International Yoga Day 2022: ಈ ಆಸನಗಳನ್ನು ಮಾಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು

ಯೋಗಾಸನದಿಂದ ನಿಮ್ಮ ದೇಹದ ಎಲ್ಲಾ ಭಾಗಗಳ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು, ಉಸಿರಾಟ ಸುಗಮವಾಗುವುದು, ಕೈಕಾಲು ತೋಳುಗಳಲ್ಲಿ ಬಲ ಮೂಡುವುದು, ಕಿವಿ, ಕಣ್ಣು, ಉದರ, ಹೃದಯ ಸೇರಿದಂತೆ ದೇಹದ ಎಲ್ಲಾ ಭಾಗಗಳಿಗೂ ಒಂದೊಂದು ಆಸನದಿಂದ ಒಂದೊಂದು ರೀತಿಯ ಅನುಕೂಲಗಳಿವೆ.

International Yoga Day 2022: ಈ ಆಸನಗಳನ್ನು ಮಾಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು
Halasana
Follow us
TV9 Web
| Updated By: ನಯನಾ ರಾಜೀವ್

Updated on: Jun 19, 2022 | 2:44 PM

ಯೋಗಾಸನದಿಂದ ನಿಮ್ಮ ದೇಹದ ಎಲ್ಲಾ ಭಾಗಗಳ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು, ಉಸಿರಾಟ ಸುಗಮವಾಗುವುದು, ಕೈಕಾಲು ತೋಳುಗಳಲ್ಲಿ ಬಲ ಮೂಡುವುದು, ಕಿವಿ, ಕಣ್ಣು, ಉದರ, ಹೃದಯ ಸೇರಿದಂತೆ ದೇಹದ ಎಲ್ಲಾ ಭಾಗಗಳಿಗೂ ಒಂದೊಂದು ಆಸನದಿಂದ ಒಂದೊಂದು ರೀತಿಯ ಅನುಕೂಲಗಳಿವೆ.

ಬಹುತೇಕ ಮಂದಿ ದಿನದ 10-11 ಗಂಟೆಗಳ ಕಾಲ ಲ್ಯಾಪ್​ಟಾಪ್ ಮುಂದೆ ಕೂರುತ್ತಾರೆ, ಇದರಿಂದ ಕಣ್ಣಿಗೆ ತುಂಬಾ ಒತ್ತಡ ಉಂಟಾಗಲಿದೆ. ಇದು ಹೆಚ್ಚಾದರೆ ದೃಷ್ಟಿ ದೋಷ ಉಂಟಾಗುವ ಸಾಧ್ಯತೆಯೂ ಹೆಚ್ಚಿದೆ.

ಚಕ್ರಾಸನ: ಪಾದಹಸ್ತಾಸನದಂತೆ ಪ್ರಾರಂಭದಲ್ಲಿ ಭೂಮಿಗೆ ನೇರವಾಗಿ, ಲಂಬವಾಗಿ ನಿಲ್ಲಬೇಕು. ಬಳಿಕ ಎರಡು ಕಾಲುಗಳ ನಡುವೆ ಒಂದು ಅಡಿಯಷ್ಟು ಅಂತರವಿಟ್ಟುಕೊಂಡು ಅಂಗೈಗಳನ್ನು ನೆಲಕ್ಕೆ ಒತ್ತಾಗಿರಿಸಬೇಕು. ಉಸಿರನ್ನು ಹೊರಕ್ಕೆ ದೂಡುತ್ತಾ ನಿಧಾನವಾಗಿ ಹಿಂದಕ್ಕೆ ಬಾಗಿ ನೆಲವನ್ನು ಮುಟ್ಟಬೇಕು.

ಈ ಸ್ಥಿತಿಯಲ್ಲಿ ಶರೀರವು ಬಗ್ಗಿಸಿದ ಬಿಲ್ಲಿನಂತೆ ಇರುವುದು. ಆದರೆ ಹಿಂದಕ್ಕೆ ಬಾಗುವಾಗ ವಿಶೇಷವಾದ ಮುಂಜಾಗರೂಕತೆಯನ್ನು ವಹಿಸುವುದು ಉತ್ತಮ.

ಪ್ರಾರಂಭದಲ್ಲಿ ಗೋಡೆಯ ಪಕ್ಕದಲ್ಲೇ ಈ ಆಸನವನ್ನು ಅಭ್ಯಾಸ ಮಾಡಿ, ಸಮತೋಲನ ಹಾಗೂ ಸ್ವಾಮ್ಯ ಪಡೆದ ನಂತರವೇ ಗೊಡೆಯನ್ನು ಬಿಟ್ಟು ದೂರದಲ್ಲಿ ಅಭ್ಯಾಸ ಮಾಡಬಹುದು. ಒಮ್ಮೆ ನೆಲವನ್ನು ಮುಟ್ಟಿದ ನಂತರ ಕೈಗಳನ್ನು ನೇರ ಮಾಡಬೇಕು. ಇಲ್ಲದಿದ್ದಲ್ಲಿ ಶರೀರದ ಭಾರವನ್ನು ಹೊರಲಾರದೆ ಕೈಗಳು ಕುಸಿಯುವುವು.

