ಪ್ರತಿಯೊಂದರಲ್ಲಿಯೂ ಸಾಧನೆ ತೋರುವತ್ತ ದಾಪುಗಾಲು ಇಡುವ ಮಾನವ ಒಮ್ಮೊಮ್ಮೆ ಎಡವಿ ಬೀಳುವ ಸಂದರ್ಭ ಬರುತ್ತದೆ. ಕೇವಲ ಸಂಪತ್ತು ಇದ್ದರೆ ಸಾಲದು ಅದರ ಜೊತೆಯಲ್ಲಿಯೇ ಆರೋಗ್ಯ ಇದ್ದರೆ ಅದಕ್ಕಿಂತ ಬೇರೆ ಭಾಗ್ಯವಿಲ್ಲ. ಆದ್ದರಿಂದಲೇ ಹಿರಿಯರು ಹೇಳುವುದು ಆರೋಗ್ಯವೇ ಭಾಗ್ಯ ಎಂದು. ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಈ ಕ್ಷಣದ ಆದ್ಯತೆಯಾಗಿದೆ. ಆರೋಗ್ಯ ರಕ್ಷಣೆ ಎನ್ನುವುದು ವೈಯುಕ್ತಿಕ ಹಂತದಿಂದ ಸಾರ್ವಜನಿಕ ಹಂತಕ್ಕೆ ತಲುಪಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಮಜಲುಗಳನ್ನು ದಾಟಿದ್ದರೂ ನಿತ್ಯ ಎದುರಿಸುವ ಸವಾಲುಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎನ್ನುತ್ತಾರೆ ಬೆಂಗಳೂರಿನ ಮನಃಶಾಸ್ತ್ರಜ್ಞೆ ಡಾ.ಪ್ರೀತಿ.
ಅಭಿವೃದ್ದಿ ಹೊಂದಿದ ಹಾಗೂ ಅಭಿವೃದ್ದಿ ಹೊಂದುತ್ತಿರುವ ದೇಶಗಳ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಮಟ್ಟದಲ್ಲಿ ಆರೋಗ್ಯ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಪ್ರತಿ ವರ್ಷ ಅಕ್ಟೋಬರ್ 10ರ ದಿನಾಂಕವನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಗುರುತಿಸಲಾಗಿದೆ. ಅಕ್ಟೋಬರ್ ತಿಂಗಳಿಡೀ ಮಾನಸಿಕ ಆರೋಗ್ಯ ಕಾಳಜಿಯ ಪ್ರಯತ್ನಗಳು ನಡೆಯುತ್ತವೆ. ಆದರೆ ಒಂದು ವಿಷಯ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ, ಮಾನಸಿಕ ಆರೋಗ್ಯವನ್ನು ಒಂದು ದಿನದಲ್ಲಿ ಗಳಿಸಲು ಆಗುವುದಿಲ್ಲ. ನೆಮ್ಮದಿ ಎನ್ನುವುದು ನಮ್ಮಲ್ಲಿ ನಿರಂತರವಾಗಿ ನಡೆಯುವ ಹಲವು ಕ್ರಿಯೆ-ಪ್ರತಿಕ್ರಿಯೆಗಳಿಂದ ಮೂಡುವ ಒಂದು ಭಾವ.
ವಿಶ್ವ ಮಾನಸಿಕ ಆರೋಗ್ಯ ದಿನದ ನೆಪದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರದ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳಿಗೆ ಸಾರ್ವಜನಿಕರಲ್ಲಿ ಮಾನಸಿಕ ಸ್ವಾಸ್ತ್ಯ ಸುಧಾರಿಸಲು ಏನೆಲ್ಲಾ ಮಾಡಬೇಕು ಎಂಬ ಜಾಗೃತಿ ಮೂಡಿಸಲು ಹಲವು ಪ್ರಯತ್ನಗಳನ್ನು ಮಾಡಿದೆ.
