Lockdown Stories : ಚಲನಾಮೃತ ; ‘ಇದು ನಿನ್ನ ಮೊದಲ ದುಡಿಮೆ’ ಮಗಳು ಹಣ ಕೈಗಿತ್ತಾಗ ಕಣ್ಣುತುಂಬಿದವು

ಶ್ರೀದೇವಿ ಕಳಸದ | Shridevi Kalasad

Updated on: Jun 11, 2021 | 3:37 PM

Home Products : ‘ನಾನು ಓದಿದ್ದು ಏಳನೇ ತರಗತಿ ಮಾತ್ರ. ಲಾಕ್​ಡೌನ್​ನ ನಂತರ ಬದುಕಿನ ಹಾದಿಯಲ್ಲಿ ಕೊಂಚ ಏರುಪೇರು ಅನ್ನಿಸಿತು. ನನ್ನ ವಾರಿಗೆಯ ಹೆಂಗಸರು ಸಿಹಿತಿಂಡಿ, ಉಪ್ಪಿನಕಾಯಿ ತಯಾರಿಸಿ ಆನ್​ಲೈನಿನಲ್ಲಿ ಮಾರುತ್ತಿದ್ದರು. ಅಜ್ಜಿಯಾದ ಮೇಲೆ ನಾನೆಂಥ ಮಾಡುವುದು ಎಂದು ಯೋಚಿಸದೆ, ಕರಗತವಾಗಿದ್ದ ಲೇಹ್ಯ, ಅಂಟಿನುಂಡೆಯನ್ನೇ ಮಾರತೊಡಗಿದೆ.’ ಭಾರತಿ ಹೆಗಡೆ

Lockdown Stories : ಚಲನಾಮೃತ ; ‘ಇದು ನಿನ್ನ ಮೊದಲ ದುಡಿಮೆ’ ಮಗಳು ಹಣ ಕೈಗಿತ್ತಾಗ ಕಣ್ಣುತುಂಬಿದವು
ಉತ್ತರ ಕನ್ನಡ ಸಿದ್ಧಾಪುರದ ಹರಿದ್ರಾ ಫುಡ್ಸ್​ನ ಭಾರತಿ ಹೆಗಡೆ

ಅನಿವಾರ್ಯವೆಂಬ ಹಾವು ಕಾಲಬುಡಕ್ಕೇ ಬಂದಾಗ ಯಾರೂ ಚಲನಶೀಲರಾಗಿಬಿಡುತ್ತಾರೆ. ಆಗ ಮುಂದಿನ ಏರುಇಳಿವಿನ ಹಾದಿ ಅವರಲ್ಲಿ ಮತ್ತಷ್ಟು ಶಕ್ತಿಯನ್ನೂ ಸಂಕಲ್ಪವನ್ನೂ ಹೂಡುತ್ತಾ ಬರುತ್ತದೆ. ಬರುಬರುತ್ತ ಅದು ಅವರನ್ನು ಮತ್ತೊಂದು ಸ್ತರದಲ್ಲಿ ಯೋಚಿಸಿ, ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಾ ಪಾಯಾ ಗಟ್ಟಿಮಾಡುತ್ತದೆ. ಅಲ್ಲಿಗೆ ಅವರು ಅರಿವಿಲ್ಲದೆಯೇ ಅಷ್ಟುದಿನ ಕಟ್ಟಿಕೊಂಡ ಗೋಡೆಯನ್ನು ಹಾರಿಯಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆಯೇ ಆನ್​ಲೈನ್​ ಮಾರುಕಟ್ಟೆ ಸಂಸ್ಕೃತಿ. ಲಾಕ್​ಡೌನ್ ಶುರುವಾಗುತ್ತಿದ್ದಂತೆ ವೃತ್ತಿ, ಆಸಕ್ತಿ, ಕೌಶಲಗಳು ಆನ್​ಲೈನ್​ ಮೂಲಕ ವಾಣಿಜ್ಯ ಸ್ವರೂಪ ಪಡೆದುಕೊಳ್ಳುತ್ತಾ ಬಂದವು. ಫೇಸ್​ಬುಕ್​ ಅಕೌಂಟ್​ಗಳು ಪುಟಗಳಾದವು. ವಾಟ್ಸಪ್, ಬಿಝಿನೆಸ್ ನಂಬರುಗಳಾದವು. ​ಫೇಸ್​ಬುಕ್​ ಗ್ರೂಪ್​ಗಳು, ತಮ್ಮ ಸದಸ್ಯರನ್ನು ಹೆಚ್ಚು ವೃತ್ತಿಪರರನ್ನಾಗಿಸಲು ಪ್ರಯತ್ನಿಸಿದವು. ಸ್ವಂತ ವೆಬ್​, ಆ್ಯಪ್​ಗಳು ಹುಟ್ಟಿಕೊಂಡು ಪ್ರತ್ಯೇಕ ವಹಿವಾಟುತಾಣಗಳೇ ನಿರ್ಮಾಣಗೊಂಡವು. ಕೊರೊನಾದಿಂದಾಗಿ ಸಾವುನೋವು ಸಂಕಷ್ಟಗಳ ಮಧ್ಯೆಯೇ ಹಳ್ಳಿಹಳ್ಳಿಗಳೂ ಆನ್​ಲೈನ್​ ಭಾಷೆಯನ್ನು ಉಸಿರಾಡುತ್ತ ನಗರಗಳಿಗೆ ತಮ್ಮ ಸೊಗಡನ್ನು ಪಸರಿಸಿದವು. ಪರಿಣಾಮವಾಗಿ ಸಣ್ಣ ಪುಟ್ಟ ಉದ್ಯಮಗಳು ಕಣ್ಣುಬಿಟ್ಟುಕೊಂಡವು. ಗೃಹಕೈಗಾರಿಕೋದ್ಯಮ ಮತ್ತು ದೇಸೀ ಮಾರುಕಟ್ಟೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡವು. ಗ್ರಾಹಕರೂ ಈ ಆನ್​ಲೈನ್ ಸಂತೆಗೆ ಕಣ್ಣನ್ನೂ ಮನಸ್ಸನ್ನೂ ಜೇಬನ್ನು ಬಲುಬೇಗನೇ ಹೊಂದಿಸಿಕೊಂಡುಬಿಟ್ಟರು. 

