Lockdown Stories : ಚಲನಾಮೃತ ; ಆ ದಿನ 272 ರೂಪಾಯಿ ಮಾತ್ರವಿತ್ತು ಚಿತ್ರದುರ್ಗದ ವಿಜಯವ್ವೆಯ ಅಕೌಂಟ್​ನಲ್ಲಿ

Home Products : ‘ಸಂಸಾರದ ಒಳವಿಷಯಗಳಲ್ಲಿ ಜಂಜಾಟಗಳು ಇರಲಿಲ್ಲವಂತೇನಿಲ್ಲ. ಸಂಸಾರದ ನಿಭಾವಣೆ ಹೆಣ್ಣಿನಿಂದ ಆಗುತ್ತಿದೆ ಎಂದರೆ, ನೆರೆಹೊರೆಯವರ, ಸಂಬಂಧಿಗಳ ಅಡ್ಡ, ಕೊಂಕು ಮಾತುಗಳಿಗೇನು ಕಡಿಮೆ ಇರುವುದಿಲ್ಲ. ಇಂಥ ಕೆಲಸ ಮಾಡುತ್ತಿದ್ದಾಳೆ, ಇದೆಲ್ಲ ಬೇಕಾ ಎಂದು ಮಾತಾಡಿ ಸಾಕಷ್ಟು ಮನ ನೋಯುವಂತೆ ಮಾಡಿದ್ದಾರೆ. ಆದರೆ ನಾನು ಧೃತಿಗೆಡದೆ ನನ್ನ ಗೃಹೋದ್ಯಮವನ್ನು ಮುಂದುವರಿಸುತ್ತಿದ್ದೇನೆ.’ ವಿಜಯಕಲಾ ಜೆ.

Lockdown Stories : ಚಲನಾಮೃತ ; ಆ ದಿನ 272 ರೂಪಾಯಿ ಮಾತ್ರವಿತ್ತು ಚಿತ್ರದುರ್ಗದ ವಿಜಯವ್ವೆಯ ಅಕೌಂಟ್​ನಲ್ಲಿ
ಚಿತ್ರದುರ್ಗದ ಮಂಗಳ ವಿಜಯ ಹೋಮ್ ಪ್ರೊಡಕ್ಟ್ಸ್​ ನ ವಿಜಯಕಲಾ ಜೆ.
Follow us
ಶ್ರೀದೇವಿ ಕಳಸದ
|

