AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2026 Yearly Horoscope For Pisces: 2026 ಮೀನ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ವಿವರ ಇಲ್ಲಿದೆ

ಮೀನ ರಾಶಿ ವರ್ಷ ಭವಿಷ್ಯ 2026: 2026ನೇ ಇಸವಿಯ ಜನವರಿಯಿಂದ ಡಿಸೆಂಬರ್ ತನಕ ಮೀನ ರಾಶಿಯ ವರ್ಷ ಭವಿಷ್ಯದ ವಿವರ ಇಲ್ಲಿದೆ. ಈ ಭವಿಷ್ಯವನ್ನು ಗ್ರಹಗಳ ಗೋಚಾರದ ಆಧಾರದಲ್ಲಿ ತಿಳಿಸಲಾಗಿದೆ. ದೀರ್ಘ ಸಮಯದ ತನಕ ಒಂದೇ ರಾಶಿಯಲ್ಲಿ ಸಂಚರಿಸುವಂಥ ಗ್ರಹಗಳಾದ ಶನಿ, ರಾಹು-ಕೇತು ಹಾಗೂ ಗುರು ಗ್ರಹದ ಸಂಚಾರವನ್ನು ಈ ವರ್ಷಭವಿಷ್ಯಕ್ಕಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಕಾಲಪುರುಷನ ಚಕ್ರದಲ್ಲಿ ಹನ್ನೆರಡನೇ ರಾಶಿ ಎನಿಸಿದ ಮೀನ ರಾಶಿಯವರಿಗೆ 2026ನೇ ಇಸವಿಯಲ್ಲಿ ಶುಭಾಶುಭ ಫಲಗಳು ಹೇಗಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

2026 Yearly Horoscope For Pisces: 2026 ಮೀನ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ವಿವರ ಇಲ್ಲಿದೆ
ಮೀನ ರಾಶಿ ವರ್ಷ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Dec 17, 2025 | 3:39 PM

Share

2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ ನಿಮ್ಮದೇ ರಾಶಿಯಲ್ಲಿ, ಒಂದನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 4ನೇ ಮನೆ, ಅಂದರೆ ಮಾತೃ- ಸುಖ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನವರೆಗೆ ಪೂರ್ವ ಪುಣ್ಯ ಸ್ಥಾನ- ಸುತ ಸ್ಥಾನ, ಅಂದರೆ 5ನೇ ಮನೆಯಾದ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ಈ ಎರಡೂ ತಿಂಗಳು, ರಿಪು ಸ್ಥಾನ, ಅಂದರೆ 6ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಬಹುತೇಕ ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ಹಾಗೂ ಕೇತು ಗ್ರಹವು 6ನೇ ಮನೆಯಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು ಲಾಭ ಸ‌್ಥಾನವಾದ 11ನೇ ಮನೆ ಮಕರ ರಾಶಿಗೂ ಹಾಗೂ ಕೇತು ಗ್ರಹ ನಿಮ್ಮ ರಾಶಿಗೆ 5ನೇ ಮನೆ ಕರ್ಕಾಟಕ ರಾಶಿಗೂ ಪ್ರವೇಶಿಸುತ್ತದೆ.

ಪೂರ್ವಾಭಾದ್ರ ನಕ್ಷತ್ರದ ನಾಲ್ಕನೇ ಪಾದ, ಉತ್ತರಾಭಾದ್ರಾ ನಕ್ಷತ್ರ ನಾಲ್ಕೂ ಪಾದ, ರೇವತಿ ನಕ್ಷತ್ರದ ನಾಲ್ಕೂ ಪಾದ ಸೇರಿ ಮೀನ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಗುರು.

