15 ವರ್ಷಕ್ಕಿಂತ ಕೆಳಗಿನವರು ಅಂತರರಾಷ್ಟ್ರೀಯ ಕ್ರಿಕೆಟ್ ಆಡುವಂತಿಲ್ಲ: ಐಸಿಸಿ | ICC introduces minimum age policy in International Cricket

  • Arun Belly
  • Published On - 18:34 PM, 20 Nov 2020

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಅತ ಕಡಿಮೆ ವಯಸ್ಸಿನಲ್ಲೇ ಪಾದಾರ್ಪಣೆ ಮಾಡುವ ಹದಿಹರೆಯದ ಆಟಗಾರರ ಹಿತರಕ್ಷಣೆ ಕಾಪಾಡಲು, ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಆಟಗಾರರಿಗೆ ಕನಿಷ್ಠ ವಯೋಮಿತಿಯನ್ನು ನಿಗದಿಪದಡಿಸಿದೆ. ಒಬ್ಬ ಆಟಗಾರ ಯಾವುದೇ ದೇಶದವನಾಗಿರಲಿ, ಅವನು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ದೇಶವನ್ನು ಪ್ರತಿನಿಧಿಸಸಬೇಕಾದರೆ ಕನಿಷ್ಠ 15 ವರ್ಷದವನಾಗಿರಬೇಕು, ಎಂದು ತನ್ನ ಸದಸ್ಯ ರಾಷ್ಟ್ರಗಳಿಗೆ ಕಳಿಸಿರುವ ಸುತ್ತೋಲೆಯಲ್ಲಿ ಐಸಿಸಿ ತಿಳಿಸಿದೆ.

ಆದರೆ, ಕೆಲವು ಅಸಾಧಾರಣ ಸನ್ನಿವೇಶಗಳಲ್ಲಿ ಸದಸ್ಯ ರಾಷ್ಟ್ರವೊಂದು ತನ್ನ ಆಟಗಾರನೊಬ್ಬ ಐಸಿಸಿ ನಿಗದಿಪಡಿಸಿರುವ ವಯೋಮಿತಿಗಿಂತ ಕಡಿಮೆ ವಯಸ್ಸಿನವರಾಗಿದ್ದು ಸದರಿ ರಾಷ್ಟ್ರವು ಅವನನ್ನು ಐಸಿಸಿ ಆಯೋಜಿತ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿಸಲು ಇಚ್ಛಿಸಿದಲ್ಲ್ಲಿ ಆ ರಾಷ್ಟ್ರವು ಕ್ರಿಕೆಟ್ ಗವರ್ನಿಂಗ್ ಬಾಡಿಯ ಅನುಮತಿ ಪಡೆದು ಮುಂದುವರಿಯಬಹುದಾಗಿದೆ ಅಂತ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘‘ಆಟಗಾರರ ಹಿತರಕ್ಷಣೆಯನ್ನು ಕಾಯಲು ಐಸಿಸಿ ನಿಗದಿಪಡಿಸಿರುವ ಕನಿಷ್ಠ ವಯೋಮಿತಿ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಮತ್ತು ಐಸಿಸಿ ಆಯೋಜಿಸುವ ಎಲ್ಲ ಪುರುಷ ಮತ್ತು ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳು, ದ್ವಿಪಕ್ಷೀಯ ಸರಣಿಗಳು ಮತ್ತು ಅಂಡರ್-19 ಟೂರ್ನಿಗಳಿಗೆ ಅನ್ವಯಿಸುತ್ತದೆ,’’ ಎಂದು ಐಸಿಸಿ ಹೇಳಿದೆ.

‘‘ಆದರೆ, ಕೆಲವು ಅಪರೂಪದ ಪ್ರಕರಣಗಳಲ್ಲಿ, ಸದಸ್ಯ ರಾಷ್ಟ್ರವೊಂದು ಈ ವಯೋಮಿತಿ ಕೆಳಗಿನ ಯುವ ಆಟಗಾರನನ್ನು ಅಂತರರಾಷ್ಟ್ರೀಯ ಮಟ್ದದಲ್ಲಿ ಅಡಿಸಲು ಇಚ್ಛಿಸಿದರೆ, ಆ ರಾಷ್ಟ್ರವು ಐಸಿಸಿಯ ಪೂರ್ವಾನುಮತಿಯೊಂದಿಗೆ ಮುಂದುವರಿಯಬಹುದಾಗಿದೆ,’’ ಎಂದು ಐಸಿಸಿ ತಿಳಿಸಿದೆ.

ಓದುಗರಿಗೆ ಗೊತ್ತಿರಬಹುದು. ಭಾರತದ ಲೆಜೆಂಡರಿ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್ ಆಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು 16 ವರ್ಷ ಮತ್ತು 205 ದಿನಗಳಾಗಿತ್ತು. ಇದು ಭಾರತದ ಪರ ಈಗಲೂ ದಾಖಲೆಯಾಗಿ ಉಳಿದಿದೆ. ನಂತರ ಎರಡು ದಶಕಗಳಿಗಿಂತಲೂ ಹೆಚ್ಚು ಸಮಯದವರೆಗೆ ಭಾರತವನ್ನು ಪ್ರತಿನಿಧಿಸಿದ ಸಚಿನ್, ಟೆಸ್ಟ್​ಗಳಲ್ಲಿ 15,291 ಮತ್ತು ಒಂದು ದಿನದ ಆಂತರರಾಷ್ಟ್ರೀಯ ಪಂದ್ಯಗಳಲ್ಲಿ 18,425 ರನ್ ಗಳಿಸಿದರು.

ಅತಿ ಕಿರಿಯ ವಯಸ್ಸಿನಲ್ಲಿ ಆಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ದಾಖಲೆ ಪಾಕಿಸ್ತಾನದ ಹಸನ್ ರಜಾ ಅವರ ಹೆಸರಲ್ಲಿದೆ. ಆದರೆ, ಅವರ ಎಷ್ಟು ಬೇಗ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಬಂದರೋ ಅಷ್ಟೇ ವೇಗವಾಗಿ ನಿರ್ಗಮಿಸಿದರು. ಹಸನ್, ಪಾಕಿಸ್ತಾನದ ಪರ ಕೇವಲ 7 ಟೆಸ್ಟ್​ ಮತ್ತು 16 ಒಡಿಐಗಳನ್ನು ಮಾತ್ರ ಆಡಿದರು. ಅವರು ಪಾಕಿಸ್ತಾನದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದಾಗ, 14 ವರ್ಷ ಮತ್ತು 227 ದಿನ ವಯಸ್ಸಿನವರಾಗಿದ್ದರು.