ಈ ಬಾರಿ ಅದ್ದೂರಿ ಸ್ವಾತಂತ್ರ್ಯೋತ್ಸವ ಆಚರಣೆ ಇಲ್ಲ, ಆಹ್ವಾನಿತರು ಐನೂರು ಮಾತ್ರ

ಅಂಕೆಗೆ ಸಿಕ್ಕದ ಕೊವಿಡ್ ಸೋಂಕು ಮತ್ತು ಮಂಗಳವಾರದಂದು ಬೆಂಗಳೂರಿನಲ್ಲಿ ನಡೆದ ವ್ಯಾಪಕ ಹಿಂಸಾಚಾರದ ಘಟನೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ 74ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ನಗರದಲ್ಲಿ ನಾಳೆ ಸರಳವಾಗಿ ಆಚರಿಸಲು ನಿರ್ಧರಿಸಿದೆ.

ಕೊರೊನಾ ವಿರುದ್ಧ ಹೋರಾಡುತ್ತಿರುವ 75 ವಾರಿಯರ್ಸ್ ಮತ್ತು ಸೋಂಕಿನಿಂದ ಗುಣಮುಖರಾಗಿರುವ 25 ಜನರನ್ನು ವಿಶೇಷ ಅತಿಥಿಗಳನ್ನಾಗಿ ಧ್ವಜಾರೋಹಣ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಉಳಿದಂತೆ, ಸಮಾರಂಭ ನಡೆಯುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಅನುವಾಗಲು; ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಸೇರಿದಂತೆ ಆಹ್ವಾನಿತರ ಸಂಖ್ಯೆ 500 ಕೂಡ ದಾಟದು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಬೆಳಗ್ಗೆ 9:00 ಗಂಟೆಗೆ ಫೀಲ್ಡ್ ಮಾರ್ಷಲ್ ಮಾಣೆಕ್​ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತಾರೆ. ಆದರೆ, ಪ್ರತಿವರ್ಷ ನಡೆಯುತ್ತಿದ್ದ ಶಾಲಾಮಕ್ಕಳ ಸಾಂಸೃತಿಕ ಚಟುವಟಿಕೆಗಳು, ವೈಮಾನಿಕ ಪುಷ್ಪಾರ್ಚನೆ, ಮಿಲಿಟರಿ ಯೋಧರು ನಡೆಸುವ ಮೈನವಿರೇಳಿಸುವ ಡೇರ್ ಡೆವಿಲ್ ಕಸರತ್ತುಗಳು ಇರುವುದಿಲ್ಲ

ಪಾಲಿಕೆ ಆಯುಕ್ತ ಎನ್ ಮಂಜುನಾಥ ಅವರ ಹೇಳಿಕೆಯ ಪ್ರಕಾರ, ಧ್ವಜಾರೋಹಣ ನಂತರ ಮುಖ್ಯಮಂತ್ರಿಗಳು ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡುತ್ತಾರೆ. ಅದಾದ ಮೇಲೆ, ರಾಷ್ರಗೀತೆ, ನಾಡಗೀತೆ, ಹಾಗೂ ರೈತಗೀತೆಗಳನ್ನು ಹಾಡಲಾಗುವುದು, ಈ ಎಲ್ಲಾ ಕಾರ್ಯಕ್ರಮಗಳು 45 ನಿಮಿಷಗಳ ಅವಧಿಯಲ್ಲಿ ಮುಗಿದುಹೋಗುವವು. ಮುಖ್ಯಮಂತ್ರಿಗಳು ಪರೇಡ್ ವೀಕ್ಷಣೆ ಕೂಡ ಮಾಡುವುದಿಲ್ಲ.

ದಿನಾಚರಣೆಯ ಅಂಗವಾಗಿ ನಾಳೆ ಅಂದರೆ ಶನಿವಾರದಂದು ಕಬ್ಬನ್ ರಸ್ತೆಯಲ್ಲಿರುವ ಬಿ ಆರ್ ವಿ ಜಂಕ್ಷನ್ ಮತ್ತು ಕಾಮರಾಜ ರಸ್ತೆ ಜಂಕ್ಷನ್​ಗಳ ನಡುವಿನ ರಸ್ತೆಯಲ್ಲಿ ಬೆಳಗ್ಗೆ 8:30 ರಿಂದ ಬೆಳಗ್ಗೆ 10:30 ವಾಹನ ಸಂಚಾರವನ್ನು ನಿಷೇಧಿಲಾಗುವುದು.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್​ಅರ್​ಪಿ), ಕರ್ನಾಟಕ ಕೈಗಾರಿಕಾ ಭದ್ರತಾ ದಳ (ಕೆಐಎಸ್​ಎಫ್), ಗಡಿ ರಕ್ಷಣಾ ದಳ (ಬಿಎಸ್​ಎಫ್) ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಅರ್​ಪಿಫ್​), ಸಿವಿಲ್ ಮತ್ತು ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್ ಹಾಗೂ ಅಶ್ವರೂಢ ಪೊಲೀಸ್ ಮೊದಲಾದ ಪಡೆಗಳ ಸಿಬ್ಬಂದಿ, ನಾಲ್ಕು ಬಗೆಯ ಬ್ಯಾಂಡ್​ಗಳೊಂದಿಗೆ ಪರೇಡ್​ನಲ್ಲಿ ಪಾಲ್ಗೊಳ್ಳುವರು.

ಆಚರಣೆಯ ಸಂದರ್ಭದಲ್ಲಿ ಭದ್ರತೆಗಾಗಿ 9 ಡಿಸಿಪಿ, 14, ಎಸಿಪಿ ಮತ್ತು 31 ಇನ್ಸ್​ಪೆಕ್ಟರ್​ಗಳು ಸೇರಿದಂತೆ 680 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಹೇಳಿದರು.

Related Tags:

Related Posts :

Category: