ಕೊಹ್ಲಿ ಮತ್ತು ಬಿಸಿಸಿಐ ನಿರ್ಧಾರ ಅತ್ಯಂತ ಸಮಂಜಸ: ಡೇವಿಡ್ ವಾರ್ನರ್

  • Arun Belly
  • Published On - 16:06 PM, 24 Nov 2020

ಕೊವಿಡ್-19 ಎರಡನೆ ಅಲೆ ಸೃಷ್ಟಿಸಿರುವ ಭೀತಿಯ ಹೊರತಾಗಿ ಭಾರತದಲ್ಲಿ ಈಗ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾದ ಸ್ಕಿಪ್ಪರ್ ವಿರಾಟ್​ ಕೊಹ್ಲಿಗೆ ನೀಡಿರುವ ಪಿತೃತ್ವದ ರಜೆ. ನಿಲ್ಲುವ ಲಕ್ಷಣಗಳನ್ನೇ ತೋರದಿರುವ ಈ ಚರ್ಚೆಗೆ ಲೇಟೆಸ್ಟ್ ಎಂಟ್ರಿಯೆಂದರೆ ಆಸ್ಟ್ರೇಲಿಯಾದ ಆರಂಭ ಆಟಗಾರ ಮತ್ತು ಸನ್​ರೈಸರ್ಸ್ ಹೈದರಾಬಾದ್​ ಫ್ರಾಂಚೈಸಿಯ ನಾಯಕನಾಗಿರುವ ಡೇವಿಡ್ ವಾರ್ನರ್. ವಿರಾಟ್​ ಕೊಹ್ಲಿ ಪಿತೃತ್ವದ ರಜೆಗೆ ಅರ್ಜಿ ಸಲ್ಲಿಸಿದ್ದು ಮತ್ತು ಬಿಸಿಸಿಐ ಅದನ್ನು ಮಂಜೂರು ಮಾಡಿದ್ದು ಅತ್ಯಂತ ಸೂಕ್ತವಾಗಿದೆಯೆಂದು ವಾರ್ನರ್ ವರ್ಚ್ಯುಯಲ್ ಸುದ್ದಿ ಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.

‘‘ಹೆರಿಗೆ ಸಂದರ್ಭದಲ್ಲಿ ವಿರಾಟ್ ತಮ್ಮ ಪತ್ನಿಯೊಂದಿಗಿರುವುದು ಸಮಂಜಸವಾಗಿದೆ. ಸಾಮಾನ್ಯವಾಗಿ, ಪ್ರತಿಯೊಬ್ಬ ವ್ಯಕ್ತಿ ಇದನ್ನೇ ಬಯಸುತ್ತಾನೆ. ಅಸ್ಟ್ರೇಲಿಯ ವಿರುದ್ಧ ಸರಣಿಯ ಮಧ್ಯಭಾಗದಲ್ಲಿ ಸ್ವದೇಶಕ್ಕೆ ಮರಳುವ ವಿರಾಟ್​ ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ,’’ ಎಂದು ವಾರ್ನರ್ ಹೇಳಿದ್ದಾರೆ.

ವಿರಾಟ್ ಸ್ವದೇಶಕ್ಕೆ ಮರಳಿದ ನಂತರ ನಾಯಕತ್ವವಹಿಸಿಕೊಳ್ಳಲಿರುವ ಉಪನಾಯಕ ಅಜಿಂಕ್ಯಾ ರಹಾನೆ ಸಹ ಉತ್ತಮ ಕ್ಯಾಪ್ಟನ್ಸಿ ಮಟೇರಿಯಲ್ ಎಂದು ವಾರ್ನರ್ ಹೇಳಿದ್ದಾರೆ.