ಹಾಗಂತ ಇದು ಇಲ್ಲಿಗೇ ನಿಂತಿಲ್ಲ, ನಿಲ್ಲುವುದೂ ಇಲ್ಲ. ಮುಂದೇನು ಎನ್ನುವ ಕುತೂಹಲದ ಕಣ್ಣು ನೆಟ್ಟುಕೊಂಡೇ  ಮಾರುವವರೂ ಇದ್ದಾರೆ ಕೊಳ್ಳುವವರೂ. ಆದರೆ ಆನ್​ಲೈನ್​ ಆಗಲಿ ಆಫ್​ಲೈನ್ ಆಗಲಿ, ಎಡೆಬಿಡದೆ ಶ್ರದ್ಧೆಯಿಂದ ವ್ಯಾಪಾರ ಸೂತ್ರಗಳನ್ನು ನೇಯುತ್ತಿದ್ದರೆ ಮಾತ್ರ ಇಲ್ಲಿ ಬೆಳಕು. ಈ ದೃಷ್ಟಿಕೋನದಲ್ಲಿ ರೂಪಿಸಿದ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ಚಲನಾಮೃತ’ ; ಕೊರೊನಾ ಕಾಲದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವವರ ಅನುಭವ ಕಥನಗಳು. ನೀವು ಅಥವಾ ನಿಮ್ಮ ಸುತ್ತಮುತ್ತಲಿನವರು ಈ ಪರಿಧಿಗೆ ಒಳಪಟ್ಟಲ್ಲಿ ನಾಲ್ಕೈದು ಫೋಟೋಗಳೊಂದಿಗೆ ಬರೆದು ಕಳುಹಿಸಿ. ಪದಮಿತಿ ಕನಿಷ್ಟ 800, ಗರಿಷ್ಟ 1,500.  tv9kannadadigital@gmail.com 

