ಲಕ್ಷ್ಮಣ ಹುಣಸೆಗೆ ರಾಷ್ಟ್ರೀಯ ಮನ್ನಣೆ: ದೇಶವ್ಯಾಪಿ ಹರಡಲಿದೆ ತುಮಕೂರು ಹುಣಸೆ ತಳಿ
ಪ್ರತಿವರ್ಷ ಫಸಲು ಕೊಡುವ, ಹುಳಿಯ ಅಂಶ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವ ಈ ಹುಣಸೆ ತಳಿಗೆ ಇದೀಗ ಮರ ಬೆಳೆಸಿರುವ ರೈತರಾದ ಲಕ್ಷ್ಮಣ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ.
ಬೆಂಗಳೂರು: ತುಮಕೂರು ಜಿಲ್ಲೆ ನಂದಿಹಳ್ಳಿ ಗ್ರಾಮದ ಲಕ್ಷ್ಮಣ ಎಂಬ ಹಿರಿಯ ರೈತರು ಬೆಳೆದಿರುವ ಹುಣಸೆ ಮರ ದೇಶದಲ್ಲಿಯೇ ವಿಶಿಷ್ಟ ಎಂದು ನಿರೂಪಿತವಾಗಿದೆ. ಪ್ರತಿವರ್ಷ ಫಸಲು ಕೊಡುವ, ಹುಳಿಯ ಅಂಶ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವ ಈ ಹುಣಸೆ ತಳಿಗೆ ಇದೀಗ ಮರ ಬೆಳೆಸಿರುವ ರೈತರಾದ ಲಕ್ಷ್ಮಣ ಅವರ ಹೆಸರನ್ನೇ ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (Indian Institute of Horticulture Research – IIHR) ನಾಮಕರಣ ಮಾಡಿದೆ.
ರೈತರ ಆದಾಯ ಸುಧಾರಣೆಗೆ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿವೆ. ಆಹಾರ ಸಂಸ್ಕರಣಾ ಉದ್ಯಮವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಉದ್ದೇಶ ಹೊಂದಿರುವ ಈ ಯೋಜನೆಗಳು ಯಶಸ್ವಿಯಾಗಲು ಉತ್ತಮ ಗುಣಮಟ್ಟದ ತಳಿಗಳನ್ನು ಗುರುತಿಸಿ, ಬೆಳೆಸುವುದು ಬಹಳ ಮುಖ್ಯ. ಈ ಮಹತ್ವಾಕಾಂಕ್ಷಿ ಪ್ರಯತ್ನದ ಭಾಗವಾಗಿಯೇ ‘ಲಕ್ಷ್ಮಣ ಹುಣಸೆ’ ತಳಿಯನ್ನು ಗುರುತಿಸಿ, ಸಂವರ್ಧನೆ ಮಾಡಲು ಐಐಎಚ್ಆರ್ ಮುಂದಾಗಿದೆ.
ಲಕ್ಷ್ಮಣ ತಳಿ ಹುಣಸೆ ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಐಐಎಚ್ಆರ್ನ ಹಿರೇಹಳ್ಳಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಜಿ.ಕರುಣಾಕರನ್ ಮತ್ತು ತೋವಿನಕೆರೆಯ ಕೃಷಿ ಬರಹಗಾರ ಎಚ್.ಜೆ.ಪದ್ಮರಾಜು.
‘ಹಲಸಿನ ತಳಿಗಳನ್ನು ಹುಡುಕುತ್ತಾ ಹಳ್ಳಿಗಳಲ್ಲಿ ತಿರುಗಾಡುತ್ತಿದ್ದಾಗ ಈ ಹುಣಸೆ ಮರ ಅಚಾನಕ್ ಕಣ್ಣಿಗೆ ಬಿತ್ತು. ರೈತರನ್ನು ಕೇಳಿ ಸುಮಾರು ಒಂದು ಕೆಜಿಯಷ್ಟು ಹುಣಸೆ ಹಣ್ಣು ತೆಗೆದುಕೊಂಡು ಹೋಗಿ ಹುಣಸೆ ತಳಿ ಹುಡುಕಾಡುತ್ತಿದ್ದ ವಿಜ್ಞಾನಿಗಳಿಗೆ ನೀಡಿದೆ. ಮಧ್ಯಪ್ರದೇಶ, ಒಡಿಶಾ, ಆಂಧ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಭ್ಯವಿರುವ ಹುಣಸೆ ತಳಿಗೆ ಮಾಹಿತಿಯಿದ್ದ ಅವರಿಗೆ ಇದು ವಿಶಿಷ್ಟ ತಳಿ ಎನಿಸಿತು. ನಮ್ಮ ನಿರ್ದೇಶಕರು ಸಹ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು. ಈ ತಳಿಯ ಉತ್ತಮ ಗುಣಗಳು ಮನದಟ್ಟಾದ ನಂತರ ತಳಿಯನ್ನು ಬೆಳೆಸಿ ದೇಶವ್ಯಾಪಿ ಹಂಚುವ ಯೋಜನೆ ರೂಪಿಸಿ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು’ ಎಂದು ಕರುಣಾಕರನ್ ಟಿವಿ9 ಕನ್ನಡ ಡಿಜಿಟಲ್ಗೆ ಮಾಹಿತಿ ನೀಡಿದರು.