Updated on:Jun 09, 2021 | 6:08 PM

ಅನಿವಾರ್ಯವೆಂಬ ಹಾವು ಕಾಲಬುಡಕ್ಕೇ ಬಂದಾಗ ಯಾರೂ ಚಲನಶೀಲರಾಗಿಬಿಡುತ್ತಾರೆ. ಆಗ ಮುಂದಿನ ಏರುಇಳಿವಿನ ಹಾದಿ ಅವರಲ್ಲಿ ಮತ್ತಷ್ಟು ಶಕ್ತಿಯನ್ನೂ ಸಂಕಲ್ಪವನ್ನೂ ಹೂಡುತ್ತಾ ಬರುತ್ತದೆ. ಬರುಬರುತ್ತ ಅದು ಅವರನ್ನು ಮತ್ತೊಂದು ಸ್ತರದಲ್ಲಿ ಯೋಚಿಸಿ, ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಾ ಪಾಯಾ ಗಟ್ಟಿಮಾಡುತ್ತದೆ. ಅಲ್ಲಿಗೆ ಅವರು ಅರಿವಿಲ್ಲದೆಯೇ ಅಷ್ಟುದಿನ ಕಟ್ಟಿಕೊಂಡ ಗೋಡೆಯನ್ನು ಹಾರಿಯಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆಯೇ ಆನ್​ಲೈನ್​ ಮಾರುಕಟ್ಟೆ ಸಂಸ್ಕೃತಿ. ಲಾಕ್​ಡೌನ್ ಶುರುವಾಗುತ್ತಿದ್ದಂತೆ ವೃತ್ತಿ, ಆಸಕ್ತಿ, ಕೌಶಲಗಳು ಆನ್​ಲೈನ್​ ಮೂಲಕ ವಾಣಿಜ್ಯ ಸ್ವರೂಪ ಪಡೆದುಕೊಳ್ಳುತ್ತಾ ಬಂದವು. ಫೇಸ್​ಬುಕ್​ ಅಕೌಂಟ್​ಗಳು ಪುಟಗಳಾದವು. ವಾಟ್ಸಪ್, ಬಿಝಿನೆಸ್ ನಂಬರುಗಳಾದವು. ​ಫೇಸ್​ಬುಕ್​ ಗ್ರೂಪ್​ಗಳು, ತಮ್ಮ ಸದಸ್ಯರನ್ನು ಹೆಚ್ಚು ವೃತ್ತಿಪರರನ್ನಾಗಿಸಲು ಪ್ರಯತ್ನಿಸಿದವು. ಸ್ವಂತ ವೆಬ್​, ಆ್ಯಪ್​ಗಳು ಹುಟ್ಟಿಕೊಂಡು ಪ್ರತ್ಯೇಕ ವಹಿವಾಟುತಾಣಗಳೇ ನಿರ್ಮಾಣಗೊಂಡವು. ಕೊರೊನಾದಿಂದಾಗಿ ಸಾವುನೋವು ಸಂಕಷ್ಟಗಳ ಮಧ್ಯೆಯೇ ಹಳ್ಳಿಹಳ್ಳಿಗಳೂ ಆನ್​ಲೈನ್​ ಭಾಷೆಯನ್ನು ಉಸಿರಾಡುತ್ತ ನಗರಗಳಿಗೆ ತಮ್ಮ ಸೊಗಡನ್ನು ಪಸರಿಸಿದವು. ಪರಿಣಾಮವಾಗಿ ಸಣ್ಣ ಪುಟ್ಟ ಉದ್ಯಮಗಳು ಕಣ್ಣುಬಿಟ್ಟುಕೊಂಡವು. ಗೃಹಕೈಗಾರಿಕೋದ್ಯಮ ಮತ್ತು ದೇಸೀ ಮಾರುಕಟ್ಟೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡವು. ಗ್ರಾಹಕರೂ ಈ ಆನ್​ಲೈನ್ ಸಂತೆಗೆ ಕಣ್ಣನ್ನೂ ಮನಸ್ಸನ್ನೂ ಜೇಬನ್ನು ಬಲುಬೇಗನೇ ಹೊಂದಿಸಿಕೊಂಡುಬಿಟ್ಟರು. 

ಹಾಗಂತ ಇದು ಇಲ್ಲಿಗೇ ನಿಂತಿಲ್ಲ, ನಿಲ್ಲುವುದೂ ಇಲ್ಲ. ಮುಂದೇನು ಎನ್ನುವ ಕುತೂಹಲದ ಕಣ್ಣು ನೆಟ್ಟುಕೊಂಡೇ  ಮಾರುವವರೂ ಇದ್ದಾರೆ ಕೊಳ್ಳುವವರೂ. ಆದರೆ ಆನ್​ಲೈನ್​ ಆಗಲಿ ಆಫ್​ಲೈನ್ ಆಗಲಿ, ಎಡೆಬಿಡದೆ ಶ್ರದ್ಧೆಯಿಂದ ವ್ಯಾಪಾರ ಸೂತ್ರಗಳನ್ನು ನೇಯುತ್ತಿದ್ದರೆ ಮಾತ್ರ ಇಲ್ಲಿ ಬೆಳಕು. ಈ ದೃಷ್ಟಿಕೋನದಲ್ಲಿ ರೂಪಿಸಿದ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ಚಲನಾಮೃತ’ ; ಕೊರೊನಾ ಕಾಲದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವವರ ಅನುಭವ ಕಥನಗಳು. ನೀವು ಅಥವಾ ನಿಮ್ಮ ಸುತ್ತಮುತ್ತಲಿನವರು ಈ ಪರಿಧಿಗೆ ಒಳಪಟ್ಟಲ್ಲಿ ನಾಲ್ಕೈದು ಫೋಟೋಗಳೊಂದಿಗೆ ಬರೆದು ಕಳುಹಿಸಿ. ಪದಮಿತಿ ಕನಿಷ್ಟ 800, ಗರಿಷ್ಟ 1,500.  tv9kannadadigital@gmail.com 

*

ಚಿತ್ರದುರ್ಗದ ವಿಜಯಕಲಾ ಜೆ. ಅವರಿಗೆ ಕೈಹಿಡಿದಿದ್ದು ಅಡುಗೆಯ ಅಭಿರುಚಿ. ಅವರ ‘ಮಂಗಳ ವಿಜಯ ಹೋಮ್ ಪ್ರಾಡಕ್ಟ್ಸ್’ ಶುರುಮಾಡಿದ್ದು ಹೇಗೆ? ಫೇಸ್​ಬುಕ್​-ವಾಟ್ಸಪ್​ ವ್ಯಾಪಾರಕೇಂದ್ರಗಳಾಗಿ ಗೋಚರಿಸಿದ್ದು ಹೇಗೆ? ಓದಿ.

*

2020ರ ಏಪ್ರಿಲ್ ಲಾಕ್​ಡೌನ್. ಕೊರೊನಾ ಅಂದರೆ ಏನು ಎಂದು ಗೊತ್ತಿರದ ಭಯ ಹುಟ್ಟಿಸಿದ ತಿಂಗಳು. ಹಾಗೇ ತುಂಬಾ ಕಷ್ಟವೂ ಅನ್ನಿಸಿ ಮುಂದೇನು ಎನ್ನುವ ಚಿಂತೆಗೆ ಚಿತೆ ಹಚ್ಚಿದ ದಿನಗಳವು. ಸಂಸಾರ ಆಗ ತಾನೇ ಸರಿಹೋಗುವ ಸೂಚನೆ ಕೊಡುತ್ತಿತ್ತು. ಇನ್ನೇನು ನಾಲ್ಕು ಜನರಂತೆ ಬದುಕುತ್ತೇವೆ ಎಂದುಕೊಳ್ಳುತ್ತಿರುವಂತೆ ಕೊರೋನಾ ಅದನ್ನು ಮತ್ತೆ ಕನಸಾಗಿಯೇ ಉಳಿಸಿಬಿಟ್ಟಿತು. ಕೆಲವೇ ವರ್ಷಗಳೀಚೆಗೆ ಊಟ ಬಟ್ಟೆಗೆ ತೊಂದರೆ ಇಲ್ಲದಂತೆ ರೂಪಿಸಿಕೊಂಡ ಬದುಕು ಮತ್ತೆ ಬಿರುಗಾಳಿಗೆ ಸಿಲುಕಿದ ಗಾಳಿಪಟದಂತೆ ಹಾರುತ್ತಾ ನಮ್ಮನ್ನು ಸೇರಿತೋ ಏನೋ ತಿಳಿಯದು. ಸುಖವಾಗಿ ಇದ್ದೇವೆ ಎಂದುಕೊಳ್ಳುವ ಹೊತ್ತಿಗೆ ಹಚ್ಚಿದ ದೀಪಕ್ಕೆ ಎಣ್ಣೆ, ಬತ್ತಿ ಹಾಕಲು ಆಗದೆ ದೀಪ ನಂದಿಹೋಗುವ ಹಂತ ತಲುಪಿಯಾಯ್ತು.

ನಾನು ಚಿತ್ರದುರ್ಗ ಆಕಾಶವಾಣಿಯಲ್ಲಿ ಅರೆಕಾಲಿಕ ಉದ್ಘೋಷಕಿಯಾಗಿ ಕೆಲಸ ಮಾಡುತ್ತಿದ್ದೆ. ಏಪ್ರಿಲ್ ತಿಂಗಳಿನಿಂದ ಹಿಡಿದು ಮುಂದಿನ ಐದು ತಿಂಗಳವರೆಗೆ ಕೆಲಸವಿದ್ದರೂ ಸಂಬಳವೇ ಸಿಗಲಿಲ್ಲ. ಇದರೊಂದಿಗೆ ಒಂದು ಶಿಕ್ಷಣ ಸಂಸ್ಥೆಯಲ್ಲಿ ಯೋಗ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಲಾಕ್​ಡೌನ್ ಪರಿಣಾಮವಾಗಿ ಆ ಸಂಸ್ಥೆಯ ಬಾಗಿಲೂ ಮುಚ್ಚಿತು. ಅಲ್ಲಿಯೂ ಸಂಬಳ ನಿಂತು ಹೋಯಿತು. ಗಂಡನಿಗೂ ಕೆಲಸವಿಲ್ಲದೆ ಮನೆಯಲ್ಲೇ ಇರುವ ಸ್ಥಿತಿ. ಇಬ್ಬರಿಗೂ ಎಲ್ಲಿಂದಲೂ ಆದಾಯವಿಲ್ಲದೆ ಇನ್ನೇನು ಸಾವೊಂದೇ ಪರಿಹಾರ ಅನಿಸತೊಡಗಿತು. ಆದರೂ ಇದ್ದಬದ್ದ ಎಲ್ಲಾ ಹಣ ಕೂಡಿಸಿ ಎರಡು ತಿಂಗಳು ಸಂಸಾರ ಸಾಗಿಸಿದರೂ ಜೂನ್ ತಿಂಗಳ ಕೊನೆಯಲ್ಲಿ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಯಿತು. ಬರುಬರುತ್ತಾ ಅಡುಗೆ ಮನೆಯ ಸಾಮಗ್ರಿಗಳು ಖಾಲಿ, ಬಾಡಿಗೆಗೆ ಹಣವಿಲ್ಲ, ಹಾಲು, ಕರೆಂಟ್ ಬಿಲ್, ಸಾಲಕ್ಕೆ ಬಡ್ಡಿ ಕಟ್ಟುವುದು… ಎದೆಗೆ ಸಿಡಿಲು ಬಡಿದಂತಾಗುತ್ತಿತ್ತು.

