ಸ್ವಾಮಿ ಹರ್ಷಾನಂದರ ನೆನಪು | ಸದಾ ಪ್ರೋತ್ಸಾಹ, ಸ್ಫೂರ್ತಿ ನೀಡುತ್ತಿದ್ದ ಹಿರಿಯ ಸೋದರ

ಹರ್ಷಾನಂದರಿಗೆ ಬಡಜನರ ಬಗ್ಗೆ ವಿಶೇಷ ಕಾಳಜಿ ಇತ್ತು. ಅವರಿಗೆ ಅನೇಕ ಸಹಾಯ ಮಾಡಿದ್ದಾರೆ. ಆಶ್ರಮದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್​ ಕೊಡುವ ವ್ಯವಸ್ಥೆ ಮಾಡಿದ್ದಾರೆ.

  • TV9 Web Team
  • Published On - 18:17 PM, 12 Jan 2021
ಸ್ವಾಮಿ ಹರ್ಷಾನಂದರು

ಸ್ವಾಮಿ ಹರ್ಷಾನಂದರ ಅಧ್ಯಯನಶೀಲತೆ, ಶಿಷ್ಯ ವಾತ್ಸಲ್ಯ ಮತ್ತು ಒಡನಾಟ ನೆನಪಿಸಿಕೊಂಡಿದ್ದಾರೆ ಕೊಡಗು ಜಿಲ್ಲೆ ಪೊನ್ನಂಪೇಟೆ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಸ್ವಾಮಿ ಬೋಧ ಸ್ವರೂಪಾನಂದ.

ನಾನು ಮೈಸೂರಲ್ಲಿ ಓದುತ್ತಿರುವಾಗಲೇ ಸ್ವಾಮಿ ಹರ್ಷಾನಂದರ ಪರಿಚಯವಾಯಿತು. ನಾನು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಓದುತ್ತಿರುವ ಸಂದರ್ಭದಲ್ಲಿ ಅವರು ಅಲ್ಲಿನ ರಾಮಕೃಷ್ಣ ಇನ್​ಸ್ಟಿಟ್ಯೂಟ್​ ಆಫ್​ ಮಾರಲ್​ ಆ್ಯಂಡ್ ಸ್ಪಿರಿಚ್ಯುವಲ್ ಎಜ್ಯುಕೇಶನ್​ನ ಮುಖ್ಯಸ್ಥರಾಗಿದ್ದರು. ನಮಗೆಲ್ಲ ಕ್ಲಾಸ್​ ತೆಗೆದುಕೊಳ್ಳುತ್ತಿದ್ದರು. ನಂತರ ಬೇಲೂರು ಮಠದ ತರಬೇತಿ ಕೇಂದ್ರದಲ್ಲಿ ಸ್ವಲ್ಪಕಾಲ ಆಚಾರ್ಯರಾಗಿದ್ದರು. ಅದಾದ ಬಳಿಕ ಅಲಹಾಬಾದ್​ ಶಾಖಾಮಠಕ್ಕೆ ಅಧ್ಯಕ್ಷರಾಗಿ ಹೋಗಿದ್ದರು. ಅಲ್ಲಿಂದ 1989ರಲ್ಲಿ ಬೆಂಗಳೂರಿಗೆ ವಾಪಸ್​ ಬಂದು, ಈವರೆಗೆ ಅಧ್ಯಕ್ಷರಾಗಿದ್ದರು.