ಮೀನ ರಾಶಿಯವರಿಗೆ 2026ರ ವರ್ಷ ಭವಿಷ್ಯ ಹೀಗಿದೆ:

ಶನಿ ಗೋಚಾರ:

ಜನ್ಮ ರಾಶಿಯಲ್ಲಿ ಶನಿ ಗ್ರಹದ ಸಂಚಾರ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ನಿಮ್ಮ ರಾಶಿಗೆ ಲಾಭ ಹಾಗೂ ವ್ಯಯಾಧಿಪತಿ ಎರಡೂ ಆದಂಥ ಶನಿಯು ನಿಮ್ಮದೇ ರಾಶಿಯಲ್ಲಿ ಸಂಚಾರ ಮಾಡುತ್ತದೆ. ಈಗಾಗಲೇ ಸಾಡೇಸಾತ್ ಪೈಕಿ ಮೂರು ವರ್ಷವನ್ನು ಕಳೆದಿದ್ದೀರಿ. ಹೃದಯ, ಮೀನಖಂಡ, ಜಠರ, ಕರುಳಿನ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ನಿಮ್ಮಲ್ಲಿ ಮೂವತ್ತು ವರ್ಷಕ್ಕೆ ಮೇಲ್ಪಟ್ಟವರು ಇದ್ದಲ್ಲಿ ನಿಯಮಿತವಾಗಿ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು ಕ್ಷೇಮ. ಮಾಸ್ಟರ್ ಚೆಕ್ ಅಪ್ ಮಾಡಿಸಿಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ. ವ್ಯಾಪಾರ- ವ್ಯವಹಾರ ಮಾಡುವಂಥವರು ಒಂದು ವೇಳೆ ಲಾಭದ ಆಸೆಗೆ ಬಿದ್ದು, ವಾಸ್ತವವನ್ನು ಮರೆತರೆ ದೊಡ್ಡ ನಷ್ಟವನ್ನು ಅನುಭವಿಸುತ್ತೀರಿ. ಕಾನೂನಿನ ವ್ಯಾಪ್ತಿಗೆ ಮೀರಿದ ವಿಚಾರಗಳಲ್ಲಿ ತಲೆಯನ್ನು ಹಾಕುವುದಕ್ಕೆ ಹೋಗಬೇಡಿ. ತೆರಿಗೆ ವಿಚಾರದಲ್ಲಿ ಈ ಹಿಂದೆ ನಿಮ್ಮಿಂದ ಆದ ತಪ್ಪಿಗೆ ಈಗ ನೋಟಿಸ್ ಬರಬಹುದು. ನಿಮ್ಮಲ್ಲಿ ಕೆಲವರು ದಂಡ ಪಾವತಿ ಮಾಡಲೇಬೇಕಾದ ಸನ್ನಿವೇಶ ಸಹ ಉದ್ಭವ ಆಗಲಿದೆ. ಈ ಅವಧಿಯಲ್ಲಿ ಉದ್ಯೋಗ ಬಿಡುವ ಆಲೋಚನೆ ಯಾವ ಕಾರಣಕ್ಕೂ ಮಾಡಬಾರದು. ಇನ್ನು ಬ್ಯಾಂಕ್ ನಿಂದಲೋ ಅಥವಾ ಸ್ನೇಹಿತರು/ಸಂಬಂಧಿಕರಿಂದ ಸಾಲ ಪಡೆದುಕೊಂಡು, ವ್ಯಾಪಾರ- ವ್ಯವಹಾರ ಮಾಡುವುದು ಅಪಾಯಕಾರಿ ಹಾಗೂ ಅವಮಾನಕ್ಕೆ ಗುರಿ ಆಗುವಂಥ ಸನ್ನಿವೇಶವನ್ನು ತಂದಿಡಲಿದೆ. ಹೊಸಬರ ಜತೆಗೆ ಯಾವುದೇ ಹಣಕಾಸಿನ ವ್ಯವಹಾರ ಮಾಡುವುದಕ್ಕೆ ಹೋಗಬೇಡಿ. ಈ ಹಿಂದೆ ನೀವು ಮಾಡಿದ್ದಂಥ ಹೂಡಿಕೆಗೆ ನಿರೀಕ್ಷಿತ ಮಟ್ಟದಲ್ಲಿ ಲಾಭ ಇದೆ ಎಂದಾದಲ್ಲಿ ಆ ಪ್ರಾಫಿಟ್ ಬುಕ್ಕಿಂಗ್ ಮಾಡಿಕೊಳ್ಳುವುದು ಕ್ಷೇಮ. ಆಸ್ತಿ ವಿಚಾರದಲ್ಲಿ ನಿರ್ಧಾರಗಳನ್ನು ತಕ್ಷಣ ತೆಗೆದುಕೊಳ್ಳುವುದು ಒಳ್ಳೆಯದು.

