ಇಂದೇ ಯುದ್ಧವಾದ್ರೂ 40 ದಿನ ಹೋರಾಟಕ್ಕೆ ಸೇನೆ ಸರ್ವ ಸನ್ನದ್ಧ

ದೆಹಲಿ: ಭಾರತದ ವಿರುದ್ಧ ವೈರಿ ರಾಷ್ಟ್ರಗಳು ಹಲ್ಲು ಮಸೆಯುತ್ತಿವೆ. ಎಡ ಬಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಪದೇಪದೆ ಕಿರಿಕ್ ಮಾಡುತ್ತಲೇ ಬಂದಿವೆ. ಇಂಥ ಹೊತ್ತಲ್ಲಿ ಇದ್ದಕ್ಕಿದ್ದಂತೆ ವೈರಿ ರಾಷ್ಟ್ರಗಳು ಯುದ್ಧ ಸಾರಿದರೆ ಅದನ್ನ ಎದುರಿಸಲು ಸೇನೆ ಸದಾ ಸನ್ನದ್ಧವಾಗಿರಬೇಕು. ಇದನ್ನೆಲ್ಲಾ ಅರಿತಿರುವ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಆನೆಬಲ ತುಂಬಿದೆ. ವೈರಿ ಪಡೆಯ ಎದೆನಡುಗಿಸಲು ಭಾರತೀಯ ಯೋಧರು ಸನ್ನದ್ಧವಾಗಿದ್ದಾರೆ.

ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಅಮೆರಿಕ, ರಷ್ಯಾ ಹಾಗೂ ಚೀನಾ ನಂತರ ಭಾರತೀಯ ಸೇನೆಗೆ ಟಾಪ್ 10ರಲ್ಲಿ ಸ್ಥಾನವಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಭಾರತೀಯ ಸೇನೆಯನ್ನ ಮತ್ತಷ್ಟು ಶಕ್ತಗೊಳಿಸಿವೆ. ಆದ್ರೆ ಇಷ್ಟೆಲ್ಲಾ ಇದ್ದರೂ ಸೇನೆ ಮಾತ್ರ ದಿಢೀರ್ ಯುದ್ಧಕ್ಕೆ ಸನ್ನದ್ಧವಾಗಿರಲಿಲ್ಲ. ಅಗತ್ಯಕ್ಕೆ ತಕ್ಕಷ್ಟು ಶಸ್ತ್ರಾಸ್ತ್ರಗಳು ಸೇನೆ ಬತ್ತಳಿಕೆಯಲ್ಲಿ ಇರಲಿಲ್ಲ. ಅದ್ರಲ್ಲೂ 2012ರಿಂದ ನಿರಂತರವಾಗಿ ಸೇನೆ ಮದ್ದುಗುಂಡು, ಯುದ್ಧ ಟ್ಯಾಂಕರ್​ಗಳ ಭಾರಿ ಕೊರತೆ ಎದುರಿಸುತ್ತಿತ್ತು. ಆದರೆ 2016ರ ಉರಿ ದಾಳಿ ಬಳಿಕ ಭಾರತೀಯ ಸೇನೆಗೆ ಹೆಚ್ಚಿನ ಅಧಿಕಾರ ನೀಡಿ, ಯುದ್ಧ ಪರಿಸ್ಥಿತಿಗೆ ಸಿದ್ಧವಾಗಿರುವಂತೆ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.

40 ದಿನಗಳ ಯುದ್ಧಕ್ಕೆ ಸಿದ್ಧ!
ಭಾರತದ ಮೇಲೆ ಚೀನಾ ಅಥವಾ ಪಾಕಿಸ್ತಾನದಂತಹ ವೈರಿ ರಾಷ್ಟ್ರಗಳು ದಿಢೀರ್ ದಾಳಿ ಮಾಡಿದರೆ, ತಕ್ಕ ಉತ್ತರ ನೀಡಲು ಸೇನೆ ಸನ್ನದ್ಧವಾಗಿದೆ. ಕನಿಷ್ಠ 10 ರಿಂದ 40 ದಿನಗಳವರೆಗಾದ್ರೂ ಯುದ್ಧಮಾಡುವ ಸಾಮರ್ಥ್ಯ ಭಾರತೀಯ ಸೇನೆಗೆ ದೊರೆತಂತಾಗಿದೆ. ಇದಕ್ಕಾಗಿ ಸಾವಿರಾರು ಕೋಟಿ ವೆಚ್ಚಮಾಡಿ ಅಗತ್ಯ ಯುದ್ಧಸಲಕರಣೆ ಖರೀದಿ ಮಾಡಲಾಗಿದೆ. ಶಸ್ತ್ರಾಸ್ತ್ರ ಖರೀದಿಗೆ ಬೇಕಾಗಿರುವ ಅನುದಾನವನ್ನ ಮೂರೂ ಸೇನೆಗಳಿಗೆ ಕೇಂದ್ರ ಸರ್ಕಾರ ಒದಗಿಸಿದೆ. ಈ ಮೂಲಕ ಮಿಸೈಲ್, ಯುದ್ಧ ಟ್ಯಾಂಕರ್ ಸೇರಿದಂತೆ ವಿಮಾನಗಳನ್ನ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಅಕಸ್ಮಾತ್ ವೈರಿಗಳು ಭಾರತದ ತಂಟೆಗೇನಾದರು ಬಂದರೆ ಅದಕ್ಕೆ ತಕ್ಕ ಉತ್ತರ ನೀಡಲು ವೀರ ಯೋಧರು ಸಿದ್ಧರಾಗಿದ್ದಾರೆ.

ಒಟ್ನಲ್ಲಿ ಹಲವು ವರ್ಷದ ಕನಸು ಈಡೇರಿದೆ. 2012ರಿಂದ ಶಸ್ತ್ರಾಸ್ತ್ರಗಳ ಕೊರತೆ ಎದುರಿಸ್ತಿದ್ದ ಭಾರತೀಯ ಪಡೆಗಳಿಗೆ ಅಗತ್ಯವಿರುವ ಸಲಕರೆಗಳು ಸಿಕ್ಕಿವೆ. ಈ ಮೊದ್ಲು ಯುದ್ಧಕ್ಕೆ ಸನ್ನದ್ಧವಾಗಿರದ ಕಾರಣ ದಿಢೀರ್ ದಾಳಿ ಬಗ್ಗೆ ಸೇನೆ ಚಿಂತಾಕ್ರಾಂತವಾಗಿತ್ತು. ಈಗ ಎಲ್ಲಾ ಈಡೇರಿದಂತಾಗಿದ್ದು, ಭಾರತೀಯ ಸೇನೆಗೆ ನೂರಾನೆ ಬಲ ಬಂದಂತಾಗಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more