‘ಹುಣಸೆ ಬೆಳೆಗೆ ಪೂರಕ ವಾತಾವರಣವಿರುವ ದೇಶದ ಎಲ್ಲ ಜಿಲ್ಲೆಗಳಲ್ಲಿ ಲಕ್ಷ್ಮಣ ಹುಣಸೆ ಗಿಡಗಳನ್ನು ಪ್ರಾಯೋಗಿಕವಾಗಿ ಬೆಳೆಸಲಾಗುವುದು. ಕೆಲ ನಿರ್ದಿಷ್ಟ ಹವಾಮಾನಗಳಲ್ಲಿ ಮಾತ್ರವೇ ಕೆಲ ಗಿಡಗಳು ಉತ್ತಮ ಫಸಲು ಕೊಡುತ್ತವೆ. ಲಕ್ಷ್ಮಣ ಹುಣಸೆ ತಳಿಯು ಎಂಥ ಹವಾಮಾನಕ್ಕೆ ಸೂಕ್ತ ಎಂದು ತಿಳಿಯುವವರೆಗೆ ದೊಡ್ಡಮಟ್ಟದಲ್ಲಿ ಗಿಡಗಳ ಉತ್ಪಾದನೆ ಆರಂಭಿಸುವುದಿಲ್ಲ. ಆಸಕ್ತಿ ತೋರಿಸುವ ರೈತರಿಗೆ ಮಾತ್ರ ಗಿಡಗಳನ್ನು ಕೊಡುತ್ತೇವೆ’ ಎಂದು ಕರುಣಾಕರನ್ ಮಾಹಿತಿ ನೀಡಿದರು.
ರೈತರೊಂದಿಗೆ ಆದಾಯ ಹಂಚಿಕೆ ಒಪ್ಪಂದ ಬೆಂಗಳೂರಿನ ಹೆಸರುಘಟ್ಟದಲ್ಲಿ ಈಚೆಗಷ್ಟೇ ಐಐಎಚ್ಆರ್ ನಿರ್ದೇಶಕ ಡಾ.ಬಿ.ಎನ್.ಶ್ರೀನಿವಾಸಮೂರ್ತಿ ಮತ್ತು ಮರದ ಮಾಲೀಕ ಲಕ್ಷ್ಮಣ ಒಡಂಬಡಿಕೆ ಪತ್ರಕ್ಕೆ ಸಹಿಹಾಕಿದರು. ಈಗಾಗಲೇ ಐಐಎಚ್ಆರ್ ವತಿಯಿಂದ ಲಕ್ಷ್ಮಣ ಹುಣಸೆ ತಳಿಯ 3 ಸಾವಿರ ಸಸಿಗಳನ್ನು ಸಿದ್ಧಪಡಿಸಲಾಗಿದೆ. ಬೇಡಿಕೆ ಸಲ್ಲಿಸಿದವರಿಗೆ ವಿತರಿಸುವ ಕಾರ್ಯವೂ ಆರಂಭವಾಗಿದೆ.
ತೋಟಗಾರಿಕಾ ಸಂಶೋಧನಾ ಕೇಂದ್ರದ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕಸಿ ತಂತ್ರಜ್ಞಾನದ ಮೂಲಕ ಬೆಳೆಸುವ ಸಸಿಗಳ ಮಾರಾಟದಿಂದ ಬಂದ ಹಣದಲ್ಲಿ ರೈತ ಲಕ್ಷ್ಮಣ ಅವರಿಗೆ ಶೇ 60ರಷ್ಟು ಪಾಲು ಸಿಗಲಿದೆ. ಉಳಿದ ಶೇ 40ರಷ್ಟನ್ನು ಸಂಶೋಧನಾ ಕೇಂದ್ರ ಉಳಿಸಿಕೊಳ್ಳಲಿದೆ. ಮುಂದಿನ ದಿನಗಳಲ್ಲಿ ರೈತ ಕುಟುಂಬದವರಿಗೆ ಅವರ ಊರಿನಲ್ಲಿಯೇ ನರ್ಸರಿ ಸ್ಥಾಪಿಸಲು ಕೇಂದ್ರ ನೆರವಾಗಲಿದೆ.
