ಕೊರೊನಾ ಮುಂದೆಬಿಟ್ಟು, ಗಡಿ ಕ್ಯಾತೆ: ಗಡಿಯಲ್ಲಿ ಚೀನಿ ಸೈನಿಕರ ಜಮಾವಣೆ!

ದೆಹಲಿ: ಕೊರೊನಾ ಮಹಾಮಾರಿ ಒಂದೆಡೆ ವಿಶ್ವವನ್ನು, ಭಾರತವನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಇದರ ನಡುವೆ ಕೊರೊನಾ ವೈರಸ್ ಅನ್ನ ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಕುಖ್ಯಾತಿಗೆ ಗುರಿಯಾಗಿರೋ ಚೀನಾ, ಭಾರತದ ಜೊತೆ ಗಡಿ ಕ್ಯಾತೆ ತೆಗೆದಿದೆ. ಅನವಶ್ಯಕವಾಗಿ ಭಾರತ-ಚೀನಾ ಗಡಿಯಲ್ಲಿ ಚೀನಿ ಸೈನಿಕರು ಘರ್ಷಣೆಗೆ ಇಳಿಯುತ್ತಿದ್ದು, ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.

ಡೋಕ್ಲಾಂ.. ಈ ಹೆಸರು ಕೇಳಿದ್ರೆ ಸಾಕು ಭಾರತೀಯರಿಗೆ 2017ರಲ್ಲಿ ಭಾರತ-ಚೀನಾ ಗಡಿಯಲ್ಲಿ ನೆಲೆಸಿದ್ದ ಉದ್ವಿಗ್ನತೆ ನೆನಪಿಗೆ ಬರುತ್ತೆ. ಯಾಕಂದ್ರೆ, ಅಂದು ಡೋಕ್ಲಾಂನಲ್ಲಿ ಎರಡೂ ರಾಷ್ಟ್ರಗಳ ಸೇನೆಗಳು ಬಡಿದಾಡಿಕೊಂಡೇ ಬಿಟ್ವು ಅನ್ನೋ ಮಟ್ಟಿಗೆ ವಿವಾದ ಭುಗಿಲೆದ್ದಿತ್ತು. ಬರೋಬ್ಬರಿ 2 ತಿಂಗಳು.. 1 ವಾರ.. 5 ದಿನಗಳ ಕಾಲ ನೆಲೆಸಿದ್ದ ಉದ್ವಿಗ್ನತೆ ಶಮನಕ್ಕೆ ಎರಡು ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ವು. ಇದಾದ ಬಳಿಕ ಸುಮ್ಮನಿದ್ದ ನೆರೆಯ ದೇಶ ಚೀನಾ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ನಡುವೆ ಮತ್ತೆ ತನ್ನ ಕ್ಯಾತೆ ಶುರು ಮಾಡಿದೆ. ಈ ಮೂಲಕ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಎರಡೂ ದೇಶಗಳ ಸೈನಿಕರು ಗಡಿಯಲ್ಲಿ ಜಮಾವಣೆ ಆಗ್ತಿದ್ದಾರೆ.

ಲಡಾಖ್​ನಿಂದ ಅರುಣಾಚಲದವರೆಗೆ ಸೈನಿಕರ ನಿಯೋಜನೆ!
ಭಾರತ-ಚೀನಾ ಗಡಿಯುದ್ದಕ್ಕೂ ಎರಡೂ ದೇಶಗಳ ಸೈನಿಕರ ಜಮಾವಣೆ ಹೆಚ್ಚಾಗುತ್ತಿದೆ. ಅದ್ರಲ್ಲೂ ಗಾಲ್ವನ್ ಕಣಿವೆ, ಪಾಂಗಾಂಗ್ ಸರೋವರ, ದೌಲತ್ ಬೇಗ್ ಓಲ್ಡಿ ಸೇರಿ ಹಲವೆಡೆ ಚೀನಾ ಸೈನಿಕರು ಭಾರತದ ಸೇನೆಯ ಜೊತೆಗೆ ಘರ್ಷಣೆಗೆ ಇಳಿಯುತ್ತಿದ್ದಾರೆ.

ಮೇ 5ರಂದು ಇದ್ದಕ್ಕಿದ್ದಂತೆ ಭಾರತೀಯ ಸೈನಿಕರು ಕಾವಲು ಕಾಯುತ್ತಿದ್ದ ವೇಳೆ ಚೀನಿ ಸೈನಿಕರು ಇದ್ದಕ್ಕಿದ್ದಂತೆ ದಾಳಿ ಮಾಡಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರೋ ಭಾರತೀಯ ಸೈನಿಕರು ಚೀನಿಯರನ್ನ ಹಿಮ್ಮೆಟ್ಟಿಸಿದ್ದಾರೆ. ಇದು ಕೇವಲ ಮುಷ್ಟಿಯುದ್ಧ ಮತ್ತು ಕಲ್ಲು ತೂರಾಟಕ್ಕೆ ಮಾತ್ರ ಸೀಮಿತವಾಗಿದ್ದು, ಯಾವುದೇ ರೀತಿಯ ಗುಂಡಿನ ಚಕಮಕಿ ಆಗಿಲ್ಲ ಅಂತಾ ಸೇನೆ ಸ್ಪಷ್ಟಪಡಿಸಿದೆ. ಈ ದಾಳಿಯಲ್ಲಿ ಎರಡೂ ಕಡೆಯ ಸೈನಿಕರಲ್ಲಿ ಕೆಲವರಿಗೆ ಗಾಯಗಳಾಗಿವೆ ಅಂತಾ ಗೊತ್ತಾಗಿದೆ.

ಭಾರತದ ಜೊತೆ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರೋದ್ರ ನಡುವೆಯೇ ಚೀನಾ, ಭಾರತದಲ್ಲಿರುವ ತನ್ನ ನಾಗರಿಕರು ವಾಪಸ್ ಬರುವಂತೆ ಸೂಚನೆ ನೀಡಿದೆ. ಭಾರತದಲ್ಲಿರುವ ಚೀನಾ ವಿದ್ಯಾರ್ಥಿಗಳು, ವಾಣಿಜ್ಯೋದ್ಯಮಿಗಳು, ರಾಯಭಾರ ಕಚೇರಿ ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಚೀನಾ ಸೂಚನೆ ನೀಡಿದೆ. ಇದರ ನಡುವೆ ಭಾರತ-ಚೀನಾ ಗಡಿಯಲ್ಲಿ ಚೀನಾ ಮಾನವ ರಹಿತ ಹೆಲಿಕಾಪ್ಟರ್​ ಕಾವಲು ಕಾಯುತ್ತಿದೆ. ಇದೆಲ್ಲವನ್ನ ಗಮನಿಸ್ತಿದ್ರೆ, ಡೋಕ್ಲಾಂ ಬಳಿಕ ತಣ್ಣಗಾಗಿದ್ದ ಗಡಿ ವಿವಾದ ಮತ್ತೆ ಭುಗಿಲೇಳುವ ಸಾಧ್ಯತೆ ದಟ್ಟವಾಗುತ್ತಿದೆ. ಇದು ಇಷ್ಟಕ್ಕೇ ನಿಲ್ಲುತ್ತಾ ಅಥವಾ ಇನ್ನೂ ಹೆಚ್ಚಾಗುತ್ತಾ ಅನ್ನೋದಕ್ಕೆ ಕಾಲವೇ ಉತ್ತರ ನೀಡಲಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more