Ugadi Rashi Bhavishya 2021: ಮಿಥುನ ರಾಶಿ ಯುಗಾದಿ ವರ್ಷ ಭವಿಷ್ಯ: ಆರೋಗ್ಯದ ಕಡೆ ಕಾಳಜಿ ವಹಿಸಿ, ಪಿತ್ರಾರ್ಜಿತ ಆಸ್ತಿ ಬರಲಿದೆ

Ugadi yearly horoscope 2021: ಏಪ್ರಿಲ್ 13, 2021ರ ಯುಗಾದಿಯಿಂದ ಆರಂಭವಾಗುವ ಸಂವತ್ಸರದ ಫಲವು ಮುಂದಿನ ಯುಗಾದಿ ತನಕ ಅನ್ವಯ ಆಗುತ್ತದೆ. ಈ ಲೇಖನದಲ್ಲಿ ಮಿಥುನ ರಾಶಿಯ ಸಂವತ್ಸರ ಫಲವನ್ನು ತಿಳಿಸಲಾಗುತ್ತಿದೆ.

  • TV9 Web Team
  • Published On - 12:44 PM, 6 Apr 2021
Ugadi Rashi Bhavishya 2021: ಮಿಥುನ ರಾಶಿ ಯುಗಾದಿ ವರ್ಷ ಭವಿಷ್ಯ: ಆರೋಗ್ಯದ ಕಡೆ ಕಾಳಜಿ ವಹಿಸಿ, ಪಿತ್ರಾರ್ಜಿತ ಆಸ್ತಿ ಬರಲಿದೆ
ಮಿಥುನ

ಇದೇ ಏಪ್ರಿಲ್ 13ರಂದು ಚಾಂದ್ರಮಾನ ಯುಗಾದಿ. ಪ್ಲವನಾಮ ಸಂವತ್ಸರದ ಆರಂಭದ ದಿನ ಅದು. ಯಾವ ರಾಶಿಗೆ ಹೇಗಿದೆ ಸಂವತ್ಸರ ಫಲ ಎಂದು ನೋಡುವ ಪರಿಪಾಠ ನಡೆದು ಬಂದಿದೆ. ಈ ಲೇಖನದಲ್ಲಿ ಮಿಥುನ ರಾಶಿಯ ಫಲ ಏನು ಎಂಬುದನ್ನು ತಿಳಿಸಲಾಗುತ್ತದೆ.

ಪ್ಲವ ಸಂವತ್ಸರದಲ್ಲಿ ಶನಿ ಗ್ರಹ ಮಕರ ರಾಶಿಯಲ್ಲಿ ಇರುತ್ತದೆ. ಇನ್ನು ರಾಹು ಹಾಗೂ ಕೇತು ಗ್ರಹಗಳು ಕ್ರಮವಾಗಿ ವೃಷಭ ಮತ್ತು ವೃಶ್ಚಿಕ ರಾಶಿಗಳಲ್ಲಿ ಇರುತ್ತವೆ. ಗುರು ಗ್ರಹವು ಏಪ್ರಿಲ್ 6ರಿಂದ ಸೆಪ್ಟೆಂಬರ್ 14, 2021ರ ತನಕ ಹಾಗೂ ನವೆಂಬರ್ 20ರ ನಂತರ ಸಂವತ್ಸರದ ಕೊನೆ ತನಕವು ಕುಂಭ ರಾಶಿಯಲ್ಲೇ ಇರುತ್ತದೆ. ಈ ಮಧ್ಯೆ ಸೆಪ್ಟೆಂಬರ್ 14ರಿಂದ ನವೆಂಬರ್ 20ರವರೆಗೆ ಮಕರ ರಾಶಿಯಲ್ಲಿ ಇರುತ್ತದೆ.