ಗುರು ಗ್ರಹ ಗೋಚಾರ:

ಜನವರಿಯಿಂದ ಮೇ ತನಕ ನಾಲ್ಕನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಸ್ನೇಹಿತರ ಜೊತೆಗೆ ಅಭಿಪ್ರಾಯ ಭೇದ, ಮನಸ್ತಾಪ, ಜಗಳ- ಕಲಹ ಏರ್ಪಡುವಂಥ ಸಾಧ್ಯತೆ ಇದೆ. ನಿಮಗೆ ಗೊತ್ತಿಲ್ಲದ ವಿಚಾರಗಳ ಬಗ್ಗೆ ವಿಪರೀತ ವಾದ ಮಾಡುವುದಕ್ಕೆ ಹೋಗಬೇಡಿ. ಸಣ್ಣ- ಪುಟ್ಟದಾದರೂ ಶಸ್ತ್ರಚಿಕಿತ್ಸೆ ಆಗುವ ಸಾಧ್ಯತೆ ಇದೆ. ದೇಹದ ತೂಕದ ಕಡೆಗೆ ಗಮನ ಇರಲಿ. ಕೊಲೆಸ್ಟ್ರಾಲ್, ಕಿವಿಗೆ ಸಂಬಂಧಿಸಿದ ತೊಂದರೆಗಳು ಆಗಬಹುದು. ಈ ಅವಧಿಯಲ್ಲಿ ಹೂಡಿಕೆ ಸಲುವಾಗಿ ಆಸ್ತಿ ಖರೀದಿ ಮಾಡುವಂಥ ಸಾಧ್ಯತೆಗಳು ಇರುತ್ತವೆ. ಆದರೆ ಕಾಗದ- ಪತ್ರ, ಕಾನೂನು ವಿಚಾರಗಳಿಗೆ ಹೆಚ್ಚಿನ ಗಮನ ನೀಡಬೇಕು. ತಾಯಿ- ತಾಯಿ ಸಮಾನರಾದವರ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಹಣಕಾಸಿನ ವಿಚಾರಕ್ಕೋ ಅಥವಾ ಆಸ್ತಿ ವಿಚಾರಕ್ಕೋ ಅಭಿಪ್ರಾಯ ಭೇದಗಳು ಸಹ ಉದ್ಭವಿಸಬಹುದು. ಜೂನ್ ಒಂದನೇ ತಾರೀಕಿನಿಂದ ಐದನೇ ಮನೆಯಲ್ಲಿ ಗುರು ಗ್ರಹ ಸಂಚಾರ ಆಗುವಾಗ ಸಂತಾನ ಅಪೇಕ್ಷಿತರಿಗೆ ಶುಭವಾದ ಬೆಳವಣಿಗೆಗಳು ಆಗಲಿವೆ. ವಿವಾಹ ವಯಸ್ಜರು ಮದುವೆಗಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಸೂಕ್ತ ಸಂಬಂಧ ದೊರೆಯಲಿದೆ. ಯಾರು ಉದ್ಯೋಗ ಬದಲಾವಣೆ ಮಾಡಬೇಕು ಎಂದಿದ್ದೀರಿ, ಅದೇ ರೀತಿ ಉದ್ಯೋಗ ಜೀವನದ ಆರಂಭದ ಘಟ್ಟದಲ್ಲಿ ಇದ್ದೀರಿ ಅಂಥವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಆಫರ್ ದೊರೆಯಲಿದೆ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳ ಜತೆಗೆ ಭಿನ್ನಾಭಿಪ್ರಾಯ ಉದ್ಭವಿಸದಂತೆ ನೋಡಿಕೊಳ್ಳಿ. ಆರೋಗ್ಯ ವಿಚಾರ- ಕಾನೂನು ಸಂಗತಿಗಳ ಕಡೆಗೆ ಗಮನವನ್ನು ನೀಡಬೇಕಾಗುತ್ತದೆ. ನಿಮಗಿಂತ ಬಲಿಷ್ಠರಾದವರನ್ನು ಎದುರು ಹಾಕಿಕೊಳ್ಳಲಿದ್ದು, ಇದರಿಂದಾಗಿ ಆ ನಂತರ ಪಶ್ಚಾತಾಪ ಪಡುವಂತೆ ಆಗಲಿದೆ.