40 ವರ್ಷದ ಮರ ಇದೀಗ 60ರ ಹರೆಯದಲ್ಲಿರುವ ಲಕ್ಷ್ಮಣ ಅವರು ತಮ್ಮ 1.5 ಎಕರೆ ಭೂಮಿಯಲ್ಲಿ ಒಟ್ಟು 30 ಹುಣಸೆ ಮರಗಳನ್ನು ಬೆಳೆಸಿದ್ದಾರೆ. ತುಮಕೂರು ಜಿಲ್ಲೆಯ ಚೇಳೂರು ಹೋಬಳಿ ಎರಬಳ್ಳಿ ಗ್ರಾಮದಲ್ಲಿ ಒಳ್ಳೇ ತಳಿ ಎಂದು ಹೆಸರುವಾಸಿಯಾಗಿದ್ದ 4 ಸಸಿಗಳನ್ನು 40 ವರ್ಷಗಳ ಹಿಂದೆ ತಂದು ಜಮೀನಿನಲ್ಲಿ ನೆಟ್ಟಿದ್ದರು. ಈ ಪೈಕಿ 2 ಮಾತ್ರ ಬೆಳೆದವು. ಒಂದು ಮರ ಮಾತ್ರ ವಿಶಿಷ್ಟ ಗುಣಸ್ವಭಾವಗಳಿಂದ ಎಲ್ಲರ ಗಮನ ಸೆಳೆಯಿತು.
ಈ ಮರ ವಿಜ್ಞಾನಿಗಳ ಕಣ್ಣಿಗೆ ಬೀಳುವ ಮೊದಲೇ ತುಮಕೂರಿನ ವ್ಯಾಪಾರಿಗಳ ಕಣ್ಣಿಗೆ ಬಿದ್ದಿತ್ತು. ಹುಣಸೆ ಫಸಲಿನ ಧಾರಣೆ ಇಡಿಯಾಗಿ ಕುಸಿದರೂ ತುಮಕೂರಿನ ಮಂಡಿ ವ್ಯಾಪಾರಿಗಳು ಈ ಮರದ ಹಣ್ಣಿಗೆ ಒಳ್ಳೇ ಬೆಲೆಯನ್ನೇ ಕೊಡುತ್ತಿದ್ದರು. ಲಕ್ಷ್ಮಣ ಹುಣಸೆ ತಳಿಯ ಹಣ್ಣು ದಪ್ಪ, ಉದ್ದ, ಹುಳಿ, ತಿರುಳು ಮತ್ತು ರುಚಿ ವಿಶಿಷ್ಟವಾಗಿರುವುದೇ ಇದಕ್ಕೆ ಕಾರಣ.
ಮನೆಮಕ್ಕಳ ಕೆಲಸ ಲಕ್ಷ್ಮಣ ಅವರ ಮಗ ವಿನಯ ಎಂಬಿಎ ಪದವೀಧರ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವಿನಯ ಇದೀಗ ಗ್ರಾಮಕ್ಕೆ ಹಿಂದಿರುಗಿ, ಅಣ್ಣ ಪ್ರದೀಪ್ ಕುಮಾರ್ ಜೊತೆಗೆ ಕೃಷಿ ಮಾಡುತ್ತಿದ್ದಾರೆ. ಲಕ್ಷ್ಮಣ ಅವರ ಪತ್ನಿ ವನಜಾಕ್ಷಿ ಸಹ ಹುಣಸೆ ಸಂಸ್ಕರಣೆ ಸೇರಿದಂತೆ ಎಲ್ಲ ಕೃಷಿ ಚಟುವಟಿಕೆಗಳಲ್ಲಿಯೂ ಭಾಗಿಯಾಗುತ್ತಾರೆ.
‘ಈ ಮರದ ಹಣ್ಣನ್ನು ನಾವೇ ಕುಟ್ಟುತ್ತಿದ್ದೆವು. ಬೇರೆಯವರಿಗೆ ಕೊಡುತ್ತಿರಲಿಲ್ಲ. ಇದೀಗ ನಮ್ಮ ಮರಕ್ಕೆ ಮನ್ನಣೆ ಸಿಕ್ಕಿರುವುದು ಖುಷಿಯಾಗಿದೆ. ಮರ ಬೆಳೆಸಲು, ಉಳಿಸಲು ಅಪ್ಪ ತುಂಬಾ ಕಷ್ಟಪಟ್ಟಿದ್ದಾರೆ.
(Lakshmana Hunase Now Becomes a Brand IIHR Initiating project to promote this breed nation wide)
ಇದನ್ನೂ ಓದಿ: ಸಾವಯವ ಕೃಷಿ ಪದ್ಧತಿ; ಮುಂಬೈನ ಹೊಟೆಲ್ ಕೆಲಸ ಬಿಟ್ಟು ಕೃಷಿ ಕಡೆ ಮುಖ ಮಾಡಿದ ಉಡುಪಿ ವ್ಯಕ್ತಿ
ಇದನ್ನೂ ಓದಿ: ಆಯಾಸವಿಲ್ಲದೆ ಆದಾಯ ತರುವ ಹುಣಸೆ ಬೆಳೆಗೆ ರಾಜ್ಯದಾದ್ಯಂತ ಉತ್ತಮ ಬೇಡಿಕೆ
Published On - 5:50 pm, Fri, 9 July 21