Mars transit in Gemini: ಏಪ್ರಿಲ್ 14ರಿಂದ ಈ 5 ರಾಶಿಯವರಿಗೆ ಕುಜ ಬಲ

ಏಪ್ರಿಲ್ 14, 2021ರಂದು ಕುಜ ಗ್ರಹವು ವೃಷಭದಿಂದ ಮಿಥುನ ರಾಶಿಗೆ ಪ್ರವೇಶ ಆಗುತ್ತದೆ. ಆ ನಂತರ ಜೂನ್ 2, 2021ರ ವರೆಗೆ ಅಲ್ಲೇ ಇರುವ ಮಂಗಳ, ಯಾವ ರಾಶಿಯ ಮೇಲೆ ಏನು ಪ್ರಭಾವ ಬೀರಲಿದ್ದಾನೆ ಎಂಬ ಮಾಹಿತಿ ಇಲ್ಲಿದೆ.

  • TV9 Web Team
  • Published On - 6:42 AM, 9 Apr 2021
Mars transit in Gemini: ಏಪ್ರಿಲ್ 14ರಿಂದ ಈ 5 ರಾಶಿಯವರಿಗೆ ಕುಜ ಬಲ
ಪ್ರಾತಿನಿಧಿಕ ಚಿತ್ರ

ನವಗ್ರಹಗಳ ಪೈಕಿ ಮುಖ್ಯವಾದ ಗ್ರಹಗಳಲ್ಲೊಂದು ಕುಜ. ಇದೇ ಏಪ್ರಿಲ್ 14ರಂದು ವೃಷಭದಿಂದ ಮಿಥುನಕ್ಕೆ ಪ್ರವೇಶಿಸಲಿದೆ ಕುಜ ಗ್ರಹ. ಅಲ್ಲಿಂದ ಆಚೆಗೆ ಜೂನ್ 2, 2021ರ ತನಕ ಅದೇ ರಾಶಿಯಲ್ಲಿ ಸಂಚರಿಸಲಿದೆ. ಕುಜ ಗ್ರಹ ಯಾವ ಕಾರಣಕ್ಕೆ ಪ್ರಮುಖ ಅಂದರೆ, ಶನಿ ಕಾಡಿ ಸತ್ತವರಿಲ್ಲ; ಕುಜ ಕಾಡಿ ಬದುಕಿದವರಿಲ್ಲ ಎಂಬ ಮಾತೇ ಚಾಲ್ತಿಯಲ್ಲಿದೆ. ಏಕೆ ಈ ಮಾತನ್ನು ನೆನಪಿಸಬೇಕಾಯಿತು ಅಂದರೆ, ಕುಜನ ಮಹತ್ವ ನಿಮ್ಮೆಲ್ಲರಿಗೂ ಗೊತ್ತಾಗಬೇಕು ಎಂಬ ಉದ್ದೇಶದಿಂದ. ಎಲ್ಲಿಯ ತನಕ ಕುಜನು ವೃಷಭದಲ್ಲಿ ರಾಹುವಿನೊಂದಿಗೆ ಇರುತ್ತಾನೋ ಈ ಅವಧಿಯು ಬೆಂಕಿ ಹಾಗೂ ಬಿರುಗಾಳಿ ಎರಡೂ ಒಟ್ಟಾದರೆ ಹೇಗೆ ಕಾಳ್ಗಿಚ್ಚು ಹಬ್ಬುತ್ತದೆಯೋ ಅಂಥದ್ದೇ ಸನ್ನಿವೇಶ ಎದುರಿಸಬೇಕಾಗುತ್ತದೆ. ಅಂದರೆ ಫೆಬ್ರವರಿ 22, 2021ರಿಂದ ಏಪ್ರಿಲ್ 14, 2021ರ ತನಕ ಅದೇ ಪರಿಸ್ಥಿತಿ. ಆದರೆ ಮಿಥುನಕ್ಕೆ ಮಂಗಳನ ಪ್ರವೇಶ ಆಗುತ್ತಿದ್ದಂತೆ ಮಹತ್ತರವಾದ ಸಕಾರಾತ್ಮಕವಾದ ಬದಲಾವಣೆಗಳನ್ನು ಕಾಣಬಹುದು.

