ನಾನಂತೂ ಬಿಜೆಪಿಗಾಗಲೀ, ಅದರ ಏಜೆನ್ಸಿಗಾಗಲೀ ಹೆದರುವುದಿಲ್ಲ, ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಬಿಜೆಪಿ ಪಕ್ಷಕ್ಕೆ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.
ಕೋಲ್ಕತ್ತ: ಬಿಜೆಪಿ ವಿರುದ್ಧ ಸದಾ ಕಿಡಿಕಾರುವ ಮಮತಾ ಬ್ಯಾನರ್ಜಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಪಕ್ಷವನ್ನು ಸುಳ್ಳುಗಳ ತ್ಯಾಜ್ಯ ಎಂದು ಕರೆದಿರುವ ದೀದಿ, ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಸವಾಲು ಹಾಕಿದ್ದಾರೆ.
2021ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಬಂಕುರಾದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಈ ದೇಶಕ್ಕೆ ಅಂಟಿದ ಶಾಪ. ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ. ಜೈಲಿನಲ್ಲಿ ಇದ್ದುಕೊಂಡೇ 2021ರ ಚುನಾವಣೆಯಲ್ಲಿ ನಮ್ಮ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಚುನಾವಣೆ ಬಂದ ಕೂಡಲೇ ಬಿಜೆಪಿ ಪಶ್ಚಿಮ ಬಂಗಾಳದ ಶಾರದಾ ಚಿಟ್ ಫಂಡ್ ಹಗರಣದ ಬಗ್ಗೆ ಮಾತನಾಡುತ್ತಾರೆ. ಇಲ್ಲಸಲ್ಲದ ಸುಳ್ಳುಗಳನ್ನು ಜನರೆದುರು ಹೇಳುತ್ತಾರೆ. ಆದರೆ ನಾನಂತೂ ಬಿಜೆಪಿಗಾಗಲೀ, ಅದರ ಏಜೆನ್ಸಿಗಾಗಲೀ ಹೆದರುವುದಿಲ್ಲ. ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್ರನ್ನು ಜೈಲಿಗೆ ಹಾಕಿದ್ದರೂ, ಅವರ ಪಕ್ಷ ಸಮರ್ಥವಾಗಿಯೇ ಮುನ್ನಡೆಯುತ್ತಿದೆ. ಬಿಹಾರದಲ್ಲಿ ಬಿಜೆಪಿ ಯಾವತ್ತೂ ಜನಾದೇಶದಿಂದ ಅಧಿಕಾರ ಹಿಡಿದಿಲ್ಲ. ಬದಲಿಗೆ ಮೋಸ, ವಂಚನೆಯಿಂದಲೇ ಸರ್ಕಾರ ರಚಿಸುತ್ತಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಅದು ಸಾಧ್ಯವಿಲ್ಲ. 2021ರ ವಿಧಾನಸಭಾ ಚುನಾವಣೆಯಲ್ಲೂ ಟಿಎಂಸಿ ಪ್ರಚಂಡ ಬಹುಮತದಿಂದಲೇ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.