lockdown stories

ಶೇಂಗಾ ಹೋಳಿಗೆ ಚಕ್ಕುಲಿ

ಜೂನ್ 27ನೇ ತಾರೀಖು ಯಾರೋ ಒಬ್ಬರು ಫೇಸ್​ಬುಕ್​ ಗ್ರೂಪ್​ನಲ್ಲಿ ತುಪ್ಪ ಬೇಕು ಎಂದು ಕೇಳಿದ್ದರು. ಆಗ ಅಲ್ಲಿಯ ಮಾರಾಟಗಾರರೆಲ್ಲ ತುಂಬಾ ರೇಟು ಹೇಳಿದ್ದರು. ಅಲ್ಲಿ ನಾನು ಕಾಮೆಂಟ್ ಹಾಕಿದೆ ಶುದ್ಧ ಬೆಣ್ಣೆಯಿಂದ ತುಪ್ಪ ತಯಾರಿಸಿ ಕೊಡುವೆ ಎಂದು. ಪೋಸ್ಟ್ ಹಾಕಿದವರರೊಂದಿಗೆ ಇನ್ನೂ ಯಾರೋ ಒಬ್ಬರು ತುಪ್ಪಕ್ಕಾಗಿ ಸಂಪರ್ಕಿಸಿದರು. ಬೆಣ್ಣೆ ಮಾಡುವಲ್ಲಿ ತೊಡಗಿಕೊಂಡೆ, ತುಪ್ಪ ರೆಡಿಯಾಯಿತು. ತಮ್ಮನ  ಮೂಲಕ ಅವರಿಗೆ ತಲುಪಿಸಿದೆ. ಆ ದಿನ ನನ್ನ ಬ್ಯಾಂಕ್ ಬ್ಯಾಲೆನ್ಸ್ ಕೇವಲ 227 ರೂಪಾಯಿ. ಆದರೆ ಬಿಝಿನೆಸ್ ಮಾಡುವ ಉದ್ದೇಶದಿಂದ ಅವರಿಗೆ ನಾನು ಆ ತುಪ್ಪ ಕಳಿಸಿದ್ದಲ್ಲ, ಮಾನವೀಯ ದೃಷ್ಟಿಯಿಂದ. ಲಾಕ್​ಡೌನ್ ಸಮಯದಲ್ಲಿ ಮಗುವಿಗೆ ಶುದ್ಧ ತುಪ್ಪ ಎಲ್ಲಿ ಸಿಕ್ಕೀತು? ಮಗು ತಿನ್ನಲಿ ಎಂಬ ಕಾರಣಕ್ಕೆ. ನಾನೇ ಬೆಣ್ಣೆ ಕಾಯಿಸಿದ್ದರಿಂದ ತುಪ್ಪ ಜಾಸ್ತಿಯೇ ಮಿಕ್ಕಿತು. ಕೆಲ ತಿಂಡಿಗಳನ್ನು ಮಾಡಿ ಫೇಸ್​ಬುಕ್​ಗೆ ಹಾಕಿದೆ. ಕೆಲವರು ನಮಗೆ ಕಳಿಸಿಕೊಡಬಹುದೇ ಎಂದರು.