* ಕೊರೊನಾ ಪೂರ್ವಕಾಲದಲ್ಲಿ ಹಾಲು, ತುಪ್ಪ, ಹೂಮಾಲೆ ಹೀಗೆ ತಮಗೆ ಬೇಕಾದ್ದನ್ನೆಲ್ಲ ಸುತ್ತಮುತ್ತಲಿನವರು ಹಣ ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಕೊರೊನಾ ನಂತರ ಥರಾವರಿ ಲೇಹ್ಯಗಳು, ಅಂಟಿನುಂಡೆಗಳನ್ನು ತಯಾರಿಸಲು ಶುರು ಮಾಡಿದೆ. ಇಷ್ಟು ವರ್ಷಗಳಲ್ಲಿ ನನಗದು ಸ್ವಂತ ದುಡಿಮೆ ಎನ್ನುವ ತೃಪ್ತಿಯನ್ನು ಹುಟ್ಟುಹಾಕಿತು.’ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಹರಿದ್ರಾ ಫುಡ್ಸ್​ನ ಭಾರತಿ ಹೆಗಡೆ. * ಮಲೆನಾಡಿನ ಹಳ್ಳಿಯೊಂದರಲ್ಲೇ ಹುಟ್ಟಿ ಬೆಳೆದ ನನಗೆ ಇಲ್ಲಿನ ಸಾಂಪ್ರದಾಯಿಕ ಆಹಾರ ಪದ್ದತಿಗಳು ಹೊಸದಲ್ಲ. ನಾಟಿ ವೈದ್ಯ, ಬೇರು ನಾರುಗಳ ಬಳಕೆ, ಬಗೆ ಬಗೆಯ ಕಷಾಯದ ಪುಡಿಗಳು, ಬಾಣಂತೀ ಲೇಹ್ಯ, ಥರ ಥರದ ಎಣ್ಣೆಗಳು, ಆಯುರ್ವೇದದ ಚೂರ್ಣಗಳು ಇವೆಲ್ಲ ದೈನಿಕದ ಮಾಮೂಲು ವಿಚಾರಗಳು. ನನ್ನ ತಾಯಿ ಅಜ್ಜಿಯರಿಂದ ಕಲಿತಿದ್ದ ಲೇಹ್ಯಗಳು, ಅಂಟಿನುಂಡೆಗಳು ಇವೆಲ್ಲವನ್ನ ನಾನು ಆಗೀಗ ಮಾಡಿ ಮಕ್ಕಳ, ನೆಂಟರಿಷ್ಟರ ನಡುವೆ ಹಂಚಿಕೊಂಡು ಖುಷಿಪಟ್ಟಿದ್ದೆ ಅಷ್ಟೇ. ಪುರಾತನ ಶೈಲಿಯ, ಬಹಳ ಸಂಯಮದಿಂದ ಸಾಂಪ್ರದಾಯಿಕ ಪದ್ಧತಿಯಲ್ಲಿ ಮಾಡಬೇಕಾದ ಲೇಹ್ಯಗಳನ್ನ ತಿಂದಿದ್ದ ನನ್ನ ಕುಟುಂಬದ ಮಂದಿ ಅದನ್ನ ಇಷ್ಟ ಪಟ್ಟಿದ್ದರು. ಇವು ಆರೋಗ್ಯದ ಮೇಲೆ ಉಂಟುಮಾಡುವ ಒಳ್ಳೆಯ ಪರಿಣಾಮಗಳ ಅನುಭವವಿದ್ದರೂ ಸಹ ಎಂದೂ ಕೂಡ ನಾನು ಇವುಗಳನ್ನು ಮನೆಯಿಂದಾಚೆಗೆ ಕೊಂಡೊಯ್ಯುವ ಯೋಚನೆ ಮಾಡಿದ್ದೇ ಇಲ್ಲ. ಅಂತಹ ಯೋಚನೆಯೊಂದು ನನ್ನ ತಲೆಯಲ್ಲಿ ಮೂಡಿರಲಿಲ್ಲ.

ಆದರೆ ಕೊರೋನಾದ ಲಾಕ್ಡೌನ್ ಸಂದರ್ಭದಲ್ಲಿ ಮನೆಯೊಳಗೇ ಇರಬೇಕಾದ ಸ್ಥಿತಿ ಬಂದಾಗ, ಬದುಕಿನ ಹಾದಿಯಲ್ಲಿ ಕೊಂಚ ಏರುಪೇರು ಅನ್ನಿಸಿದಾಗ ಲೇಹ್ಯ,ಅಂಟಿನುಂಡೆಗಳು ನಮ್ಮ ಅಡುಗೆ ಮನೆಯಲ್ಲಿ ಖಾಯಂ ಜಾಗ ಪಡೆದುಕೊಂಡವು. ಆಗ ಹೊಳೆದಿದ್ದು, ನಾನೇಕೆ ಲೇಹ್ಯಗಳನ್ನು ಅಂಟಿನುಂಡೆಗಳನ್ನು ಮಾಡಿ ಅವುಗಳನ್ನು ಮಾರಬಾರದು? ಈ ಹೊಳಹು ಕೂಡ ಒಂದೇ ಸಲಕ್ಕೇನೂ ಬಂದಿದ್ದಾಗಿರಲಿಲ್ಲ. ನನ್ನ ಓರಗೆಯ ಕೆಲ ಹೆಂಗಸರು ಮನೆಯಲ್ಲೇ ಮಾಡಿರುವ ಸಿಹಿತಿನಿಸುಗಳನ್ನ, ಉಪ್ಪಿನಕಾಯಿಗಳನ್ನ ಅಂತರ್ಜಾಲದ ಸಹಾಯದಿಂದ ಮಾರಾಟ ಮಾಡಲು ತೊಡಗಿದ್ದರು. ಕೆಲವರಿಗೆ ಒಂದು ಮಟ್ಟದ ಯಶಸ್ಸು ಕೂಡ ಲಭಿಸಲು ಶುರುವಾಗಿತ್ತು. ನಾನು ನನಗೇನು ತಿಳಿದಿದೆ, ಏನು ಮಾಡಬಹುದು ಎಂದು ಯೋಚನೆ ಮಾಡಿದಾಗ ಮನೆಮಂದಿಯಿಂದ ಬಂದ ಸಲಹೆ ನಿನಗೆ ಲೇಹ್ಯಗಳ ಬಗ್ಗೆ ತಿಳಿದಿದೆ. ಅದನ್ನೇ ಮಾರಾಟ ಮಾಡಬಹುದಲ್ಲ ಎನ್ನುವುದು. ಆದರೂ ಎಂದೋ ಒಂದು ದಿನದ ಬಂದು ಹೋಗುವ ಮಾತಲ್ಲಿ ಮೂಡಿದ ಆ ಯೋಚನೆ ತಲೆಯಲ್ಲಿ ಸ್ಥಿರವಾಗೇನೂ ಉಳಿಯಲಿಲ್ಲ. 2020 ರ ಮೇ ತಿಂಗಳಿನಲ್ಲಿ ಮಹಿಳಾ ಮಾರುಕಟ್ಟೆ ಎಂಬ ಫೇಸ್​ಬುಕ್ ಗುಂಪು ಹುಟ್ಟಿತು. ಅದನ್ನು ಸೇರಿದ ಮಗಳು ನಿನ್ನ ಯೋಚನೆಗೆ ಸರಿಯಾದ ಜಾಗ ಇದು, ಇಂತಹ ಸಾಂಪ್ರದಾಯಿಕ ಔಷಧಗಳು ಹೆಚ್ಚಿನವರನ್ನು ತಲುಪುವ ದಾರಿ ಇದೇ ಆಗಿರಬಹುದು ಎಂದಾಗ ನೋಡೋಣ ಎಂಬ ಯೋಚನೆ ಗಟ್ಟಿಯಾಯಿತು.