ಮಾನಸಿಕ ಆರೋಗ್ಯ
ನಮ್ಮ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದರೆ ಎರಡು ಮುಖ್ಯ ಅಂಶಗಳು ಎದ್ದು ಕಾಣುತ್ತವೆ. ಒಂದು ಕ್ರಿಯೆ, ಮತ್ತೊಂದು ಪ್ರತಿಕ್ರಿಯೆ. ಯಾವುದೇ ಕ್ರಿಯೆಗೆ ವ್ಯಕ್ತಿಯೊಬ್ಬ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದು ಆತನ ಅಥವಾ ಆಕೆಯ ಮಾನಸಿಕ ಆರೋಗ್ಯವನ್ನು ಅವಲಂಬಿಸಿರುತ್ತದೆ. ವ್ಯಕ್ತಿಯು ತನ್ನ ನಿತ್ಯ ಜೀವನದ ಒತ್ತಡಗಳನ್ನು ನಿಭಾಯಿಸುವುದು, ತನ್ನ ಸಾಮರ್ಥ್ಯದ ಅರಿವು ಪಡೆದುಕೊಳ್ಳುವುದು ಹಾಗೂ ಸಾಮಾಜಿಕ ಜೀವನದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ಸಮಾಜದ ಅಭಿವೃದ್ಧಿಗೆ ಪೂರಕವಾದ ಕೊಡುಗೆ ನೀಡುವುದನ್ನು ವಿಶ್ವ ಆರೋಗ್ಯ ಸಂಸ್ಥೆಯು ಸದೃಢ ಮಾನಸಿಕತೆ ಎಂದು ವ್ಯಾಖ್ಯಾನಿಸುತ್ತದೆ.
ಸಾಮಾಜಿಕ ಸ್ವಾಸ್ಥ್ಯ ಮತ್ತು ಕೋವಿಡ್ ಪ್ರಭಾವ
ಜಾಗತಿಕ ಸಮಸ್ಯೆಯಾದ ಕೊವಿಡ್ ಇಂದು ಬಹುತೇಕ ಎಲ್ಲ ವ್ಯಕ್ತಿಗಳ ಮಾನಸಿಕ ಸ್ವಾಸ್ಥ್ಯದ ಮೇಲೆಯೂ ಪರಿಣಾಮ ಬೀರಿದೆ. ಇದರ ನೇರ ಪ್ರಭಾವವು ಆರೋಗ್ಯ ಕಾರ್ಯಕರ್ತರು, ಮುಖ್ಯವಾಹಿನಿಯಲ್ಲಿ ಶ್ರಮಿಸುವ ಮುಂಚೂಣಿ ಸೇವಾ ಕಾರ್ಯಕರ್ತರು, ವಿದ್ಯಾರ್ಥಿಗಳು, ವಯೋವೃದ್ದರು ಹಾಗೂ ಒಂಟಿಯಾಗಿ ವಾಸಿಸುವವರ ಮೇಲೆ ಕಂಡು ಬರುತ್ತಿದೆ. ಈ ಮೊದಲೇ ಮಾನಸಿಕ ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಬಳಲುವವರು ಕೊವಿಡ್ ತೀವ್ರತೆ ಹೆಚ್ಚಾದಂತೆ ನರಸಂಬಂಧಿ, ಮಾನಸಿಕ ಅಸ್ವಸ್ಥತೆ ಹಾಗೂ ಇತರ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಯಾವುದೇ ಸಂಕಷ್ಟಗಳಿಗೆ ಮನುಷ್ಯ ಭಯ, ಒತ್ತಡ, ಉದ್ವಿಗ್ನತೆಯಿಂದ ಪ್ರತಿಕ್ರಿಯಿಸುತ್ತಾನೆ. ಇದು ಸಹಜ ಕ್ರಿಯೆಯಾಗಿ ಬದುಕಿನ ಭಾಗವಾದರೆ ಕೆಲ ಸಮಯದಲ್ಲಿಯೇ ನಿರಾಳತೆ ನೆಲೆಸುತ್ತದೆ. ಆದರೆ ಕೆಲವೊಮ್ಮೆ ಸಣ್ಣಪುಟ್ಟ ಘಟನೆಗಳು, ಒತ್ತಡಗಳು ಮಾನಸಿಕವಾಗಿ ಜರ್ಝರಿತವಾಗುವಂತೆ ಮಾಡುತ್ತದೆ.
ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯದ ಬಗ್ಗೆ ದೃಢ ನಂಬಿಕೆ ತಾಳಬೇಕು. ಸಂದರ್ಭಕ್ಕೆ ಸರಿಯಾದ ರೀತಿಯಲ್ಲಿ ಸಮಚಿತ್ತ ಭಾವದಿಂದ ಪ್ರತಿಕ್ರಿಯಿಸಲು ಪ್ರಯತ್ನಿಸಬೇಕು. ತಮ್ಮ ಕುಟುಂಬ, ಸ್ನೇಹಿತರು, ಕೆಲಸದ ಸ್ಥಳದಲ್ಲಿ ಭೌತಿಕ ಹಾಗೂ ಮಾನಸಿಕವಾಗಿ ಅಸ್ತಿತವ್ವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ಒಡನಾಡಿಗಳಿಗೆ ಪ್ರಾಮಾಣಿಕ ಸ್ಪಂದನೆ ನೀಡಬೇಕು.
ಮಾನಸಿಕ ಸ್ವಾಸ್ಥ್ಯದ ಅಂಕಿಅಂಶಗಳ ಪ್ರಕಾರ ಸುಮಾರು ವಿಶ್ವದಲ್ಲಿ 100 ಕೋಟಿ ಮಂದಿ ಒಂದಲ್ಲಾ ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಮಾನಸಿಕ ಖಿನ್ನತೆ ವಿಶ್ವದ ಎಲ್ಲ ದೇಶಗಳಲ್ಲಿ ಕಂಡುಬರುವ ಸಮಸ್ಯೆ. ವಿಶ್ವದ ಒಟ್ಟು ವಯಸ್ಕರಲ್ಲಿ ಶೇ 5ರಷ್ಟು ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ. ಜಾಗತಿಕವಾಗಿ 10-19ರ ವಯೋಮಾನದ 7 ಜನರಲ್ಲಿ ಒಬ್ಬರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.
ಸ್ಕಿಜೋಫ್ರೇನಿಯಾದಂಥ ತೀವ್ರತರವಾದ ಮಾನಸಿಕ ರೋಗಗಳಿಂದ ಬಳಲುವ ರೋಗಿಗಳು ಸಾಮಾನ್ಯ ಜನರಿಗಿಂತ 10-20 ವರ್ಷ ಮೊದಲು ಮರಣಹೊಂದುತ್ತಾರೆ. ಮಾನಸಿಕ ಸಮಸ್ಯೆಗಳು ಆತ್ಮಹತ್ಯೆಗೂ ಕಾರಣವಾಗುತ್ತವೆ. 15ರಿಂದ 29 ವಯೋಮಾನದವರ ಸಾವಿನ ಪ್ರಮಾಣ ಹೆಚ್ಚಿಸುವಲ್ಲಿ ನಾಲ್ಕನೇ ಪ್ರಮುಖ ಕಾರಣವಾಗಿ ಆತ್ಮಹತ್ಯೆಯು ಪರಿಗಣಿಸಲ್ಪಟ್ಟಿದೆ. ಭಾರತದಲ್ಲಿ 15 ಲಕ್ಷ ಜನರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
2017ರಲ್ಲಿ ನಮ್ಮ ಸರ್ಕಾರವು ಮಾನಸಿಕ ಆರೋಗ್ಯ ಕಾಯ್ದೆ ಜಾರಿ ಮಾಡಿತ್ತು. ಈ ಕಾಯ್ದೆಯ ಪ್ರಕಾರ ಮಾನಸಿಕ ರೋಗಿಗೆ ಮಾನಸಿಕ ಚಿಕಿತ್ಸೆ ಹಾಗೂ ಸೇವೆಯನ್ನು ಶುಲ್ಕರಹಿತವಾಗಿ ಒದಗಿಸುವುದು, ಆತನ ರಕ್ಷಣೆ, ಮಾನಸಿಕ ಚಿಕಿತ್ಸೆ ಹಾಗೂ ಆತನ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಹೊಣೆಗಾರಿಕೆಯಾಗುತ್ತದೆ. ಅಂತಹ ಸೇವೆಗಳನ್ನು ಪೂರೈಸುವಲ್ಲಿ ವಿಫಲವಾದಲ್ಲಿ ಪರಿಹಾರ ಕೋರಲು ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕವಾಗಿ ಬದುಕುವ ಹಕ್ಕು, ಗೌಪ್ಯತೆ ಕಾಪಾಡುವ, ಚಿಕಿತ್ಸೆಗೆ ಸಂಬಂಧಿಸಿದ ದಾಖಲೆ ಪಡೆಯುವ, ಅಮಾನವೀಯ ರೀತಿಯಲ್ಲಿ ಚಿಕಿತ್ಸೆ ನೀಡುವುದನ್ನು ತಡೆಗಟ್ಟುವ ಹಾಗೂ ಅಸಮಾನತೆ ಮತ್ತು ತಾರತಮ್ಯ ಮಾಡುವುದನ್ನು ತಡೆಗಟ್ಟುವ ಅವಕಾಶವನ್ನು ಕಾನೂನು ರೀತಿಯಲ್ಲಿ ರೂಪಿಸಲಾಗಿದೆ. ಈ ಪ್ರಕಾರ ಪ್ರತಿಯಿಬ್ಬರ ಮಾನಸಿಕ ಆರೋಗ್ಯ ಕಾಪಾಡುವುದು, ಬಡತನ ರೇಖೆಗಿಂತ ಕೆಳಗಿರುವವರು / ಬಡತನ ರೇಖೆಗಿಂತ ಕಾರ್ಡ್ ಹೊಂದಿಲ್ಲದೇ ನಿರ್ಗತಿಕರಾದವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಪ್ರಸ್ತಾಪಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ ದೈಹಿಕ ನ್ಯೂನತೆ ಹೊಂದಿದವರಿಗೆ ಆಂಬುಲೆನ್ಸ್ ಬಳಸಲು ಅವಕಾಶ ನೀಡಿರುವ ಹಾಗೆಯೇ ಮಾನಸಿಕ ರೋಗಿಗಳಿಗೂ ಬಳಸಲು ಅವಕಾಶ ಕಲ್ಪಿಸಿದೆ. ಪೊಲೀಸ್ ಅಧಿಕಾರಿಗಳ ಕಾರ್ಯದ ಬಗ್ಗೆಯೂ ತಿಳಿಸಲಾಗಿದೆ.
ಲೇಖನದ ಕೊನೆಯಲ್ಲಿ ಒಂದು ವಿಷಯ ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ. ಬಹುತೇಕ ಮಾನಸಿಕ ಕಾಯಿಲೆಗಳು ಗುಣವಾಗುತ್ತವೆ. ಶಾಶ್ವತವಾಗಿ ಬಾಧಿಸುವುದಿಲ್ಲ. ಖಿನ್ನತೆ ಹಾಗೂ ಆತಂಕದಂತಹ ಸಾಮಾನ್ಯ ಮಾನಸಿಕ ಸಮಸ್ಯೆಗಳನ್ನು ಆಪ್ತ ಸಮಾಲೋಚನೆ, ಸೂಕ್ತ ಔಷಧಿ ಮೂಲಕ ನಿವಾರಿಸಿಕೊಳ್ಳಬಹುದು. ನಮ್ಮ ಸರ್ಕಾರವು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸುವಲ್ಲಿ ಆರೋಗ್ಯ ಕಾರ್ಯಕರ್ತೆಯರಿಗೆ ತರಬೇತಿ ಒದಗಿಸಿದೆ. ತೀವ್ರತರವಾದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರ ನಿಯಮಿತ ತಪಾಸಣೆ, ಚಿಕಿತ್ಸೆ ಪಡೆದುಕೊಂಡರೆ ಅಕಾಲಿಕ ಮರಣವನ್ನು ಖಂಡಿತ ತಡೆಗಟ್ಟಬಹುದು.
ಸಮಾಜದಲ್ಲಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ, ಲಿಂಗ ತಾರತಮ್ಯ, ವಯೋಭೇದವಿಲ್ಲದೆ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ದೊರೆಯುವಂಥ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ಮಾನಸಿಕ ಆರೋಗ್ಯದ ಕುರಿತು ಸರಿಯಾದ ತಿಳುವಳಿಕೆ ಮೂಡಿಸಲು ಡಿಜಿಟಲ್ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ: World Mental Health Day 2021: ವಿಶ್ವ ಮಾನಸಿಕ ಆರೋಗ್ಯ ದಿನದಂದು ನೀವು ತಿಳಿದಿರಲೇಬೇಕಾದ ಮುಖ್ಯ ಅಂಶಗಳು ಇಲ್ಲಿದೆ
ಇದನ್ನೂ ಓದಿ: Mental Health: ನೀವು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೀರಾ? ಸಮಸ್ಯೆಗೆ ಪರಿಹಾರಗಳು ಇಲ್ಲಿವೆ