ನೆನಪಿನಲ್ಲಿಡಿ, ಇಲ್ಲಿ ತಿಳಿಸುವುದು ಗೋಚಾರದ ಫಲ. ಯಾವುದೇ ವ್ಯಕ್ತಿಯ ದಶಾ ಮತ್ತು ಭುಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ದಶಾ ಸಂಧಿಗಳು, ಅಂದರೆ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವಾಗ ಮತ್ತು ರಾಹು ದಶೆ ಮುಗಿದು ಗುರು ದಶೆ ಶುರುವಾಗವಾಗ ಹಾಗೂ ಶುಕ್ರ ದಶೆ ಮುಗಿದು ರವಿ ದಶೆ ಆರಂಭವಾಗುವಾಗ ಎಚ್ಚರಿಕೆಯಿಂದ ಇರುಬೇಕು ಮತ್ತು ಸೂಕ್ತ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ಇನ್ನು ರಾಶಿಗಳ ಗೋಚಾರ ಫಲಗಳತ್ತ ನೋಡೋಣ

ಮಿಥುನ ರಾಶಿ: (ಮೃಗಶಿರಾ 2,3,4ನೇ ಪಾದ, ಆರ್ದ್ರಾ 1,2,3,4ನೇ ಪಾದ, ಪುನರ್ವಸು 1,2,3ನೇ ಪಾದ)
ಈ ರಾಶಿಯವರ ಅಧಿಪತಿ ಬುಧ. ಏಕಕಾಲಕ್ಕೆ ಹಲವು ವಿಚಾರಗಳನ್ನು ಯೋಚಿಸುವಂಥ ಜನರಿವರು. ಅಷ್ಟೇ ಅಲ್ಲ, ಈ ರಾಶಿಯ ಚಿಹ್ನೆಯೇ ಹೇಳುವಂತೆ, ಗಂಡು- ಹೆಣ್ಣು ಎರಡೂ ಸ್ವಭಾವ ಇವರಲ್ಲಿ ಇರುತ್ತದೆ. ಕೆಲವು ಸಲ ವಿಪರೀತ ಎನಿಸುವಷ್ಟು ಕಠಿಣ. ಅದೇ ರೀತಿ ಹೆಂಗರುಳು. ಎರಡನ್ನೂ ಇವರಲ್ಲಿ ನೋಡಬಹುದು. ಆದರೆ ಇವರೊಳಗಿನ ಅತೃಪ್ತಿಗೆ ಕೊನೆಯೇ ಇರುವುದಿಲ್ಲ. ಇವರು ಮಾಡಿದ ಕೆಲಸ, ಅಡುಗೆ ಅಥವಾ ಏನೇ ಇರಲಿ, ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂದುಕೊಳ್ಳುವ ಜನ ಇವರು. ಮಿಥುನ ಮತ್ತು ಕನ್ಯಾ ರಾಶಿಯವರಲ್ಲಿ ಕೆಲವು ಸಾಮ್ಯತೆಗಳನ್ನು ನೋಡಬಹುದು. ಆದರೆ ಈ ರಾಶಿಯವರು ಕನ್ಯಾದವರಷ್ಟು ಪ್ರಾಕ್ಟಿಕಲ್ ಅಲ್ಲ. ಪಕ್ಕಾ ವ್ಯಾಪಾರದ ಲೆಕ್ಕಾಚಾರ, ಉಳಿತಾಯದ ಬುದ್ಧಿ, ನಾಳೆಗೆ ಏನು ಎಂಬ ಯೋಚನೆ ಇವೆಲ್ಲವೂ ಕನ್ಯಾದಂತೆಯೇ ಯೋಚಿಸುತ್ತಾರೆ. ಆದರೆ ಅನುಷ್ಠಾನ ಅಂತ ಬಂದಾಗ ಚಂಚಲ ಸ್ವಭಾವದವರಾಗಿರುತ್ತಾರೆ. ಸಣ್ಣ- ಪುಟ್ಟ ಸಂಗತಿಗಳು ಎಂದು ಇವರು ತೋರುವ ನಿರ್ಲಕ್ಷ್ಯದಿಂದ ದೊಡ್ಡ ಪೆಟ್ಟುಗಳನ್ನು ತಿನ್ನುತ್ತಾರೆ.