ಫೇಸ್​ಬುಕ್​ ಮೂಲಕವೂ ಬದುಕು ಕಟ್ಟಿಕೊಳ್ಳಲು ಒಂದು ಅವಕಾಶವಿದೆ ಎಂದು ಆಗ ಅನ್ನಿಸಿತು. ಬಂದ ಲಾಭವನ್ನು ಮತ್ತೆ ಬಂಡವಾಳವಾಗಿ ಹೂಡುತ್ತ ಹೆಚ್ಚು ಹೆಚ್ಚು ತಿನಿಸುಗಳನ್ನು ತಯಾರಿಸಿದೆ. ಬದುಕು ಹಳಿಗೆ ಬರತೊಡಗಿತು. ಕೊರಿಯರ್​ನವರಿಂದ ಹೆಚ್ಚು ಸಪೋರ್ಟ್ ಸಿಕ್ಕಿತು. ಸಮಯಕ್ಕೆ ಸರಿಯಾಗಿ ಪಿಕ್ ಅಪ್ ಮಾಡುವುದು ಗ್ರಾಹಕರಿಗೆ ತಲುಪಿಸುವುದು ಹೀಗೆ ಅಚ್ಚುಕಟ್ಟಾಗಿ ನಿರ್ವಹಿಸಿ ನಾನು ಬೆಳೆಯಲು ಸಹಾಯ ಮಾಡಿದರು. ರುಚಿಯಾದ ತಿಂಡಿಗಳನ್ನು ಮಾಡುವುದನ್ನು ಸ್ವಂತಕ್ಕೆ ಕಲಿತಿದ್ದರಿಂದಲೇ ಬದುಕಿಗೂ ಆಧಾರವಾಯಿತು. ಇಂದು ಜನ ನನ್ನ ಗುರುತಿಸೋದು ‘ಮಂಗಳ ವಿಜಯ ಹೋಂ ಪ್ರಾಡಕ್ಟ್ಸ್ ಎಂದು. ಖುಷಿಯಿದೆ.

ಇವತ್ತು ಜೋಳ, ರಾಗಿ , ಸಜ್ಜೆ ರೊಟ್ಟಿಗಳು, ಐದು ತರಹದ ಚಟ್ನಿಪುಡಿಗಳು, ಜಾಸ್ತಿ ದಿನ ಇಡಬಹುದಾದ ಚಟ್ನಿಗಳು, ವಿವಿಧ ಬಗೆಯ ಉಂಡೆಗಳು , ಕುರುಕಲು ತಿನಿಸುಗಳು, ಹಪ್ಪಳಗಳು, ಮಜ್ಜಿಗೆ ಮೆಣಸಿನಕಾಯಿ , ವಿಶೇಷ ಸಂದರ್ಭಗಳಲ್ಲಿ ದೊರೆಯುವ ತಿನಿಸುಗಳೂ ಲಭ್ಯ. ಈ ಎಲ್ಲವನ್ನೂ ಫೇಸ್ಬುಕ್ನ ಹಲವು ಗುಂಪುಗಳಲ್ಲಿ ಮಾರಲು ಪ್ರಾರಂಭಿಸಿದೆ. ಅಲ್ಲೂ ಕೂಡಾ ಒಳ್ಳೆಯ ಗ್ರಾಹಕರು ಸಿಕ್ಕರು. ಹೀಗೇ ಜೀವನ ಬದಲಾಗುತ್ತ ಸಾಗಿದೆ. ರಾಜ್ಯದಾದ್ಯಂತ ಅಷ್ಟೇ ಅಲ್ಲ ಇತರೇ ರಾಜ್ಯಗಳಿಗೂ ನನ್ನ ಉತ್ಪನ್ನಗಳು ತಲುಪುತ್ತಿವೆ. ಫೇಸ್​ಬುಕ್​ನಿಂದ ಗ್ರಾಹಕರಷ್ಟೇ ಅಲ್ಲ ಒಳ್ಳೆಯ ಸ್ನೇಹಿತರು, ಹಿರಿಯರೂ ಸಿಕ್ಕಿದ್ದಾರೆ. ಈಗ ಸ್ಥಳೀಯವಾಗಿ ಮಾರುಕಟ್ಟೆ ಹೆಚ್ಚಿಸಿಕೊಳ್ಳುವುದರ ಬಗ್ಗೆ ಗಮನ ಹರಿಸಬೇಕಿದೆ. ತಿನಿಸುಗಳ ಫೋಟೋಗಳನ್ನು ವಾಟ್ಸಪ್​ ಸ್ಟೇಟಸ್​ಗೆ ಹಾಕುತ್ತೆನಾದ್ದರಿಂದ ಅಲ್ಲಿಯೂ ಮಾರಾಟಕ್ಕೊಂದು ಕೊಂಡಿ ದೊರೆತಂತಾಗಿದೆ.

