6 ತಿಂಗಳ ಮಗು ಮುಂದೆಯೇ ಪತ್ನಿಯ ಕೊಲೆ, ಬಣ್ಣ ಬಯಲಾಗುತ್ತೆ ಅಂತಾ ವೈದ್ಯನೂ ಆತ್ಮಹತ್ಯೆ

ಚಿಕ್ಕಮಗಳೂರು: ಅದೆಷ್ಟು ಸಿಟ್ಟಿತ್ತೋ..? ಅದೆಷ್ಟು ಸೇಡಿತ್ತೋ..? ಅದೆಷ್ಟು ರೋಷ ಉಕ್ಕಿ ಹರಿದಿತ್ತೋ.. ಒಬ್ಬಂಟಿಯಾಗಿದ್ದ ಈಕೆಯನ್ನ ಕೊಂದು ಮುಗಿಸಲಾಗಿತ್ತು. ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಈ ಕೇಸ್ ಬೆನ್ನತ್ತಿದ ಖಾಕಿಗೆ ಈಗ ಸಿಕ್ಕಿದ್ದು ಬೆಚ್ಚಿ ಬೀಳೋ ಸಂಗತಿ.

ನಿಜ.. ಇದೊಂದು ದುರಂತ ಕಥೆ. ಗಂಡನೇ ನನ್ನ ಜೀವ. ಗಂಡನೇ ಸರ್ವಸ್ವ ಅಂತಾ ನಂಬಿದ್ದಳು ಈ ಸುಂದರಿ. ಆದ್ರೆ, ಆ ನಂಬಿಕೆಗೆ ದ್ರೋಹ ಬಗೆದಿದ್ದು ಬೇರೆ ಯಾರೂ ಅಲ್ಲ ಜೀವಕ್ಕೆ ಜೀವ ಅಂತಿದ್ದ ಈ ಕ್ರೂರಿಯೇ. ಈಕೆಯ ಪ್ರೀತಿಯ ಅರಮನೆಯನ್ನ ಛಿದ್ರ ಛಿದ್ರ ಮಾಡಿದ್ದ. ತನ್ನ ಅರಗಿಣಿಯನ್ನೇ ಕೊಂದು ನಾಟಕವಾಡಿದ್ದ.

6 ತಿಂಗಳ ಮಗು ಮುಂದೆಯೇ ಗೃಹಿಣಿ ಮರ್ಡರ್!
ಆವತ್ತು ಫೆಬ್ರವರಿ 17 ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ಬಾಣಂತಿಯನ್ನ ಕತ್ತುಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅದೂ ಆರು ತಿಂಗಳ ಪುಟ್ಟ ಕಂದನ ಎದುರೇ ದಂತ ವೈದ್ಯನ ಪತ್ನಿ ಕವಿತಾಳನ್ನು ಮರ್ಡರ್ ಮಾಡಲಾಗಿತ್ತು. ಯಾರೋ ದರೋಡೆಕೋರರು ಚಿನ್ನಾಭರಣ ದೋಚಿ, ಕೊಲೆಗೈದಿದ್ದಾರೆ ಅಂತಾ ಇಡೀ ಊರಿಗೂರೇ ಬೆಚ್ಚಿ ಬಿದ್ದಿತ್ತು.

ವಿಪರ್ಯಾಸ ಅಂದ್ರೆ ಆ ದಿನ ಈಕೆಯ ಪತಿ ರೇವಂತ್ ಕೂಡ ಕಣ್ಣೀರಿಟ್ಟಿದ್ದ. ಅಸಲಿಗೆ ಈ ಕೊಲೆ ಮಾಡಿದ್ದು ದರೋಡೆಕೋರರು ಅಲ್ಲ. ಖದೀಮರು ಅಲ್ಲ. ಈಕೆಗೆ ತಾಳಿ ಕಟ್ಟಿದ ಗಂಡ ರೇವಂತ್​ನೇ ಕತ್ತು ಸೀಳಿ ಡ್ರಾಮಾ ಮಾಡಿದ್ದ.