ಈ ವರ್ಷ 8ನೇ ಮನೆಯಲ್ಲಿನ ಶನಿಯಿಂದ ನಾನಾ ಬಗೆಯಲ್ಲಿ ಅವಮಾನಕ್ಕೆ ಗುರಿಯಾಗುತ್ತೀರಿ. ಇನ್ನು ಅದೆಂಥ ಸನ್ನಿವೇಶದಲ್ಲೂ ಉದ್ಯೋಗ ಬಿಡುವಂಥ ನಿರ್ಧಾರ ಮಾತ್ರ ಕೈಗೊಳ್ಳದಿರಿ. ದೀರ್ಘ ಕಾಲದ ಅನಾರೋಗ್ಯ ಸಮಸ್ಯೆಗಳು ಉಲ್ಬಣ ಆಗಲಿದೆ. ಇನ್ನು ಕೋರ್ಟ್ ಕಚೇರಿ ವ್ಯವಹಾರಗಳು ಇದ್ದಲ್ಲಿ, ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಲ್ಲಿ ಅದಕ್ಕೆ ಶಿಕ್ಷೆ ಆಗುವ ಸಾಧ್ಯತೆ ಇದೆ. ಅತಿ ಮುಖ್ಯವಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕು. ನಿಮಗೆ ಸಂಬಂಧಪಡದ ವಿಚಾರದಲ್ಲಿ ವೃಥಾ ಮೂಗು ತೂರಿಸಬೇಡಿ. ವಾಚಾಳಿ ಸ್ವಭಾವದ ನೀವು, ಬೀದಿಯಲ್ಲಿನ ಮಾರಿಯನ್ನು ಮನೆಗೆ ಕರೆದರು ಅಂತ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಬಳಿ ಇರುವ ಚಿನ್ನಾಭರಣಗಳು, ದುಬಾರಿ ಗ್ಯಾಜೆಟ್​ಗಳನ್ನು ಜೋಪಾನವಾಗಿ ಇಟ್ಟುಕೊಳ್ಳದಿದ್ದಲ್ಲಿ ಕಳೆದುಕೊಳ್ಳುವ ಅವಕಾಶ ಇದೆ. ಅಷ್ಟಮ ಶನಿಯು ಕ್ರೂರವಾಗಿರುತ್ತಾದ್ದರಿಂದ ಉತ್ತಮ ಫಲಗಳನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಎಚ್ಚರಿಕೆ- ಮುಂಜಾಗ್ರತೆಯೇ ರಕ್ಷಣೆಯ ಮಾರ್ಗ.

ಗುರು ಗ್ರಹದ ಅನುಗ್ರಹ ಇರುತ್ತಾದ್ದರಿಂದ ಸೆಪ್ಟೆಂಬರ್​ನಿಂದ ನವೆಂಬರ್ ಮಧ್ಯೆ ಹೊರತುಪಡಿಸಿ, ಉಳಿದ ಅವಧಿಯಲ್ಲಿ ಉತ್ತಮ ಫಲಗಳನ್ನು ಕೆಲವನ್ನು ಕಾಣುತ್ತೀರಿ. ಆದರೆ 2021ರ ಸೆಪ್ಟೆಂಬರ್​ನಿಂದ ನವೆಂಬರ್ ಮಧ್ಯೆ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಗುರು ಉತ್ತಮ ಸ್ಥಿತಿಯಲ್ಲಿ ಇದ್ದಾಗ ಪಿತ್ರಾರ್ಜಿತವಾದ ಆಸ್ತಿ ಬರುವ ಅವಕಾಶಗಳು ಇರುತ್ತವೆ. ದೂರ ಪ್ರಯಾಣದ ಮೂಲಕ ಲಾಭ ಆಗುತ್ತದೆ. ಈ ಹಿಂದೆ ನೀವು ಮಾಡಿದ್ದ ಕೆಲಸವನ್ನು ಗುರುತಿಸಿ, ಸನ್ಮಾನಗಳು ನಡೆಯುವ ಯೋಗ ಇದೆ. ಶುಭ ಸಮಾರಂಭಗಳಲ್ಲಿ ಭಾಗಿ ಆಗುತ್ತೀರಿ, ನೀವೇ ಶುಭ ಸಮಾರಂಭಗಳ ನೇತೃತ್ವವನ್ನು ಸಹ ವಹಿಸುತ್ತೀರಿ. ಆರೋಗ್ಯ ಸಮಸ್ಯೆಗಳಾದಲ್ಲಿ ಸೂಕ್ತ ವೈದ್ಯರ ಮಾರ್ಗದರ್ಶನ ದೊರೆಯಲಿದೆ. ಸೋದರ- ಸೋದರಿಯರ ಜತೆಗೆ ಸಂಬಂಧ ವೃದ್ಧಿ ಆಗಲಿದೆ. ಶತ್ರುನಾಶ ಆಗುತ್ತದೆ.

