ಇನ್ಫೊಸಿಸ್‌ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ಬ್ರಿಟನ್‌ ಹಣಕಾಸು ಸಚಿವ

ವಿಶ್ವಮಟ್ಟದಲ್ಲಿ ಭಾರತೀಯರು ಮಿಂಚುತ್ತಿದ್ದಾರೆ. ಹಲವಾರು ಕ್ಷೇತ್ರಗಳಲ್ಲಿ ಭಾರತೀಯರದ್ದೇ ಹವಾ. ಹೀಗೆ ಬ್ರಿಟನ್​ನ ನೂತನ ಸರ್ಕಾರದಲ್ಲೂ ಭಾರತೀಯರದ್ದೇ ದರ್ಬಾರ್ ಶುರುವಾಗಿದೆ. ಪ್ರಮುಖ ಹುದ್ದೆಗೆ ಭಾರತ ಮೂಲದ ಉದ್ಯಮಿ ಒಬ್ಬರ ಅಳಿಯ ನೇಮಕವಾಗಿದ್ದು, ವಿಶ್ವಮಟ್ಟದಲ್ಲಿ ಭಾರತೀಯರ ಪ್ರಭಾವವನ್ನು ಮತ್ತೊಮ್ಮೆ ಪ್ರೂವ್ ಮಾಡಿದೆ.

ಐರೋಪ್ಯ ಒಕ್ಕೂಟ ತೊರೆದು, ಸ್ವತಂತ್ರವಾಗಿ ಬದುಕಲು ಇಚ್ಛಿಸಿರುವ ಬ್ರಿಟನ್​ನಲ್ಲಿ ಹೊಸ ರಾಜಕೀಯಪರ್ವ ಶುರುವಾಗಿದೆ. ನೂತನ ಸರ್ಕಾರದಲ್ಲಿ ಹಲವು ಬದಲಾವಣೆಗೆ ಮುಂದಾಗಿರುವ ಬ್ರಿಟನ್ ಪಿಎಂ ಬೋರಿಸ್‌ ಜಾನ್ಸನ್‌, ಸಂಪುಟ ಪುನಾರಚನೆಗೆ ಮುಂದಾಗಿದ್ದಾರೆ. ಇದು ಭಾರತ ಮೂಲದವರ ಅದೃಷ್ಟ ಖುಲಾಯಿಸುವಂತೆ ಮಾಡಿದೆ.

ರಿಷಿ ಸುನಾಕ್​ಗೆ ಒಲಿದ ಉನ್ನತ ಹುದ್ದೆ!
ಅಂದಹಾಗೆ ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ಬ್ರಿಟನ್‌ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದಾರೆ. 39 ವರ್ಷದ ರಿಷಿ ಬ್ರಿಟನ್‌ ಸರ್ಕಾರದಲ್ಲಿ 2ನೇ ಅತ್ಯಂತ ಮಹತ್ವದ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಅಚ್ಚರಿ ಬೆಳವಣಿಗೆಯಲ್ಲಿ ಇದುವರೆಗೆ ಹಣಕಾಸು ಸಚಿವರಾಗಿದ್ದ ಪಾಕಿಸ್ತಾನದ ಸಾಜಿದ್‌ ಜಾವಿದ್‌ ರಾಜೀನಾಮೆ ನೀಡಿದ ಬಳಿಕ ರಿಷಿ ಅವರನ್ನು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಈ ಹುದ್ದೆಗೆ ನೇಮಿಸಿದ್ದಾರೆ.

ಇನ್ನು ಜಾನ್ಸನ್‌ ಜತೆ ಹಲವಾರು ವಿಷಯಗಳಲ್ಲಿ ಜಾವಿದ್‌ ಭಿನ್ನಾಭಿಪ್ರಾಯ ಹೊಂದಿದ್ದರು. ತಮ್ಮ ಎಲ್ಲಾ ಆಪ್ತ ವಿಶೇಷ ಸಲಹೆಗಾರರನ್ನ ತೆಗೆದುಹಾಕಲು ಜಾನ್ಸನ್‌ ನೀಡಿದ್ದ ಸೂಚನೆಯನ್ನು ಜಾವಿದ್‌ ತಳ್ಳಿ ಹಾಕಿದ್ದರು ಎನ್ನಲಾಗಿದೆ. ಜಾವಿದ್‌ ಜೊತೆಗೆ ಖಜಾನೆ ಮುಖ್ಯ ಕಾರ್ಯದರ್ಶಿಯಾಗಿ ರಿಷಿ ಸುನಾಕ್‌ ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದರು.

ಡಿಸೆಂಬರ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಳಿಕ ಜನವರಿ 31ರಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ದೂರವಾದ ನಂತರ ಜಾನ್ಸನ್‌, ಇದೇ ಮೊದಲ ಬಾರಿ ಸಂಪುಟದ ಪುನರ್‌ ರಚನೆಗೆ ಮುಂದಾಗಿದ್ದಾರೆ.

ರಿಷಿ ಸುನಾಕ್ ನಾರಾಯಣಮೂರ್ತಿಯವರ ಪುತ್ರಿ ಅಕ್ಷತಾರನ್ನ ವಿವಾಹವಾಗಿದ್ದು, 2015ರಲ್ಲಿ ಮೊದಲ ಬಾರಿ ಬ್ರಿಟನ್‌ ಸಂಸತ್‌ ಪ್ರವೇಶಿಸಿದ್ದರು. ಈಗ ರಿಷಿ ಅವರಿಗೆ ಬ್ರಿಟನ್ ಸರ್ಕಾರದಲ್ಲಿ ಉನ್ನತ ಹುದ್ದೆ ಸಿಗುತ್ತಿರುವುದು ಭಾರಿ ಸಂತೋಷಕ್ಕೆ ಕಾರಣವಾಗಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!