ಫೇಸ್​ಬುಕ್​ನ ಧೃತಿ ಮಹಿಳಾ ಮಾರುಕಟ್ಟೆ ಗ್ರೂಪ್​ನಂತೆ ಹಲವಾರು ಗ್ರೂಪ್​ಗಳಿಗೆ ನಮ್ಮ ಉತ್ಪನ್ನಗಳನ್ನು ಹಾಕುವಾಗ ಎಫ್​ಎಸ್​ಎಲ್​ಐ ರಿಜಿಸ್ಟರ್ ಕಡ್ಡಾಯವಾಗಿರಬೇಕು. ಕಳೆದ ಡಿಸೆಂಬರ್ ಹೊತ್ತಿಗೆ ರಿಜಿಸ್ಟರ್ ಮಾಡಿಸಿದೆ. ಎಲ್ಲ ಗ್ರೂಪ್​ಗಳಲ್ಲೂ ಈಗ ಉತ್ಪನ್ನಗಳ ಪೋಸ್ಟ್ ಹಾಕಬಹುದು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ನನಗೆ ನಾನೇ ವೃತ್ತಿಪರಳು ಎನ್ನಿಸಿ ಹೆಮ್ಮೆ ಉಂಟಾಯಿತು. ಧೈರ್ಯವೂ ಹೆಚ್ಚಿತು. ಆದರೆ, ಇನ್ನೇನು ಎಲ್ಲಾ ಸರಿಹೋಗುತ್ತಿದೆ ಎನ್ನಿಸುವಾಗಲೇ ಕೊರೊನಾ ಎರಡನೇ ಅಲೆ. ಆದರೆ ನನಗಿದು ಅಲೆಯಂತಾಗದೆ ಧುಮ್ಮಿಕ್ಕಿ ಬಂದ ಸುನಾಮಿಯಂತೆ ಭಾಸವಾಯಿತು. 2021 ರ ಏಪ್ರಿಲ್ ತಿಂಗಳ ಮೊದಲ ವಾರವೇ ಕೊನೇ ಆರ್ಡರ್. ಮನೆಯಲ್ಲೇ ಉಳಿದು ಎಲ್ಲರೂ ಯುಗಾದಿ ಹಬ್ಬ ಮಾಡಿದ ಕಾರಣದಿಂದಲೋ ಏನೋ ಮತ್ತೇ ಬಿಝಿನೆಸ್ ನಿಧಾನ ಗತಿಗೆ ಸರಿಯಿತು. ಮತ್ತೆ ಏಪ್ರಿಲ್ ಕಳೆದರೆ ಮುಂದಿನ ತಿಂಗಳ ಜೀವನ ಏನು ಅನ್ನುವ ಸ್ಥಿತಿ ತಲುಪಿಯಾಯಿತು. ಏನು ಮಾಡುವುದು ಎಂದು ಯೋಚಿಸುವಾಗಲೇ ಲಾಕ್​ಡೌನ್​ ಘೋಷಣೆ. ಮತ್ತೆ ಚಿಂತೆಯ ಚಿತೆ.