ಈ ಅವಧಿಯಲ್ಲಿ ಸಟ್ಟಾ ವ್ಯವಹಾರದ ಕಡೆಗೆ ನಿಮ್ಮ ಮನಸ್ಸು ಸೆಳೆಯುತ್ತದೆ. ಭೂಮಿ ವ್ಯವಹಾರಗಳನ್ನು ಮಾಡಿದ್ದಲ್ಲಿ ಅದು ಅರ್ಧಕ್ಕೆ ನಿಲ್ಲುವ ಯೋಗ ಇದೆ. ಮನೆಯನ್ನು ಕಟ್ಟಿಸುತ್ತಿದ್ದಲ್ಲಿ ಅದಕ್ಕೆ ಕಾನೂನು ಅಡೆ- ತಡೆಗಳಾಗಬಹುದು. ಗಣಪತಿ ಆರಾಧನೆ ಮಾಡುವುದರಿಂದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ನಿಮಗೆ ಗೊತ್ತಿಲ್ಲದ ವಿಚಾರಗಳಲ್ಲಿ ಇತರರ ಮಾತನ್ನು ನಂಬಿಕೊಂಡು ಮುಂದುವರಿಯದಿರಿ. ದಾಖಲೆಗಳಿಲ್ಲದೆ ಇತರರ ಮೇಲೆ ಆರೋಪ ಮಾಡದಿರಿ. ಈಗ ಹೊಸದಾಗಿ ಸಿಗರೆಟ್, ಮದ್ಯಪಾನ ಮೊದಲಾದ ದುರಭ್ಯಾಸಗಳು ಆರಂಭವಾಗುವ ಅಥವಾ ಅದು ಹೆಚ್ಚಾಗುವ ಅವಕಾಶಗಳಿವೆ. ಅಂಥ ಸ್ನೇಹಿತರು ನಿಮಗೆ ಹೆಚ್ಚಾಗಿ ಸಿಗಲಿದ್ದಾರೆ. ಮುಖ್ಯವಾಗಿ ವಿದ್ಯಾರ್ಥಿಗಳು ಇಂಥದ್ದರಿಂದ ದೂರ ಇರಬೇಕು. ಚೀಟಿ ವ್ಯವಹಾರ ನಡೆಸುತ್ತಿರುವ ಮಹಿಳೆಯರಿದ್ದಲ್ಲಿ ಹಣವನ್ನು ಹಿಂತಿರುಗಿಸುವ ಕಡೆಗೆ ಗಮನ ನೀಡಿ.

ಯಗಾದಿ ಸಂವತ್ಸರ ಫಲದ ಪ್ರಕಾರ, ಆದಾಯ- 5, ವ್ಯಯ- 5, ರಾಜಪೂಜೆ- 3, ಅವಮಾನ- 6.

ಶನೈಶ್ಚರ ಶಾಂತಿಯನ್ನು ಮಾಡಿಸಿಕೊಳ್ಳಿ. ಕಡಲೇಕಾಳು ದಾನ ಮಾಡಿ.

ಇದನ್ನೂ ಓದಿ: Ugadi Rashi Bhavishya 2021: ವೃಷಭ ರಾಶಿ ಯುಗಾದಿ ಭವಿಷ್ಯ: ವೇತನ ಹೆಚ್ಚಳ, ನಿಯಮಿತವಾಗಿ ವ್ಯಾಯಾಮ ಮಾಡಿ

ಇದನ್ನೂ ಓದಿ: Jupiter Transit 2021: ಕುಂಭ ರಾಶಿಗೆ ಗುರು ಗ್ರಹ ಪ್ರವೇಶ; ಮೇಷದಿಂದ ಮೀನದ ತನಕ ಏನು ವಿಶೇಷ?

(Ugadi 2021 Horoscope: Get Free Ugadi 2021 Horoscope Rashi Bhavishya on Gemini. Know your Ugadi Astrology on Mithuna Rashi in Kannada.)