World Hearing Day 2023: ಅಧಿಕ ಶಬ್ದ ಮಾಲಿನ್ಯದಿಂದ ದೂರವಿದ್ದು, ಸುರಕ್ಷಿತವಾಗಿರೋಣ
ಪ್ರತಿ ವರ್ಷ ಮಾರ್ಚ್ 3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ಕಿವುಡುತನ ಮತ್ತು ಶ್ರವಣದೋಷವನ್ನು ತಡೆಗಟ್ಟುವುದು ಮತ್ತು ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಗುರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ಶಬ್ದ ಮಾಲಿನ್ಯವು ವಿಪರೀತವಾಗಿ ಹೆಚ್ಚುತ್ತಿದೆ. ಇದಲ್ಲದೇ ತಂತ್ರಜ್ಞಾನ ಬೆಳೆಯುತ್ತಾ ಹೋದ ಹಾಗೆ ಸ್ಮಾರ್ಟ್ ಫೋನ್, ಲ್ಯಾಪ್ಟಾಪ್ಗಳಲ್ಲೇ ದಿನ ಪೂರ್ತಿ ಮುಳುಗಿ ಹೋಗುತ್ತಿರುವುದನ್ನು ಕಾಣಬಹುದು. ಜೊತೆಗೆ ಒತ್ತಡ ಜೀವನ ಹಾಗೂ ಬದಲಾದ ಆಹಾರಕ್ರಮ. ಇದು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೊಸ ಸಂಶೋಧನೆಯ ಪ್ರಕಾರ, ಸಿಗರೇಟ್ ಮತ್ತು ಆಲ್ಕೋಹಾಲ್ ಸಹ ಕಳಪೆ ಶ್ರವಣ ಸಾಮರ್ಥ್ಯಕ್ಕೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಪ್ರಪಂಚದಾದ್ಯಂತ ಸುಮಾರು 1.5 ಶತಕೋಟಿ ಜನರು ಕೆಲವು ರೀತಿಯ ಶ್ರವಣ ಸಮಸ್ಯೆಗಳನ್ನು ಹೊಂದಿದ್ದಾರೆ. 2050 ರ ವೇಳೆಗೆ, ಅಂತಹ ಜನರ ಸಂಖ್ಯೆ 2.5 ಬಿಲಿಯನ್ ತಲುಪುತ್ತದೆ. ಬಹುಪಾಲು ಯುವಕರು ಅಕಾಲಿಕವಾಗಿ ಶ್ರವಣ ಶಕ್ತಿಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ ಎಂದು ತಿಳಿದು ಬಂದಿದೆ.
ಅಮೇರಿಕನ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಸಿಗರೇಟ್ ಸೇವನೆಯು ಶ್ರವಣ ದೋಷದ ಮೇಲೆ ನೇರವಾಗಿ ಪರಿಣಾಮ ಬೀರಬಹುದು ಎಂದು ತಿಳಿದುಬಂದಿದೆ. ಚಿಕ್ಕ ವಯಸ್ಸಿನಲ್ಲಿ ಧೂಮಪಾನ ಮಾಡಿದರೆ, ಕಿವುಡುತನದ ಸಮಸ್ಯೆಯನ್ನು ಯೌವನದಲ್ಲಿಯೇ ಎದುರಿಸಬೇಕಾಗುತ್ತದೆ ಎಂದು ಅಧ್ಯಯನವು ತಿಳಿಸಿದೆ. ಈ ಅಧ್ಯಯನವನ್ನು 15.34 ಲಕ್ಷ ಜನರ ಮೇಲೆ ನಡೆಸಲಾಗಿದ್ದು, ಇವರಲ್ಲಿ 2760 ಜನರು ಕಿವುಡುತನಕ್ಕೆ ಬಲಿಯಾಗಿದ್ದರು. ಶ್ರವಣ ದೋಷಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಸಿಗರೇಟ್ ಸೇದುವವರಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಿವಿಯೊಳಗೆ ಗುಂಯ್ ಎನ್ನುವ ಶಬ್ದ ಕೇಳ್ತಿದೆಯಾ? ತಡ ಮಾಡಬೇಡಿ, ವೈದ್ಯರ ಸಲಹೆ ಪಡೆಯಿರಿ
ಶ್ರವಣ ಶಕ್ತಿಯನ್ನು ಕಾಪಾಡಿಕೊಳ್ಳಲು ನೀವು ತೆಗೆದುಕೊಳ್ಳಬೇಕಾದ ಕ್ರಮಗಳು ಇಲ್ಲಿವೆ:
- ನೀವು ಮೊಬೈಲ್‌ನಲ್ಲಿ ಇಯರ್ ಫೋನ್ ಬಳಸಿ ಏನನ್ನಾದರೂ ಕೇಳುತ್ತಿದ್ದರೆ, ಅದರ ಧ್ವನಿಯನ್ನು ಶೇಕಡಾ 60 ಕ್ಕಿಂತ ಕಡಿಮೆ ಇರಿಸಿ. ಶೇಕಡಾ 80 ರಷ್ಟು ವಾಲ್ಯೂಮ್‌ನಲ್ಲಿ ದಿನಕ್ಕೆ 90 ನಿಮಿಷಗಳಿಗಿಂತ ಹೆಚ್ಚು ಕಾಲ ಕೇಳಬೇಡಿ.
- ಕಣ್ಣು ಮತ್ತು ಮೂಗಿಗೆ ಸಂಬಂಧಿಸಿದ ಯಾವುದೇ ಸೋಂಕು ಇದ್ದರೆ, ತಕ್ಷಣವೇ ಚಿಕಿತ್ಸೆ ಪಡೆಯಿರಿ. ನೀವು ನಿರ್ಲಕ್ಷ್ಯಿಸಿದರೆ ಅದು ನಿಮ್ಮ ಶ್ರವಣ ಸಾಮರ್ಥ್ಯದ ಮೇಲೆ ನೇರವಾಗಿ ಕೆಟ್ಟ ಪರಿಣಾಮವನ್ನು ಬೀರಬಹುದು ಎಂದು ಸಂಶೋಧನೆಗಳು ತಿಳಿಸಿವೆ.
- ಪ್ರತಿ ಬಾರಿ ಕಿವಿಯನ್ನು ಸ್ವಚ್ಛಗೊಳಿಸುವಾಗ ಸಾಕಷ್ಟು ಜನರಿಗೆ ಕಿವಿಗೆ ಪಿನ್, ಕಡ್ಡಿಗಳನ್ನು ಹಾಕುವ ಅಭ್ಯಾಸವಿರುತ್ತದೆ. ಇಂತಹ ಅಭ್ಯಾಸ ನಿಮ್ಮಲ್ಲಿದ್ದರೆ ತಕ್ಷಣ ಬಿಟ್ಟು ಬಿಡಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:43 am, Fri, 3 March 23