ಲಾಭಗಳು ಸೊಂಟದ ನೋವು ಮತ್ತು ಉದರರೋಗಗಳು ದೂರವಾಗುವುವು. ಬೆನ್ನುಮೂಳೆಯು ಸದೃಢವಾಗುವುದು. ಚಕ್ರಾಸನವನ್ನು ಎಳೆಯ ವಯಸ್ಸಿನಿಂದಲೂ ಅಭ್ಯಾಸ ಮಾಡಿಕೊಂಡು ಬಂದಲ್ಲಿ ವೃದ್ಧಾಪ್ಯದಲ್ಲೂ ಬೆನ್ನು ಬಾಗುವುದಿಲ್ಲ. ಚಕ್ರಾಸನದ ಅಭ್ಯಾಸವು ಮನಸ್ಸಿಗೆ ಶಾಂತಿಯನ್ನೂ, ಶರೀರಕ್ಕೆ ಉಲ್ಲಾಸವನ್ನೂ ಒದಗಿಸುತ್ತದೆ. ದೃಷ್ಟಿ ದೋಷ ಬರದಂತೆ ಕಾಪಾಡುತ್ತದೆ.

ಹಾಲಾಸನ: ಸರ್ವರೋಗಕ್ಕೂ ಯೋಗ ಮದ್ದು. ಯೋಗದ ಬಹುತೇಕ ಎಲ್ಲಾ ಆಸನಗಳು ಎಲ್ಲಾ ರೀತಿಯ ರೋಗಗಳಿಗೂ ಮದ್ದು. ಹಾಲಾಸನ ಮಾಡುವ ವಿಧಾನ:- – ಬೆನ್ನಿನ ಮೇಲೆ ನೇರವಾಗಿ ಮಲಗಿಕೊಳ್ಳಿ. ಕೈಗಳು ದೇಹದ ಪಕ್ಕಾದಲ್ಲಿರಿಸಿ ಹಸ್ತ ಕೆಳಮುಖವಾಗಿರಲಿ. -ಉಸಿರನ್ನು ತೆಗೆದುಕೊಳ್ಳುತ್ತಾ ( ಪೂರಕ) ನಿಧಾನವಾಗಿ ಎರಡು ಕಾಲುಗಳನ್ನು ಮೇಲಕ್ಕೆತ್ತಿ. ( ಕಾಲುಗಳು ಒಂದಕ್ಕೊಂದು ಪರಸ್ಪರ ಕೂಡಿರಲಿ) -ಉಸಿರನ್ನು ಹಿಡಿದು ಎರಡು ಕಾಲುಗಳನ್ನು ತಲೆಯ ಹಿಂದಕ್ಕೆ ತೆಗೆದುಕೊಂಡು ಬನ್ನಿ. ಕಾಲ್ಬೆರಳು ತಲೆಯ ಹಿಂಭಾಗದ ನೆಲವನ್ನು ತಾಗಿಸಲು ಪ್ರಯತ್ನಿಸಿ ಇಲ್ಲಿ ನಿಮ್ಮ ಕತ್ತು ಮತ್ತು ಭುಜ ನೆಲಕ್ಕೆ ತಾಗಿರಲಿ ಮತ್ತು ಬೆನ್ನು ನೆಲಕ್ಕೆ ಸಮಾನಾಂತರ ವಾಗಿರಲಿ. -ಇದೆ ಭಂಗಿಯಲ್ಲಿ ಕನಿಷ್ಠ ಒಂದು ನಿಮಿಷವಾದರೂ ಇರಲು ಪ್ರಯತ್ನಿಸಿ. ಉಸಿರಾಟ ಸಹಜವಾಗಿ ಇರಲಿ . ಭಂಗಿಯ ಸಮಯವನ್ನು ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಹೆಚ್ಚಿಸುತ್ತಾ ಹೋಗಿ. -ನಂತರ ಉಸಿರನ್ನು ಹೊರ ಹಾಕುತ್ತಾ (ರೇಚಕ) ಬೆನ್ನಿನ ಭಾಗ, ಪ್ರಷ್ಟ ಭಾಗ ಹಾಗೆ ಕಾಲುಗಳನ್ನು ನಿಧಾನವಾಗಿ ಕೆಳಗೆ ಇಳಿಸಿ ಶವಾಸನ ದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ಉಪಯೋಗಗಳು:- -ಹಾಲಾಸನದ ಅಭ್ಯಾಸ ದೇಹ ಮತ್ತು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. -ಥೈರಾಯಿಡ್ ಮತ್ತು ಪ್ಯಾರಾಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. -ಮುಖ ಮತ್ತು ಮೆದುಳಿಗೆ ರಕ್ತ ಸಂಚಾರ ಉತ್ತಮಗೊಳಿಸುತ್ತದೆ. -ಉದಾಸೀನ ಮತ್ತು ಜಡತ್ವವನ್ನು ಹೋಗಲಾಡಿಸುತ್ತದೆ. -ಸೊಂಟ, ತೊಡೆ, ಕಿಬ್ಬೊಟ್ಟೆಯ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ.