ಈ ಲೇಹ್ಯಗಳನ್ನ ಮಾಡುವ ಬಗೆ ನನಗೆ ತಿಳಿದಿದ್ದು ಹೌದಾದರೂ, ಇದರ ಹಿಂದೆ ಬಹಳ ಶ್ರಮವಿದೆ. ಯಾವುದೇ ಬಗೆಯ ಲೇಹ್ಯಗಳನ್ನು ಮಾಡಲಾದರೂ ಸಮಯ ಬೇಕು. ಇದಕ್ಕೆ ಬೇಕಾಗಿರುವ ಗಿಡಮೂಲಿಕೆಗಳನ್ನ ಹುಡುಕಿ ಸಂಗ್ರಹಿಸುವುದು ಪರಿಶ್ರಮದ ಕೆಲಸ. ನಾನಿರುವುದು ಉತ್ತರಕನ್ನಡದ ಹಳ್ಳಿಯಾಗಿರುವುದಕ್ಕಾಗಿ ಈ ಹುಡುಕಾಟವನ್ನೇನೋ ಮಾಡಬಹುದು. ಕೊಂಚ ಹೆಚ್ಚು ಸಮಯವೇ ಬಾಳಿಕೆ ಬರಬೇಕಾದ ಲೇಹ್ಯಗಳ ತಯಾರಿಕೆಯ ಹಂತದಲ್ಲಿ ಎಚ್ಚರ ವಹಿಸಬೇಕು. ತಾಸುಗಟ್ಟಲೇ ಒಲೆಯ ಮುಂದೆ ನಿಂತು, ನೀರು ಕೂಡ ಸೋಕಿಸದೇ ಲೇಹ್ಯದ ಚೂರ್ಣ ಸಿದ್ಧಪಡಿಸಬೇಕು. ಶುಚಿಯನ್ನೂ ರುಚಿಯನ್ನೂ ಕಾಪಾಡಿಕೊಳ್ಳಬೇಕು.