ಸ್ವಾಮಿ ಹರ್ಷಾನಂದರಲ್ಲಿ ಅಧ್ಯಯನಶೀಲತೆ ಅವರ ಸ್ವಭಾವದ ಭಾಗವೇ ಆಗಿತ್ತು. ಅಗಾಧವಾದ ಪಾಂಡಿತ್ಯವಿತ್ತು. ಜತೆಗಿರುವವರ ಸಾಧನೆಗೆ ಪ್ರೋತ್ಸಾಹ ಕೊಡುತ್ತಿದ್ದರು. ನಾನು ಮೈಸೂರಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ, ಅವರ ಆಧ್ಯಾತ್ಮಿಕ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ಅಂದು ಅವರು ಮಾಡಿದ ಭಾಷಣ ನನಗೆ ಇಂದೂ ಕೂಡ ಜ್ಞಾಪಕ ಇದೆ. ಸಾಧನೆಗಾಗಿ ಹೇಗೆ ಮುನ್ನಡೆಯಬೇಕು ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿದ್ದರು. ಭಗವಂತನೇ ಸರ್ವಸ್ವ, ಶ್ರೀರಾಮಕೃಷ್ಣರು ಹೇಳುವಂತೆ ಭಗವಂತನ ಸಾಕ್ಷಾತ್ಕಾರವೇ ಜೀವಿತದ ಗುರಿ. ನಮ್ಮ ರಾಮಕೃಷ್ಣ ಆಶ್ರಮದ ಸೇವಾಕಾರ್ಯಾಗಳು ಭಗವತ್​ ಸಾಕ್ಷಾತ್ಕಾರದತ್ತ ನಮ್ಮನ್ನು ಕರೆದೊಯ್ಯುತ್ತವೆ ಎಂಬುದನ್ನು ತಿಳಿಸಿದ್ದರು. ತಮ್ಮ ಜೀವಿತದ ಕೊನೆಯವರೆಗೂ ಅದೇ ಸಾಧನೆಯನ್ನೇ ಮಾಡಿದರು. ಬೇಲೂರು ಮಠಕ್ಕೆ ಆಚಾರ್ಯರಾಗಿ ಹೋದ ಬಳಿಕವೂ ಸಹ, ಮೈಸೂರಿನ ಮಠದಲ್ಲಿ ನಡೆದ ಸಮಾವೇಶಕ್ಕೆ ಬಂದಿದ್ದರು. ಅಂದೂ ಕೂಡ ನಮಲ್ಲಿ ಸ್ಫೂರ್ತಿ ತುಂಬುವ, ಪ್ರೋತ್ಸಾಹದಾಯಕ ಮಾತುಗಳನ್ನು ಆಡಿದ್ದರು. ಅವೆಲ್ಲವೂ ನೆನಪಿನಲ್ಲಿದೆ.

ವಾಚ್​ ಉಡುಗೊರೆ
ನಮ್ಮ ಜಗದಾತ್ಮಾನಂದ ಸ್ವಾಮೀಜಿಯವರ ಅನುಗ್ರಹದಿಂದಾಗಿ, ಬೇಲೂರು ಮಠದ ವತಿಯಿಂದ ನನ್ನನ್ನು ಚಿಕ್ಕವಯಸ್ಸಿನಲ್ಲಿಯೇ ಕೊಡಗಿನ ಪೊನ್ನಂಪೇಟೆ ರಾಮಕೃಷ್ಣ ಆಶ್ರಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ನಾನೀಗ ಇಲ್ಲಿಗೆ ಬಂದು 14 ವರ್ಷಗಳಾದವು. ಇಲ್ಲಿಗೆ ಬಂದ ನಂತರ ಸ್ವಾಮಿ ಹರ್ಷಾನಂದರೊಟ್ಟಿಗೆ ತುಂಬ ಒಳ್ಳೆಯ ಸಂಪರ್ಕ ಇತ್ತು. ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಒಂದು ವಾಚ್​​ ಉಡುಗೊರೆ ಕೊಟ್ಟಿದ್ದರು. ಹಾಗೇ, ಅಧ್ಯಕ್ಷನಾಗಿ ಹೇಗೆ ಕಾರ್ಯನಿರ್ವಹಿಸಬೇಕು, ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಹಿರಿಯ ಸನ್ಯಾಸಿಯಾಗಿ, ಸಹೋದರನಾಗಿ ತಿಳಿಸಿಕೊಟ್ಟಿದ್ದರು. ಅವರೆಲ್ಲ ಮಾತುಗಳೂ ತುಂಬ ಸ್ಫೂರ್ತಿಯನ್ನು ತುಂಬುತ್ತಿದ್ದವು. ಈಗಲೂ ಸಹ ಆ ವಾಚ್ ಸ್ಫೂರ್ತಿದಾಯಕವಾಗಿ ನಮ್ಮೊಟ್ಟಿಗೆ ಇವೆ.

