ಏನೇ ಬರಲಿ.. ಎಂತೇ ಇರಲಿ.. ಅನ್ನೋ ಮೂಲಕ ಕೊಹ್ಲಿ ನಾಯಕತ್ವದ ಆರ್ಸಿಬಿ ತಂಡ, ಮರಳುಗಾಡಿನ ಮಹಾಯುದ್ಧದಲ್ಲಿ ರಣಕಹಳೆ ಮೊಳಗಿಸಿದೆ. 12 ವರ್ಷಗಳಿಂದ ಮರೀಚಿಕೆಯಾಗಿರೋ ಐಪಿಎಲ್ ಕಪ್ ಅನ್ನ ಅರಬ್ ನಾಡಿನಲ್ಲಿ ಮುಡಿಗೇರಿಸಿಕೊಳ್ಳೋದಕ್ಕೆ ತುದಿಗಾಲಲ್ಲಿ ನಿಂತಿದೆ.
ದುಬೈ ಮೈದಾನದಲ್ಲಿ ನಡೆಯೋ ಮಹಾಯುದ್ಧದಲ್ಲಿಂದು, ಆರ್ಸಿಬಿ ತಂಡ ತನ್ನ ಮೊದಲ ಪಂದ್ಯವನ್ನಾಡ್ತಿದೆ. ಮೊದಲ ಮಹಾಯುದ್ಧದಲ್ಲೇ ಕೊಹ್ಲಿ ಸೈನ್ಯಕ್ಕೆ, ಅಷ್ಟೇ ಬಲಿಷ್ಠವಾಗಿರೋ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಮುಖಾಮುಖಿಯಾಗ್ತಿದೆ.
ಯುಎಇನಲ್ಲಿ ಐಪಿಎಲ್ ಸಂಗ್ರಾಮಕ್ಕಾಗಿ ಆರ್ಸಿಬಿ ಆಟಗಾರರು, ಭರ್ಜರಿ ಪ್ರಾಕ್ಟೀಸ್ ಮಾಡಿಕೊಂಡಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಮೂರೂ ವಿಭಾಗದಲ್ಲೂ ಆರ್ಸಿಬಿ, ಹಿಂದೆಂದಿಗಿಂತ ಬ್ಯಾಲೆನ್ಸ್ ಆಗಿದೆ. ‘ನಾನು ನಿಮಗೆ ಪ್ರಾಮಿಸ್ ಮಾಡುತ್ತೇನೆ. ಇದು ನಿಜಕ್ಕೂ ವಿಭಿನ್ನವಾಗಿದೆ. ಹೀಗಾಗಿ ನಾನು ಹೇಳುತ್ತಿದ್ದೇನೆ. ನಾವು ಅತ್ಯುತ್ತಮವಾದ ತಂಡವನ್ನ ಹೊಂದಿದ್ದೇವೆ. ಹೊಸ ಜೋಷ್ ಆರ್ಸಿಬಿ ತಂಡದಲ್ಲಿದೆ. ಆದ್ರೆ ನಾನಿದನ್ನ ವಿವರವಾಗಿ ಹೇಳೋದಿಲ್ಲ. ನಾವೆಲ್ಲಾ ತುಂಬಾ ಉತ್ಸುಕರಾಗಿದ್ದೇವೆ’ ಎಂದು ಎಬಿ ಡಿವಿಲಿಯರ್ಸ್ ಅನುಭವ ಹಂಚಿಕೊಂಡಿದ್ದಾರೆ.
ಈ ಬಾರಿ ಆರ್ಸಿಬಿ ತಂಡ ಹೊಸತನದಿಂದ ಕೂಡಿದೆ. ಆಸ್ಟ್ರೇಲಿಯಾದ ಆರೋನ್ ಫಿಂಚ್, ಜೋಶ್ ಫಿಲಿಪ್, ಌಡಮ್ ಜಂಪಾ ಮತ್ತು ದಕ್ಷಿಣ ಆಫ್ರಿಕಾದ ಕ್ರಿಸ್ ಮಾರಿಸ್ ಎಂಟ್ರಿಯಿಂದಾಗಿ ಆರ್ಸಿಬಿ ಬಲ ಹೆಚ್ಚಾಗಿದೆ. ತಂಡದ ಕಾಂಬಿನೇಷನ್ ನೋಡೋದಾದ್ರೆ, ಎಲ್ಲಾ ವಿಭಾಗದಲ್ಲೂ ಬ್ಯಾಕ್ ಅಪ್ ಪ್ಲೇಯರ್ಗಳಿದ್ದಾರೆ. ಹಾಗೇ ಆಟಗಾರರ ವಿಚಾರದಲ್ಲೂ ನಮ್ಮ ಮುಂದೆ ಆಯ್ಕೆಗಳಿವೆ. ಹೀಗಾಗಿ ಕೊಹ್ಲಿ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡೋದಕ್ಕೆ ಸಾಧ್ಯವಾಗುತ್ತೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಆರ್ಸಿಬಿ ತಂಡ ಈ ಸೀಸನ್ನಲ್ಲಿ ಹೊಸ ಭರವಸೆ ಮೂಡಿಸಿದೆ ನಿಜ. ಆದ್ರೆ ಡೆವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದ್ರಾಬಾದ್ ತಂಡಕ್ಕೆ, ಐಪಿಎಲ್ನಲ್ಲಿ ಒಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದ ಅನುಭವವಿದೆ. ಹೀಗಾಗಿ ವಾರ್ನರ್ ಬಳಗ ಮೊದಲ ಪಂದ್ಯದಲ್ಲೇ, ಆರ್ಸಿಬಿ ವಿರುದ್ಧ ಗೆಲುವಿನ ನಗಾರಿ ಬಾರಿಸೋ ವಿಶ್ವಾಸದಲ್ಲಿದೆ.
ಐಪಿಎಲ್ನಲ್ಲಿ ಆರ್ಸಿಬಿ ಮೇಲೆ ಹೈದ್ರಾಬಾದ್ ಮೇಲುಗೈ ಸಾಧಿಸಿದೆ!
ಐಪಿಎಲ್ನಲ್ಲಿ ಆರ್ಸಿಬಿ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡ 15 ಪಂದ್ಯಗಳನ್ನಾಡಿದೆ. 8 ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಗೆಲುವು ದಾಖಲಿಸಿದ್ರೆ, ಆರ್ಸಿಬಿ 6 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೇ ಅಂತ್ಯ ಕಂಡಿದೆ. ಗೆಲುವಿನ ಲೆಕ್ಕಾಚಾರದಲ್ಲಿ ಹೈದ್ರಾಬಾದ್ ಆರ್ಸಿಬಿ ಮೇಲೆ ಮೇಲುಗೈ ಸಾಧಿಸಿದೆ. ಹಾಗಿದ್ರೂ ಈ ಸೀಸನ್ನಲ್ಲಿ ಆರ್ಸಿಬಿ ಜಲ್ವಾ ಹೇಗಿರುತ್ತೆ ಅನ್ನೋದ್ರ ಮುನ್ಸೂಚನೆ, ಹೈದ್ರಾಬಾದ್ ವಿರುದ್ಧದ ಸೋಲು ಗೆಲುವಿನ ಮೇಲೆ ಅವಲಂಬಿತವಾಗಿದೆ.