lockdown stories

ಲೇಹ್ಯ

ಆದರೂ ಕೂಡ ಹೊಸದೊಂದು ಜಗತ್ತಿಗೆ ನನ್ನನ್ನ ತೆರೆದುಕೊಳ್ಳುವ ಆಶಯದೊಡನೆ ಲೇಹ್ಯ ತಯಾರಿಕೆಗೆ ಸಜ್ಜಾದೆ. ಲೇಹ್ಯಗಳ ಬಗ್ಗೆ ಜನರಿಗೆ ಯಾವ ಮಟ್ಟದ ಅರಿವಿದೆ, ಎಷ್ಟು ಮಂದಿ ಲೇಹ್ಯಗಳನ್ನು ಆರ್ಡರ್ ಮಾಡಿಯಾರು ಎಂಬ ಲವಲೇಶದ ಅರಿವೂ ನನಗಿರಲಿಲ್ಲ. ಫೇಸ್ಬುಕ್ ಇತ್ಯಾದಿಗಳ ಬಗ್ಗೆ ತಿಳಿಯದ ನನಗೆ, ಮಗಳು ಈ ಕುರಿತು ಸಹಕರಿಸಿದ್ದಳು. ಎಲ್ಲೋ ನಾಲ್ಕು ಜನರು ನನ್ನನ್ನ ಸಂಪರ್ಕಿಸಬಹುದು ಎಂದು ಅಂದುಕೊಂಡಿದ್ದರೆ, ಮೊದಲನೇ ಸಲಕ್ಕೇನೇ ಸುಮಾರು ಹತ್ತಾರು ಮಂದಿ ಲೇಹ್ಯ ಬೇಕು ಎಂದಾಗ ಆಶ್ಚರ್ಯವೇ ಆಯಿತು. ಒಂದೆಲಗ, ಮೆಂತ್ಯೆ, ಶತಾವರಿ, ಪುಷ್ಟಿ ಲೇಹ್ಯ ಹೀಗೆ ಬಗೆ ಬಗೆಯ ಲೇಹ್ಯಗಳನ್ನೇ ಮೊದಲ ಸಲಕ್ಕೆ ಮಾಡಬೇಕಾಯಿತು.

ಲೇಹ್ಯ ಮಾಡುವುದೇನೋ ಮಾಡಿದೆ. ಆದರೆ ನಿಜವಾದ ಸಮಸ್ಯೆ ಎದುರಾಗಿದ್ದೇ ಆಮೇಲೆ. ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವುದೇನೋ ಸುಲಭ. ಆದರೆ ಅವುಗಳ ಸಾಗಾಟ, ಮತ್ತೊಂದೇ ಬಗೆಯ ಕ್ಲಿಷ್ಟಕರ ಕೆಲಸ. ಪದಾರ್ಥ ಕೆಡದಂತೆ, ಪಾರ್ಸೆಲ್ ಒಡೆಯದಂತೆ, ಹಾಳಾಗದಂತೆ ಕಳಿಸುವುದು ಬಹುಮುಖ್ಯ ಕಾರ್ಯ. ಈ ಬಗ್ಗೆ ಮೊದಲು ಯಾವುದೇ ಅನುಭವ ಇರದ ಕಾರಣಕ್ಕೆ ಫಜೀತಿಯೇ ಆಯಿತು. ನಾನಿರುವುದು ಒಂದು ಪುಟ್ಟ ಊರಾದ ಕಾರಣಕ್ಕೆ ಇಲ್ಲಿ ಅದಕ್ಕೆ ಸಂಬಂಧಿಸಿದ ವಸ್ತುಗಳೂ ದೊರಕುತ್ತಿರಲಿಲ್ಲ. ರಾಜನಿಗಿಂತ ಕಿರೀಟವೇ ಭಾರವಾದ ಹಾಗೆ, ಪ್ಯಾಕಿಂಗ್ ಮತ್ತು ಕೊರಿಯರ್ ವೆಚ್ಚ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಹೋಗಿತ್ತು. ಆದರೂ ಮೊದಲ ಕಂತಿನ ಲೇಹ್ಯಗಳನ್ನ ಎಲ್ಲೆಡೆಗೆ ಕಳಿಸಿಯೂ ಆಯಿತು. ಒಂದಿಬ್ಬರಿಗೆ ಕಳಿಸಿದ ಲೇಹ್ಯದ ಬಾಟಲುಗಳು ಒಡೆದು,ಇನ್ಯಾರಿಗೋ ತಡವಾಗಿ ತಲುಪಿ ಸಮಸ್ಯೆಗಳೂ ಆದವು.

ಮುಂದೆ ಈ ನನ್ನ ಸಮಸ್ಯೆಗೂ ಸಹಾಯಕ್ಕೆ ಬಂದಿದ್ದು ಇಂಟರ್ನೆಟ್ ಜಗತ್ತೇ. ಪ್ಯಾಕಿಂಗ್ಗೆ ಬಳಸುವ ಸಾಮಗ್ರಿಗಳನ್ನ ಇ-ಕಾಮರ್ಸ್ ಸೈಟ್ಗಳ ಮೂಲಕ ತರಿಸಿಕೊಂಡೆ. ಸಾಗಾಟದ ವೆಚ್ಚ ಅರ್ಧಕ್ಕರ್ಧ ಇಳಿಯಿತು. ಯಾವುದೇ ಲೀಕೇಜ್ ಇಲ್ಲದೇ ಹೇಗೆ ಅಚ್ಚುಕಟ್ಟಾಗಿ ಪ್ಯಾಕ್ ಮಾಡಬೇಕು, ಯಾವ ಕೊರಿಯರ್ ಸಂಸ್ಥೆ ಒಳ್ಳೆಯದು, ಕ್ಷಿಪ್ರವಾಗಿ ಸಾಗಣೆ ಹೇಗೆ ಅನ್ನುವುದನ್ನೂ ಕಲಿತುಕೊಂಡೆ. ಹಳ್ಳಿಯೊಂದರಲ್ಲೇ ಕುಳಿತು ಇವನ್ನೆಲ್ಲ ಕಲಿಯಬಹುದು ಎನ್ನುವ ಯಾವ ಕಲ್ಪನೆಯೂ ತಿಂಗಳೊಪ್ಪತ್ತಿನ ಹಿಂದೆ ಇರಲಿಲ್ಲ. ಅವಶ್ಯಕತೆಯು ಅನ್ವೇಷಣೆಯ ತಾಯಿ ಎನ್ನುವ ಮಾತಿನ ಅರ್ಥ ಚೆನ್ನಾಗಿಯೇ ಆಯಿತು.

