆಂಗಳೂರಿನ ಹ್ಯಾಪಿನೆಸ್ ಈಸ್ ಖುಷಿ ಸಂಸ್ಥೆಯ ಸಂಸ್ಥಾಪಕಿ ಹಾಗೂ ವಿಶೇಷ ಅಧ್ಯಾಪಕಿ ತೇಜಲ್ ಶಾ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಡೌನ್ ಸಿಂಡ್ರೋಮ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಏನಿದು ಡೌನ್ ಸಿಂಡ್ರೋಮ್?
ತೇಜಲ್ ಅವರ ಪ್ರಕಾರ ವಿಭಿನ್ನ, ಪ್ರತೀ ಮಗುವಿಗೆ 23 ಕ್ರೋಮೋಸೋಮ್ ತಾಯಿಯಿಂದ ಮತ್ತು 23 ಕ್ರೋಮೋಸೋಮ್ ತಂದೆಯಿಂದ ಬಂದಿರುತ್ತದೆ. ಆದರೆ ಡೌನ್ ಸಿಂಡ್ರೋಮ್ ಇರುವ ಮಕ್ಕಳಿಗೆ ಒಂದು ಕ್ರೋಮೋಸೋಮ್ ಪ್ರಮಾಣ ಅಧಿಕವಾಗಿರುತ್ತದೆ. ಸಾಮಾನ್ಯವಾಗಿ 46 ಕ್ರೋಮೋಸೋಮ್ ಇರುತ್ತದೆ ಆದರೆ ಈ ರೀತಿ ಸ್ಥಿತಿಯೊಂದಿಗೆ ಹುಟ್ಟುವ ಮಕ್ಕಳಿಗೆ ಒಟ್ಟು 47 ಕ್ರೋಮೋಸೋಮ್ಗಳನ್ನು ಇರುತ್ತವೆ. ಈ ರೀತಿ ಇದ್ದರೆ ಅದನ್ನು ಡೌನ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದು ಆನುವಂಶೀಯವಾಗಿ ಬರುವ ಸ್ಥಿತಿಯಾಗಿದೆ. ಒಂದು ಕ್ರೋಮೋಸೋಮ್ ಅಧಿಕವಾಗಿರುವ ಕಾರಣ ಮಗುವಿನ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಅಂದರೆ ದೈಹಿಕ ಬೆಳವಣಿಗೆ ಸರಿಯಾಗಿ ಆಗದಿರುವುದು, ಸರಿಯಾಗಿ ಕಿವಿ ಕೇಳದಿರುವುದು, ಮಾತಿನಲ್ಲಿ ಅಸ್ಪಷ್ಟತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲಾ ಮಕ್ಕಳಲ್ಲಿಯೂ ಈ ರೀತಿಯ ಸಮಸ್ಯೆಗಳು ಕಂಡುಬರುವುದಿಲ್ಲ. ಪ್ರತಿಯೊಬ್ಬರಲ್ಲಿಯೂ ಬೇರೆ ಬೇರೆ ರೀತಿಯ ಆರೋಗ್ಯ ಏರುಪೇರಾಗುತ್ತದೆ. ಡೌನ್ ಸಿಂಡ್ರೋಮ್ ಸ್ಥಿತಿಯನ್ನು ಹೊಂದಿರುವ ಪ್ರತೀ ಮಕ್ಕಳು ವಿಭಿನ್ನವಾಗಿರುತ್ತಾರೆ. ಈ ರೀತಿಯ ಸ್ಥಿತಿಯನ್ನು ವೈದ್ಯಕೀಯವಾಗಿ ಟ್ರಿಸೋಮಿ ಅಥವಾ ಟ್ರಿಸೋಮಿ 21 ಎಂದು ಕರೆಯಲಾಗುತ್ತದೆ.
ಭಾರತದಲ್ಲಿನ ಸ್ಥಿತಿಗತಿ:
ಭಾರತದಲ್ಲಿ ಪ್ರತೀ ವರ್ಷ 29ರಿಂದ 30 ಸಾವಿರ ಮಕ್ಕಳು ಈ ರೀತಿಯ ಡೌನ್ ಸಿಂಡ್ರೋಮ್ ಸ್ಥಿತಿಯನ್ನು ಹೊಂದುವ ಮೂಲಕ ಜನಿಸುತ್ತಾರೆ. 750 ಮಕ್ಕಳಲ್ಲಿ ಪ್ರತೀ ಒಂದು ಮಗುವಿಗೆ ಇದು ಕಾಣಿಸಿಕೊಳ್ಳುತ್ತಿದೆ. ಇದು ಒಟ್ಟಾರೆ ಲೆಕ್ಕಾಚಾರವಾಗಿದೆ. ಆದರೆ ಹಳ್ಳಿಗಳಲ್ಲಿ ಈ ರೀತಿ ಸಮಸ್ಯೆಯಿಂದ ಬಳಲುತ್ತಿರುವ ಹಲವು ಮಕ್ಕಳಿದ್ದಾರೆ. ಅವರನ್ನು ನಾವು ತಲುಪಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಯಾವ ಮಕ್ಕಳೂ ಕೂಡ ಬೇರೆ ಎಂದು ಪರಿಗಣಿಸಿದೆ. ಎಲ್ಲರಲ್ಲೂ ಇರುವ ಶಕ್ತಿಯನ್ನು, ಪ್ರತಿಭೆಯನ್ನು ಹೊರತರುವ ಕೆಲಸ ನಡೆಯುತ್ತಿದೆ. ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಇಂತಹ ಮಕ್ಕಳ ಆರೈಕೆ ಹೇಗೆ?:
ಡೌನ್ ಸಿಂಡ್ರೋಮ್ಗೆ ಪ್ರಮುಖ ಕಾರಣಗಳೇನು?