ಇದನ್ನೂ ಓದಿ: ವಿವೇಕಾನಂದರ ಜನ್ಮ ದಿನವಾದ ಇಂದೇ ಇಹಲೋಕ ತ್ಯಜಿಸಿದ ಸ್ವಾಮಿ ಹರ್ಷಾನಂದ

ಸ್ವಾಮಿ ಬೋಧಸ್ವರೂಪಾನಂದ

2 ತಿಂಗಳ ಹಿಂದೆ ಭೇಟಿಯಾಗಿದ್ದೆ
ಕೊರೊನಾ ಕಾರಣದಿಂದ ಇತ್ತೀಚೆಗೆ ಭೇಟಿಯಾಗಿರಲಿಲ್ಲ. ಎರಡು ತಿಂಗಳ ಹಿಂದೆ ಹೋಗಿ, ನಮಸ್ಕಾರ ಮಾಡಿ ಬಂದಿದ್ದೇನೆ. ಅದಕ್ಕೂ ಮೊದಲು ಹೋದಾಗ ಕೊರೊನಾ ಕಾರಣದಿಂದ ಭೇಟಿಯಾಗಲು ಆಗಿರಲಿಲ್ಲ. ಈ ಹಿಂದೆ ಅವರೇ ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡು ಸ್ವಾಮಿ ಬ್ರಹ್ಮಾನಂದರು ಮತ್ತು ಸ್ವಾಮಿ ರಾಮಕೃಷ್ಣಾನಂದರ ಬಗ್ಗೆ ಭಾಷಣ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದರು. ಈಗ ನನ್ನ ಹಿತೈಷಿ ಮತ್ತು ಆಶೀರ್ವಾದಪೂರ್ವಕ ಮಾರ್ಗದರ್ಶನ ಮಾಡುತ್ತಿದ್ದವರನ್ನು ಕಳೆದುಕೊಂಡಿದ್ದು ತುಂಬ ನೋವಾಗಿದೆ.

ಅದ್ಭುತ ಸಾಧನೆ
ಯಾವುದೇ ವಿಷಯವನ್ನು ತೆಗೆದುಕೊಂಡರೂ ಅದನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದರು. encyclopedia of hinduism ಪುಸ್ತಕ ಹೊರತರಲು 30 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಮಠದ ಜವಾಬ್ದಾರಿಗಳ ಜತೆಗೆ ಇದನ್ನೂ ನಿಭಾಯಿಸಿದರು. ಒಂದು ಸಂಸ್ಥೆ ಮಾಡಬೇಕಾದ ಕೆಲಸವನ್ನು ಒಬ್ಬರೇ ಮಾಡಿದ್ದಾರೆ. ಆರೋಗ್ಯವೂ ಅಷ್ಟು ಚೆನ್ನಾಗಿ ಇರಲಿಲ್ಲ. ಅಂಥದ್ದರಲ್ಲಿ ಎಲ್ಲವನ್ನೂ ಸೂಕ್ತವಾಗಿ ನಿಭಾಯಿಸುತ್ತಿದ್ದರು. ಒಂದು ಕ್ಲಾಸ್​ ತೆಗೆದುಕೊಳ್ಳಬೇಕೆಂದರೂ ಚೆನ್ನಾಗಿ ಅಧ್ಯಯನ ಮಾಡುತ್ತಿದ್ದರೂ. ಸ್ವಾಮೀಜಿ ಇಂಜಿನಿಯರಿಂಗ್​ನಲ್ಲಿ ರ್‍ಯಾಂಕ್ ಪಡೆದವರು. ಆಗಿನ ಕಾಲದಲ್ಲಿ ಇಂಜಿನಿಯರ್​ ಮಾಡುವುದು ಸುಲಭದ ಮಾತಾಗಿರಲಿಲ್ಲ. ಅಂಥದ್ದರಲ್ಲಿ ರ್ಯಾಂಕ್​ ಸ್ಟುಡೆಂಟ್​ ಆಗಿದ್ದರು. ಸ್ವಾಮಿ ಯತೀಶ್ವರಾನಂದರ ಗರಡಿಯಲ್ಲಿ ಪಳಗಿ, ಕೆಲವು ವರ್ಷಗಳ ಬಳಿಕ ರಾಮಕೃಷ್ಣ ಮಠವನ್ನು ಸೇರಿಕೊಂಡರು.