lockdown stories

ಅಂಟಿನುಂಡೆ

ಮುಂದೆ, ತಿಂಗಳಿಂದ ತಿಂಗಳಿಗೆ ಲೇಹ್ಯಗಳ ಆರ್ಡರ್ ಹೆಚ್ಚುತ್ತಲೇ ಹೋಯಿತು. ಲೇಹ್ಯಗಳ ಜೊತೆಗೆ ಅಂಟಿನುಂಡೆಯ ತಯಾರಿಕೆಯನ್ನೂ ಆರಂಭಿಸಿದೆ. ಆದರೆ, ಆರ್ಡರ್ ಬರುತ್ತದೆ ಎಂದು ನನ್ನ ಕೈಯಲ್ಲಿ ಆಗುವುದಕ್ಕಿಂತ ಹೆಚ್ಚಿನ ಆರ್ಡರ್ ಗಳನ್ನು ಎಂದಿಗೂ ತೆಗೆದುಕೊಳ್ಳಲಿಲ್ಲ. ಅವುಗಳ ಗುಣಮಟ್ಟ ಕಡಿಮೆಯಾಗಬಾರದು ಎಂಬುದೇ ಇದರ ಉದ್ದೇಶ. ಲೇಹ್ಯಗಳು ಸುಮಾರು ಒಂದೆರಡು ತಿಂಗಳಾದರೂ ಬಾಳಿಕೆ ಬರಬೇಕು. ಅವಸರದ ತಯಾರಿಕೆಯಿಂದ ಇದು ಸಾಧ್ಯವಾಗದು. ಮೇಲಿಂದ ಯಾವುದೇ ರೀತಿಯ ಪ್ರಿಸರ್ವೇಟಿವ್ ಗಳನ್ನು ನಾನು ಬಳಸುವುದಿಲ್ಲ. ಐವತ್ತು ವರ್ಷಗಳ ಹಿಂದೆ ನನ್ನ ಅಜ್ಜಿ ಈ ಲೇಹ್ಯಗಳನ್ನು ಹೇಗೆ ತಯಾರಿಸುತ್ತಿದ್ದರೋ, ನಾನು ಈಗಲೂ ಅದೇ ವಿಧಾನವನ್ನು ಬಳಸುತ್ತೇನೆ. ಹೀಗಾಗಿ ಅದೇ ತೆರನಾದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ.

ಇಂದು ಬಹಳ ಮಂದಿಗೆ ಈ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಬಗ್ಗೆ ಅರಿತುಕೊಳ್ಳುವ ಆಸಕ್ತಿ ಮೂಡಿದೆ. ಲೇಹ್ಯಗಳ ತಯಾರಿ ಹೇಗೆ ಎಂದು ನನ್ನಲ್ಲೇ ಹಲವರು ಕೇಳಿದ್ದಾರೆ. ಕೊರೋನಾದ ಕಾರಣದಿಂದ ಹಳೆಯ ಔಷಧಗಳ ಬಗ್ಗೆ, ಆಯುರ್ವೇದದ ಮೂಲಕ ದೇಹವನ್ನು ಚೆನ್ನಾಗಿಟ್ಟುಕೊಳ್ಳುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಲೇಹ್ಯಗಳು, ಅಂಟಿನುಂಡೆಗಳು ಶಕ್ತಿ ವರ್ಧಕವಾಗಿ, ರೋಗ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ಇವುಗಳಲ್ಲಿ ಬಳಸ್ಪಡುವ ಶತಾವರಿ, ಬಲ-ಅತಿಬಲ, ನಾಗಬಲ, ಸಾರಿವ, ರಾಜಪತ್ತ, ನೆಲನೆಲ್ಲಿ, ದಾಡಿಮ, ಒಂದೆಲಗ, ಉತ್ತರಣೆ, ಗುಡುಚಿ ಇವೇ ಮೊದಲಾದ ಗಿಡಮೂಲಿಕೆಗಳನ್ನು ತಲೆತಲಾಂತರದಿಂದ ನಮ್ಮ ಪೂರ್ವಜರು ಬಳಸುತ್ತ ಬಂದಿದ್ದಾರೆ. ದೇಹದ ಶಕ್ತಿಯ ಹೆಚ್ಚಳಕ್ಕೆ, ನೆನಪಿನ ಶಕ್ತಿವರ್ಧನೆಗೆ, ವಾತ ಪಿತ್ಥ ಮೊದಲಾದ ಸಮಸ್ಯೆಗಳಿಗೆ ಪರಿಣಾಮ ಬೀರುವ ಅಂಶಗಳನ್ನು ಇವು ಹೊಂದಿವೆ.