ಈ ಆಸನವನ್ನು ಸಾಮಾನ್ಯವಾಗಿ ಎರಡು ವಿಧವಾಗಿ ಮಾಡಬಹುದು:

1) ಯೋಗಾಭ್ಯಾಸಿಯು ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ ಎರಡೂ ಕೈಗಳನ್ನು ಶರೀರದ ಮುಂದೆ ಒಂದೂವರೆಯಿಂದ ಎರಡು ಅಡಿ ಅಂತರದಲ್ಲಿ ಊರಬೇಕು. ಹಾಗೆ ಊರಿದ ಕೈಗಳ ಮೇಲೆ ತನ್ನ ಶರೀರವನ್ನು ಚಿತ್ರದಲ್ಲಿ ತೋರಿಸುವಂತೆ ಸಮತೋಲನದಲ್ಲಿ ನಿಲ್ಲಿಸಿಕೊಳ್ಳಬೇಕು. ಹೀಗೆ ಸಮತೋಲನದ ಸ್ಥಿತಿಯಲ್ಲಿ ನಮ್ಮ ಕಾಲಿನ ಮಂಡಿಗಳು ಕಂಕಳುಗಳು ಪಕ್ಕದಲ್ಲಿ ಇರಬೇಕು.

2) ಮೊದಲು ಶೀರ್ಷಾಸನ ಮಾಡಿ, ಆ ಸ್ಥಿತಿಯಲ್ಲೇ ಪದ್ಮಾಸನ ಹಾಕಬೇಕು. ಬಳಿಕ ಪದ್ಮಾಸನದ ಆ ಸ್ಥಿತಿಯಲ್ಲೇ ಎದೆಗೆ ಎರಡೂ ಕಾಲಿನ ಮಂಡಿಗಳು ತಗಲುವಂತೆ ಶರೀರವನ್ನು ಮುಂದಕ್ಕೆ ಬಾಗಿಸಬೇಕು. ಒಮ್ಮೆ ಈ ಸ್ಥಿತಿಯಲ್ಲಿ ಸಮತೋಲನ ಪಡೆದ ನಂತರ ತಲೆಯನ್ನು ನಿಧಾನವಾಗಿ ನೆಲದಿಂದ ಮೇಲಕ್ಕೆತ್ತಬೇಕು. ಈ ಸ್ಥಿತಿಯಲ್ಲಿ ಎಂದೂ ಸಮತೋಲನ ಕಳೆದುಕೊಳ್ಳಬಾರದು ಮತ್ತು ಈ ಸ್ಥಿತಿಯಲ್ಲೇ ನಿಧಾನವಾಗಿ ಉಸಿರಾಡಬೇಕು. ಆಸನದ ಅವಧಿ ಒಂದರಿಂದ ಒಂದೂವರೆ ನಿಮಿಷ.

ಲಾಭಗಳು: ಕೈಕಾಲುಗಳು ಶಕ್ತಿಯುತವಾಗುತ್ತದೆ, ಬೆನ್ನೆಲುಬು ಚೆನ್ನಾಗಿ ಹಿಗ್ಗುವುದು. ಕಿಬ್ಬೊಟ್ಟೆಯ ಎಲ್ಲ ಅಂಗಗಳೂ ಸಬಲವಾಗುವುವು. ಎದೆಯಿಂದ ಕತ್ತಿನವರೆಗಿನ ಎಲ್ಲ ಅವಯವಗಳೂ ಚಟುವಟಿಕೆ ಪಡೆಯುವವು.

ಸರ್ವಾಂಗಾಸನ: ಸರ್ವಾಂಗಾಸನದ ಅಭ್ಯಾಸದಿಂದ ವೀರ್ಯದೋಷ, ಕಣ್ಣಿಗೆ ಸಂಬಂಧಿಸಿದ ರೋಗಗಳು ಗುಣವಾಗಲಿದೆ. ರಕ್ತದೋಷಗಳು ನಿವಾರಣೆಯಾಗುವವು. ಹಸಿವು ಹೆಚ್ಚುವುದು. ಈ ಆಸನದಲ್ಲಿ ಬೆನ್ನುಮೂಳೆ ನೇರವಾಗುವುದರಿಂದ ಜ್ಞಾನತಂತುಗಳು ವಿಶೇಷ ಲಾಭ ಪಡೆಯುವುವು.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಜೀವನಶೈಲಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