lockdown stories

ಹೋಳಿಗೆ ಮಾವಿನಹಣ್ಣಿನ ಶೀಕರಣೆ

ಆರ್ಡರ್ ಬಂದರೂ ಕೊರಿಯರ್ ಇಲ್ಲದಂತಾಗಿತ್ತು. ಎಲ್ಲಿಗೂ ಕಳಿಸದಂತಾದೆ. ಹೀಗಿರುವಾಗ ಆಸ್ಪತ್ರೆಯಲ್ಲಿರುವ ಪರಿಚಿತ ಕೊರೊನಾ ರೋಗಿಯೊಬ್ಬರೊಂದಿಗೆ ಮಾತನಾಡುತ್ತಿರುವಾಗ, ಇಲ್ಲಿ ಎಲ್ಲಿಯೂ ಸರಿಯಾದ ಊಟ ಸಿಗುತ್ತಿಲ್ಲ ಎಂದು ಹೇಳಿಕೊಂಡರು. ಆಗ, ಯಾಕೆ ನಾನೇ ಕೊರೊನಾ ರೋಗಿಗಳಿಗೆ ಆಹಾರ ತಯಾರಿಸಿ ತಲುಪಿಸಬಾರದು ಎನ್ನಿಸಿತು. ಫೇಸ್​ಬುಕ್​ಗೆ, ವಾಟ್ಸಪ್ ಸ್ಟೇಟಸ್​ಗೆ ಕೋವಿಡ್ ರೋಗಿಗಳಿಗೆ ಅಡುಗೆ ಮಾಡಿ ತಲುಪಿಸಲಾಗುವುದು ಎಂದು ಸ್ಟೇಟಸ್ ಹಾಕಿದೆ. ಬಹಳಷ್ಟು ಜನ ಪೋಸ್ಟ್ ಶೇರ್ ಮಾಡಿದರು. ಫಾರ್ವರ್ಡ್ ಮಾಡಿದರು. ಇದು ನನಗೆ ಮತ್ತ ಭರವಸೆ ಹುಟ್ಟಿಸಿತು. ಆಸ್ಪತ್ರೆಗಳ ರೋಗಿಗಳು ಊಟವನ್ನು ಆರ್ಡರ್ ಮಾಡತೊಡಗಿದರು. ಹೀಗೆ ರುಚಿ ಬಾಯಿಂದ ಬಾಯಿಗೆ ತಲುಪಿ ಅವರ ಹೊಟ್ಟೆ ಮನಸ್ಸನ್ನೂ ತಣಿಸಿ, ನಮ್ಮ ಸಂಸಾರವನ್ನೂ ಉಳಿಸಿತು.

ಸಂತೃಪ್ತ ರೋಗಿಗಳ ಹಾರೈಕೆಯೇ ನನಗೆ ಮತ್ತಷ್ಟು ಶಕ್ತಿ ನೀಡಿತು, ಸಮಾಧಾನವನ್ನೂ ತಂದಿತು. ದಿನವೂ ಊಟ ತಲುಪಿಸುವಾಗ ರೋಗಿಗಳೊಂದಿಗಿನ ಒಡನಾಟ ಹೆಚ್ಚಿ ಅದೊಂದು ರೀತಿಯಲ್ಲಿ ಆಪ್ತಸಮಾಲೋಚನೆಯಂತೆ ಸಾಗುತ್ತಿದೆ. ಇದರಿಂದ ಪರಸ್ಪರ ಖುಷಿ ಉಂಟು ಮಾಡುತ್ತಿದೆ. ಆದರೂ ಸಂಸಾರದ ಒಳವಿಷಯಗಳಲ್ಲಿ ಜಂಜಾಟಗಳು ಇರಲಿಲ್ಲವಂತೇನಿಲ್ಲ. ಒಂದು ಸಂಸಾರದ ನಿಭಾವಣೆ ಹೆಣ್ಣಿನಿಂದ ಆಗುತ್ತಿದೆ ಎಂದರೆ, ನೆರೆಹೊರೆಯವರ, ಸಂಬಂಧಿಗಳ, ಬಂಧುಬಳಗದವರ ಅಡ್ಡ, ಕೊಂಕು ಮಾತುಗಳಿಗೇನು ಕಡಿಮೆ ಇರುವುದಿಲ್ಲ. ಇಂಥ ಕೆಲಸ ಮಾಡುತ್ತಿದ್ದಾಳೆ. ಇದೆಲ್ಲ ಬೇಕಾ ಎಂದು ಮಾತಾಡಿ ಸಾಕಷ್ಟು ಮನ ನೋಯುವಂತೆ ಮಾಡಿದ್ದಾರೆ. ಹಲವರ ಮೂಲಕವೂ ಆಡಿಸಿದ್ದಾರೆ. ಆದರೆ ನಾನು ಧೃತಿಗೆಡದೆ ನನ್ನ ಕಾರ್ಯ ಮುಂದುವರಿಸುತ್ತಿದ್ದೇನೆ. ನಾನು ಮಾಡುತ್ತಿರುವ ಕಾಯಕದಲ್ಲಿ ತಪ್ಪಿಲ್ಲವಾದ್ದರಿಂದ ಇದನ್ನೇ ಮುಂದುವರಿಸುವ ಇರಾದೆ ಹೊಂದಿದ್ದೇನೆ.

ಕಣಕ್ಕೆ ಇಳಿದಾಗಿದೆ. ಆದರೂ ಭಯವಿತ್ತು ಆಸ್ಪತ್ರೆಗೆ ಓಡಾಡಿಕೊಂಡು ಕೊರೊನಾ ನಿಭಾಯಿಸೋದು ಹೇಗೆ? ನನ್ನ ದ್ವಿಚಕ್ರವಾಹನದಲ್ಲಿ ಮಗನನ್ನು ಕೂರಿಸಿಕೊಂಡು ಊಟದ ಡಬ್ಬಿಗಳೊಂದಿಗೆ ರಸ್ತೆಗಳಿದರೆ ಪೊಲೀಸಿನವರಿಂದ ವಿಚಿತ್ರ ಪ್ರಶ್ನೆಗಳು. ಅವರೇನೋ ಅವರ ಕರ್ತವ್ಯ ಮಾಡುತ್ತಾರಾದರೂ ನಮಗೆ ತುಂಬಾ ತೊಂದರೆಯಾಗಿದ್ದಂತೂ ನಿಜ. ಆದರೂ ಆಸ್ಪತ್ರೆಗಳಲ್ಲಿರುವ ರೋಗಿಗಳು ಅಡುಗೆಯ ಬಗ್ಗೆ ನೀಡುವ ಪ್ರತಿಕ್ರಿಯೆಯಿಂದ ಸಮಾಧಾನವೆನ್ನಿಸುತ್ತದೆ. ಮನೆಯವರೆಲ್ಲರ ಸಹಕಾರ , ನನ್ನ ಮಗನ ಸಹಕಾರ ಮುಖ್ಯವಾಗಿ ಇರುವುದರಿಂದ ಎಲ್ಲವೂ ಸರಳವಾಗಿ ಸಾಗುತ್ತಿದೆ. ನನಗೆ ಆನ್​ಲೈನ್​ ಜಾಲತಾಣಗಳಂತೂ ಬಿಝಿನೆಸ್​ ತಾಣಗಳಾಗಿ ಕಾಣುತ್ತಿವೆ. ಈ ಮೂಲಕ ಅಲ್ಲಿಯ ಗ್ರೂಪ್​ಗಳಿಗೆ ಧನ್ಯವಾದ ಹೇಳಬಯಸುತ್ತೇನೆ.

lockdown stories

ಪಾಲಕ್ ರೈಸ್, ತುಂಬಗಾಯಿ ಬೆಂಡೆಕಾಯಿ

ಮನೆ ಇವತ್ತು ನಗುತ್ತಿದೆ. ಎಲ್ಲರೂ ಕೊರೊನಾ ಗೆಲ್ಲುತ್ತಿದ್ದಾರೆ. ಪ್ರಪಂಚಕ್ಕೆ ಒದಗಿರುವ ಕಷ್ಟದಲ್ಲಿ ನನಗೂ ಚೂರು ಪಾಲು ಬಂದೊದಗಿದೆ. ನಿಭಾಯಿಸಬೇಕಿದೆ ನಿಭಾಯಿಸುತ್ತೇನೆ. ಬದುಕಬೇಕಿದೆ ಬದುಕುತ್ತೇನೆ. ನನ್ನ ನಂಬಿದ ನನ್ನ ಮನೆಯವರನ್ನು ಎತ್ತಿಹಿಡಿಯುವ ಜವಾಬ್ದಾರಿ ನನ್ನ ಮೇಲಿದೆ. ಬದುಕು ಸಾಗಲಿ, ಬಂದಂತೆ ಎದುರಿಸಲು ಸಿದ್ಧಳಾಗಿರುವೆ. ಛಲವೊಂದಿದ್ದರೆ ನೂರಾರು ದಾರಿಗಳು. ಎಲ್ಲರೂ ನೆಮ್ಮದಿಯಿಂದ ಬದುಕೋಣ.

ಇದನ್ನೂ ಓದಿ : My Covid Experience : ‘ಬಂದ್ರೆ ಬರ್ಲಿ ಬಿಡು ನನಗೂ ಆಗ ನಿಂಜೊತೆ ಇರಬಹುದು’

Published On - 5:33 pm, Wed, 9 June 21

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್