ಇದನ್ನೂ ಓದಿ: 2026ರ ಹೊಸ ವರ್ಷ ಮಕರ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ವಿವರ ಇಲ್ಲಿದೆ

ರಾಹು-ಕೇತು ಗೋಚಾರ:

ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ರಾಹು ಗ್ರಹದ ಸಂಚಾರ ಇರಲಿದ್ದು, ಹೇಗಾದರೂ ಹಣ ಮಾಡಬೇಕು ಎಂಬ ಉಮೇದಿಗೆ ಬಿದ್ದು, ವಂಚಕರ ಮೋಸಕ್ಕೆ ಸಿಲುಕಿಕೊಂಡು ಹಣ ಕಳೆದುಕೊಳ್ಳುವಂತೆ ಆಗಲಿದೆ. ಭೂಮಿ ಮೇಲೆ ಈಗಾಗಲೇ ಹೂಡಿಕೆ ಮಾಡಿದ್ದೀರಿ ಅಂತಾದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆ- ಮಾಹಿತಿಗಳನ್ನು ಒಗ್ಗೂಡಿಸಿಕೊಂಡು, ಸರಿಯಾಗಿ ಇರಿಸಿಕೊಳ್ಳಲು ಆದ್ಯತೆ ನೀಡಿ. ನಿಮಗೆ ಏನೇನೋ ಕಲ್ಪನೆಗಳು ಸುಳಿದಾಡಿ, ಆಪ್ತರ ಜೊತೆಗೆ ಬಾಂಧವ್ಯವನ್ನು ಕಡಿದುಕೊಳ್ಳುವಂತೆ ಆಗಲಿದೆ. ಇತರರ ಪರವಾಗಿ ಜಾಮೀನು ನಿಂತು, ಹಣ ಕೊಡಿಸುವುದು ಬಹಳ ಅಪಾಯಕಾರಿ ಆಗಲಿದೆ. ಇನ್ನು ಸಾಲ ತಂದು, ಹೂಡಿಕೆ ಮಾಡುವುದಕ್ಕೆ ಹೋಗಬೇಡಿ. ಆರನೇ ಮನೆಯಲ್ಲಿ ಕೇತು ಗ್ರಹ ಸಂಚಾರ ಮಾಡುವುದರಿಂದ ತೀರ್ಥಯಾತ್ರೆ, ದೇವರ ದರ್ಶನ, ಮನೆಯಲ್ಲಿ ದೇವತಾ ಕಾರ್ಯಗಳ ಆಯೋಜನೆ ಮಾಡುವಂಥ ಯೋಗ ಇದೆ. ಹಿರಿಯರು ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಈಗಾಗಲೇ ಇರುವಂಥ ವ್ಯಾಜ್ಯಗಳನ್ನು ನಿಮಗೆ ಹಿರಿಯರು ಎನಿಸಿಕೊಂಡವರು ತಾವೇ ಮುಂದೆ ನಿಂತು ಬಗೆಹರಿಸಲಿದ್ದಾರೆ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಗೌರವ, ಮಾನ- ಸಮ್ಮಾನಗಳು ದೊರೆಯುವ ಯೋಗ ಇದ್ದು, ಜನಪ್ರಿಯತೆಯನ್ನು ಪಡೆದುಕೊಳ್ಳುವಿರಿ.

ಪರಿಹಾರ: ಶನೈಶ್ಚರ ಆರಾಧನೆ ಹಾಗೂ ದುರ್ಗಾ ದೇವಿ ಸ್ಮರಣೆಯನ್ನು ಮಾಡಿ.

ಲೇಖನ- ಸ್ವಾತಿ ಎನ್.ಕೆ.