‘‘ಎದುರಾಳಿ ಆಟಗಾರರು ಮತ್ತು ನಾಯಕನನ್ನು ಕೆಣಕುವುದನ್ನು ನಾವು ಮಾಡುತ್ತಿರುತ್ತೇವೆ, ವಿರಾಟ್​ರನ್ನು ಕೆಣಕುವುದು ಸುಲಭ ಮತ್ತು ಅಪಾಯಕಾರಿ ಕೂಡ ಹೌದು. ಯಾಕೆಂದರೆ, ವಿರೋಧಿ ಟೀಮಿನ ಆಟಗಾರರು ಕೆಣಕಿದರೆ ಅವರು ಮತ್ತಷ್ಟು ಛಲದಿಂದ ಆಡುತ್ತಾರೆ. ಹಾಗಾಗಿ, ಈಗ ಅವರನ್ನು ಕೆಣಕುವ ಕೆಲಸ ಯಾರೂ ಮಾಡಲಾರರು. ಆದರೆ, ಅಜಿಂಕ್ಯಾ ಅವರನ್ನು ಕೆಣಕುವುದು ಹೇಗೆ ಎನ್ನುವುದರ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆ. ಯಾಕೆಂದರೆ ಅವರು ಕೂಲ್ ಕಸ್ಟಮರ್, ಒಂದು ಸಮತೋಲಿತ ಅಪ್ರೋಚನ್ನು ಅಜಿಂಕ್ಯಾ ತಮ್ಮ ಆಟದಲ್ಲಿ ಅಳವಡಿಸಿಕೊಳ್ಳುತ್ತಾರೆ ಮತ್ತು ಅದನ್ನೇ ಟೀಮಿನಲ್ಲಿ ಕ್ಯಾರಿ ಮಾಡುತ್ತಾರೆ,’’ ಎಂದು ವಾರ್ನರ್ ಹೇಳಿದ್ದಾರೆ.

‘‘ಭಾರತೀಯ ತಂಡದ ಗಮನಾರ್ಹ ಸಂಗತಿಯೆಂದರೆ ಅವರಲ್ಲಿ 3-4 ಆಟಗಾರರು ಯಾವುದೇ ಸಂದರ್ಭದಲ್ಲಿ ಟೀಮಿನ ನಾಯಕತ್ವ ನಿರ್ವಹಿಸಲು ಅರ್ಹರೂ ಮತ್ತು ಸಮರ್ಥರೂ ಆಗಿದ್ದಾರೆ. ಅವರೆಲ್ಲ ಉತ್ತಮ ಆಟಗಾರರೆಂದು ಬೇರೆ ಹೇಳಬೇಕಿಲ್ಲ,’’ ಅಂತ ವಾರ್ನರ್ ಹೇಳಿದ್ದಾರೆ.

ಒಂದು ದಿನದ ಪಂದ್ಯಗಳಲ್ಲೂ ವಾರ್ನರ್ ಟಿ20 ಕ್ರಿಕೆಟ್​ನಲ್ಲಂತೆ ಆಕ್ರಮಣಕಾರಿ ಅಟವಾಡುತ್ತಾರೆಯೇ ಎಂದು ವರದಿಗಾರನೊಬ್ಬ ಕೇಳಿದ ಪ್ರಶ್ನೆಗೆ, ಅವರು ತಾನು ಆಟದ ಶೈಲಿಯನ್ನು ಬದಲಾಯಿಸುವುದಿಲ್ಲವೆಂದರು.

‘‘ಹೌದು ನಾನು ಆಕ್ರಮಣಕಾರಿ ಆಟವನ್ನು ಮುಂದುವರಿಸುತ್ತೇನೆ, ಒಂದು ದಿನದ ಪಂದ್ಯಗಳಲ್ಲಿ ನನ್ನ ಅಪ್ರೋಚ್ ಭಿನ್ನವಾಗೇನೂ ಇರುವುದಿಲ್ಲ. ಹಾಗೆ ನೋಡಿದರೆ, ಆಸ್ಟ್ರೇಲಿಯಾದಲ್ಲಿ 50 ಓವರ್​ಗಳ ಪಂದ್ಯಗಳನ್ನು ಆಡುವಾಗ ನಿಮ್ಮ ನಾರ್ಮಲ್ ಗೇಮನ್ನೇ ಆಟಬಹುದು, ಅದನ್ನು ಬದಲಾಯಿಸುವ ಅವಶ್ಯಕತೆ ಎದುರಾಗದು. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಆಡಿದ ಸರಣಿಗಳಲ್ಲಿ ಇದನ್ನು ನಾನು ಕಂಡುಕೊಂಡಿದ್ದೇನೆ. ಅದನ್ನೇ ನಾನು ಐಪಿಎಲ್​ನಲ್ಲಿ ಮುಂದುವರಿಸಿದ್ದೆ,’’ ಎಂದು ಹೇಳಿದ ವಾರ್ನರ್, ತಾನ್ಯಾವತ್ತೂ ಆಡುವ ಶೈಲಿಯನ್ನು ಬದಲಾಯಿಸುವುದಿಲ್ಲವೆಂದು ಹೇಳಿದರು.