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಕೊಂದ!
ಈ ಪ್ರಕರಣದ ಬೆನ್ನು ಬಿದ್ದಿದ್ದ ಕಡೂರು ಪೊಲೀಸ್ರಿಗೆ ಬೆಚ್ಚಿ ಬೀಳೋ ಸಂಗತಿ ಗೊತ್ತಾಗಿದೆ. ಅಸಲಿಗೆ ಈ ಡಾಕ್ಟರ್, ಕಡೂರಿನ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧವನ್ನ ಹೊಂದಿದ್ನಂತೆ. ಅನೇಕ ಬಾರಿ ಕವಿತಾ ಬುದ್ಧಿವಾದ ಹೇಳಿದ್ಳು. ಆದ್ರೂ ಈತ ಕಳ್ಳಾಟ ಬಿಟ್ಟಿರಲಿಲ್ಲ.

ಯಾವಾಗ ಕವಿತಾ ತೀವ್ರವಾಗಿ ಆಕ್ಷೇಪ ಎತ್ತಿದ್ಲೋ ಅಲ್ಲಿಗೆ ಕೊಲೆಗೆ ಸ್ಕೆಚ್ ಹಾಕಿದ್ದ. ಅದ್ರಂತೆ ಫೆಬ್ರವರಿ 17ರಂದು ಪತ್ನಿಯನ್ನ ಕೊಲೆ ಮಾಡಿದ್ದ ಡಾ.ರೇವಂತ್, ಪೊಲೀಸರ ದಿಕ್ಕುತಪ್ಪಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ಮನೆಯಲ್ಲಿದ್ದ ಚಿನ್ನಾಭರಣ ತಾನೇ ಕದ್ದಿಟ್ಟು, ಕೊಲೆಗಡುಕರು ಚಿನ್ನಾಭರಣ ದೋಚಿದ್ದಾರೆ ಅಂತಾ ದೂರು ನೀಡಿದ್ದ. ಆದ್ರೆ, ಕವಿತಾಳ ಮರಣೋತ್ತರ ವರದಿ ದಂತ ವೈದ್ಯನ ಅಸಲಿ ಮುಖವನ್ನ ಬಯಲು ಮಾಡಿತ್ತು.

ಕವಿತಾಳನ್ನು ಕೊಲೆಮಾಡುವ ಮುನ್ನ ಆಕೆಗೆ ಇಂಜೆಕ್ಷನ್ ನೀಡಿದ್ದ. ಪ್ರಜ್ಞೆ ತಪ್ಪಿದ ಬಳಿಕ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದು ಮರಣೋತ್ತರ ವರದಿಯಲ್ಲಿ ಬಯಲಾಗಿತ್ತು. ಈ ಎಲ್ಲಾ ಸೀಕ್ರೆಟ್ ಬಯಲಾಗುತ್ತಿದ್ದಂತೆ, ಈ ಪಾಪಿ ತಾನೂ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಕಡೂರು ಪಟ್ಟಣದ ಮಸಾಲ ಡಾಬಾದ ಸಮೀಪ ಕಾರು ನಿಲ್ಲಿಸಿ ರೈಲಿಗೆ ಸಿಲುಕಿ ಸೂಸೈಡ್ ಮಾಡಿಕೊಂಡಿದ್ದಾನೆ.

ಒಟ್ನಲ್ಲಿ, ಕಾಮದ ಬಲೆಯಲ್ಲಿ ಬಿದ್ದ ನೀಚ, ತನ್ನ ಪತ್ನಿಯನ್ನೇ ಕ್ರೂರವಾಗಿ ಕೊಂದು ಮುಗಿಸಿದ್ದಾನೆ. ಬಳಿಕ ಮಾನ, ಮರ್ಯಾದೆಗೆ ಹೆದರಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದ್ರೆ, ಆ ಮಾನ ಮರ್ಯಾದೆ ಬಗ್ಗೆ ಮೊದಲೇ ಅರಿವಿದ್ದಿದ್ರೆ ಪತ್ನಿ ದುರಂತ ಅಂತ್ಯ ಕಾಣ್ತಿರಲಿಲ್ಲ. 6 ತಿಂಗಳ ಮಗು ಸೇರಿ ಇಬ್ಬರು ಮಕ್ಕಳು ಬೀದಿ ಪಾಲಾಗ್ತಿರಲಿಲ್ಲ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!