ನಾನು ಯಾವುದೇ ತಪ್ಪು ಮಾಡಿಲ್ಲ -ಡಿಕೆ ಶಿವಕುಮಾರ್

ನಾನು ಕೆಂಪೇಗೌಡನ ಮಗ ಹೆದರಿ ಓಡಿ ಹೋಗಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಡಿ ಸಮನ್ಸ್ ಪ್ರಶ್ನಿಸಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನ ನಿನ್ನೆ ಹೈಕೋರ್ಟ್ ವಜಾಗೊಳಿಸಿತ್ತು. ಈ ಸಂಬಂಧ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ ತನಿಖೆಗೆ ಹೆದರಿ ಅವಿತುಕೊಳ್ಳುವ ವ್ಯಕ್ತಿ ನಾನಲ್ಲ ಎಂದಿದ್ದಾರೆ. ನ್ಯಾಯಯುತವಾದ ಜೀವನನ್ನು ನಾನು ನಡೆಸುತ್ತಿದ್ದೇನೆ. ಯಾವುದೇ ತನಿಖೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂದರು.

ಇದೇ ವೇಳೆ ಮಾತನಾಡಿದ ಡಿಕೆಶಿ, ನಾನು ಯಾವುದೇ ಹಣವನ್ನ ವಿದೇಶಿ ವಿನಿಮಯ ಮಾಡಿಲ್ಲ. ಯಾವ ಸರ್ಕಾರಕ್ಕೂ ಮೋಸ ಮಾಡಿಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದರು. ನಾನು ಪಕ್ಷದ ಕೆಲಸವನ್ನು ಮಾತ್ರ ಮಾಡಿದ್ದೇನೆ. ಯಾವುದೇ ಕೊಲೆ ಮಾಡಿಲ್ಲ, ಯಾರೂ ಮಾಡಬಾರದಂಥ ತಪ್ಪು ಮಾಡಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಗುಡುಗಿದ್ದಾರೆ.

ಇಡಿ ಅಧಿಕಾರಿಗಳಿಗೆ ನಾನು ಗೌರವ ಕೊಡುತ್ತೇನೆ. ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ. ಇಂದು ವಿಚಾರಣೆಗೆ ಹಾಜರಾಗಲು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಕಾನೂನು ರೀತಿಯಲ್ಲಿ ರಕ್ಷಣೆ ಮಾಡಿಕೊಳ್ಳಲು ಕೆಲವು ತಯಾರಿ ಮಾಡಿಕೊಳ್ಳಬೇಕಾಗಿದೆ. ಕಾನೂನಿನಲ್ಲಿರುವ ಅವಕಾಶಗಳನ್ನ ಬಳಸಿಕೊಳ್ಳುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಮ್ಮ ಕುಟುಂಬದ ರಕ್ತವನ್ನು ಹೀರಿದ್ದಾರೆ- ಡಿಕೆಶಿ
ಬೇನಾಮಿ ಆಸ್ತಿ ಹೆಸರಿನಲ್ಲಿ ನಮ್ಮ ಇಡೀ ಕುಟುಂಬದ ರಕ್ತವನ್ನು ಹೀರಿಬಿಟ್ಟಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಡಿಕೆ ಶಿವಕುಮಾರ್ ಗುಡುಗಿದ್ದಾರೆ. ದೆಹಲಿಯ ಮನೆಯಲ್ಲಿ ಸಿಕ್ಕ ಹಣ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಬರಲ್ಲ. ನಾನು ಐಟಿಆರ್ ಕೂಡ ಫೈಲ್ ಮಾಡಿದ್ದೇನೆ. ಇದೊಂದು ಸಣ್ಣ ಆದಾಯ ತೆರಿಗೆ ವಿಚಾರವಷ್ಟೇ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ನಮ್ಮ ತಾಯಿಯ ಆಸ್ತಿ ಬಗ್ಗೆ ತನಿಖೆಗೊಳಪಡಿಸಿದ್ದಾರೆ ಎಂದು ತಮ್ಮ ಕುಟುಂಬದ ವಿಚಾರಣೆ ಬಗ್ಗೆಯೂ ಮಾತನಾಡಿದ್ದಾರೆ. ಬೇನಾಮಿ ಆಸ್ತಿ ಹೆಸರಿನಲ್ಲಿ 84 ವರ್ಷದ ನಮ್ಮ ತಾಯಿಯ ವಿಚಾರಣೆ ಮಾಡಿದ್ದಾರೆ. ನ್ಯಾಯಯುತವಾಗಿ ಸಂಪಾದಿಸಿದ ನಮ್ಮ ತಾಯಿಯ ಎಲ್ಲಾ ಆಸ್ತಿಯನ್ನ ಬೇನಾಮಿ ಆಸ್ತಿ ಎಂದಿದ್ದಾರೆ. ಇದರ ವಿರುದ್ಧ ನಾನು ನ್ಯಾಯಾಲಯದ ಮೊರೆ ಹೋಗಿದ್ದೇನೆ ಎಂದರು.

ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಮನೆಯಲ್ಲಿ ದಾಖಲೆಯಿಲ್ಲದ ಹಣ ಸಿಕ್ಕಿತ್ತು. ಈ ಸಂಬಂಧ ಇಡಿ ಅಧಿಕಾರಿಗಳು ವಿಚಾರಣೆಗೆ ಸಮನ್ಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಡಿಕೆಶಿ ಹೈಕೋರ್ಟ್ ಮರೆ ಹೋಗಿದ್ರು. ಆದ್ರೆ ನಿನ್ನೆ ಇಡಿ ನೀಡಿದ್ದ ಸಮನ್ಸ್ ಪ್ರಶ್ನಿಸಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಐಟಿ ದಾಳಿಯಲ್ಲಿ 7 ಕೋಟಿಗೂ ಹೆಚ್ಚು ಹಣ ಸಿಕ್ಕಿದೆ. ಹಾಗಾಗಿ ರಿಟ್ ಅರ್ಜಿ ವಿಚಾರಣೆಗೆ ಯೋಗ್ಯವಾಗಿದೆ ಎಂದು ಹೈಕೋರ್ಟ್ ಹೇಳಿತ್ತು. ಹೀಗಾಗಿ ಇಂದು ದೆಹಲಿಯ ಇಡಿ ಅಧಿಕಾರಿಗಳ ಎದುರು ಡಿಕೆಶಿ ವಿಚಾರಣೆಗೆ ಹಾಜರಾಗಲೇಬೇಕಿದೆ.

Related Posts :

Category:

error: Content is protected !!