ಏಪ್ರಿಲ್ 14ರ ನಂತರ ಜೂನ್ 2ರ ತನಕ ಕುಜ ಬಲವನ್ನು ಪಡೆಯುವ 5 ರಾಶಿಗಳು ಯಾವುವು ಅಂದರೆ, ಮೇಷ, ಮಿಥುನ, ಸಿಂಹ, ಧನುಸ್ಸು ಹಾಗೂ ಕುಂಭ. ಈ ರಾಶಿಗಳವರು ಯಾವ ರೀತಿಯಲ್ಲಿ ಶುಭ ಫಲಗಳನ್ನು ಪಡೆಯುತ್ತಾರೆ ಎಂಬ ಮಾಹಿತಿಯನ್ನು ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರು ಟಿವಿ9 ಕನ್ನಡ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಮೇಷ
ನಿಮ್ಮ ರಾಶ್ಯಾಧಿಪತಿಯಾದ ಕುಜನು ಮೂರನೇ ಮನೆಗೆ ಪ್ರವೇಶ ಮಾಡಿ, ಅಲ್ಲಿಂದ ಭಾಗ್ಯ ಸ್ಥಾನವನ್ನು ಪೂರ್ಣ ಪ್ರಮಾಣದಲ್ಲಿ ವೀಕ್ಷಣೆ ಮಾಡುತ್ತಾನೆ. ಇದು ಅನುಕೂಲಕರವಾದ ಸನ್ನಿವೇಶ. ಒಂದು ಕಡೆ ಲಾಭ ಸ್ಥಾನದಲ್ಲಿ ಗುರುವಿನ ಸಂಚಾರ ಆಗುತ್ತಿದೆ, ಈಗ ಮೂರನೇ ಮನೆಯಲ್ಲಿ ಕುಜನ ಸಂಚಾರ ಆಗುವುದರಿಂದ ಹಣಕಾಸಿನ ಹರಿವು ಉತ್ತಮವಾಗುತ್ತದೆ. ಕೆಲಸ ಕಾರ್ಯಗಳು ನಿಂತುಹೋಗಿದ್ದಲ್ಲಿ ಅದು ಪೂರ್ಣವಾಗಲು ಸಹಕಾರಿ ಆಗುತ್ತದೆ. ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ, ಮೊದಲಾದ ಶುಭ ಫಲಗಳನ್ನು ನಿರೀಕ್ಷೆ ಮಾಡಬಹುದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಪಿತ್ರಾರ್ಜಿತವಾದ ಭೂಮಿ ಲಾಭವಾಗುವ ಸಾಧ್ಯತೆ ಇದೆ.

ಮಿಥುನ
ನಿಮ್ಮ ರಾಶಿಗೆ ಲಾಭಾಧಿಪತಿಯಾದ ಕುಜನು ಜನ್ಮ ರಾಶಿಗೆ ಬರುವುದರಿಂದ ಇಷ್ಟು ಸಮಯ ವ್ಯಾಜ್ಯದಲ್ಲಿ ಸಿಲುಕಿದ್ದ ಭೂ ವ್ಯವಹಾರಗಳು ಸರಾಗವಾಗಿ ಇತ್ಯರ್ಥವಾಗುವ ದಾರಿಗಳು ಗೋಚರವಾಗುತ್ತವೆ. ಇನ್ನು ಈಗಾಗಲೇ ಸೈಟು ಖರೀದಿ, ಮನೆ ಖರೀದಿಗೆ ಹಣ ನೀಡಿ ಸಮಸ್ಯೆಗೆ ಸಿಲುಕಿಕೊಂಡಿದ್ದಲ್ಲಿ ಅದು ಕೂಡ ಇತ್ಯರ್ಥವಾಗುವ ಸಾಧ್ಯತೆ ಇದೆ. ಅಷ್ಟಮ ಶನಿಯ ಪ್ರಭಾವ ಇದ್ದರೂ ಒಂಬತ್ತನೇ ಮನೆಯಲ್ಲಿನ ಗುರುವಿನ ಅನುಗ್ರಹ ಹಾಗೂ ಜನ್ಮರಾಶಿಗೆ ಪ್ರವೇಶಿಸುವ ಕುಜನ ಅನುಗ್ರಹದಿಂದ ಹಲವು ಸಮಸ್ಯೆಗಳು ಇತ್ಯರ್ಥವಾಗುವ ಸಾಧ್ಯತೆ ಇದೆ. ನೀವು ಮನೆ ಅಥವಾ ಸೈಟ್​ ಮಾರಾಟ ಮಾಡಬೇಕೆಂದಿದ್ದಲ್ಲಿ, ಅದಕ್ಕೆ ಲಾಭ ದಾಯಕ ಬೆಲೆ ದೊರೆಯಲಿದೆ.

