ಸೋಂಕಿತ ಅಜ್ಜಿ ಅಂತ್ಯಕ್ರಿಯೆಗೆ ಸ್ಥಳೀಯರ ವಿರೋಧ, ಮಾನವೀಯತೆ ಮರೆತರಾ ಶಾಸಕ ಸೋ. ರೆಡ್ಡಿ

ಬಳ್ಳಾರಿ: ಅವಕಾಶವಾದಿಗಳ ಪಾಲಿಗೆ ಸತ್ಯ ಯಾವಾಗಲೂ ಹೊರಗಿರಬೇಕು, ಅವರ ಮನೆಯೊಳಗೆ ಅಥವಾ ಅವರ ಹತ್ತಿರಕ್ಕೂ ಅದಕ್ಕೆ ಅವಕಾಶವೇ ಇರೋಲ್ಲ ಅನ್ನೋ ಮಾತಿದೆ. ಈ ಮಾತು ಬಳ್ಳಾರಿಯ ಶಾಸಕರು ಮತ್ತು  ಕೆಲ ಸ್ಥಳೀಯರನ್ನು ನೋಡಿದ್ರೆ ಖಂಡಿತವಾಗಿ ಅನ್ವಯಿಸುತ್ತದಾ ಅನ್ನೋ ಅನುಮಾನ ಬರುವಂಥ ಘಟನೆ ಗಣಿನಾಡು ಬಳ್ಳಾರಿಯಲ್ಲಿ ಸಂಭವಿಸಿದೆ.

ಹೌದು, ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ನಾಲ್ಕನೇ ಬಲಿಯಾಗಿದೆ. ಚಿಕಿತ್ಸೆ ಫಲಕಾರಿಯಾಗದೆ 85 ವರ್ಷದ ವೃದ್ಧೆ ವಿಮ್ಸ್​ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಮೃತ ಸೋಂಕಿತೆಯ ಅಂತ್ಯಕ್ರಿಯೆಗಾಗಿ, ವಾಜಪೇಯಿ ಬಡಾವಣೆಯ ರುದ್ರಭೂಮಿಗೆ ದೇಹವನ್ನ ತಂದಿದ್ರು. ಆದ್ರೆ, ಇದಕ್ಕೆ ಸ್ಥಳೀಯರು ಆಕ್ಷೇಪ ಎತ್ತಿದ್ರು. ರುದ್ರಭೂಮಿ ಪಕ್ಕದಲ್ಲೇ ಮನೆಗಳಿವೆ. ವಾಟರ್​​​ ಫಿಲ್ಟರ್​​ ಘಟಕವೂ ಇದೆ. ಹೀಗಾಗಿ ಇಲ್ಲಿ ಅಂತ್ಯಕ್ರಿಯೆ ಮಾಡಬಾರದೆಂದು ಶವವನ್ನ ಸ್ಮಶಾನಕ್ಕೆ ಸಾಗಿಸಲು ಬಿಡದೆ ರಸ್ತೆಯಲ್ಲೇ ಸ್ಥಳೀಯರು ಪ್ರತಿಭಟನೆ ಶುರುಮಾಡಿದರು.

ಮಾನವಿಯತೆಯನ್ನೆ ಮರೆತ್ರಾ ಶಾಸಕ ಸೋಮಶೇಖರ್‌ ರೆಡ್ಡಿ?
ಇದಕ್ಕೆ ಸ್ಥಳೀಯ ಶಾಸಕ ಸೋಮಶೇಖರ್‌ ರೆಡ್ಡಿ ಕೂಡಾ ಸಾಥ್‌ ನೀಡಿದರು. ಸ್ಥಳೀಯರ ಜೊತೆಗೆ ಪ್ರತಿಭಟನೆಯಲ್ಲಿ ಅವರೂ ಭಾಗಿಯಾದರು. ನಂತರ ಉಸ್ತುವಾರಿ ಸಚಿವ ಆನಂದ್ ಸಿಂಗ್, ಜಿಲ್ಲಾಧಿಕಾರಿ ಜತೆಗೆಲ್ಲ ಮಾತನಾಡಿದ್ರು. ಪ್ರತಿಭಟನೆಗೆ ಸುಸ್ತು ಹೊಡೆದ ಅಧಿಕಾರಿಗಳು ಇದೊಂದು ಅಂತ್ಯಕ್ರಿಯೆಗೆ ಅವಕಾಶ ನೀಡಿ. ಮುಂದೆ ಪ್ರತ್ಯೇಕ ಜಾಗದಲ್ಲಿ ಸೋಂಕಿತರ ಅಂತ್ಯಕ್ರಿಯೆ ಮಾಡೋದಾಗಿ ಸ್ಥಳೀಯರಿಗೆ ಮತ್ತು ಶಾಸಕರಿಗೆ ಮನವಿ ಮಾಡಿದ್ರು. ಆಗ ಒಪ್ಪಿಕೊಂಡ ಶಾಸಕರು ಮತ್ತು ಸ್ಥಳೀಯರು ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಟ್ರು.

ಅಂತ್ಯಕ್ರಿಯೆಗೆ ಹರಿಶ್ಚಂದ್ರ ಘಾಟ್‌ನಲ್ಲೂ ವಿರೋಧ
ಅಂದ ಹಾಗೆ ಈ ಮೊದಲು ಕೊರೊನಾಗೆ ಮೃತಪಟ್ಟವ್ರನ್ನ ಬಳ್ಳಾರಿಯ ಹರಿಶ್ಚಂದ್ರ ಘಾಟ್​​ನಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ರು. ಆದ್ರೆ, ಅಲ್ಲಿನ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ರು. ಬಳಿಕ ವಾಜಪೇಯಿ ಬಡಾವಣೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಗ್ತಿತ್ತು. ಈಗ ಮೂವರ ಅಂತ್ಯಕ್ರಿಯೆ ನಂತರ ಈ ಜಾಗವೂ ಕೈ ತಪ್ಪಿದೆ. ಸೋಂಕಿತರ ಅಂತ್ಯಕ್ರಿಯೆಗೆ ಹೊಸ ಜಾಗವನ್ನ ಅಧಿಕಾರಿಗಳು ಹುಡುಕಬೇಕಿದೆ. ಆದ್ರೆ ಈ ಘಟನೆ ಮಾತ್ರ ಕೊರೊನಾ ಸಂದರ್ಭದಲ್ಲೂ ಮಾನವೀಯತೆ ಮರೆತಿದ್ದನ್ನ ಸಾರಿ ಸಾರಿ ಹೇಳುವಂತಿತ್ತು  -ಬಸವರಾಜ ಹರನಹಳ್ಳಿ

 

Related Tags:

Related Posts :

Category:

error: Content is protected !!