ಬಡವರಿಗೆ ತುಂಬ ಸಹಾಯ ಮಾಡಿದ್ದಾರೆ
ಹರ್ಷಾನಂದರಿಗೆ ಬಡಜನರ ಬಗ್ಗೆ ವಿಶೇಷ ಕಾಳಜಿ ಇತ್ತು. ಅವರಿಗೆ ಅನೇಕ ಸಹಾಯ ಮಾಡಿದ್ದಾರೆ. ಆಶ್ರಮದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್​ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಸ್ವಾಮೀಜಿ ಬಸವನಗುಡಿಯ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿರುವ ಜತೆಗೇ ಶಿವನಹಳ್ಳಿಯ ರಾಮಕೃಷ್ಣ ಮಿಷನ್​ ಮುಖ್ಯಸ್ಥರೂ ಆಗಿದ್ದರು. ಒಟ್ಟನಲ್ಲಿ ನಮ್ಮೆಲ್ಲರಿಗೂ ಬೆನ್ನೆಲುಬಾಗಿ, ಯಾರೇ ಬಂದರೂ ಅವರಿಗೆ ಸ್ಫೂರ್ತಿಯಾಗಿ ಇರುತ್ತಿದ್ದರು. ಅದರಲ್ಲೂ ಹೊಸದಾಗಿ ರಾಮಕೃಷ್ಣ ಆಶ್ರಮಕ್ಕೆ ಸೇರಿದವರಿಗೆ, ಬ್ರಹ್ಮಚಾರಿಗಳಾಗಿ ಮಠಕ್ಕೆ ಸೇರ್ಪಡೆಯಾಗಲು ಬಯಸುವವರಿಗಾಗಿ ಪುಸ್ತಕಗಳನ್ನು ಬರೆದಿದ್ದಾರೆ. ಅದರಲ್ಲೂ ರಾಮಕೃಷ್ಣ ಆಶ್ರಮ ಸೇರಲು ಬಯಸುವವರಿಗಾಗಿ What Shall I Do? ಎಂಬ ಪುಸ್ತಕ ಹೊರತಂದಿದ್ದಾರೆ. ಸುಮ್ಮನೆ ಮಠಕ್ಕೆ ಸೇರಲು ಬರಬಾರದು. ಹೀಗೆ ಸೇರುವ ಮುನ್ನ ಏನೇನೆಲ್ಲ ಯೋಚಿಸಬೇಕು ಎಂಬುದು ಈ ಪುಸ್ತಕದಲ್ಲಿದೆ. ಇನ್ನು ಯುವಕರ ಮನಸಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರವಾಗಿಯೂ ಪುಸ್ತಕಗಳನ್ನು ಬರೆದಿದೆ. ಇವೆಲ್ಲದರಲ್ಲೂ ಅವರ ಸ್ಫೂರ್ತಿದಾಯಕ ಮಾತುಗಳನ್ನು ಕೇಳಬಹುದು. ಒಬ್ಬರು ವಿಶೇ ಷ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ. ಅವರಂಥವರು ಮತ್ತೆ ಸಿಗುವುದು ಕಷ್ಟ.

(ನಿರೂಪಣೆ: ಲಕ್ಷ್ಮೀ ಹೆಗಡೆ)

ನಿತ್ಯ ಬಳಸುವ ಪದಗಳಿಗೆ ಭಾವ-ಜೀವ ತುಂಬಿದ್ದ ಅಪರೂಪದ ಅಧ್ಯಾತ್ಮ ಸಾಧಕ ಸ್ವಾಮಿ ಹರ್ಷಾನಂದ ಮಹಾರಾಜ್