ಈವರೆಗೂ ಡೌನ್ ಸಿಂಡ್ರೋಮ್ಗೆ ಇದೇ ಕಾರಣ ಎಂದು ಗುರುತಿಸಲು ಸಾಧ್ಯವಾಗಿಲ್ಲ. ಇದೊಂದು ಆನುವಂಶೀಯವಾಗಿ ಬರುವ ವೈದ್ಯಕೀಯ ಸ್ಥಿತಿಯಾಗಿದೆ. ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿ ತಾಯಿ ಹೆಚ್ಚು ಒತ್ತಡಕ್ಕೊಳಗಾದರೂ ಹುಟ್ಟುವ ಮಕ್ಕಳು ಈ ರೀತಿಯ ಕಂಡೀಷನ್ ಎದುರಿಸಬಹುದು. ಈಗ ವೈದ್ಯಕೀಯ ಲೋಕ ಮುಂದುವರೆದಿದೆ. ಆರಂಭದ ಲಕ್ಷಣಗಳಲ್ಲಿಯೇ ಮಗುವನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸುವ ಕಾರಣ ಸಾವಿನ ಪ್ರಮಾಣ ಕಡಿಮೆ ಇದೆ.
ಆರಂಭಿಕ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು:
5 ವರ್ಷದ ವರೆಗೆ ಪ್ರತೀ 6 ತಿಂಗಳಿಗೆ ಮಗುವಿನ ಕಿವಿ, ಕಣ್ಣು, ಹಲ್ಲು ಸೇರಿದಂತೆ ದೇಹದ ಎಲ್ಲಾ ಭಾಗಗಳ ತಪಾಸಣೆಯನ್ನು ಮಾಡಲಾಗುತ್ತದೆ. ಆಗ ಮಗು ಬೆಳವಣಿಗೆಯಲ್ಲಿ ಯಾವ ಹಂತದಲ್ಲಿದೆ ಎನ್ನುವುದು ತಿಳಿಯುತ್ತದೆ. ಅಲ್ಲದೆ ಮಗುವನ್ನು ವಿವಿಧ ಆಟದಲ್ಲಿ ತೊಡಗಿಸುವುದು, ಅದರೊಂದಿಗೆ ನಿರಂತರ ಸಂವಹನ ನಡೆಸುವುದು, ಥೆರಪಿ, ಕೇಳಿಸಿಕೊಳ್ಳುವ ಶಕ್ತಿಯ ತಪಾಸಣೆ ಮತ್ತು ಕಾಲಕಾಲಕ್ಕೆ ತಪಾಸಣೆ ಮಾಡುವುದು ಅತೀ ಅಗತ್ಯವಾಗಿದೆ. ಇದರಿಂದ ಮಗುವಿನಲ್ಲಿ ತಡವಾಗುವ ಮಾತು, ಕೇಳಿಸಿಕೊಳ್ಳುವ ಶಕ್ತಿ ಎಲ್ಲವೂ ಕಾಲ ಕ್ರಮೇಣ ಒಂದು ಹಂತದವರೆಗೆ ಸರಿಯಾಗುತ್ತದೆ ಎನ್ನುತ್ತಾರೆ.
ಡೌನ್ ಸಿಂಡ್ರೋಮ್ ಸ್ಥಿತಿಯಿರುವ ಮಕ್ಕಳಲ್ಲೂ ಒಂದು ಶಕ್ತಿಯಿದೆ. ಅವರಲ್ಲೂ ಪ್ರತಿಭೆಯಿದೆ ಎನ್ನುವುದನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ. ಡೌನ್ ಸಿಂಡ್ರೋಮ್ ಇರುವ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸುವ ಮುಲಕ ಅವರನ್ನೂ ಸಾಮಾನ್ಯ ಮಕ್ಕಳಂತೆ ಬೆಳೆಸಲು ಪ್ರಯತ್ನಿಸಲಾಗುತ್ತಿದೆ. ಗಣಿತ, ವಿಜ್ಞಾನದಂತಹ ಕಠಿಣ ವಿಷಯಗಳನ್ನೂ ಸುಲಭವಾಲಿ ಅರ್ಥೈಸಿ ಓದಿನಲ್ಲಿಯೂ ಮುಂದೆ ಬರುವಂತೆ ತರಬೇತಿ ನೀಡಲಾಗುತ್ತಿದೆ. ಅಂತಹ ರ್ಸತಿತಿ ಇರುವ ಮಕ್ಕಳು ಮತ್ತು ತಾಯಂದಿರಿಗೂ ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ತರಬೇತಿ ನೀಡುತ್ತೇವೆ, ಈಗಾಗಲೇ ಸಾವಿರ ಮಕ್ಕಳು ನಮ್ಮ ಸಂಸ್ಥೆಯಿಂದ ತರಬೇತಿ ಪಡೆದಿದ್ದಾರೆ. ನಿಜ ಹೇಳಬೇಕೆಂದರೆ, ಡೌನ್ ಸಿಂಡ್ರೋಮ್ ಇರುವ ಮಕ್ಕಳು ಜಗತ್ತಿನ ಅತೀ ಬುದ್ಧಿವಂತ ಮಕ್ಕಳು. ಅವರಲ್ಲಿಯೂ ಕಲೆ, ಪ್ರತಿಭೆಯಿದೆ ಅದನ್ನು ಗುರುತಿಸುವ ಕೆಲಸವಾಗಬೇಕು ಎಂದು ಹೇಳುತ್ತಾರೆ ತೇಜಲ್.
Published On - 8:00 am, Mon, 21 March 22