ಸಿಂಹ
ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಲಾಭ ಸ್ಥಾನದಲ್ಲಿ ಇರುವ ಕುಜನು ಪೂರ್ವಪುಣ್ಯ ಸ್ಥಾನವನ್ನು ವೀಕ್ಷಣೆ ಮಾಡುತ್ತಾನೆ. ಆರನೇ ಮನೆಯಲ್ಲಿನ ಶನಿ, ಏಳನೆ ಮನೆಯಲ್ಲಿನ ಗುರು, ಹತ್ತನೇ ಮನೆಯಲ್ಲಿ ರಾಹು ಹಾಗೂ ಹನ್ನೊಂದನೇ ಮನೆಯಲ್ಲಿನ ಕುಜ ಗ್ರಹ ಅತ್ಯುತ್ತಮ ಸಮಯವನ್ನು ತೋರಿಸುತ್ತದೆ. ಭೂಮಿ ಲಾಭದ ಸಾಧ್ಯತೆಗಳು ಹೆಚ್ಚಿವೆ. ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ವಸ್ತುಗಳ ವ್ಯಾಪಾರ ಮಾಡುವವರು, ಕುಜನ ಕಾರಕತ್ವಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಮಾಡುವವರಿಗೆ ಅತ್ಯುತ್ತಮ ಫಲ ಪಡೆದುಕೊಳ್ಳುತ್ತಾರೆ.

ಧನುಸ್ಸು
ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಇರುವ ಕುಜನು ನೇರವಾಗಿ ವೀಕ್ಷಣೆ ಮಾಡುವುದರಿಂದ ಹಿಡಿದ ಕೆಲಸಗಳು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಮುಖ್ಯವಾಗಿ ನಿಮ್ಮಲ್ಲೊಂದು ಕಿಡಿ ಹೊತ್ತಿಕೊಳ್ಳುತ್ತದೆ. ಇದರ ಸಕಾರಾತ್ಮಕ ಬಳಕೆ ಮಾಡಿಕೊಂಡು, ನಿಮ್ಮ ಸಿಟ್ಟಿನ ಮೂಲಕ ಕೆಲಸಗಳನ್ನು ಮಾಡುವಲ್ಲಿ ಸಫಲರಾಗುತ್ತೀರಿ. ಹಾಗಂತ ಎಲ್ಲರ ಮೇಲೆ ಸಿಡುಕಬೇಕು ಅಂತೇನೂ ಅಲ್ಲ. ನಿಮ್ಮ ಸಿಟ್ಟಿನಿಂದ ಎಲ್ಲಿ ಕೆಲಸ ಆಗುತ್ತದೋ ಅಲ್ಲಿ ಅದರ ಬಳಕೆ ಆಗಿ, ಮುಗಿಯಬೇಕಾದ ಕೆಲಸವನ್ನು ಪೂರ್ಣ ಮಾಡಿಕೊಳ್ಳುವಿರಿ.

ಕುಂಭ
ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಕುಜನು ಲಾಭ ಸ್ಥಾನದ ವೀಕ್ಷಣೆ ಮಾಡುತ್ತಾನೆ. ಈ ಮೂಲಕವಾಗಿ ಜನ್ಮ ಸ್ಥಾನದಲ್ಲಿನ ಗುರು ಹಾಗೂ ಸಾಡೇ ಸಾತ್ ಶನಿಯ ಪ್ರಭಾವದ ಹೊರತಾಗಿಯೂ ಶುಭ ಫಲವನ್ನು ಕಾಣಲಿದ್ದೀರಿ. ಐದನೇ ಮನೆಯಲ್ಲಿ ಕುಜ ಸಂಚಾರ ಅಂದರೆ ಅದು ಪೂರ್ವ ಪುಣ್ಯ ಸ್ಥಾನ ಆಗುತ್ತದೆ. ಆಗಲ್ಲ ಎಂದು ನೀವು ಆಸೆ ಬಿಟ್ಟಿದ್ದ ಕೆಲಸಗಳು ಕೈಗೂಡುವ ಅವಕಾಶಗಳು ಇವೆ. ಈ ಅವಧಿಯಲ್ಲಿ ದೊರೆಯುವ ಯಾವುದೇ ಅನುಕೂಲವನ್ನು ಕೈಚೆಲ್ಲಬೇಡಿ. ಭೂಮಿ ಲಾಭವಾಗುವ ಸಾಧ್ಯತೆ ಇದೆ.

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ- 6361335497

ಇದನ್ನೂ ಓದಿ: Jupiter Transit 2021: ಕುಂಭ ರಾಶಿಗೆ ಗುರು ಗ್ರಹ ಪ್ರವೇಶ; ಮೇಷದಿಂದ ಮೀನದ ತನಕ ಏನು ವಿಶೇಷ?

ಇದನ್ನೂ ಓದಿ: These 4 zodiac signs become rich: ಈ ನಾಲ್ಕು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗ್ತಾರೆ

(Mars transit in Gemini: After Mars entering in Gemini on April 14th, these 5 zodiac sign natives will get positive results.)