ಇವೆಲ್ಲ ತಿಳಿದಿದ್ದರೂ, ಲೇಹ್ಯಗಳನ್ನ ಬಳಸಿದವರು, ತಮಗೆ ಅದರಿಂದಾದ ಪ್ರಯೋಜನಗಳನ್ನು ಹೇಳಿದಾಗ ಆಗುವ ಆನಂದವೇ ಬೇರೆ. ಹಲವರು ನಾನು ಲೇಹ್ಯಗಳ ತಯಾರಿ ಆರಂಭಿಸಿದಾಗಿಂದ ಬಿಡದೇ ಉಪಯೋಗಿಸುತ್ತ ಬಂದಿದ್ದಾರೆ. ಎಲ್ಲೆಲ್ಲೋ ಔಷಧಿಗಳನ್ನು ಮಾಡಿದರೂ ಕಡಿಮೆಯಾಗದ ಕಾಲು ನೋವು ನಿಮ್ಮ ಲೇಹ್ಯಗಳಿಂದ ಕಡಿಮೆಯಾಯಿತು ಎಂದು ಶುರುವಿನಲ್ಲಿಯೇ ಒಬ್ಬರು ಫೋನ್ ಮಾಡಿ ತಿಳಿಸಿದಾಗ ನಾನು ಈ ಯೋಚನೆ ಮಾಡಿದ್ದೂ ಸಾರ್ಥಕವಾಯಿತು ಎಂಬ ಧನ್ಯತೆ ಮೂಡಿತ್ತು. ನಂತರದ ದಿನಗಳಲ್ಲಿ ಮಕ್ಕಳ ಶೀತ ಪ್ರಕೃತಿ ತಹಬಂದಿಗೆ ಬಂದಾಗ, ಮೆಂತ್ಯ ಲೇಹ್ಯದ ಸೇವನೆಯಿಂದ ಕಾಲು ನೋವು ಕಡಿಮೆ ಆಗಿದ್ದನ್ನು ತಿಳಿಸಿದಾಗ, ಕೊರೋನಾದಿಂದ ಚೇತರಿಸಿಕೊಂಡವರು ಶಕ್ತಿ ವರ್ಧನೆಗಾಗಿಯೇ ನಮ್ಮ ಲೇಹ್ಯ ಅಂಟಿನುಂಡೆಗಳಿಗಾಗಿ ಬೇಡಿಕೆ ಇಟ್ಟಾಗ ನನ್ನ ಕಲ್ಪನೆಯನ್ನೂ ಮೀರಿ ಜನರಿಗೆ ಉಪಯೋಗವಾಯಿತಲ್ಲ ಎಂಬ ಸಂಭ್ರಮ ಮೂಡಿತು.

lockdown stories

ಗ್ರಾಹಕರನ್ನು ತಲುಪುವ ಮುನ್ನ ಲೇಹ್ಯ ಅಂಟಿನುಂಡೆಗಳು

ನಮ್ಮ ದೇಶದಲ್ಲಿ ಮಾತ್ರವಲ್ಲದೆ ಹೊರದೇಶಗಳಿಗೂ ಇವು ತಲುಪಿವೆ. ಅನೀಮಿಯಾ, ಕೀಲುನೋವು, ಶೀತ ಪ್ರಕೃತಿ, ವರ್ಟಿಗೋ, ರಕ್ತವೃದ್ಧಿ ಇವುಗಳೊಂದಿಗೆ ಕ್ಯಾನ್ಸರ್​ನಿಂದ ಚೇತರಿಸಿಕೊಳ್ಳುತ್ತಿರುವವರೂ ಇದನ್ನು ಬಳಸಿ ತೃಪ್ತಿಯ ಮಾತುಗಳನ್ನು ಹೇಳಿದ್ದಾರೆ ಎನ್ನುವುದು ನನಗೆ ಈ ನನ್ನ ಪ್ರಯಾಣ ನೀಡಿರುವ ಆತ್ಮತೃಪ್ತಿ. ಇನ್ನೆಷ್ಟು ದಿನ ಮಾಡಬೇಕು ಎನ್ನುವ ಸ್ಪಷ್ಟ ಕಲ್ಪನೆ ಇರದಿದ್ದರೂ ಕೈಲಾಗುವವರೆಗೆ ಮಾಡುತ್ತಿರಬೇಕು ಎನ್ನುವ ಸಂಕಲ್ಪವಿದೆ. ಪ್ರತಿ ಸಲದ ತಯಾರಿಯಲ್ಲಿ ಇದು ತಲುಪುವ ಸಂಖ್ಯೆ ಕಡಿಮೆಯಾದರೂ ನಿಧಾನವಾಗಿಯಾದರೂ ಹೆಚ್ಚಿನ ಜನರನ್ನು ತಲುಪಲಿ ಎಂಬ ಆಶಯವಿದೆ.

ಇಲ್ಲಿ ನನ್ನ ಗಂಡನ, ಮಕ್ಕಳ ಸಹಕಾರವನ್ನು ನೆನೆಯಲೇಬೇಕು. ಒಂಟಿಯಾಗಿ ಇಂತಹ ಶ್ರಮ ಬೇಡುವ ಕೆಲಸವನ್ನು ಮಾಡುತ್ತಾ ಮನೆಯನ್ನೂ ತೂಗಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಗಿಡಮೂಲಿಕೆಗಳ ಸಂಗ್ರಹ, ಪ್ಯಾಕಿಂಗ್ಗಳಲ್ಲಿ ಗಂಡನ ಸಹಕಾರ ಬಹಳ ಇದೆ. ಮಕ್ಕಳು ಮನೆಗೆ ಬಂದಾಗಲೆಲ್ಲ ತಮ್ಮಿಂದಾದ ಸಹಾಯಕ್ಕೆ ಅಣಿಯಾಗುತ್ತಾರೆ. ಈ ತಿಂಗಳು ಶುರು ಮಾಡಿದಿರಾ ಎಂದು ತಾವಾಗಿಯೇ ಫೋನ್ ಮಾಡಿ ವಿಚಾರಿಸುವ ಸಂತೃಪ್ತ ಗ್ರಾಹಕರಿದ್ದಾರೆ. ಸುತ್ತಲಿನ ವಾತಾವರಣ ಪೂರಕವಾಗಿದ್ದರೆ ಕೆಲಸದಲ್ಲಿ ತಾನಾಗಿಯೇ ಚೈತನ್ಯ ಮೂಡುತ್ತದೆ. ದೇವರ ದಯೆ, ನಮ್ಮ ಪರಿಶ್ರಮ, ಪ್ರಾಮಾಣಿಕ ಪ್ರಯತ್ನಗಳು ಯಾವತ್ತಿಗೂ ನಮ್ಮ ಕೈ ಬಿಡುವುದಿಲ್ಲ ಎಂಬ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗುತ್ತಿದ್ದೇನೆ.

ಆದರೂ ಮೊದಲ ಬ್ಯಾಚ್ ತಯಾರಿಸಿ ಕಳಿಸಿದ್ದು ಕೇವಲ ನಾಲ್ಕು ಜನರಿಗೆ. ಮಗಳು ಬಂದ ಹಣವನ್ನು ಕೈಗಿಟ್ಟು ನಿನ್ನ ಮೊದಲ ದುಡಿಮೆ ಅಂದಾಗ ಕಣ್ಣು ತುಂಬಿದವು. ಅದೆನೂ ದೊಡ್ಡ ಮತ್ತವಲ್ಲದಿದ್ದರೂ ನನ್ನ ಮೊದಲ ದುಡಿಮೆ ಎನ್ನುವ ಅಭಿಮಾನಕ್ಕೆ ಮನಸ್ಸು ತುಂಬಿದ್ದು ನಿಜ. ಆಮೇಲೆ ಅದನ್ನು ಹಿಂದಿಕ್ಕಿ ದುಡಿದರೂ ಮೊದಲ ದಿನ ಕೈಯಲ್ಲಿ ಕುಳಿತಿದ್ದ ಆ ತೃಪ್ತಿಯ ತೂಕವೇ ದೊಡ್ಡದು. ಶ್ರಮಕ್ಕೆ ಪ್ರತಿಫಲ ಸಿಕ್ಕಾಗ ಮೂಡುವ ಧನ್ಯತೆ ದೊಡ್ಡದು.

ಇದನ್ನೂ ಓದಿ : Lockdown Stories : ಚಲನಾಮೃತ ; ಆನ್​ಲೈನಿನ ನಿರಾಯಾಸ ಈಜಿಗೆ ಆಫ್​ಲೈನಿನ ಮೆಹನತ್​ ಮುಖ್ಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada